ಬುಧವಾರ, ಆಗಸ್ಟ್ 21, 2019
22 °C

ಕೇಂದ್ರದ ಬೆಂಬಲಕ್ಕೆ ಕರಣ್‌ ಸಿಂಗ್

Published:
Updated:
Prajavani

ನವದೆಹಲಿ: ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರ ಸರ್ಕಾರ ನಡೆಯನ್ನು ಸಾರಾಸಗಟಾಗಿ ಖಂಡಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕರಣ್ ಸಿಂಗ್ ಹೇಳಿದ್ದಾರೆ. ಪಕ್ಷದ ನಿರ್ಧಾರದಿಂದ ಅಂತರ ಕಾಯ್ದುಕೊಂಡಿರುವ ಅವರು ಸರ್ಕಾರದ ನಡೆಯಲ್ಲಿ ಕೆಲವು ಸಕಾರಾತ್ಮಕ ಅಂಶಗಳು ಇವೆ ಎಂದಿದ್ದಾರೆ.

ಭವಿಷ್ಯದಲ್ಲಿ ಜಮ್ಮು ಕಾಶ್ಮೀರದ ಗಡಿ ಗುರುತಿಸಲು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ವಿಭಾಗಿಸಿದ ನಿರ್ಧಾರ, ಲಡಾಕ್‌ಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಿಕೆ ಮತ್ತು 35ಎ ವಿಧಿ ರದ್ದುಪಡಿಸು ಕ್ರಮಗಳು ಸರಿಯಾಗಿವೆ ಎಂದು ಅವರು ವಿವರಿಸಿದ್ದಾರೆ.  

ಕರಣ್ ಸಿಂಗ್ ಮಾತಿಗೆ ಅವರ ಪುತ್ರ, ಕಾಂಗ್ರೆಸ್ ಮುಖಂಡ ವಿಕ್ರಮಾದಿತ್ಯ ಸಿಂಗ್ ಅವರೂ ದನಿಗೂಡಿಸಿದ್ದಾರೆ. 

ಆದರೆ 370ನೇ ವಿಧಿ ಅಸಿಂಧುಗೊಳಿಸಿದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಾಶ್ಮೀರದಲ್ಲಿ ಬಂಧನದಲ್ಲಿರುವ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಿ, ಅವರೊಂದಿಗೆ ವಿಸ್ತೃತ ಮಾತುಕತೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. 

ಬಿಜೆಪಿಗೆ ಪ್ರಾದೇಶಿಕ ಪಕ್ಷಗಳ ಬೆಂಬಲ: ಸಿಪಿಎಂ ಅಚ್ಚರಿ

ವಿಕೇಂದ್ರೀಕರಣ ವಿರೋಧಿಸುವ ಬಿಜೆಪಿ ನಿಲುವನ್ನು ಬೆಂಬಲಿಸಲು ಸಾಲುಗಟ್ಟಿ ನಿಂತಿರುವ ಪ್ರಾದೇಶಿಕ ಪಕ್ಷಗಳಾದ ಬಿಜೆಡಿ, ಟಿಆರ್‌ಎಸ್, ವೈಎಸ್‌ಆರ್‌ಸಿ ಪಕ್ಷಗಳ ನಡೆಗೆ ಸಿಪಿಎಂ ಅಚ್ಚರಿ ವ್ಯಕ್ತಪಡಿಸಿದೆ. 

‘ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ ಮಸೂದೆ’ಯು ಎಲ್ಲ ರಾಜ್ಯಗಳಿಗೆ ಗಂಭೀರ ಎಚ್ಚರಿಕೆ ಗಂಟೆಯಾಗಿದ್ದು, ರಾಜ್ಯಗಳ ಹಕ್ಕುಗಳು ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು ಎಂದು ತನ್ನ ಮುಖವಾಣಿ ‘ಪೀಪಲ್ಸ್ ಡೆಮಾಕ್ರಸಿ’ಯ ಸಂಪಾದಕೀಯಲ್ಲಿ ಎಚ್ಚರಿಸಿದೆ. 

ಲೋಕಸಭೆಯಲ್ಲಿ ಬೃಹತ್ ಬಹುಮತ ಹಾಗೂ ರಾಜ್ಯಸಭೆಯಲ್ಲಿ ಜಾಣತನದಿಂದ ಒಪ್ಪಿಗೆ ಪಡೆಯುವಾಗ ಸಂಸತ್ತಿನ ನಿಗದಿತ ಪ್ರಕ್ರಿಯೆಗಳನ್ನು ಬಿಜೆಪಿ ಪಾಲಿಸಿಲ್ಲ ಎಂದು ಆರೋಪಿಸಲಾಗಿದೆ. 

Post Comments (+)