ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯು ದಾಳಿಯಲ್ಲಿ ಎಬಿವಿಪಿ ಪಾತ್ರ? ಹಲವು ಪ್ರಶ್ನೆಗಳಿಗೆ ಕಾರಣವಾದ ಚಿತ್ರಗಳು

Last Updated 7 ಜನವರಿ 2020, 4:00 IST
ಅಕ್ಷರ ಗಾತ್ರ
ADVERTISEMENT
""
""
""
""
""
""
""

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ಭಾನುವಾರ ರಾತ್ರಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಮುಸುಕುಧಾರಿ ದಾಳಿಕೋರರು ನಡೆಸಿದ ಹಲ್ಲೆಯ ಮಬ್ಬುಗತ್ತಲಿನ ವಿಡಿಯೊಗಳು, ಫೊಟೊಗಳು ಈಗಾಗಲೇ ಸಾಮಾಜಿಕ ತಾಣಗಳನ್ನು ಆವರಿಸಿಕೊಂಡಿವೆ. ಇದರಲ್ಲಿರುವ ದಾಳಿಕೋರರು ಎಬಿವಿಪಿ ಕಾರ್ಯಕರ್ತರು ಎಂದು ಹಲವರು ಆರೋಪಿಸಿದ್ದಾರೆ.

‘ಈ ಚಿತ್ರಗಳು, ವಿಡಿಯೊಗಳು, ವಾಟ್ಸ್‌ಆ್ಯಪ್‌ ಸ್ಕ್ರೀನ್‌ ಶಾಟ್‌ಗಳನ್ನು ತಮ್ಮವಲ್ಲ’ ಎಂದು ಎಬಿವಿಪಿ ಸ್ಪಷ್ಟನೆ ನೀಡಿದೆ. ‘ವಾಟ್ಸ್‌ಆ್ಯಪ್‌ ಚಾಟ್‌ ಅನ್ನು ತಿರುಚಲಾಗಿದೆ’ ಎಂದು ಆರೋಪಿಸಿರುವ ಎಬಿವಿಪಿ, ಭಾನುವಾರ ಜೆಎನ್‌ಯು ಮೇಲೆ ನಡೆದ ದಾಳಿಯನ್ನು ಖಂಡಿಸಿದೆ.

ಬಲ ಭಾಗದ ತುದಿಯಲ್ಲಿ ವಿಕಾಸ್‌ ಪಟೇಲ್‌ ಮತ್ತು ಮಧ್ಯದಲ್ಲಿರುವುದು ಶಿವ್‌ ಪೂಜನ್‌ ಮಂಡಲ್‌

ಹಲ್ಲೆಯಲ್ಲಿ ಎಬಿವಿಪಿ ಪಾತ್ರ: ಗಂಭೀರ ಆರೋಪ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವವಿಡಿಯೊ ಮತ್ತುಫೊಟೊಗಳನ್ನೇ ಸಾಕ್ಷಿಯಾಗಿರಿಸಿಕೊಂಡು ಹಲವರು,‘ದಾಳಿಯಲ್ಲಿ ಬಿಜೆಪಿ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌’ (ಎಬಿವಿಪಿ) ಪಾತ್ರವಿದೆ ಎಂದು ಆರೋಪಿಸಿದ್ದಾರೆ.

ದೊಣ್ಣೆಗಳು, ಫೈಬರ್‌ ಲಾಠಿಗಳನ್ನು ಹಿಡಿದ ಗುಂಪೊಂದು ಜೆಎನ್‌ಯು ಆವರಣದಲ್ಲಿ ನಿಂತಿರುವ ಚಿತ್ರವೊಂದು ಸೋಮವಾರ ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಂಡಿತ್ತು. ಚಿತ್ರದ ಬಲಭಾಗದಲ್ಲಿ ನೀಲಿ ಬಣ್ಣದ ಜಾಕೆಟ್‌ ಧರಿಸಿ, ಫೈಬರ್‌ ಲಾಠಿ ಹಿಡಿದು ನಿಂತಿರುವ ಯುವಕನನ್ನು ಜೆಎನ್‌ಯುನ ಎಬಿವಿಪಿ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯ ವಿಕಾಸ್‌ ಪಟೇಲ್‌ ಎಂದು ವಿದ್ಯಾರ್ಥಿಗಳ ಹೇಳಿಕೆ ಉಲ್ಲೇಖಿಸಿ ‘ಎನ್‌ಡಿಟಿವಿ’ ಜಾಲತಾಣ ವರದಿ ಮಾಡಿದೆ.

ಅದೇ ಚಿತ್ರದಲ್ಲಿ ವಿಕಾಸ್‌ ಪಟೇಲ್‌ ನಂತರ ನಿಂತಿರುವ ನೀಲಿ ಮತ್ತು ಹಳದಿ ಬಣ್ಣದ ಬಟ್ಟೆ ಧರಿಸಿ ನಿಂತಿರುವ ಯುವಕನನ್ನು ಜೆಎನ್‌ಯುನ ಬಿಎ ಮೊದಲ ವರ್ಷದ ವಿದ್ಯಾರ್ಥಿ ಶಿವ್‌ ಪೂಜನ್‌ ಮಂಡಲ್‌ ಎಂದು ಗುರುತಿಸಲಾಗಿದೆ. ಆತನಿಗೂಎಬಿವಿಪಿ ಸಂಘಟನೆಯ ನಂಟಿತ್ತು ಎಂದು ಹೇಳಲಾಗಿದೆ. ಈ ಚಿತ್ರವನ್ನು ಭಾನುವಾರ ಮಧ್ಯಾಹ್ನ ವಿವಿ ಆವರಣದಲ್ಲಿ ದಾಳಿಗೂ ಮುನ್ನ ತೆಗೆಯಲಾಗಿದೆ ಎಂದು ಹೇಳಲಾಗಿದೆ.

ಇದೇ ಗುಂಪು ದೊಣ್ಣೆ, ಲಾಠಿಗಳನ್ನು ಹಿಡಿದು ಜೆಎನ್‌ಯು ಆವರಣದೊಳಗೆ ಪ್ರವೇಶ ಮಾಡುತ್ತಿರುವ ಮತ್ತೊಂದು ಫೊಟೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಕ್ಕಿದೆ.ಅದರಲ್ಲಿ ಶಿವ ಪೂಜನ್‌ ಮಂಡಲ್‌ ಕೂಡ ಇರುವುದು ಪತ್ತೆಯಾಗಿದೆ.

ಇನ್ನು ಭಾನುವಾರ ರಾತ್ರಿ ನಡೆದ ದಾಳಿಯ ವಿಡಿಯೊ ಪರಿಶೀಲನೆ ನಡೆಸಿದಾಗ ಅದರಲ್ಲಿ ಶಿವ ಪೂಜನ್‌ ಮಂಡಲ್‌ ಕೂಡ ಇರುವುದು ಗೊತ್ತಾಗಿದೆ.

ಎನ್‌ಡಿಟಿವಿಯ ಹಿರಿಯ ಪತ್ರಕರ್ತ ಶ್ರೀನಿವಾಸನ್ ಜೈನ್ ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ಜೆಎನ್‌ಯು ದಾಳಿ ದೇಶಾದ್ಯಂತ ಖಂಡನೆಗೆ ಗುರಿಯಾಗುತ್ತಲೇ ವಿಕಾಸ್‌ ಪಟೇಲ್‌ ಮತ್ತು ಮಂಡಲ್‌ ತಮ್ಮ ಸಾಮಾಜಿಕ ತಾಣದ ಖಾತೆಗಳೆಲ್ಲವನ್ನೂ ಡಿಲೀಟ್‌ ಮಾಡಿದ್ದಾರೆ.

ಆರ್‌ಎಸ್‌ಎಸ್‌ ಗ್ರೂಪ್‌ನಲ್ಲಿ ವಿಕಾಸ್‌ ಪಟೇಲ್‌ ಚಾಟ್‌

ಜೆಎನ್‌ಯು ಮೇಲೆ ದಾಳಿ ಮಾಡುವುದಕ್ಕೂ ಮೊದಲು ‘ಫ್ರೆಂಡ್ಸ್‌ ಆಫ್‌ ಆರ್‌ಎಸ್‌ಎಸ್‌’ ಎಂಬ ಗ್ರೂಪ್‌ನಲ್ಲಿ ಚರ್ಚೆ ನಡೆದಿದೆ. ಆ ಗ್ರೂಪ್‌ ಚಾಟ್‌ನ ಸ್ಕ್ರೀನ್‌ ಶಾಟ್‌ವೊಂದು ಸದ್ಯ ಲಭ್ಯವಾಗಿದೆ. ‘ಎಡಪಂಥೀಯ ಉಗ್ರರ ವಿರುದ್ಧದ ಕಾರ್ಯಚರಣೆಯಲ್ಲಿ ಪಾಲ್ಗೊಳ್ಳಿ’ ಎಂದು ಅಲ್ಲಿ ಚರ್ಚೆ ನಡೆದಿದೆ. ಈ ಚರ್ಚೆಯ ವೇಳೆ ವಿಕಾಸ್‌ ಪಟೇಲ್‌ ಅವರದ್ದೂ ಎನ್ನಲಾದ ಸಂಖ್ಯೆಯೂ ಅಲ್ಲಿ ಕಾಣಿಸಿಕೊಂಡಿದೆ. ಅ ಸಂಖ್ಯೆಯನ್ನು ‘ಪ್ರಜಾವಾಣಿ’ ವರದಿಗಾರ ‘ಟ್ರೂಕಾಲರ್‌’ ಮೂಲಕಪರಿಶೀಲಿಸಿದಾಗ, ಅದು ವಿಕಾಶ್‌ ಪಟೇಲ್‌ ಅವರದ್ದೇ ಎಂದು ತಿಳಿದು ಬಂತು.

ಅದೇ ಚಾಟ್‌ನಲ್ಲಿ ಜೆಎನ್‌ಯುನ ಸಂಸ್ಕೃತ ವಿದ್ಯಾರ್ಥಿ ಯೋಗೇಂದ್ರ ಭಾರದ್ವಾಜ್‌ ಮತ್ತು ಪಿಎಚ್‌ಡಿ ವಿದ್ಯಾರ್ಥಿ ಸಂದೀಪ್‌ ಸಿಂಗ್‌ ಅವರೂ ಮಾತುಕತೆ ನಡೆಸಿರುವುದು ಬಯಲಾಗಿದೆ.

ವಾಟ್ಸ್‌ ಆ್ಯಪ್‌ ಗ್ರೂಪ್‌ ಚಾಟ್‌ನ ಸ್ಕ್ರೀನ್‌ ಶಾಟ್‌ ಬಹಿರಂಗಗೊಳ್ಳುತ್ತಲೇ ಯೋಗೇಂದ್ರ ಭಾರದ್ವಾಜ್‌ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳನ್ನು ಡಿಲೀಟ್‌ ಮಾಡಿದ್ದಾರೆ. ಆದರೆ, ಅವರು ಎಬಿವಿಪಿ ಸದಸ್ಯ ಎಂಬುದು ಅವರ ಈ ಹಿಂದಿನ ಟ್ವೀಟ್‌ನ ಸ್ಕ್ರೀನ್‌ ಶಾಟ್‌ ಮೂಲಕ ತಿಳಿದು ಬಂದಿದೆ.

ಸಂದೀಪ್‌ ಸಿಂಗ್‌ ಕೂಡ ಸಾಮಾಜಿಕ ತಾಣದ ಎಲ್ಲ ಖಾತೆಗಳನ್ನೂ ಡಿಲೀಟ್‌ ಮಾಡಿದ್ದಾರೆ.

‘ಎಡಪಂಥೀಯ ಉಗ್ರರನ್ನು ಅಂತ್ಯಗೊಳಿಸಬೇಕು. ಅವರನ್ನು ಬಗ್ಗು ಬಡಿಯಬೇಕು’ ಎಂದು ಯೋಗೇಂದ್ರ ಭಾರದ್ವಾಜ್‌ ಚಾಟ್‌ನಲ್ಲಿ ಮಾತನಾಡಿದ್ದಾರೆ. ಚಾಟ್‌ನಲ್ಲಿ ಕಾಣಿಸಿಕೊಂಡಿರುವ ಮೂವರೂ ಜೆಎನ್‌ಯು ಆವರಣದೊಳಗೆ ಹೇಗೆ ಪ್ರವೇಶಿಸಬೇಕು ಎಂಬುದರ ಕುರಿತು ಚರ್ಚೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT