ಗುರುವಾರ , ನವೆಂಬರ್ 14, 2019
22 °C

ಬೆಂಗಳೂರು ಉಗ್ರರ ನೆಲೆ: ದಕ್ಷಿಣ ಭಾರತದಲ್ಲಿ ಚಟುವಟಿಕೆ ವಿಸ್ತರಿಸಲು ಸಂಚು

Published:
Updated:

ನವದೆಹಲಿ: ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾದೇಶ (ಜೆಎಂಬಿ) ಉಗ್ರಗಾಮಿ ಸಂಘಟನೆಯು ತನ್ನ ಜಾಲವನ್ನು ವಿಸ್ತರಿಸಿಕೊಳ್ಳಲು ಬೆಂಗಳೂರು ನಗರವನ್ನು ಬಳಸಿಕೊಳ್ಳುತ್ತಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಎನ್‌ಐಎ ಅಧಿಕಾರಿಗಳು ನೀಡಿದ್ದಾರೆ. 

ಜೆಎಂಬಿ ಉಗ್ರರು ಬೆಂಗಳೂರಿನಲ್ಲಿ 20–22 ಅಡಗುದಾಣಗಳನ್ನು ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕರ್ನಾಟಕ–ತಮಿಳುನಾಡು ಗಡಿಯಲ್ಲಿರುವ ಕೃಷ್ಣಗಿರಿ ಗುಡ್ಡಗಳಲ್ಲಿ ಅವರು ರಾಕೆಟ್‌ ಉಡಾಯಿಸುವ ಪ್ರಯೋಗಗಳನ್ನೂ ಮಾಡಿದ್ದಾರೆ ಎಂದು ಎನ್‌ಐಎ ಹೇಳಿದೆ.

ಎನ್‌ಐಎ ಮಹಾ ನಿರ್ದೇಶಕ ವೈ.ಸಿ.ಮೋದಿ ಮತ್ತು ಮಹಾ ನಿರೀಕ್ಷಕ ಅಲೋಕ್‌ ಮಿತ್ತಲ್‌ ಅವರು ಭಯೋತ್ಪಾದನೆ ತಡೆ ಘಟಕಗಳ (ಎಟಿಎಸ್‌) ಮುಖ್ಯಸ್ಥರ ಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಅವರೂ ಸಭೆಯಲ್ಲಿ ಹಾಜರಿದ್ದರು. 

2014ರಿಂದ 2018ರ ಅವಧಿಯಲ್ಲಿ ಜೆಎಂಬಿ ಉಗ್ರರು ಬೆಂಗಳೂರಿನಲ್ಲಿ ಅಡಗುದಾಣಗಳನ್ನು ರಚಿಸಿಕೊಂಡರು. ದಕ್ಷಿಣ ಭಾರತದಲ್ಲಿ ಜೆಎಂಬಿ ಸಂಘಟನೆ ವಿಸ್ತರಣೆ ಮಾಡಲು ಯತ್ನಿಸಿದ್ದಾರೆ. ಕೃಷ್ಣಗಿರಿ ಬೆಟ್ಟಗಳಲ್ಲಿ ಕನಿಷ್ಠ ಮೂರು ಬಾರಿ ಅವರು ರಾಕೆಟ್‌ ಉಡಾವಕಗಳ ಪರೀಕ್ಷೆ ನಡೆಸಿದ್ದಾರೆ ಎಂದು ಮಿತ್ತಲ್‌ ಹೇಳಿದ್ದಾರೆ. ‌

ಇದನ್ನೂ ಓದಿ... ಉಗ್ರರ ಅಡಗುತಾಣ: ಏಜೆನ್ಸಿ ಜೊತೆಗೂಡಿ ಹದ್ದಿನಗಣ್ಣು

ಇಸ್ಲಾಮಿಕ್‌ ಸ್ಟೇಟ್‌ ಉಗ್ರಗಾಮಿ ಸಂಘಟನೆ ಜತೆಗೆ ನಂಟು ಹೊಂದಿರುವ ಶಂಕೆಯಲ್ಲಿ 127 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ಹೆಚ್ಚಿನವರು ವಿವಾದಾತ್ಮಕ ಧರ್ಮ ಬೋಧಕ ಜಾಕೀರ್‌ ನಾಯ್ಕ್‌ನ ಬೋಧನೆಗಳಿಂದ ಪ್ರಭಾವಿತರಾದವರು ಎಂದೂ ಮಿತ್ತಲ್‌ ತಿಳಿಸಿದ್ದಾರೆ. 

ಜೆಎಂಬಿ ಮುಖಂಡರು 2007ರಿಂದಲೇ ಭಾರತದೊಳಕ್ಕೆ ನುಸುಳುತ್ತಿದ್ದಾರೆ. ಇಲ್ಲಿ ಯುವಕರನ್ನು ಆಕರ್ಷಿಸಿ ಅವರನ್ನು ತಮ್ಮ ಸಂಘಟನೆಗೆ ಸೇರಿಸಿಕೊಂಡು ತರಬೇತಿ ನೀಡುತ್ತಿದ್ದಾರೆ. ಮೊದಲಿಗೆ ಇವರು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಕಾರ್ಯಾಚರಣೆ ನಡೆಸಿದ್ದರು. 2014ರಲ್ಲಿ ಬರ್ಧ್ವಾನ್‌ನಲ್ಲಿ ಶಂಕಿತ ಉಗ್ರರ ಬಂಧನದ ಬಳಿಕ ಇವರ ಷಡ್ಯಂತ್ರ ಬಯಲಿಗೆ ಬಂತು ಎಂದು ಅವರು ವಿವರಿಸಿದ್ದಾರೆ. 

ಬೌದ್ಧ ದೇಗುಲಗಳು ಗುರಿ?
ಬೋಧ್‌ಗಯಾದಲ್ಲಿ ಕಚ್ಚಾ ಬಾಂಬ್‌ ಸ್ಫೋಟದಲ್ಲಿ ಭಾಗಿಯಾಗಿದ್ದ ಶಂಕಿತರನ್ನು ಬಂಧಿಸಿದ ಬಳಿಕ ಇವರೆಲ್ಲರೂ ಜಾರ್ಖಂಡ್‌ಗೆ ಸ್ಥಳಾಂತರಗೊಂಡರು. ಅಲ್ಲಿಂದ ಬೆಂಗಳೂರಿಗೆ ನೆಲೆ ಬದಲಿಸಿದ್ದಾರೆ ಎಂದು ಮಿತ್ತಲ್‌ ಹೇಳಿದ್ದಾರೆ. 

ಬೆಂಗಳೂರು, ಹೈದರಾಬಾದ್‌, ಚೆನ್ನೈ ಮತ್ತು ತಮಿಳುನಾಡು ಹಾಗೂ ಕೇರಳದ ವಿವಿಧ ಸ್ಥಳಗಳಲ್ಲಿ ಸಭೆಗಳನ್ನು ನಡೆಸಿದ್ದಾರೆ. ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಸಮುದಾಯದ ಮುಸ್ಲಿಮರ ಮೇಲೆ ಆಗಿರುವ ದಾಳಿಗಳಿಗೆ ಪ್ರತೀಕಾರವಾಗಿ ಬೌದ್ಧ ದೇಗುಲಗಳನ್ನು ಗುರಿಯಾಗಿಸಿ ಸ್ಫೋಟ ನಡೆಸಲು ಬಯಸಿದ್ದರು ಎಂದು ಹೇಳಲಾಗಿದೆ. 

‘ಬೆಂಗಳೂರು ಸುರಕ್ಷಿತ: ಆತಂಕ ಇಲ್ಲ’
ಬೆಂಗಳೂರು:
‘ದೆಹಲಿಯಲ್ಲಿ ನಡೆದ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಚಾರ ಸಂಕಿರಣದಲ್ಲಿ ವರ್ಷದ ಹಿಂದಿನ ಮಾಹಿತಿಯನ್ನು ಮಂಡಿಸಲಾಗಿದೆ. ಸದ್ಯ ಬೆಂಗಳೂರು ಸುರಕ್ಷಿತವಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ’ ಎಂದು ಬೆಂಗಳೂರು ಪೊಲೀಸ್ ಕಮಿಷನರೇಟ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ರಾಮನಗರ ಹಾಗೂ ಬೆಂಗಳೂರಿನ ಕೆಲವೆಡೆ ಈ ಹಿಂದೆ ಕಾರ್ಯಾಚರಣೆ ನಡೆಸಿದ್ದ ಎನ್‌ಐಎ ಅಧಿಕಾರಿಗಳು, ಹಲವರನ್ನು ಬಂಧಿಸಿದ್ದಾರೆ. ಸದ್ಯ ಶಂಕಿತ ಉಗ್ರರು ಬೆಂಗಳೂರಿನಲ್ಲಿರುವ ಬಗ್ಗೆ ಯಾವುದೇ ಏಜೆನ್ಸಿಯಿಂದಲೂ ಮಾಹಿತಿ ಇಲ್ಲ’ ಎಂದು ವಿವರಿಸಿದರು.

‘ಸುರಕ್ಷತೆಗೆ ಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಿಳಿಸಿದರು.

ಎನ್‌ಐಎ ಮಾಹಿತಿ
* ಜಾರ್ಖಂಡ್‌, ಬಿಹಾರ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ವ್ಯಾಪಿಸಿರುವ ಜೆಎಂಬಿ ಚಟುವಟಿಕೆ

* ಬಾಂಗ್ಲಾದೇಶಿ ವಲಸಿಗರ ವೇಷದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಶಂಕಿತ ಉಗ್ರರು

* 125 ಶಂಕಿತರ ಪಟ್ಟಿ ಸಿದ್ಧಪಡಿಸಿದ ಸಂಬಂಧಿಸಿದ ರಾಜ್ಯಗಳಿಗೆ ನೀಡಲಾಗಿದೆ.

* ಜೆಎಂಬಿ ಮುಖಂಡರ ಜತೆಗೆ ಇವರೆಲ್ಲರೂ ನಿರಂತರ ಸಂಪರ್ಕದಲ್ಲಿದ್ದಾರೆ.

* ಇವರ ವಿರುದ್ಧ ಯಾವುದೇ ಪುರಾವೆಗಳು ಲಭ್ಯ ಇಲ್ಲ. ಹಾಗಿದ್ದರೂ ಅವರು ವಿಧ್ವಂಸಕ ಯೋಜನೆ ತಡೆಗೆ ಕ್ರಮ ಕೈಗೊಳ್ಳಲಾಗಿದೆ.

ಪ್ರತಿಕ್ರಿಯಿಸಿ (+)