ಮಂಗಳವಾರ, ಮೇ 18, 2021
30 °C
ರೂರ್ಕಿ ಐಐಟಿ ವಿಜ್ಞಾನಿಗಳಿಂದ ಪ್ರಾಥಮಿಕ ಪರೀಕ್ಷೆ

ಹರಿಯುವ ನದಿಯಿಂದ ವಿದ್ಯುತ್ ಉತ್ಪಾದಿಸಲು ಸಂಶೋಧನೆ

ಪಿಟಿಐ Updated:

ಅಕ್ಷರ ಗಾತ್ರ : | |

ರೂರ್ಕಿ: ನದಿ ಮತ್ತು ಕಾಲುವೆಗಳ ಮೇಲ್ಮೈ ನೀರಿನಿಂದ ವಿದ್ಯುತ್ ಉತ್ಪಾದಿಸುವಂತಹ ಯಂತ್ರವೊಂದರ ಪ್ರಾಥಮಿಕ ಮಾದರಿಯನ್ನು ರೂರ್ಕಿ ಐಐಟಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಇದನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಈ ಯಂತ್ರದಿಂದ ನವೀಕೃತ ಇಂಧನಕ್ಕೆ ಪರ್ಯಾಯ ಸಂಪನ್ಮೂಲ ದೊರಕುವ ಸಾಧ್ಯತೆ ಇದೆ.

ಸಾಂಪ್ರದಾಯಿಕ ಜಲವಿದ್ಯುತ್ ಘಟಕಗಳಿಗೆ ದೊಡ್ಡ ಮಟ್ಟದ ಅಣೆಕಟ್ಟುಗಳ ಅಗತ್ಯ ಇರುತ್ತದೆ. ಇಂತಹ ಅಣೆಕಟ್ಟುಗಳ ನಿರ್ಮಾಣದಿಂದ ಪರಿಸರ ಮತ್ತು ಜೀವವೈವಿಧ್ಯಗಳ ಮೇಲೆ ಪ್ರತಿಕೂಲ ಪರಿಣಾಮಗಳಾಗುತ್ತವೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಎರಡು ವರ್ಷ ಸಂಶೋಧನೆ ನಡೆಸಿ ಈ ಮಾದರಿ ಯಂತ್ರ ರೂಪಿಸಲಾಗಿದೆ.

‘ದೆಹಲಿ ಮೂಲದ ಮ್ಯಾಕ್ಲೆಕ್ ತಂತ್ರಜ್ಞಾನ ಪ್ರಯೋಗಾಲಯದ ನೆರವಿನೊಂದಿಗೆ ಈ ‍ಪ್ರಾಥಮಿಕ ಮಾದರಿ ತಯಾರಿಸಲಾಗಿದೆ. ಇದನ್ನು ಉತ್ತರಾಖಂಡದ ರೂರ್ಕಿಯ ಗಂಗಾ ಮೇಲ್ದಂಡೆ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಈ ಕಾಲುವೆಯಲ್ಲಿ ಸಾಮಾನ್ಯವಾಗಿ ವರ್ಷವಿಡೀ ನೀರಿನ ಹರಿವು ಒಂದೇ ವೇಗದಲ್ಲಿ ಇರುತ್ತದೆ. ಹಾಗಾಗಿ ಇದು ಪ್ರಯೋಗಕ್ಕೆ ಸೂಕ್ತವಾದ ಸ್ಥಳ. ಈ ಯಂತ್ರವನ್ನು ಮತ್ತಷ್ಟು ಸುಧಾರಿಸುವ ವಿಧಾನವನ್ನು ಕಂಡುಕೊಳ್ಳಬೇಕಿದೆ’ ಎಂದು ಯೋಜನೆಯ ಭಾಗವಾಗಿರುವ ಆರ್.ಪಿ. ಸೈನಿ ತಿಳಿಸಿದ್ದಾರೆ.   

‘ಅಣೆಕಟ್ಟುಗಳಲ್ಲಿ, ಎತ್ತರದಿಂದ ಬೀಳುವ ನೀರನ್ನು ಬಳಸಿ ಟರ್ಬೈನ್‌ಗಳನ್ನು (ಹವೆಯಂತ್ರ) ತಿರುಗಿಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಆದರೆ, ಹರಿಯುತ್ತಿರುವ ನದಿಯ ವೇಗವನ್ನು ಬಳಸಿ ಟರ್ಬೈನ್‌ಗಳನ್ನು ತಿರುಗಿಸಿ ವಿದ್ಯುತ್ ಉತ್ಪಾದಿಸುವ ವಿಧಾನವನ್ನು ನಾವು ಪರೀಕ್ಷಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ. 

‘ನದಿ, ಕಾಲುವೆ ದಂಡೆಗಳಲ್ಲಿ ನಿರ್ಮಿಸಲಾದ ಸಿಮೆಂಟ್ ಕಟ್ಟೆಗಳಿಗೆ ಕಟ್ಟಲಾದ ಟರ್ಬೈನ್‌ಗಳು ನದಿಯ ಮೇಲೆ ತೇಲುತ್ತವೆ. ಇವುಗಳ ಸಾಮರ್ಥ್ಯವನ್ನು ಸಾಂಪ್ರದಾಯಿಕ ಜಲವಿದ್ಯುತ್ ಘಟಕಗಳಿಗೆ ಹೋಲಿಸಲಾಗುವುದಿಲ್ಲ. ಆದರೆ ಈ ವಿಧಾನದಿಂದ ಹಲವು ಸವಾಲುಗಳನ್ನು ಎದುರಿಸಲು ಸಾಧ್ಯವಿದೆ. ಗಾಳಿ ಹಾಗೂ ಹರಿಯುವ ನೀರಿನ ವೇಗ ಒಂದೇ ಇದೆ ಎಂದು ಪರಿಗಣಿಸಿದರೆ, ಗಾಳಿಯ ವೇಗಕ್ಕಿಂತ 100 ಪಟ್ಟು ಹೆಚ್ಚು ವಿದ್ಯುತ್‌ಅನ್ನು ಹರಿಯುವ ನೀರಿನಿಂದ ಉತ್ಪಾದಿಸಬಹುದು. ಸ್ಥಳೀಯವಾಗಿ ಅವಶ್ಯವಿರುವ ವಿದ್ಯುತ್ಅನ್ನು, ಇಂತಹ ಸಣ್ಣ ಸಣ್ಣ ಸರಣಿ ಘಟಕಗಳಿಂದ ಉತ್ಪಾದಿಸಿಕೊಳ್ಳಬಹುದು’ ಎಂದು ಅವರು ವಿವರಿಸಿದ್ದಾರೆ. 

ಹೆಚ್ಚಿನ ಸಂಶೋಧನೆ ಅವಶ್ಯ: ‘ಹಲವು ವಿಧದ ಟರ್ಬೈನ್‌ಗಳು ಅಭಿವೃದ್ಧಿ ಹಂತದಲ್ಲಿವೆ. ಆದರೆ ಹರಿಯುವ ನೀರಿನಲ್ಲಿ ಅವುಗಳನ್ನು ಅಳವಡಿಸುವುದೇ ಶ್ರಮದಾಯಕ ಕೆಲಸ. ಈ ನಿಟ್ಟಿನಲ್ಲಿ ಮತ್ತಷ್ಟು ಸಂಶೋಧನೆಗಳಾಗಿಬೇಕಿದೆ. ಆ ಉದ್ದೇಶದಿಂದಲೇ ಈ ಮಾದರಿ ಯಂತ್ರ ಸಿದ್ಧಪಡಿಸಿದ್ದೇವೆ. ಇದನ್ನು ಬಳಸಿ, ಹರಿಯುವ ನದಿ, ಕಾಲುವೆಗಳಲ್ಲಿ ಟರ್ಬೈನ್‌ಗಳ ಅಳವಡಿಕೆಗೆ ಒಂದು ನಿರ್ದಿಷ್ಟ ವಿಧಾನ ನಿಗದಿಪಡಿಸಬಹುದು’ ಎಂದು ಅವರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು