ಗುರುವಾರ , ಜುಲೈ 29, 2021
23 °C

ಸೇನಾ ನೆಲೆ ಬಳಕೆ ಒಪ್ಪಂದಕ್ಕೆ ಭಾರತ–ಆಸ್ಟ್ರೇಲಿಯಾ ಸಹಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ಮೆಲ್ಬರ್ನ್‌: ಭದ್ರತಾ ಪಡೆಗಳಿಗೆ ಶಸ್ತ್ರಾಸ್ತ್ರ, ಯುದ್ಧಸಾಮಗ್ರಿಗಳ ಸಾಗಣೆ, ಸೇನಾ ನೆಲೆಗಳ ಬಳಕೆ ಸೇರಿದಂತೆ ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಸಾಧಿಸುವ ಮಹತ್ವದ ಒಪ್ಪಂದಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ಗುರುವಾರ ಸಹಿ ಹಾಕಿದವು.

ಆನ್‌ಲೈನ್‌ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಅವರು ಈ ಸಂದರ್ಭದಲ್ಲಿ ಒಟ್ಟು ಆರು ಮಹತ್ವದ ಒಪ್ಪಂದಕ್ಕೆ ಅಂಕಿತ ಹಾಕಿದರು. ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳಿಸುವ ಸಂಬಂಧ ವಿದೇಶಿ ನಾಯಕರೊಬ್ಬರ ಜೊತೆ ಪ್ರಧಾನಿ ಮೋದಿ ಅವರು ಇದೇ ಮೊದಲ ಬಾರಿಗೆ ಆನ್‌ಲೈನ್‌ ಶೃಂಗಸಭೆ ನಡೆಸಿದ್ದು ವಿಶೇಷ.

ಸೈಬರ್‌ ಹಾಗೂ ಸೈಬರ್‌ ಆಧಾರಿತ ತಂತ್ರಜ್ಞಾನ, ಗಣಿಗಾರಿಕೆ, ಮಿಲಿಟರಿ ತಂತ್ರಜ್ಞಾನ, ವೃತ್ತಿಪರ ಶಿಕ್ಷಣ ಹಾಗೂ ಜಲಸಂಪನ್ಮೂಲ ನಿರ್ವಹಣೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಸಹಕಾರ ಈ ಒಪ್ಪಂದದಿಂದ ಮತ್ತಷ್ಟು ಗಟ್ಟಿಯಾಗಲಿದೆ ಎಂದು  ಉಭಯ ನಾಯಕರು ವಿಶ್ವಾಸ ವ್ಯಕ್ತಪಡಿಸಿದರು.

‘ಭಾರತ ಮೂಲದ ಕಂಪನಿಗಳ ಅನುಕೂಲಕ್ಕಾಗಿ ತೆರಿಗೆ ಪದ್ಧತಿಯಲ್ಲಿ ಸುಧಾರಣೆ ತರಲು ಉಭಯ ನಾಯಕರು ಸಮ್ಮತಿಸಿದರು. ಈ ಉದ್ದೇಶಕ್ಕಾಗಿ ಇಂಡಿಯಾ–ಅಸ್ಟ್ರೇಲಿಯಾ ಡಬಲ್‌ ಟ್ಯಾಕ್ಸೇಷನ್‌ ಅವೈಡನ್ಸ್‌ ಅಗ್ರಿಮೆಂಟ್‌ (ಡಿಟಿಎಎ) ಜಾರಿಗೊಳಿಸಬೇಕು. ಈ ವಿಷಯವನ್ಜು ತ್ವರಿತವಾಗಿ ಇತ್ಯರ್ಥಪಡಿಸಲು ನಿರ್ಧರಿಸಲಾಯಿತು’ ಎಂದು ಉಭಯ ನಾಯಕರ ಮಾತುಕತೆ ಬಳಿಕ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟ, ಕಡಲ ರಕ್ಷಣಾ ಕ್ಷೇತ್ರದ ಸವಾಲುಗಳನ್ನು ಎದುರಿಸುವುದು, ಆರ್ಥಿಕತೆ ಸುಧಾರಣೆ ಹಾಗೂ ಪ್ರಸ್ತುತ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್‌ ಸೋಂಕು ತಂದ ಸಂಕಷ್ಟದಿಂದ ಪಾರಾಗುವ ಬಗೆಯಂತಹ ವಿಷಯಗಳು ಸಹ ಶೃಂಗಸಭೆಯಲ್ಲಿ ಚರ್ಚೆಯಾದವು ಎಂದೂ ಜಂಟಿ ಹೇಳಿಕೆಯಲ್ಲಿ ವಿವರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು