ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ಮುಟ್ಟಿದ ತಕ್ಷಣ ಕೈತೊಳೆಯದಿದ್ದರೆ ಅಪಾಯ ಗ್ಯಾರಂಟಿ!

Last Updated 2 ಸೆಪ್ಟೆಂಬರ್ 2018, 20:25 IST
ಅಕ್ಷರ ಗಾತ್ರ

ನವದೆಹಲಿ: ನೋಟುಗಳ ಮೂಲಕ ವಿವಿಧ ಸೋಂಕು ಹರಡುತ್ತವೆ. ಇದು ಜನರಲ್ಲಿ ಮಾರಣಾಂತಿಕ ರೋಗಗಳಿಗೆ ಕಾರಣವಾಗಬಹುದು. ನೋಟುಗಳಲ್ಲಿ ಯಾವ ರೀತಿಯ ಸೋಂಕುಗಳು ಹರಡುತ್ತವೆ ಮತ್ತು ಅವುಗಳನ್ನು ತಡೆಯುವುದು ಹೇಗೆ ಎಂಬ ಬಗ್ಗೆ ಸಮಗ್ರವಾದ ಅಧ್ಯಯನ ನಡೆಸಬೇಕು ಎಂದು ಅಖಿಲ ಭಾರತ ವರ್ತಕರ ಒಕ್ಕೂಟವು (ಸಿಎಐಟಿ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಮನವಿಯನ್ನು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರಿಗೆ ನೀಡಲಾಗಿದೆ.

ನೋಟುಗಳ ಮೂಲಕ ಹರಡುವ ಸೋಂಕುಗಳ ಬಗ್ಗೆ ಜಗತ್ತಿನ ವಿವಿಧೆಡೆ ಅಧ್ಯಯನಗಳು ನಡೆದಿವೆ. ಭಾರತದ ಇನ್ಸ್‌ಟಿಟ್ಯೂಟ್‌ ಆಫ್ ಜಿನಾಮಿಕ್ಸ್‌ ಎಂಡ್‌ ಇಂಟಗ್ರೇಟಿವ್‌ ಬಯೊಲಜಿಯು (ಐಜಿಐಬಿ) ನೋಟುಗಳ ಸೋಂಕು ಹರಡುವಿಕೆಯ ಬಗ್ಗೆ ಅಧ್ಯಯನ ನಡೆಸಿ, ಈ ವರದಿಯನ್ನು ಅಂತರರಾಷ್ಟ್ರೀಯ ವಿಜ್ಞಾನ ನಿಯತಕಾಲಿಕವೊಂದರಲ್ಲಿ ಪ್ರಕಟಿಸಿತ್ತು. ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್ತಿನ (ಸಿಎಸ್‌ಐಆರ್‌) ಅಧೀನದಲ್ಲಿ ಐಜಿಐಬಿ ಕೆಲಸ ಮಾಡುತ್ತದೆ.

78 ವಿವಿಧ ರೋಗಗಳನ್ನು ಹರಡುವ ಸೂಕ್ಷ್ಮಾಣು ಜೀವಿಗಳು ನೋಟುಗಳಲ್ಲಿ ಪತ್ತೆಯಾಗಿವೆ ಎಂದು ಐಜಿಐಬಿ ವರದಿಯಲ್ಲಿ ಹೇಳಲಾಗಿತ್ತು.

ತಿರುನೆಲ್ವೇಲಿಯ ವೈದ್ಯಕೀಯ ಕಾಲೇಜಿನ ಸೂಕ್ಷ್ಮಜೀವ ವಿಜ್ಞಾನ ವಿಭಾಗದ ವಿಜ್ಞಾನಿಗಳು ಕೂಡ ನೋಟುಗಳ ಅಧ್ಯಯನ ನಡೆಸಿದ್ದರು. 120 ನೋಟುಗಳನ್ನು ಅವರು ಅಧ್ಯಯನಕ್ಕೆ ಆಯ್ದುಕೊಂಡಿದ್ದರು. ಇವುಗಳ ಪೈಕಿ ಶೇ 86.4ರಷ್ಟು ನೋಟುಗಳಲ್ಲಿ ರೋಗ ಹರಡುವ ಬ್ಯಾಕ್ಟೀರಿಯಾಗಳು ಕಂಡಿದ್ದವು.

ಅಧ್ಯಯನದ ವ್ಯಾಪ್ತಿ ವಿಸ್ತಾರವಾಗಿರಬೇಕು ಎಂಬ ಕಾರಣಕ್ಕೆ ವಿವಿಧ ಮೂಲಗಳಿಂದ ನೋಟುಗಳನ್ನು ಸಂಗ್ರಹಿಸಲಾಗಿತ್ತು. ವೈದ್ಯರು, ಬ್ಯಾಂಕುಗಳು, ಸ್ಥಳೀಯ ಮಾರುಕಟ್ಟೆಗಳು, ಕಸಾಯಿಖಾನೆಗಳು, ವಿದ್ಯಾರ್ಥಿಗಳು ಮತ್ತು ಗೃಹಿಣಿಯರಿಂದ ನೋಟುಗಳನ್ನು ಪಡೆಯ
ಲಾಗಿತ್ತು. ವೈದ್ಯರಿಂದ ಪಡೆದ ನೋಟುಗಳಲ್ಲಿಯೂ ಬ್ಯಾಕ್ಟೀರಿಯಾಗಳು ಪತ್ತೆಯಾಗಿದ್ದವು.

**

ರೋಗಗಳು ಯಾವುವು?

* ಸಾಮಾನ್ಯ ಜ್ವರ, ಹೊಟ್ಟೆನೋವು, ಚರ್ಮರೋಗ, ಮೂತ್ರನಾಳದ ಸೋಂಕು

* ಶ್ವಾಸಕೋಶದ ಸೋಂಕು, ಗಂಟಲು ಸೋಂಕು, ಕ್ಷಯ, ಗಲಗ್ರಂಥಿ ಉರಿಯೂತ (ಟಾನ್ಸಿಲೈಟಿಸ್‌)

* ಮಿದುಳಿನ ಉರಿಯೂತ, ರಕ್ತ ನಂಜು

**

ನೋಟಿಗೆ ಸೋಂಕು ಹೇಗೆ?

* ಮೂಗಿನಿಂದ ಉಂಟಾಗುವ ಸ್ರಾವಗಳು, ಸೀನುವಾಗ, ಕೆಮ್ಮುವಾಗ ಸಿಡಿಯುವ ದ್ರವ, ಮಲ–ಮೂತ್ರ ನೋಟಿಗೆ ತಗಲುವುದು

* ನೋಟಿಗೆ ಜೊಲ್ಲು ರಸ ಹಚ್ಚುವುದು

* ಗಾಯಗಳಿಗೆ ನೋಟು ತಾಗುವುದು

* ಯಾವುದೇ ರೀತಿಯ ಬ್ಯಾಕ್ಟೀರಿಯಾ ಇರುವ ಸ್ಥಳಕ್ಕೆ ನೋಟು ತಾಗುವುದು

**

100%:ತರಕಾರಿ ಮಾರುಕಟ್ಟೆ, ಮಾಂಸದ ಅಂಗಡಿ, ಹಾಲಿನ ಬೂತ್‌, ಪಾನ್‌ ಅಂಗಡಿ, ಪೆಟ್ರೋಲ್‌ ಬಂಕ್‌, ಚಪ್ಪಲಿ ಅಂಗಡಿ, ಭಿಕ್ಷುಕರಿಂದ ಪಡೆದ ನೋಟುಗಳಲ್ಲಿ ಕಂಡು ಬಂದ ಸೋಂಕಿನ ಪ್ರಮಾಣ

92%:ಅಮೆರಿಕದ ನೋಟುಗಳಲ್ಲಿ ಪತ್ತೆಯಾದಕೊಕೇನ್‌ ಪ್ರಮಾಣ. ಇದು ಹೆಪಟೈಟಿಸ್‌–ಬಿ ಸೋಂಕಿಗೆ ಕಾರಣವಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT