ಶುಕ್ರವಾರ, ಜನವರಿ 24, 2020
28 °C

ಭಾರತ–ಚೀನಾ ಗಡಿ: ಗಡಿಬಿಡಿಯ ಸುತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೀನಾ ಜತೆಗಿನ ಭಾರತದ ಗಡಿ ವಿವಾದ 1914ರಷ್ಟು ಹಳೆಯದು. ಗಡಿ ತಕರಾರಿನ ಕಾರಣಕ್ಕಾಗಿಯೇ 1962ರಲ್ಲಿ ಯುದ್ಧ ನಡೆದಿತ್ತು. ಬಳಿಕ, ಮೂರು ಒಪ್ಪಂದಗಳು ಆಗಿದ್ದರೂ ಗಡಿ ಸಮಸ್ಯೆ ಬಗೆಹರಿದಿಲ್ಲ. ಭಾರತದ ಅರುಣಾಚಲ ಪ್ರದೇಶವು ತನ್ನದೆಂದು ಚೀನಾ ಪ್ರತಿಪಾದಿಸುತ್ತಲೇ ಇದೆ.

ಅರುಣಾಚಲ ಪ್ರದೇಶಕ್ಕೆ ಭಾರತದ ರಾಜಕಾರಣಿಗಳು, ರಾಜತಾಂತ್ರಿಕರು ಭೇಟಿ ನೀಡುವುದನ್ನು ಚೀನಾ ಬಲವಾಗಿ ವಿರೋಧಿಸುತ್ತದೆ. ಇದೇ ವೇಳೆ ಭೂಸೇನೆಯ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿರುವ ಜನರಲ್ ಎಂ.ಎಂ.ನರವಣೆ ಅವರು, ಚೀನಾ ಗಡಿ ಪ್ರದೇಶದಲ್ಲಿ ಸೇನೆಯ ಬಲವನ್ನು ಹೆಚ್ಚಿಸುವ ಮಾತನಾಡಿದ್ದಾರೆ. ಈ ಮಾತು ಯಾಕೆ ಮುಖ್ಯ ಎಂಬುದರ ವಿಶ್ಲೇಷಣೆ ಇಲ್ಲಿದೆ.

‘ಸೇನೆಯ ಬಲವರ್ಧನೆ’
ನವದೆಹಲಿ:
 ‘ಭಾರತವು ಉತ್ತರ ಮತ್ತು ಈಶಾನ್ಯ ಭಾಗದಲ್ಲಿ ಚೀನಾ ಜತೆಯೂ ಗಡಿ ಹಂಚಿಕೊಂಡಿದೆ. ಈ ಭಾಗದಲ್ಲಿ ಸೇನೆಯ ಬಲವನ್ನು ವೃದ್ಧಿಸುವ ಬಗ್ಗೆ ನಾನು ಗಮನಹರಿಸುತ್ತೇನೆ. ಗಡಿ ವಿಚಾರದಲ್ಲಿ ಸಂದರ್ಭಾನುಸಾರವಾಗಿ ಪರಿಹಾರ ಹುಡುಕಿಕೊಳ್ಳಬೇಕಾಗುತ್ತದೆ. ಸೇನೆಯ ಬಲವರ್ಧನೆ ಅಂತಹ ಸಂದರ್ಭದಲ್ಲಿ ನೆರವಿಗೆ ಬರುತ್ತದೆ’ ಎಂದು ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಹೇಳಿದ್ದಾರೆ.

‘ಚೀನಾ ಜತೆ ನಾವು ಹಂಚಿಕೊಂಡಿರುವ ಗಡಿ ಅಂತಿಮವಾಗಿಲ್ಲ. ಈ ವಿವಾದ ಇನ್ನೂ ಜೀವಂತವಾಗಿದೆ. ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

ಚೀನಾ ಆಕ್ರಮಿತ ಲಡಾಖ್‌
ಲಡಾಖ್‌ನ ಈ ಭಾಗವನ್ನು ಚೀನಾ ಅತಿಕ್ರಮಿಸಿಕೊಂಡಿದೆ. ಈ ಪ್ರದೇಶದಲ್ಲಿ ಭಾರತದ ಸೇನೆಯ ನಿಯೋಜನೆ ಇರಲಿಲ್ಲ. ಹೀಗಾಗಿ ಚೀನಾ ಅತಿಕ್ರಮಣ ಮಾಡಿಕೊಂಡು, ರಸ್ತೆ ನಿರ್ಮಿಸಿದ್ದು ಭಾರತೀಯ ಸೇನೆಗೆ ಅರಿವಿಗೆ ಬರುವಷ್ಟರಲ್ಲಿ ಹಲವು ವರ್ಷಗಳೇ ಕಳೆದಿತ್ತು. ಇದು ಬೆಳಕಿಗೆ ಬಂದ ನಂತರ ಸೇನೆಯು ಇಲ್ಲಿ ಗಡಿಠಾಣೆ ನಿರ್ಮಿಸಿದೆ.

ಪ್ಯಾಂಗ್ಯಾಂಗ್ ಸರೋವರದ ದಕ್ಷಿಣ ದಂಡೆಯವರೆಗಿನ ಪ್ರದೇಶವು ಭಾರತದ ಸೇನೆಯ ಹಿಡಿತದಲ್ಲಿದೆ. ಸರೋವರದ ಉತ್ತರದ ದಂಡೆಯ ಆಚೆಗಿನ ಪ್ರದೇಶವು ಚೀನಾ ಸೇನೆಯ ಹಿಡಿತದಲ್ಲಿದೆ. ಸರೋವರದ ದಂಡೆಯವರೆಗೆ ಚೀನಾ ಸುಸಜ್ಜಿತ ರಸ್ತೆ ನಿರ್ಮಿಸಿಕೊಂಡಿದೆ.

ಈ ಪ್ರದೇಶದಲ್ಲಿ ಭಾರತ–ಚೀನಾ ಸೇನೆಗಳು ಸದಾ ಮುಖಾಮುಖಿಯಾಗುತ್ತಿರುತ್ತವೆ. 2013ರಲ್ಲಿ 156 ದಿನ ಮತ್ತು 2017ರಲ್ಲಿ ಮೂರು ವಾರ ಎರಡೂ ಸೇನೆಗಳು ಮುಖಾಮುಖಿಯಾಗಿದ್ದವು.

ದೋಕಲಾ ಸಂಘರ್ಷ
2017ರ ಜೂನ್‌ನಲ್ಲಿ ಚೀನಾ ಸೈನಿಕರು ಭೂತಾನ್‌ ದೋಕಲಾ ಪ್ರದೇಶವನ್ನು ಅತಿಕ್ರಮಿಸಿ ರಸ್ತೆ ಮತ್ತು ಗಡಿ ಠಾಣೆಯನ್ನು ನಿರ್ಮಿಸಲು ಮುಂದಾದರು. ಬಾರತದ ಸೈನಿಕರು ಈ ಪ್ರದೇಶವನ್ನು ಪ್ರವೇಶಿಸಿ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಿದರು. ದೋಕಲಾ ಪ್ರದೇಶ ತನ್ನದು ಎಂಬುದು ಚೀನಾದ ಪ್ರತಿಪಾದನೆಯಾಗಿತ್ತು. ಭಾರತ ಮತ್ತು ಟಿಬೆಟ್‌ನ ಲಾಸಾ ನಡುವಣ ವಾಣಿಜ್ಯ ಮಾರ್ಗವು ಸಾಗುವ ನಾಥುಲಾ ಪಾಸ್‌, ದೋಕಲಾ ಪ್ರದೇಶಕ್ಕೆ ತೀರಾ ಹತ್ತಿರದಲ್ಲಿದೆ. ಹೀಗಾಗಿ ಭಾರತ–ಚೀನಾ–ಭೂತಾನ್‌ನ ಗಡಿಗಳು ಕೂಡುವ ಈ ಪ್ರದೇಶ ಭಾರತಕ್ಕೆ ಅತ್ಯಂತ ಮಹತ್ವದ್ದು.

ಎರಡೂ ದೇಶಗಳು ಸೇನೆಗಳು 73 ದಿನಗಳ ಕಾಲ ಮುಖಾಮುಖಿಯಾಗಿದ್ದವು. ಆನಂತರ ಮಾತುಕತೆ ಮೂಲಕ ಸಂಘರ್ಷಕ್ಕೆ ಅಂತ್ಯ ಹಾಡಲಾಯಿತು. ಈ ಸ್ಥಳವನ್ನೂ ಈಗ ವಿವಾದಿತ ಸ್ಥಳ ಎಂದು ವರ್ಗೀಕರಿಸಲಾಗಿದೆ.

ಗಡಿ ರಸ್ತೆ ಮತ್ತು ಕುಂಠಿತ ಕಾಮಗಾರಿ
ಈ ಎಲ್ಲಾ ಗಡಿ ಪ್ರದೇಶದಲ್ಲಿ ಸೇನೆಯ ಓಡಾಟಕ್ಕೆ ಅನುಕೂಲವಾಗುವಂತೆ ಸರ್ವಋತು ರಸ್ತೆ ನಿರ್ಮಿಸಲು ಕೇಂದ್ರ ಸರ್ಕಾರವು 1997ರಲ್ಲಿ ಚೀನಾ ಅಧ್ಯಯನ ರಸ್ತೆಗಳು (ಚೀನಾ ಸ್ಟಡಿ ಗ್ರೂಪ್‌ ರೋಡ್ಸ್‌–ಸಿಎಸ್‌ಜಿ ರೋಡ್ಸ್‌) ಯೋಜನೆ ನಿರ್ಮಿಸಿದೆ. ಇದಕ್ಕಾಗಿ ಪ್ರತಿ ವರ್ಷ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಲಾಗುತ್ತದೆ. ಹಲವು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಈವರೆಗೆ ಪೂರ್ಣಗೊಂಡಿಲ್ಲ.

ಸಿಎಸ್‌ಜಿ ರಸ್ತೆಗಳು, ಅರುಣಾಚಲ ಪ್ರದೇಶದ ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 2019–20ನೇ ಸಾಲಿನ ಬಜೆಟ್‌ನಲ್ಲಿ ಅಗತ್ಯಕ್ಕಿಂತ ಅತ್ಯಂತ ಕಡಿಮೆ ಮೊತ್ತದ ಅನುದಾನ ನೀಡಲಾಗಿದೆ. ಇದು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಎಂದು ರಕ್ಷಣಾ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಸಂಸತ್ತಿಗೆ ಸಲ್ಲಿಸಿರುವ ತನ್ನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.

ಕಾರಾಕೋರಂ ಪ್ರದೇಶ
ಕಾರಾಕೋರಂ ಪ್ರದೇಶವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗ. ಚೀನಾ ಮತ್ತು ಪಾಕಿಸ್ತಾನದ ಗಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು 1963ರಲ್ಲಿ ಎರಡೂ ದೇಶಗಳು ಒಪ್ಪಂದ ಮಾಡಿಕೊಂಡವು. ಈ ಒಪ್ಪಂದದ ಭಾಗವಾಗಿ ಕಾರಾಕೋರಂ ಪ್ರದೇಶವನ್ನು ಪಾಕಿಸ್ತಾನವು ಚೀನಾಕ್ಕೆ ಬಿಟ್ಟುಕೊಟ್ಟಿತು. ಈ ಒಪ್ಪಂದದ ನಂತರ ಪಾಕಿಸ್ತಾನ–ಚೀನಾ ಸಂಬಂಧ ಗಟ್ಟಿಗೊಂಡಿತು.

ನೇಪಾಳ ಗಡಿ ತಂಟೆ

ಜಮ್ಮು–ಕಾಶ್ಮೀರ ವಿಭಜನೆಯ ಬಳಿಕ ಭಾರತ ಬಿಡುಗಡೆ ಮಾಡಿರುವ ದೇಶದ ಹೊಸ ನಕ್ಷೆಯು ನೇಪಾಳದ ಅಸಮಾಧಾನಕ್ಕೆ ಕಾರಣವಾಗಿದೆ.

ಭಾರತದ ನಕ್ಷೆಯೊಳಗೆ ಸೇರಿಕೊಂಡಿರುವ ‘ಕಾಲಾಪಾನಿ’ ಮತ್ತು ‘ಲಿಪುಲೇಕ್‌’ ಪ್ರದೇಶಗಳು ತನಗೆ ಸೇರಿದ್ದು ಎಂಬುದು ನೇಪಾಳದ ವಾದ.

ಇತ್ತೀಚೆಗೆ ಚೀನಾ ದೇಶವು ನೇಪಾಳದಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದೆ. ನೇಪಾಳ ಸರ್ಕಾರವೂ ಚೀನಾದ ಕಡೆಗೆ ಸ್ವಲ್ಪ ವಾಲಿಕೊಂಡಿದೆ ಎನ್ನಲಾಗಿದೆ. ಈ ಕಾರಣದಿಂದಾಗಿ ನಕ್ಷೆಯ ವಿವಾದವು ಭಾರತ– ನೇಪಾಳ ನಡುವಿನ ಸಂಬಂಧಕ್ಕೆ ಧಕ್ಕೆ ತರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ನೇಪಾಳದ ವಾದವನ್ನು ಭಾರತವು ಪುರಸ್ಕರಿಸಿಲ್ಲ. ಬದಲಿಗೆ, ‘ಹೊಸ ನಕ್ಷೆಯು ಭಾರತದ ಸಾರ್ವಭೌಮ ಪ್ರದೇಶವನ್ನು ನಿಖರವಾಗಿ ಗುರುತಿಸಿದೆ’ ಎಂದು ಹೇಳಿದೆ. ಈ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಲು ಮುಂದಾಗಿರುವ ನೇಪಾಳವು ಆದಷ್ಟು ಬೇಗನೆ ಮಾತುಕತೆ ನಡೆಸಬೇಕು ಎಂದು ಭಾರತವನ್ನು ಕೋರಿದೆ.

‘ಗಡಿ ವಿವಾದದ ಕಾರಣಕ್ಕೆ ಭಾರತ–ನೇಪಾಳ ನಡುವಿನ ದೀರ್ಘಕಾಲದ ಬಾಂಧವ್ಯ ಹಾಳಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ರಾಜತಾಂತ್ರಿಕ ರೀತಿಯಲ್ಲಿ ಈ ವಿವಾದವನ್ನು ಬಗೆಹರಿಸುವ ಆಸಕ್ತಿಯನ್ನು ಭಾರತ ವ್ಯಕ್ತಪಡಿಸಿದೆ’ ಎಂದು ನೇಪಾಳದ ವಿದೇಶಾಂಗ ಸಚಿವರು ಈಚೆಗೆ ಹೇಳಿದ್ದಾರೆ.

ಚೀನಾ ಕೈವಾಡ?
ಭಾರತ–ನೇಪಾಳ ಗಡಿ ವಿವಾದಕ್ಕೆ ನೀರೆರೆಯುವ ಕೆಲಸವನ್ನು ಚೀನಾ ಮಾಡುತ್ತಿದೆ ಎಂಬ ಆರೋಪವಿದೆ.

ಗಡಿ ವಿವಾದ ಮುನ್ನೆಲೆಗೆ ಬರುತ್ತಿದ್ದಂತೆ ನೇಪಾಳದ ಸಿಎನ್‌ಪಿ– ಕ್ರಾಂತಿಕಾರಿ ಮಾವೊವಾದಿ ಪಕ್ಷವು ಭಾರತದ ವಿರುದ್ಧ ಪ್ರತಿಭಟನೆ ಆರಂಭಿಸಿದೆ. ಭಾರತ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ, ರಕ್ಷಣಾ ಸಚಿವಾಲಯಕ್ಕೆ ಮನವಿಪತ್ರ ನೀಡಲು ಬಂದಿದ್ದ ಪಕ್ಷದ ನಾಯಕ ಸಿ.ಪಿ. ಗಜುರೆಲ್‌ ಅವರನ್ನು ಇತ್ತೀಚೆಗೆ ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘಷರ್ಣೆಯೂ ನಡೆದಿತ್ತು.

‘ಮೆಕ್‌ಮೊಹನ್ ಲೈನ್‌’
ಭಾರತ ಮತ್ತು ಚೀನಾ ನಡುವಣ ಅಂತರರಾಷ್ಟ್ರೀಯ ಗಡಿರೇಖೆಯನ್ನು ‘ಮೆಕ್‌ಮೊಹನ್ ಲೈನ್‌’ ಎನ್ನಲಾಗುತ್ತದೆ. 1914ರಲ್ಲಿ ಬ್ರಿಟಿಷ್ ಸರ್ಕಾರ ಮತ್ತು ಟಿಬೆಟ್‌ ನಡುವಣ ಒ‍ಪ್ಪಂದದ ಮೂಲಕ ಈ ಗಡಿರೇಖೆಯನ್ನು ಗುರುತಿಸಲಾಗಿತ್ತು. ಆದರೆ ಈ ಗಡಿರೇಖೆಯನ್ನು ಚೀನಾ ಒಪ್ಪಿಕೊಂಡಿಲ್ಲ. ‘ಟಿಬೆಟ್‌ ಪ್ರದೇಶವು ಚೀನಾದ ಭಾಗ. ಹೀಗಾಗಿ ಗಡಿ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಟಿಬೆಟ್‌ಗೆ ಇಲ್ಲ. ಹೀಗಾಗಿ ಮೆಕ್‌ಮೊಹನ್ ಲೈನ್‌ ಅನ್ನು ಗಡಿ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂಬುದು ಚೀನಾದ ಪ್ರತಿಪಾದನೆ.

‘ಮೆಕ್‌ಮೊಹನ್ ಲೈನ್‌’ನಿಂದ ದಕ್ಷಿಣಕ್ಕಿರುವ ಭಾರತದ ಅರುಣಾಚಲ ಪ್ರದೇಶದ ಬಹುಪಾಲು ಭಾಗ ತನ್ನದು ಎಂಬುದು ಚೀನಾದ ವಾದ. ಈ ಪ್ರದೇಶವನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದಲೇ 1962ರಲ್ಲಿ ಚೀನಾ ಯುದ್ಧ ಆರಂಭಿಸಿತು. ಕದನ ವಿರಾಮ ಘೋಷಣೆಯಾದ ನಂತರ ಗಡಿಯನ್ನು ‘ಕದನ ವಿರಾಮ ಗಡಿ’ ಎಂದು ಘೋಷಿಸಲಾಯಿತು. 1993ರ ದ್ವಿಪಕ್ಷೀಯ ಒಪ್ಪಂದದಲ್ಲಿ ಇದನ್ನು ವಾಸ್ತವ ಗಡಿ ರೇಖೆ (ಲೈನ್ ಆಫ್ ಆಕ್ಯುಯಲ್ ಕಂಟ್ರೋಲ್–ಎಲ್‌ಎಸಿ) ಎಂದು ಘೋಷಿಸಲಾಯಿತು. 1996 ಮತ್ತು 2003ರಲ್ಲಿ ಇದಕ್ಕೆ ಸಂಬಂಧಿಸಿದಂತೆ ಪೂರಕ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.

ಒಪ್ಪಂದಗಳ ಪ್ರಕಾರ...

* ಈ ಗಡಿಯನ್ನು ವಿವಾದಿತ ಗಡಿ ಎಂದೇ ಎರಡೂ ದೇಶಗಳು ಪರಿಗಣಿಸಬೇಕು

* ಎರಡೂ ದೇಶಗಳು ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು

* ಗಡಿ ಅಂತಿಮವಾಗುವರೆಗೆ ಎರಡೂ ಕಡೆಯ ಸೇನೆಗಳು ವಾಸ್ತವ ಗಡಿರೇಖೆಯನ್ನು ದಾಟಬಾರದು. ಶಸ್ತ್ರಸಜ್ಜಿತ ಕಾರ್ಯಾಚರಣೆ ನಡೆಸಬಾರದು

* ಗಡಿ ಸಮಸ್ಯೆಯು ಎರಡೂ ದೇಶಗಳ ವಾಣಿಜ್ಯ ವಹಿವಾಟಿನ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು

* ಕಾಶ್ಮೀರ, ಲಡಾಕ್ ಮತ್ತು ಅರುಣಾಚಲ ಪ್ರದೇಶಗಳಲ್ಲಿನ ಗಡಿ ವಿವಾದವನ್ನು ಏಕಕಾಲದಲ್ಲಿ ಬಗೆಹರಿಸಿಕೊಂಡು, ಗಡಿಯನ್ನು ಅಂತಿಮಗೊಳಿಸಿಬೇಕು

* ಎರಡೂ ದೇಶಗಳು ಜಂಟಿಯಾಗಿ ಸರ್ವೆ ನಡೆಸಿ, ಗಡಿಯನ್ನು ಗುರುತಿಸಬೇಕು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು