ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣೆದುರೇ ವ್ಯಕ್ತಿಯೊಬ್ಬ ಸಾಯುವುದನ್ನು ನೋಡಲಾರೆ: ಮುಂಬೈ ವೈದ್ಯರ ನೋವಿನ ಮಾತು

Last Updated 3 ಜೂನ್ 2020, 5:15 IST
ಅಕ್ಷರ ಗಾತ್ರ

ಮುಂಬೈ:ಮಹಾರಾಷ್ಟ್ರದಲ್ಲಿ ಇದುವರೆಗೆ 72 ಸಾವಿರಕ್ಕೂ ಹೆಚ್ಚು ಜನರಿಗೆ ಕೋವಿಡ್–19 ಸೋಂಕು ತಗುಲಿದೆ. ಮಾತ್ರವಲ್ಲದೆ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.ಆಸ್ಪತ್ರೆಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಇದು ವೈದ್ಯಕೀಯ ಸಿಬ್ಬಂದಿ ಮತ್ತು ಸರ್ಕಾರದ ಒತ್ತಡವನ್ನು ಹೆಚ್ಚಿಸುತ್ತಿದೆ.

ಸೋಂಕಿನ ಕೆಟ್ಟ ಪರಿಣಾಮಕ್ಕೆ ತುತ್ತಾಗಿರುವ ಜಗತ್ತಿನ ಪ್ರಮುಖ ನಗರವಾಗಿಗುರುತಿಸಿಕೊಂಡಿರುವ ಮುಂಬೈ ಒಂದರಲ್ಲೇ 41 ಸಾವಿರ ಪ್ರಕರಣಗಳು ವರದಿಯಾಗಿವೆ.ಇಲ್ಲಿನ ಕಿಂಗ್ ಎಡ್ವರ್ಡ್ ಮೆಮೊರಿಯಲ್ (ಕೆಇಎಂ) ಆಸ್ಪತ್ರೆಯಲ್ಲಿನ ವೈದ್ಯಕೀಯ ಸಿಬ್ಬಂದಿ ಅತಿಯಾದ ಕೆಲಸದ ಒತ್ತಡದಿಂದ ಬಳಲುತ್ತಿದ್ದಾರೆ.

ಇದೀಗ ಕೆಇಎಂ ಆಸ್ಪತ್ರೆಯ ವೈದ್ಯಕೀಯ ಸಂಘದವರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿ ಮಹಾರಾಷ್ಟ್ರ ಮುಖ್ಯಮುಂತ್ರಿ ಉದ್ದವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದಾರೆ.ಅದರಲ್ಲಿ,ಕೋವಿಡ್–19 ಪರೀಕ್ಷಿಸುವ ವೈದ್ಯಕೀಯ ಸಿಬ್ಬಂದಿಗೆ ಕಡಿಮೆ ಅವಧಿಯ ಪಾಳಿ ಮತ್ತು ಪ್ರತ್ಯೇಕ ವಾರ್ಡ್‌ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.

‘ಕೆಇಎಂ ಆಸ್ಪತ್ರೆಯಲ್ಲಿ ಸ್ಟಾಫ್‌ ನರ್ಸ್‌ಗಳು ಮತ್ತು ನಾಲ್ಕನೇ ದರ್ಜೆ ಸಿಬ್ಬಂದಿ ಕೊರತೆ ಇದೆ. ಇದರಿಂದಾಗಿ ವೈದ್ಯರಿಗೆ ಹೊರೆಯಾಗಿದೆ. ಇದು ಅವರ ಸ್ಥೈರ್ಯದ ಮೇಲೆ ಪರಿಣಾಮ ಉಂಟುಮಾಡುತ್ತಿದೆ’ ಎಂದು ವಿವರಿಸಿದ್ದಾರೆ.

ಪತ್ರದ ಜೊತೆಗೆ ವಿಡಿಯೊವನ್ನೂ ಹಂಚಿಕೊಂಡಿರುವ ಅವರು, ತಮ್ಮ ಸಂಕಷ್ಟದ ಪರಿಸ್ಥಿತಿಯನ್ನು ಅರ್ಥೈಸುವ ಪ್ರಯತ್ನ ಮಾಡಿದ್ದಾರೆ. ವಾರ್ಡ್‌ನಲ್ಲಿ ಒಟ್ಟು 35 ಸೋಂಕಿತರಿದ್ದು, ಕೇವಲ ಮೂವರು ವೈದ್ಯರೇ ನೋಡಿಕೊಳ್ಳುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ವೈದ್ಯರೊಬ್ಬರು, ‘ವಾರ್ಡ್‌ ಸ್ವಚ್ಛಗೊಳಿಸಲು ಯಾವೊಬ್ಬ ಸಿಬ್ಬಂದಿಯೂ ಇಲ್ಲ. ಸೋಂಕಿತರನ್ನು ನೋಡಿಕೊಳ್ಳಲು ನರ್ಸ್‌ಗಳಿಲ್ಲ. ಇದೀಗ ಜನರು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ದುಸ್ಥಿತಿಯನ್ನು ನೋಡುತ್ತಿದ್ದಾರೆ. ಭಾರತವು ತನ್ನ ಜಿಡಿಪಿಯಲ್ಲಿ ಅತ್ಯಂತ ಕಡಿಮೆ ಮೊತ್ತವನ್ನು ಆರೋಗ್ಯಕ್ಕಾಗಿ ವ್ಯಯಿಸುತ್ತಿದೆ’ ಎಂದು ವಿವರಿಸಿದ್ದಾರೆ.

ಮುಂದುವರಿದು ರೋಗಿಗಳನ್ನುಉಪಚರಿಸಲು ಯುವಕರು ಮುಂದಾಗಬೇಕು ಎಂದು ಕೋರಿರುವ ಅವರು, ‘ರೋಗಿಯು (ಸೋಂಕಿತನೊಬ್ಬನನ್ನು ಉಲ್ಲೇಖಿಸಿ) ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ನಾನು ಅಸಹಾಯಕನಾಗಿದ್ದೇನೆ. ನನ್ನಿಂದ ಏನನ್ನೂ ಮಾಡಲಾಗುತ್ತಿಲ್ಲ. ನನ್ನ ಕಣ್ಣೆದುರು ವ್ಯಕ್ತಿಯೊಬ್ಬ ಸಾಯುವುದನ್ನು ನೋಡಲಾಗುವುದಿಲ್ಲ.ನನಗೆ ಸಹಾಯ ಮಾಡಲು ಇಲ್ಲಿ ಯಾರೂ ಇಲ್ಲ. ನಾವಿಲ್ಲಿ ಕೇವಲಮೂವರು ಸಹೋದ್ಯೋಗಿಗಳು... ಕೇವಲ ಮೂವರು ವೈದ್ಯರು ಇದ್ದೇವೆ. ಇಲ್ಲಿರುವ 35 ಸೋಂಕಿತರು ಯಾವಾಗಲಾದರೂ ಸಾಯಬಹುದು. ನಾವು ಅವರೆಲ್ಲರನ್ನೂ ಉಳಿಸಲು ಪ್ರಯತ್ನಿಸುತ್ತಿದ್ದೇವೆ. ಇದು (ಸರಿಯಾದ ವ್ಯವಸ್ಥೆ ಇಲ್ಲದಿರುವುದು) ಅಮಾನವೀಯ ಮತ್ತು ಅನೈತಿಕವಾಗಿದೆ.ಇತರ ಆರೋಗ್ಯ ಕಾರ್ಯಕರ್ತರು ರೋಗಿಗಳನ್ನು ಮುಟ್ಟಿಯೂ ನೋಡುತ್ತಿಲ್ಲ. ಈ ಕಾರಣಕ್ಕಾಗಿ ಯುವಜನರು ಬಂದು ನೆರವಾಗುವಂತೆ ನಾನು ವಿನಂತಿಸುತ್ತೇನೆ’ ಎಂದಿದ್ದಾರೆ.

‘ನಾವು ಈ ವಿಷಯವನ್ನು ಉನ್ನತ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಕೆಲವು ವಾರಗಳಿಂದ ಪರಿಸ್ಥಿತಿ ತುಂಬಾ ಭೀಕರವಾಗಿದೆ. ಇದು ಮತ್ತಷ್ಟು ಕೆಡುತ್ತಲೇ ಇದೆ. ಈಗಲೂ ಸೂಕ್ತ ವ್ಯವಸ್ಥೆ ಮಾಡದಿದ್ದರೆ, ನಾವು ಎಲ್ಲಭರವಸೆಗಳನ್ನು ಕಳೆದುಕೊಳ್ಳುತ್ತೇವೆ ಎಂದು ಭಯವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಇಎಂ ಆಸ್ಪತ್ರೆಯಲ್ಲಿ ಕೋವಿಡ್‌–19 ಸೋಂಕಿತ ಮತ್ತು ಇತರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಸ್ಪತ್ರೆಗೆಹತ್ತಿರದಲ್ಲಿರುವ ಹಾಗೂ ಪುರಸಭೆ ವತಿಯಿಂದ ನಡೆಸುತ್ತಿರುವ ನಾಯರ್ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯಾಗಿ ಬದಲಾಯಿಸಲಾಗಿದೆ. ಅದಾದ ಬಳಿಕ ಕೆಇಎಂ ಆಸ್ಪತ್ರೆ ವೈದ್ಯರ ಒತ್ತಡ ಹೆಚ್ಚಾಗಿದೆ.

ಇಂಥದೇ ವಿಡಿಯೊವೊಂದು ಇತ್ತೀಚೆಗೆ ವೈರಲ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT