ಗುರುವಾರ , ಏಪ್ರಿಲ್ 15, 2021
22 °C
ಭಾರತ–ಅಮೆರಿಕ ಪರಮಾಣು ಸಹಕಾರ ಒಪ್ಪಂದದಲ್ಲಿ ಪ್ರಮುಖ ಪಾತ್ರವಹಿಸಿದ್ದ ನಿವೃತ್ತ ಅಧಿಕಾರಿ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೆಚ್ಚಿದ್ದ ಅಧಿಕಾರಿ ಜೈಶಂಕರ್‌ಗೆ ಮೋದಿ ಉಡುಗೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರಿಗೆ ವಿದೇಶಾಂಗ ಇಲಾಖೆಯ ಸಚಿವ ಸ್ಥಾನ ನೀಡುವ ಮೂಲಕ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಇದರ ಹಿಂದೆ, ಜೈಶಂಕರ್ ಅವರು ಹಿಂದಿನ ಸರ್ಕಾರಗಳಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಬಹುಮಾನಿಸುವ ಮತ್ತು ರಾಯಭಾರಿ, ವಿದೇಶಾಂಗ ಕಾರ್ಯದರ್ಶಿಯಾಗಿ ಹೊಂದಿರುವ ಅನುಭವವನ್ನು ಬಳಸಿಕೊಳ್ಳುವ ಇರಾದೆಯಿದೆಯೇ?

ಇದನ್ನೂ ಓದಿ: ಮೋದಿ ಸಂಪುಟ 2.0: ಅನುಭವಕ್ಕೆ ಮಣೆ, ಹೊಸಬರಿಗೆ ಅವಕಾಶ​

ಜೈಶಂಕರ್ ಅವರಿಗೆ ವಿದೇಶಾಂಗ ಕಾರ್ಯದರ್ಶಿಯಾಗಿ ಬಡ್ತಿ ನೀಡಲು ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಕೂಡ ಉದ್ದೇಶಿಸಿದ್ದರು. ಆದರೆ ಹಿರಿಯ ಅಧಿಕಾರಿ ಸುಜಾತಾ ಸಿಂಗ್ ವಿರೋಧದಿಂದಾಗಿ ಸಾಧ್ಯವಾಗಿರಲಿಲ್ಲ.

ಪರಮಾಣು ಸಹಕಾರ ಒಪ್ಪಂದದಲ್ಲಿ ಪ್ರಮುಖ ಪಾತ್ರ

ಜೈಶಂಕರ್ ಅವರ ತಂದೆ ಕೃಷ್ಣಸ್ವಾಮಿ ಸುಬ್ರಹ್ಮಣ್ಯನ್ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದವರು. ಅಲ್ಲದೆ, ದೇಶದ ಭದ್ರತೆ ಮತ್ತು ಪರಮಾಣು ನೀತಿ ರೂಪಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. 1977ನೇ ಬ್ಯಾಚ್‌ನ ಐಎಫ್‌ಎಸ್ (ಭಾರತೀಯ ವಿದೇಶಾಂಗ ಸೇವೆ) ಅಧಿಕಾರಿ ಜೈಶಂಕರ್, ಅದೇ ಇಲಾಖೆಯನ್ನು ನಿರ್ವಹಿಸುವ ಸಚಿವರ ಹುದ್ದೆಗೇರಿದ ಎರಡನೇ ವ್ಯಕ್ತಿ. 2004–2005ರಲ್ಲಿ ವಿದೇಶಾಂಗ ವ್ಯವಹಾರ ಸಚಿವರಾಗಿದ್ದ ಕೆ.ನಟವರ್ ಸಿಂಗ್, ಈ ಸಾಧನೆ ಮಾಡಿದ ಮೊದಲಿಗರು.

ಇದನ್ನೂ ಓದಿ: ಬಾಂಧವ್ಯ ವೃದ್ಧಿಸುವ ಸವಾಲು​

ದೆಹಲಿಯಲ್ಲಿರುವ ವಾಯುಪಡೆಯ ಕೇಂದ್ರೀಯ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿರುವ ಜೈಶಂಕರ್ ಅವರು ಸೈಂಟ್ ಸ್ಟೀಫನ್ಸ್‌ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಎಂ.ಫಿಲ್, ಅಂತರರಾಷ್ಟ್ರೀಯ ಸಂಬಂಧ ವಿಷಯದಲ್ಲಿ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಪಿ.ಎಚ್‌ಡಿಯನ್ನೂ ಗಳಿಸಿದ್ದಾರೆ. ಇವರ ಸಹೋದರ ಸಂಜಯ್ ಇತಿಹಾಸ ತಜ್ಞರಾಗಿದ್ದರೆ ಇನ್ನೊಬ್ಬ ಸಹೋರ ವಿಜಯ್ ಐಎಎಸ್‌ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ.

ಇದನ್ನೂ ಓದಿ: ಮೋದಿ ಸಂಪುಟದಲ್ಲಿ ಯಾರೆಲ್ಲಾ ಇದ್ದಾರೆ? ನೂತನ ಸಚಿವರ ಪಟ್ಟಿ ಇಲ್ಲಿದೆ...

2004–2007ರ ಅವಧಿಯಲ್ಲಿ ವಿದೇಶಾಂಗ ಇಲಾಖೆಯ ಜಂಟಿ ಕಾರ್ಯದರ್ಶಿ (ಅಮೆರಿಕ) ಆಗಿದ್ದ ಜೈಶಂಕರ್ ಭಾರತ–ಅಮೆರಿಕ ಪರಮಾಣು ಸಹಕಾರ ಒಪ್ಪಂದವನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪರಿಣಾಮವಾಗಿ 2008ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಅಮೆರಿಕದ ಜತೆ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿತ್ತು.

ಇದನ್ನೂ ಓದಿ: ಅಮೆರಿಕ –ಭಾರತ ಸಂಬಂಧ ಮತ್ತಷ್ಟು ವೃದ್ಧಿಸಲು ವಿಪುಲ ಅವಕಾಶ​

ಇದಕ್ಕೆ ಪ್ರತಿಯಾಗಿ ಜೈಶಂಕರ್ ಅವರಿಗೆ ವಿದೇಶಾಂಗ ಕಾರ್ಯದರ್ಶಿಯಾಗಿ ಬಡ್ತಿ ನೀಡಲು 2008ರಲ್ಲಿ ಮನಮೋಹನ್ ಸಿಂಗ್ ಮುಂದಾದರು. ಆದರೆ 1976ನೇ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿ ಸುಜಾತಾ ಸಿಂಗ್ ಅವರು ರಾಜೀನಾಮೆ ಬೆದರಿಕೆಯೊಡ್ಡಿದರು. ಪರಿಣಾಮವಾಗಿ ಮನಮೋಹನ್ ಸಿಂಗ್ ತಮ್ಮ ನಿರ್ಧಾರದಿಂದ ಹಿಂದೆ ಸರಿದರು.

ಮನಮೋಹನ್ ಬಯಸಿದ್ದನ್ನು ಮೋದಿ ಮಾಡಿದರು!

2015ರ ಜನವರಿ 28. ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ, ಅಮೆರಿಕದ ಆಗಿನ ಅಧ್ಯಕ್ಷ ಬರಾಕ್ ಒಬಾಮ ಹಿಂದಿನ ದಿನವಷ್ಟೇ ಅಮೆರಿಕಕ್ಕೆ ಹಿಂತಿರುಗಿದ್ದರು. ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಅವರನ್ನು ಬಳಿಗೆ ಕರೆದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹುದ್ದೆ ತ್ಯಜಿಸುವಂತೆ ಸೂಚಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಜೈಶಂಕರ್ ಅವರನ್ನು ಆ ಹುದ್ದೆಗೆ ನೇಮಕ ಮಾಡಲು ಬಯಸಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರು. ಆಗ ವಾಷಿಂಗ್ಟನ್‌ನಲ್ಲಿ ಭಾರತದ ರಾಯಭಾರಿಯಾಗಿದ್ದ ಜೈಶಂಕರ್ ಒಬಾಮ ಜತೆ ಭಾರತಕ್ಕೆ ಬಂದಿದ್ದರು. ಸುಷ್ಮಾ ಸೂಚಿಸಿದ ದಿನವೇ ರಾತ್ರಿ ಸುಜಾತಾ ರಾಜೀನಾಮೆ ನೀಡಿದರು. ಮರುದಿನ ಬೆಳಿಗ್ಗೆಯೇ ವಿದೇಶಾಂಗ ಕಾರ್ಯದರ್ಶಿಯಾಗಿ ಜೈಶಂಕರ್ ಜವಾಬ್ದಾರಿ ವಹಿಸಿಕೊಂಡರು.

ಸುಷ್ಮಾ ಜಾಗದಲ್ಲಿ ಜೈಶಂಕರ್!

ಸುಜಾತಾ ಸಿಂಗ್ ರಾಜೀನಾಮೆ ನೀಡಿ ನಾಲ್ಕು ವರ್ಷ ನಾಲ್ಕು ತಿಂಗಳು ಕಳೆದಿದೆ. ಇದೀಗ ಸುಷ್ಮಾ ಸ್ವರಾಜ್ ಜಾಗ (ವಿದೇಶಾಂಗ ಸಚಿವ) ಜೈಶಂಕರ್‌ಗೆ ಒಲಿದಿದೆ. ವಿದೇಶಾಂಗ ಇಲಾಖೆಯ ಕಾರ್ಯದರ್ಶಿಯಾಗಿದ್ದ ಅವರು ಸೇವೆಯಿಂದ ನಿವೃತ್ತರಾದ 16 ತಿಂಗಳ ಬಳಿಕ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ರಾಯಭಾರಿ ಮತ್ತು ವಿದೇಶಾಂಗ ಕಾರ್ಯದರ್ಶಿಯಾಗಿದ್ದ ವ್ಯಕ್ತಿಯೊಬ್ಬರು ಸಚಿವಾಲಯದ ಹೊಣೆ ಹೊತ್ತುಕೊಂಡ ಅಪರೂಪದ ಬೆಳವಣಿಗೆ ಇದಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು