ಭಾನುವಾರ, ಜೂನ್ 7, 2020
22 °C
ಕೋವಿಡ್‌–19: ಶವ ನಿರ್ವಹಣೆಗೆ ಮಾರ್ಗಸೂಚಿ ಪ್ರಕಟಿಸಿದ ಐಸಿಎಂಆರ್‌

ಕೊರೊನಾ: ಮೃತದೇಹ ಕೊಯ್ದು ಮರಣೋತ್ತರ ಪರೀಕ್ಷೆ ಬೇಡ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ : ಈವರೆಗಿನ ಅಧ್ಯಯನ ಪ್ರಕಾರ, ಕೊರೊನಾ ವೈರಾಣುವು ಮೃತ ದೇಹದಲ್ಲಿ ಬದುಕುಳಿಯುವ ಸಾಧ್ಯತೆ ಸಮಯ ಕಳೆದಂತೆ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ, ಮೃತದೇಹದಲ್ಲಿರುವ ವೈರಾಣು ಇಂತಿಷ್ಟೇ ಸಮಯದಲ್ಲಿ ನಾಶವಾಗಿಬಿಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ (ಐಸಿಎಂಆರ್‌) ಹೇಳಿದೆ.

ಹಾಗಾಗಿ, ಮೃತದೇಹಕ್ಕೆ ಸಂಬಂಧಿಸಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ದೇಹವನ್ನು ಕೊಯ್ಯಬಾರದು ಎಂದೂ ಐಸಿಎಂಆರ್‌ ಹೇಳಿದೆ. ಮೃತ ದೇಹದಿಂದ ಎಷ್ಟು ದಿನಗಳವರೆಗೆ ಸೋಂಕು ಹರಡಬಹುದು ಎಂಬ ಪ್ರಶ್ನೆಗೆ ಐಸಿಎಂಆರ್‌ ಈ ಉತ್ತರ ನೀಡಿದೆ. 

ಮೃತದೇಹದ ನಿರ್ವಹಣೆಗೆ ಸಂಬಂಧಿಸಿ ವಿವಿಧ ಮಾರ್ಗಸೂಚಿಗಳನ್ನು ಐಸಿಎಂಆರ್‌ ಪ್ರಕಟಿಸಿದೆ. ಆರ್‌ಟಿ–ಪಿಸಿಆರ್‌ ಪರೀಕ್ಷೆಯಲ್ಲಿ ಸೋಂಕು ಇಲ್ಲ ಎಂಬ ಫಲಿತಾಂಶ ಬಂದಿದ್ದರೆ ಆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಬಹುದೇ ಎಂಬುದಕ್ಕೂ ಉತ್ತರ ನೀಡಲಾಗಿದೆ. ಆರ್‌ಟಿ–ಪಿಸಿಆರ್‌ ಪರೀಕ್ಷೆಯಲ್ಲಿ ‘ಸೋಂಕು ಇಲ್ಲ’ ಎಂದು ತಪ್ಪಾಗಿ ಫಲಿತಾಂಶ ಬರುವ ಸಾಧ್ಯತೆ ಹೆಚ್ಚು. ಹಾಗಾಗಿ, ಪ್ರತಿ ಪ್ರಕರಣವನ್ನೂ ಕೊರೊನಾ ವೈರಾಣು ಸೋಂಕು ಪ್ರಕರಣ ಎಂದೇ ಪರಿಗಣಿಸಬೇಕು ಎಂದಿದೆ. 

ಹಾಗಾಗಿ, ಸೋಂಕು ಇಲ್ಲ ಎಂದು ಭಾವಿಸಲಾದ ವ್ಯಕ್ತಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸುವಾಗ ಎಚ್ಚರ ವಹಿಸಬೇಕು. ದೇಹವನ್ನು ಕೊಯ್ದು ಮರಣೋತ್ತರ ಪರೀಕ್ಷೆ ನಡೆಸದಿರುವುದು ಉತ್ತಮ ಎಂದು ಹೇಳಲಾಗಿದೆ. 

ಹೈಡ್ರೊಕ್ಲೋರೈಟ್‌ ಅಥವಾ ಆಲ್ಕೋಹಾಲ್‌ ಬಳಸಿ ಸೋಂಕುಮುಕ್ತಗೊಳಿಸಿ ದೇಹವನ್ನು ಕೊಯ್ದು ಮರಣೋತ್ತರ ಪರೀಕ್ಷೆ ನಡೆಸಬಹುದೇ ಎಂಬುದಕ್ಕೂ ಉತ್ತರ ನೀಡಲಾಗಿದೆ. ಮೂಗು ಅಥವಾ ಬಾಯಿಯಲ್ಲಿನ ಖಾಲಿ ಪ್ರದೇಶಗಳು, ದೇಹದೊಳಗೆ ಸೃಷ್ಟಿಯಾಗಬಹುದಾದ ಅನಿಲ ಅಥವಾ ದ್ರವಗಳಲ್ಲಿ ಕೂಡ ಸೋಂಕು ಇರುತ್ತದೆ. ಕೊಯ್ದು ಮರಣೋತ್ತರ ಪರೀಕ್ಷೆ ನಡೆಸುವಾಗ ಇವು ಬೇರೊಬ್ಬರಿಗೆ ತಗಲುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಮುನ್ನೆಚ್ಚರಿಕೆ ಇರಲಿ

l ಒಂದೇ ಕಂಪ್ರೆಸರ್ ಇರುವ ಶೀಥಲ ಗೃಹದ ಎರಡು ಪ್ರತ್ಯೇಕ ಭಾಗಗಳಲ್ಲಿ ಕೋವಿಡ್‌ನಿಂದ ಮೃತಪಟ್ಟವರ ದೇಹ ಮತ್ತು ಇತರ ಮೃತದೇಹಗಳನ್ನು ಇರಿಸಿದರೆ, ಶೀಥಲ ಗೃಹ ನಿರ್ವಾಹಕರಿಗೆ ಸೋಂಕು ತಗಲುವ ಸಾಧ್ಯತೆ ಕಡಿಮೆ

l ಆದರೆ, ದೇಹಗಳನ್ನು ಎರಡೆರಡು ಚೀಲ ಹಾಕಿ ಇರಿಸಬೇಕು ಮತ್ತು ನಿರ್ವಾಹಕರು ಪಿಪಿಇ ಕಿಟ್‌ ಧರಿಸಬೇಕು

l ಕೋವಿಡ್‌ನಿಂದ ಮೃತಪಟ್ಟವರ ದೇಹವನ್ನು ಆಸ್ಪತ್ರೆಯಿಂದ ಶವಾಗಾರಕ್ಕೆ ಸಾಗಿಸಲು ಪ್ರತ್ಯೇಕ ಸಿಬ್ಬಂದಿ ಇರಬೇಕು

l ಸಿಬ್ಬಂದಿ ಕೊರತೆ ಇದ್ದರೆ, ಎನ್‌ಜಿಒ ಅಥವಾ ಸಮಾಜ ಕಲ್ಯಾಣ ಇಲಾಖೆಯ ನೆರವು ಪಡೆಯಬಹುದು

 

ಶಂಕೆ ಇದ್ದರೂ ಪರೀಕ್ಷೆ ಬೇಡ

ಕೋವಿಡ್‌ ಬಾಧಿತ ಅಥವಾ ಶಂಕಿತ ವ್ಯಕ್ತಿಯ ಮರಣವು ಅನುಮಾನಾಸ್ಪದವಾಗಿದ್ದರೂ ದೇಹವನ್ನು ಕೊಯ್ದು ಪರೀಕ್ಷೆ ಮಾಡಬಾರದು ಎಂದು ಐಸಿಎಂಆರ್‌ ಹೇಳಿದೆ. ಇಂತಹ ಸಂದರ್ಭಗಳಲ್ಲಿ ಪೊಲೀಸರ ಸಮನ್ವಯದಲ್ಲಿ ಮರಣ ಪ್ರಮಾಣಪತ್ರ ಸಿದ್ಧಪಡಿಸಬೇಕು. ದೇಹವನ್ನು ಕೊಯ್ಯದೆಯೇ, ಸಂಬಂಧಿಕರಿಗೆ ಬಿಟ್ಟುಕೊಡಬೇಕು.

ವ್ಯಕ್ತಿಯ ರೋಗ ವಿವರ, ಪ್ರಯೋಗಾಲಯ ತಪಾಸಣೆ, ನೀಡಿದ ಚಿಕಿತ್ಸೆ ಮುಂತಾದ ದಾಖಲೆಗಳನ್ನು  ಹೆಚ್ಚುವರಿ ಬಳಸಿಕೊಳ್ಳಬೇಕು. ಇವು ತನಿಖೆಗೆ ನೆರವಾಗಬಹುದು. ಇದರ ಆಧಾರದಲ್ಲಿ ಮರಣ ಕಾರಣ ಮತ್ತು ಸಂಬಂಧಿಸಿದ ಇತರ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. 

ದೇಹವನ್ನು ಕೊಯ್ಯದೇ ಇರುವುದರಿಂದ ಶವಾಗಾರಗಳ ಸಿಬ್ಬಂದಿ, ಪೊಲೀಸರಿಗೆ ಸೋಂಕು ಹರಡುವುದನ್ನು ತಪ್ಪಿಸಬಹುದು. ಶವಾಗಾರಗಳ ನೆಲ ಮತ್ತು ಇತರ ಪ್ರದೇಶಗಳಲ್ಲಿ ವೈರಾಣು ಪಸರಿಸುವುದನ್ನು ತಡೆಯಬಹುದು ಎಂದು ಐಸಿಎಂಆರ್‌ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು