ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ಬಿಪಿನ್ ರಾವತ್ ನೇಮಕ

ನೂತನವಾಗಿ ರಚನೆಯಾಗಿರುವ ಹುದ್ದೆ
Last Updated 30 ಡಿಸೆಂಬರ್ 2019, 21:15 IST
ಅಕ್ಷರ ಗಾತ್ರ

ನವದೆಹಲಿ: ಭೂಸೇನಾ ಮುಖ್ಯಸ್ಥ ಹುದ್ದೆಯಿಂದ ಮಂಗಳವಾರ ನಿವೃತ್ತಿಯಾಗಲಿರುವ ಜ. ಬಿಪಿನ್‌ ರಾವತ್‌ ಅವರನ್ನು ‘ರಕ್ಷಣಾ ಪಡೆಗಳ ಮುಖ್ಯಸ್ಥ’ರಾಗಿ (ಸಿಡಿಎಸ್‌) ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ,ಭಾರತದ ಮೊದಲ ಸಿಡಿಎಸ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.

ಸಿಡಿಎಸ್‌ ಹುದ್ದೆಗೆ ಯಾರು ನೇಮಕವಾಗಬಹುದು ಎಂಬ ಊಹಾಪೋಹ ಇತ್ತೀಚಿನ ದಿನಗಳಲ್ಲಿ ತೀವ್ರಗೊಂಡಿತ್ತು. ರಾವತ್‌ ನೇಮಕದೊಂದಿಗೆ ಅದಕ್ಕೆ ತೆರೆಬಿದ್ದಿದೆ.

ಡಿಸೆಂಬರ್‌ 31ರಿಂದ ಜಾರಿಗೆ ಬರುವಂತೆ ರಾವತ್‌ ಅವರನ್ನು ಸಿಡಿಎಸ್‌ ಆಗಿ ನೇಮಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

1978ರ ಡಿಸೆಂಬರ್‌ನಲ್ಲಿ ರಾವತ್‌ ಅವರು ಸೇನೆಗೆ ಸೇರ್ಪಡೆಯಾಗಿದ್ದರು. 2017ರ ಜನವರಿ 1ರಿಂದ ಅವರು ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮೂರೂ ರಕ್ಷಣಾ ಪಡೆಗಳ (ಭೂ, ವಾಯು ಮತ್ತು ನೌಕಾಪಡೆ) ನೀತಿ, ಯೋಜನೆ ಮತ್ತು ಖರೀದಿಯಲ್ಲಿ ರಾವತ್‌ ಅವರು ಮಹತ್ವದ ಪಾತ್ರ ವಹಿಸಲಿದ್ದಾರೆ.

ಭೂಸೇನೆಯ ಮುಖ್ಯಸ್ಥರಾಗಿ ಲೆ. ಜ. ನರವಣೆ ಅವರು ರಾವತ್‌ ಅವರಿಂದ ಮಂಗಳವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ವಾಯು ಸೇನೆಯ ಮುಖ್ಯಸ್ಥರಾಗಿ ಆರ್‌.ಕೆ. ಭದೌರಿಯಾ ಅವರಿದ್ದಾರೆ. ನೌಪಾಡೆಯು ಅಡ್ಮಿರನಲ್‌ ಕರಂವೀರ್ ಸಿಂಗ್‌ ಅವರ ಸಾರಥ್ಯ ಹೊಂದಿದೆ. ಈ ಎಲ್ಲರಿಗಿಂತ ಎರಡು ವರ್ಷಗಳ ಸೇವಾ ಜ್ಯೇಷ್ಠತೆಯನ್ನು ರಾವತ್ ಹೊಂದಿದ್ದಾರೆ. ಮೂರೂ ಪಡೆಗಳ ಮುಖ್ಯಸ್ಥರು ಹೊಂದಿರುವ ಶ್ರೇಣಿಯೇ ರಾವತ್‌ ಅವರಿಗೂ ಇರುತ್ತದೆ. ಆದರೆ, ಸಮಾನರಲ್ಲಿ ಮೊದಲಿಗರು ಎಂಬುದು ಸಿಡಿಎಸ್‌ ಹುದ್ದೆಯ ಹೆಚ್ಚುಗಾರಿಕೆ.

ಸೇನಾ ಕಾಯ್ದೆ 1950ಕ್ಕೆ ಇತ್ತೀಚೆಗೆ ತಿದ್ದುಪಡಿ ತರಲಾಗಿದೆ. ಕರ್ತವ್ಯದಲ್ಲಿ ಇರುವ ಸೇನಾ ಮುಖ್ಯಸ್ಥರು ಸಿಡಿಎಸ್‌ ಆಗಿ ನೇಮಕವಾದರೆ ಅವರು 65 ವರ್ಷದವರೆಗೆ ಈ ಹುದ್ದೆಯಲ್ಲಿ ಇರಬಹುದು ಎಂದು ತಿದ್ದುಪಡಿ ಮಾಡಲಾಗಿದೆ.ಹಾಗಾಗಿ ರಾವತ್‌ ಅವರಿಗೆ ಮೂರು ವರ್ಷ ಹೆಚ್ಚುವರಿ ಅವಧಿ ದೊರೆತಿದೆ.ಇತ್ತೀಚಿನ ಕೆಲ ದಿನಗಳಲ್ಲಿ ರಾವತ್‌ ಅವರ ನಡವಳಿಕೆಯ ಬಗ್ಗೆ ನಿವೃತ್ತ ಸೇನಾಧಿಕಾರಿಗಳು ಮತ್ತು ರಾಜಕೀಯ ನಾಯಕರು ಅತೃಪ್ತಿ ವ್ಯಕ್ತಪಡಿಸಿದ್ದರು. ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ರಾವತ್‌ ಟೀಕಿಸಿದ್ದು ವಿವಾದವಾಗಿತ್ತು.

ರಕ್ಷಣಾ ಪಡೆಗಳಿಗೊಬ್ಬ ಮುಖ್ಯಸ್ಥ

ಭೂಸೇನೆ, ವಾಯುಸೇನೆ,ಹಾಗೂ ನೌಕಾಸೇನೆಗಳಿಗೆ ಒಟ್ಟಾಗಿ ‘ರಕ್ಷಣಾ ಪಡೆಗಳ ಮುಖ್ಯಸ್ಥ’ (ಸಿಡಿಎಸ್‌) ಹುದ್ದೆ ಇರಬೇಕು ಎಂಬುದು ತುಂಬ ಹಳೆಯ ಬೇಡಿಕೆ. ಇಂಥ ಒಂದು ಹುದ್ದೆಯನ್ನು ಸೃಷ್ಟಿಸುವ ವಿಚಾರವಾಗಿ ಹಲವು ಬಾರಿ ಚರ್ಚೆಗಳು ನಡೆದಿದ್ದರೂ ಅದು ಕಾರ್ಯರೂಪಕ್ಕೆ ಬರಲಿಲ್ಲ. ಪ್ರಧಾನಿಯಾಗಿ ಎರಡನೇ ಬಾರಿ ಅಧಿಕಾರ ಸ್ವೀಕರಿಸಿದ ನಂತರ ಮಾಡಿದ ಮೊದಲ ಸ್ವಾತಂತ್ರ್ಯೋತ್ಸವ ದಿನದ ಭಾಷಣದಲ್ಲಿ ನರೇಂದ್ರ ಮೋದಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿ, ‘ರಕ್ಷಣಾ ಪಡೆಗಳ ಮುಖ್ಯಸ್ಥರನ್ನು ನೇಮಕ ಮಾಡಲಾಗುವುದು’ ಎಂದು ಘೋಷಿಸಿದ್ದರು. ಆ ಭರವಸೆ ಈಗ ಈಡೇರಿದೆ.

ರ್‍ಯಾಂಕ್‌
ಮೂರೂ ಪಡೆಗಳ ಮುಖ್ಯಸ್ಥರಂತೆ ರಕ್ಷಣಾ ಪಡೆಗಳ ಮುಖ್ಯಸ್ಥರೂ ‘ನಾಲ್ಕು ಸ್ಟಾರ್‌’ ಅಧಿಕಾರಿ ಎನಿಸುವರು. ಅದೇ ವೇತನಶ್ರೇಣಿಯಲ್ಲಿರುತ್ತಾರೆ. ಆದರೆ ಇವರು ಸಮಾನರಲ್ಲಿ ಮೊದಲಿಗರಾಗಿರುತ್ತಾರೆ.

ರಕ್ಷಣಾ ಪಡೆಗಳ ಮುಖ್ಯಸ್ಥರು ಭಾರತೀಯ ಸೇನೆಯ ಏಕಗವಾಕ್ಷಿ ಸಲಹೆಗಾರರಾಗಿರುತ್ತಾರೆ. ಮೂರೂ ಪಡೆಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಇವರು ಸರ್ಕಾರಕ್ಕೆ ಸಲಹೆಗಳನ್ನು ನೀಡಲಿದ್ದಾರೆ.

ಸೇನಾ ಪಡೆಯ ಮುಖ್ಯಸ್ಥರು ಆ ಹುದ್ದೆಯಲ್ಲಿ ಮೂರು ವರ್ಷ ಪೂರ್ಣಗೊಳಿಸಿದಾಗ ಅಥವಾ 62 ವರ್ಷ ವಯಸ್ಸಾದಾಗ ನಿವೃತ್ತಿ ಹೊಂದುತ್ತಿದ್ದರು. ಈ ನಿಯಮಕ್ಕೆ ತಿದ್ದುಪಡಿ ಮಾಡಿರುವ ಸರ್ಕಾರವು ಸಿಡಿಎಸ್‌ ನಿವೃತ್ತಿ ವಯಸ್ಸನ್ನು ಮಾತ್ರ 65 ವರ್ಷಕ್ಕೆ ಹೆಚ್ಚಿಸಿದೆ.

ಅಗತ್ಯವೇನು?
ಸೇನೆಗೆ ಸಂಬಂಧಿಸಿದ ಎಲ್ಲಾ ವಿಚಾರಗಳ ಬಗ್ಗೆ ಸರ್ಕಾರಕ್ಕೆ ಏಕಗವಾಕ್ಷಿ ಸಲಹೆ ನೀಡುವ ವ್ಯವಸ್ಥೆ ಜಾರಿ ಮಾಡಬೇಕು ಎಂಬುದು ಹಳೆಯ ಬೇಡಿಕೆ. ಸೇನೆಯ ಹಿರಿಯ ಹುದ್ದೆಗಳಲ್ಲಿದ್ದ ಅನೇಕರು ಇಂಥ ಬೇಡಿಕೆ ಇಟ್ಟಿದ್ದಾರೆ, ಸರ್ಕಾರಕ್ಕೆ ಸಲಹೆಗಳನ್ನೂ ನೀಡಿದ್ದಾರೆ.

‘ಮೂರು ಪಡೆಗಳಲ್ಲಿ ಬರಬಹುದಾದ ಸಮಸ್ಯೆಗಳನ್ನು ನಿವಾರಿಸಿ, ಸಮನ್ವಯ ರೂಪಿಸುವ ಮೂಲಕ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗುವಂತೆ ಸರ್ಕಾರಕ್ಕೆ ಸಲಹೆ ನೀಡಲು ಸಿಡಿಎಸ್‌ ಅಗತ್ಯ’ ಎಂಬುದು ಸೇನೆಯ ನಿವೃತ್ತ ಅಧಿಕಾರಿಗಳ ವಾದ. ರಕ್ಷಣಾ ನೀತಿ ರೂಪಿಸುವುದು, ಮೂರೂ ಪಡೆಗಳ ಬಜೆಟ್‌ ರೂಪಿಸುವುದು, ಶಸ್ತ್ರಾಸ್ತ್ರ ಖರೀದಿ, ತರಬೇತಿ, ಸೇನಾ ಕಾರ್ಯಾಚರಣೆಗಳನ್ನು ಯೋಜಿಸುವುದೇ ಮುಂತಾದ ವಿಚಾರಗಳಲ್ಲಿ ಸಮನ್ವಯ ಸಾಧಿಸುವುದು ಇದರಿಂದ ಸಾಧ್ಯ ಎಂದು ನಿವೃತ್ತ ಅಧಿಕಾರಿಗಳು ಹೇಳುತ್ತಾರೆ.

‘ಕಾರ್ಗಿಲ್‌’ಕದನದ ನಂತರದ ಸಲಹೆ

‌20 ವರ್ಷಗಳ ಹಿಂದೆ (1999ರಲ್ಲಿ), ಪಾಕಿಸ್ತಾನದ ವಿರುದ್ಧ ಕಾರ್ಗಿಲ್‌ನಲ್ಲಿ ನಡೆದ ಸಂಘರ್ಷದ ಬಳಿಕ ಸಿಡಿಎಸ್‌ ಹುದ್ದೆ ರಚನೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿತ್ತು.

ಕಾರ್ಗಿಲ್‌ ಸಂಘರ್ಷದ ನಂತರ, ದೇಶದ ಭದ್ರತಾ ವ್ಯವಸ್ಥೆಯಲ್ಲಿ ಆಗಿರುವ ಲೋಪಗಳ ಬಗ್ಗೆ ಪರಿಶೀಲನೆ ನಡೆಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯು ತನ್ನ ವರದಿಯಲ್ಲಿ ‘ಸಿಡಿಎಸ್‌ ಹುದ್ದೆ ರಚಿಸಬೇಕು’ ಎಂಬ ಸಲಹೆ ನೀಡಿತ್ತು.

ಈ ಸಮಿತಿಯಲ್ಲದೆ, ರಾಷ್ಟ್ರೀಯ ಭದ್ರತೆಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧ್ಯಯನ ನಡೆಸಲು 2001ರಲ್ಲಿ ರಚಿಸಿದ್ದ ಸಚಿವರ ಸಮಿತಿಯೂ ರಕ್ಷಣಾ ಪಡೆಗಳ ಮುಖ್ಯಸ್ಥರನ್ನು ನೇಮಿಸುವುದು ಅಗತ್ಯ ಎಂದು ಸರ್ಕಾರಕ್ಕೆ ಸಲಹೆ ನೀಡಿತ್ತು.

2012ರಲ್ಲಿ ನರೇಶ್‌ಚಂದ್ರ ಕಾರ್ಯಪಡೆಯೂ, ‘ಸೇನಾ ಪಡೆಗಳ ಮುಖ್ಯಸ್ಥರ ಸಮಿತಿ’ಗೆ (ಸಿಒಎಸ್‌ಸಿ) ಒಬ್ಬ ಕಾಯಂ ಅಧ್ಯಕ್ಷರ ನೇಮಕ ಮಾಡಬೇಕು, ಮೂರೂ ಪಡೆಗಳ ಮುಖ್ಯಸ್ಥರಲ್ಲಿ ಅತ್ಯಂತ ಹಿರಿಯರಾದವರು ಅಧ್ಯಕ್ಷರಾಗಬೇಕು’ ಎಂದು ಸಲಹೆ ನೀಡಿತ್ತು.

ವಿಳಂಬಕ್ಕೆ ರಾಜಕೀಯ ಕಾರಣ?
ಇಂಥ ಹುದ್ದೆ ಸೃಷ್ಟಿಗೆ 20 ವರ್ಷಗಳು ಬೇಕಾದವೇ? ಈ ವಿಳಂಬಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ‘ರಾಜಕೀಯ’ ಎಂಬ ಉತ್ತರವನ್ನು ನೀಡಲಾಗಿದೆ.

2016ರಲ್ಲಿ ಸಂಸತ್ತಿನಲ್ಲಿ ಸರ್ಕಾರವು ನೀಡಿದ್ದ ಉತ್ತರದಲ್ಲಿ, ‘ರಾಜಕೀಯ ಪಕ್ಷಗಳ ಜತೆ ಚರ್ಚೆ ಪೂರ್ಣಗೊಂಡಿಲ್ಲ. ಸಿಡಿಎಸ್‌ ಹುದ್ದೆ ರಚನೆಯ ಬಗ್ಗೆ ಅನೇಕ ಪಕ್ಷಗಳು ಈ ತಮ್ಮ ಅಭಿಪ್ರಾಯವನ್ನೇ ತಿಳಿಸಿಲ್ಲ. ಆದ್ದರಿಂದ ನಿರ್ಧಾರ ವಿಳಂಬವಾಗುತ್ತಿದೆ’ ಎಂದು ಹೇಳಿತ್ತು.

ಹೊಣೆಗಾರಿಕೆ ಏನು?

*ರಕ್ಷಣಾ ಸಚಿವಾಲಯದಡಿ ರೂಪಿಸಲಾಗುವ ಸೇನಾ ವ್ಯವಹಾರಗಳ ಇಲಾಖೆಯ (ಡಿಎಂಎ) ಕಾರ್ಯದರ್ಶಿಯಾಗಿ ಈ ಇಲಾಖೆಯ ಕೆಲಸ
ಕಾರ್ಯಗಳನ್ನುರಕ್ಷಣಾ ಪಡೆಗಳ ಮುಖ್ಯಸ್ಥರು ನಿರ್ವಹಿಸಬೇಕು

*ಮೂರೂ ಪಡೆಗಳ ವ್ಯವಹಾರಗಳು ಡಿಎಂಎ ಅಡಿ ಬರಲಿವೆ. ಈ ಎಲ್ಲಾ ಪಡೆಗಳ ಪ್ರಧಾನ ಕಚೇರಿಗಳು ಈ ಇಲಾಖೆಯಡಿ ಬರಲಿವೆ.

*ಜಂಟಿ ಯೋಜನೆಗಳ ಮೂಲಕ ಸೇನೆಗಳಿಗೆ ಸಿಬ್ಬಂದಿಯ ನೇಮಕ, ತರಬೇತಿ ನೀಡುವುದು ಮತ್ತು ಅಗತ್ಯ ಸಾಮಗ್ರಿ ಪೂರೈಸುವುದು, ಸಹಭಾಗಿತ್ವಕ್ಕೆ ನೆರವಾಗುವುದು

*ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಗಾಗಿ ಸೇನಾ ಆದೇಶಗಳ ಪುನರ್‌ರಚನೆಗಾಗಿ ಅನುಕೂಲ ಕಲ್ಪಿಸುವುದು

*ಸ್ಥಳೀಯ ಉಪಕರಣಗಳ ಬಳಕೆಗೆ ಉತ್ತೇಜನ ನೀಡುವುದು

*ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾಗಿ, ಸೇನಾಪಡೆಗಳ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರಾಗಿ, ಮೂರೂ ಪಡೆಗಳ ಪ್ರಧಾನ ಸಲಹೆಗಾರರಾಗಿ ಹೊಣೆಗಾರಿಕೆ

*ಮೂರೂ ಪಡೆಗಳ ಸೈಬರ್‌ ಮತ್ತು ಬಾಹ್ಯಾಕಾಶಕ್ಕೆ ಸಂಬಂಧಿಸಿದ ಆದೇಶಗಳು ಸಿಡಿಎಸ್‌ ಅಧೀನದಲ್ಲಿರುತ್ತವೆ

*ಅಣ್ವಸ್ತ್ರ ಕಮಾಂಡ್‌ ಪ್ರಾಧಿಕಾರದ ಸೇನಾ ಸಲಹೆಗಾರರಾಗಿ ಕಾರ್ಯ ನಿರ್ವಹಣೆ

*ಅಧಿಕಾರ ವಹಿಸಿ ಮೂರು ವರ್ಷಗಳೊಳಗೆ ಸೇವೆಗಳ ಕಾರ್ಯಾಚರಣೆ, ಸಾಗಾಣಿಕೆ, ಸಾರಿಗೆ, ತರಬೇತಿ, ಪೂರಕ ಸೇವೆ, ಸಂವಹನ, ದುರಸ್ತಿ ಮತ್ತು ನಿರ್ವಹಣೆ ಮುಂತಾದ ವಿಚಾರಗಳಲ್ಲಿ ಸಮನ್ವಯ ತರುವುದು

*ವ್ಯರ್ಥ ಖರ್ಚುವೆಚ್ಚಗಳನ್ನು ತಗ್ಗಿಸಿ ಸಶಸ್ತ್ರಪಡೆಗಳ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವುದು. ಸೇವೆಗಳ ಕಾರ್ಯಚಟುವಟಿಕೆಗಳಲ್ಲಿ ಸುಧಾರಣೆ ತರುವುದು

**
ನಮ್ಮ ಸೇನೆ ನಮ್ಮ ಹೆಮ್ಮೆ. ಮೂರೂ ಪಡೆಗಳ ಮಧ್ಯೆ ಸಮನ್ವಯವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಈ ಕೆಂಪುಕೋಟೆಯಿಂದ ಒಂದು ಪ್ರಮುಖ ಘೋಷಣೆ ಮಾಡಲು ಇಚ್ಛಿಸುತ್ತೇನೆ. ಮೂರೂ ರಕ್ಷಣಾ ಪಡೆಗಳಿಗೆ ಮುಖ್ಯಸ್ಥರೊಬ್ಬರನ್ನು ನೇಮಿಸಲಾಗುವುದು. ನಮ್ಮ ಸೇನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಈ ನಿರ್ಧಾರ ಸಹಕಾರಿಯಾಗಲಿದೆ.
–ಪ್ರಧಾನಿ ನರೇಂದ್ರ ಮೋದಿ,2019ರ ಸ್ವಾತಂತ್ರ್ಯೋತ್ಸವ ದಿನದಂದು ಮಾಡಿದ್ದ ಭಾಷಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT