ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಡಾಖ್‌ ಬಿಕ್ಕಟ್ಟು | ಚೀನಾ ಜತೆ ಮಾತುಕತೆಗೆ ಭಾರತ ಸಿದ್ಧತೆ

ಅಧಿಕಾರಿಗಳ ಸಭೆ ಶನಿವಾರಕ್ಕೆ ನಿಗದಿ
Last Updated 3 ಜೂನ್ 2020, 21:38 IST
ಅಕ್ಷರ ಗಾತ್ರ

ನವದೆಹಲಿ: ಲಡಾಖ್‌ನಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಸ್ಥಿತಿಯನ್ನು ತಿಳಿಗೊಳಿಸುವ ಸಲುವಾಗಿ ಭಾರತ ಮತ್ತು ಚೀನಾದ ಸೇನೆಗಳ ಉನ್ನತ ಮಟ್ಟದ ಅಧಿಕಾರಿಗಳ ಸಭೆಶನಿವಾರಕ್ಕೆ ನಿಗದಿಯಾಗಿದೆ.

ಸಭೆಗೆ ಮೂರು ದಿನಗಳು ಇರುವಂತೆಯೇ ಚೀನಾವನ್ನು ಕುರಿತ ಭಾರತದ ಕೆಲವು ಅತ್ಯಂತ ಅನುಭವಿ ಅಧಿಕಾರಿಗಳು ಲಡಾಖ್‌ಗೆ ತೆರಳಿದ್ದು ಈ ಸಭೆಯ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ.

ಲಡಾಖ್‌ನ ಚುಶೂಲ್‌– ಮೊಲ್ಡೊದಲ್ಲಿ ನಡೆಯುವ ಮಾತುಕತೆಯಲ್ಲಿ, ಲೇಹ್‌ನಲ್ಲಿರುವ 14 ಕೋರ್‌ನ ಕಮಾಂಡಿಂಗ್‌ ಆಫೀಸರ್‌ ಲೆ.ಜನರಲ್‌ ಹರಿಂದರ್‌ ಸಿಂಗ್‌ ಅವರು ಭಾರತೀಯ ಸೇನೆಯನ್ನು ಪ್ರತಿನಿಧಿಸಲಿದ್ದಾರೆ. ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಲು ಭಾರತೀಯ ಸೇನೆಯ ಉತ್ತರ ಕಮಾಂಡ್‌ನ ಲೆ. ಜನರಲ್‌ ವೈ.ಕೆ. ಜೋಶಿ ಅವರು ಬುಧವಾರ ಲೇಹ್‌ಗೆ ತೆರಳಿದ್ದಾರೆ.

ಕಾರ್ಗಿಲ್‌ ಯುದ್ಧದ ಹೀರೊ ಎನಿಸಿರುವ ಜೋಶಿ ಅವರಿಗೆ ಈ ಭೂಪ್ರದೇಶ ಚಿರಪರಿಚಿತ ಮಾತ್ರವಲ್ಲದೆ, ಚೀನಾದ ಸೇನೆಯ ಬಗ್ಗೆಯೂ ಅವರು ಸಾಕಷ್ಟು ತಿಳಿವಳಿಕೆ ಹೊಂದಿದ್ದಾರೆ. ಆದ್ದರಿಂದ ಅವರ ಉಪಸ್ಥಿತಿಗೆ ವಿಶೇಷ ಮಹತ್ವ ನೀಡಲಾಗಿದೆ.

ಶನಿವಾರ ನಡೆಯಲಿರುವ ಸಭೆಯಲ್ಲಿ ಚೀನಾದ ಸೇನೆಯು ಹೊಂದಿರುವ ಕೆಲವು ತಪ್ಪುಕಲ್ಪನೆಗಳನ್ನು ದೂರ ಮಾಡುವ ಮತ್ತು ಪ್ಯಾಂಗಾಂಗ್‌ ತ್ಸೊ ಮತ್ತು ಇತರ ಪ್ರದೇಶಗಳನ್ನು ಕುರಿತ ಗೊಂದಲಗಳನ್ನು ನಿವಾರಿಸುವ ಪ್ರಯತ್ನ ಮಾಡಲಾಗುವುದು ಎನ್ನಲಾಗಿದೆ. ವಾಸ್ತವ ನಿಯಂತ್ರಣ ರೇಖೆಯ ಬಗ್ಗೆ ಭಿನ್ನಾಭಿಪ್ರಾಯಗಳು ಇರುವುದರಿಂದ ಪ್ಯಾಂಗಾಂಗ್‌ ತ್ಸೊ ಸರೋವರ ಪ್ರದೇಶದಲ್ಲಿ ಹಿಂದೆಯೂ ಹಲವು ಬಾರಿ ಘರ್ಷಣೆಗಳು ನಡೆದಿದ್ದವು.

ಗಡಿ ಪ್ರದೇಶದಲ್ಲಿ ಭಾರತವು ಮೂಲಸೌಕರ್ಯಗಳನ್ನು ಹೆಚ್ಚಿಸುತ್ತಿರುವುದು ಚೀನಾದ ಅಸಮಾಧಾನಕ್ಕೆ ಕಾರಣವಾಗಿದೆ. ಚೀನಾ ಅಕ್ರಮವಾಗಿ ವಶಪಡಿಸಿಕೊಂಡಿರುವ, ವಿವಾದಿತ ಪ್ರದೇಶ ಅಕ್ಸಾಯ್‌ಚಿನ್‌ನಲ್ಲಿ ಸೇನಾ ಕಾರ್ಯಾಚರಣೆ ನಡೆಸುವ ಸಲುವಾಗಿ ಭಾರತ ಈ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ಭಾವನೆ ಚೀನಾದಲ್ಲಿ ಮೂಡಿದೆ.

ದರ್ಬುಕ್‌–ಶಯೊಕ್‌– ದೌಲತ್‌ ಬೇಗ್‌ ಓಲ್ಡಿ ನಡುವಿನ 255 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಕಾಮಗಾರಿಯು ಚೀನಾದ ಆತಂಕಕ್ಕೆ ಪ್ರಮುಖ ಕಾರಣವಾಗಿದೆ. ಈ ರಸ್ತೆಯು ಅಕ್ಸಾಯ್‌ಚಿನ್‌ ಪ್ರದೇಶಕ್ಕೆ ಭಾರತೀಯ ಸೇನೆಯನ್ನು ಸುಲಭವಾಗಿ ಕರೆತರಲು ಸಹಾಯಕವಾಗುತ್ತದೆ ಎಂಬುದೇ ಇದಕ್ಕೆ ಕಾರಣ. ಒಂದು ದಶಕದ ಹಿಂದೆ, ಯುಪಿಎ ಸರ್ಕಾರದ ಅವಧಿಯಲ್ಲೇ ಈ ರಸ್ತೆಯ ನಿರ್ಮಾಣ ಆರಂಭವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT