ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಬೆನ್ನಿಗೆ ಚೂರಿ | ವಿಶ್ವ ಮಟ್ಟದಲ್ಲಿ ಹರಾಜಾಯ್ತು ಪಾಕ್ ಮಾನ

ಭಾರತದ ಬೆನ್ನಿಗೆ ಚೂರಿ ಇರಿದಿದ್ದಕ್ಕೆ ವ್ಯಾಪಕ ಟೀಕೆ
Last Updated 25 ಜುಲೈ 2019, 12:22 IST
ಅಕ್ಷರ ಗಾತ್ರ

ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತ್ಯೇಕತಾವಾದಿ ಚಟುವಟಿಕೆಗೆ ಪಾಕಿಸ್ತಾನ ನೀಡುವ ಕುಮ್ಮಕ್ಕು, 1998ರಲ್ಲಿ ಉಭಯ ರಾಷ್ಟ್ರಗಳು ನಡೆಸಿದ ಅಣ್ವಸ್ತ್ರ ಪರೀಕ್ಷೆಗಳು ಎರಡೂ ದೇಶಗಳ ನಡುವಣ ಸಂಘರ್ಷವನ್ನು ಹೆಚ್ಚಿಸಿದ್ದವು. ಇದನ್ನು ತಿಳಿಗೊಳಿಸುವ ಮತ್ತು ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲು ಆಗ ಭಾರತ ಮುಂದಾಯಿತು. ಇದರ ಪ್ರತಿಫಲವೇ 1999ರ ಫೆಬ್ರುವರಿ 20ರಂದು ಮಾಡಿಕೊಂಡ ಲಾಹೋರ್ ಒಪ್ಪಂದ.

ಈ ಒಪ್ಪಂದಕ್ಕಾಗಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಲಾಹೋರ್‌ಗೆ ಬಸ್‌ನಲ್ಲಿ ತೆರಳಿದರು. ದೇಶದೊಳಗಿನ ವಿರೋಧ ಮತ್ತು ಒತ್ತಡವನ್ನೂ ಲೆಕ್ಕಿಸದ ಅವರು ಐತಿಹಾಸಿಕ ಒಪ್ಪಂದಕ್ಕಾಗಿ ದೃಢ ನಿರ್ಧಾರ ಕೈಗೊಂಡಿದ್ದರು. ಅವರು ಪಾಕಿಸ್ತಾನದಲ್ಲಿ ಸ್ನೇಹಹಸ್ತ ಚಾಚಿ ಲಾಹೋರ್‌ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದರೆ ಪಾಕಿಸ್ತಾನ ಸೇನೆ ಮಾತ್ರ ಇತ್ತ ಕಾರ್ಗಿಲ್ ಪ್ರದೇಶ ಅತಿಕ್ರಮಿಸಿಕೊಳ್ಳಲು ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿತ್ತು. ಪಾಕಿಸ್ತಾನದ ಜತೆ ಸ್ನೇಹ ಸಾಧಿಸಿದ ಖುಷಿಯಲ್ಲಿ ವಾಜಪೇಯಿ ಭಾರತಕ್ಕೆ ವಾಪಸಾದರು. ಇದಾಗಿ ಮೂರು ತಿಂಗಳೂ ಪೂರ್ಣಗೊಂಡಿರಲಿಲ್ಲ. ಪಾಕಿಸ್ತಾನಿ ಸೈನಿಕರು ಕಾರ್ಗಿಲ್ ಪ್ರದೇಶವನ್ನು ಅತಿಕ್ರಮಿಸಿರುವ ವಿಚಾರ 1999ರ ಮೇ 3ರಂದು ಬೆಳಕಿಗೆ ಬಂತು. ಕೆಲವು ಕುರಿಗಾಹಿಗಳು ನೀಡಿದ ಮಾಹಿತಿಯಿಂದ ಭಾರತೀಯ ಸೇನೆಗೆ ಅತಿಕ್ರಮಣದ ವಿಷಯ ತಿಳಿದುಬಂದಿತ್ತು. ನಂತರ ತನ್ನ ಭೂಪ್ರದೇಶವನ್ನು ಮರುವಶಪಡಿಸಿಕೊಳ್ಳಲು ಭಾರತ ಪ್ರತಿತಂತ್ರ ಹೂಡಿತು. ‘ಆಪರೇಷನ್ ವಿಜಯ್’ ಸೇನಾ ಕಾರ್ಯಾಚರಣೆ ನಡೆದು ಭಾರತ ವಿಜಯ ಸಾಧಿಸಿದ್ದು ಈಗ ಇತಿಹಾಸ.

ಪರಿಣಾಮವಾಗಿ ಪಾಕಿಸ್ತಾನ ಕಳೆದುಕೊಂಡಿದ್ದೇನು? ಭಾರತದ ಮತ್ತು ಅಂತರರಾಷ್ಟ್ರೀಯ ಸಮುದಾಯದ ವಿಶ್ವಾಸ. ಹೌದು, ಅಂದು ಕಳೆದುಕೊಂಡ ನಂಬಿಕೆಯನ್ನು ಮತ್ತೆಂದೂ ಗಟ್ಟಿಗೊಳಿಸುವುದು ಪಾಕಿಸ್ತಾನಕ್ಕೆ ಸಾಧ್ಯವಾಗಲೇ ಇಲ್ಲ. ವಿಶ್ವ ಮಟ್ಟದಲ್ಲಿಯೂ ಪಾಕಿಸ್ತಾನ ತೀವ್ರ ಮುಜುಗರ ಅನುಭವಿಸಬೇಕಾಯಿತು. ಮೊದಮೊದಲು, ತನ್ನ ಸೇನೆ ಯುದ್ಧದಲ್ಲಿ ಭಾಗಿಯಾಗಿರಲಿಲ್ಲ ಎಂದು ಹೇಳುವ ಮೂಲಕ ನುಣುಚಿಕೊಳ್ಳಲು ಪಾಕಿಸ್ತಾನ ಯತ್ನಿಸಿತ್ತು. ಕಾರ್ಗಿಲ್ ಅತಿಕ್ರಮಣ ಜಿಹಾದಿಗಳ ಕೃತ್ಯ ಎಂದು ಬಿಂಬಿಸಲು ಪ್ರಯತ್ನಿಸಿತ್ತು. ಆದರೆ ಕಾರ್ಗಿಲ್‌ನಂತಹ ಹಿಮಾಚ್ಛಾದಿತ, ದುರ್ಗಮ ಗಿರಿ ಶಿಖರಗಳಲ್ಲಿ ಸುಸಜ್ಜಿತ ಸೇನಾ ಸಲಕರಣೆಗಳಿಲ್ಲದೆ ಮತ್ತು ಸೇನೆಯ ಬೆಂಬಲವಿಲ್ಲದೆ ಜಿಹಾದಿಗಳು ಹೋರಾಟ ನಡೆಸುವುದು ಅಸಾಧ್ಯ ಎಂಬುದು ಇಡೀ ವಿಶ್ವಕ್ಕೇ ಗೊತ್ತಿತ್ತು.

ಇದನ್ನೂ ಓದಿ:ಸೈನಿಕರ ‘ಗೃಹ’ಬಲ

ಕಾರ್ಗಿಲ್ ಬಿಕ್ಕಟ್ಟನ್ನು ಕಾಶ್ಮೀರ ವಿವಾದದ ಜತೆ ತಳಕು ಹಾಕಿ ಗಮನ ಸೆಳೆಯಲೂ ಪಾಕಿಸ್ತಾನ ಪ್ರಯತ್ನಿಸಿತ್ತು. ಆದರೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಕೇವಲ ಕೆಲವು ದೇಶಗಳ ಬೆಂಬಲ ಮಾತ್ರ ಅದಕ್ಕೆ ದೊರೆಯಿತು. ಉಳಿದೆಲ್ಲ ರಾಷ್ಟ್ರಗಳು ಭಾರತದ ಪರ ನಿಂತವು.

ಪಾಕಿಸ್ತಾನಕ್ಕೆ ಅಮೆರಿಕ ಛೀಮಾರಿ: ಯುದ್ಧವು ಪ್ರಮುಖ ಘಟ್ಟ ತಲುಪಿತ್ತು. ಭಾರತೀಯ ಸೇನೆಯ ಪ್ರತಿ ದಾಳಿಯ ಏಟನ್ನು ತಡೆಯಲಾರದೆ ಸೇನೆ ಸಂಕಷ್ಟಕ್ಕೀಡಾದಾಗ ಅಮೆರಿಕದ ಬೆಂಬಲ ಕೋರಲು ಪಾಕಿಸ್ತಾನ ಮುಂದಾಯಿತು. ಆದರೆ, ಅಮೆರಿಕದ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರಿಂದ ಛೀಮಾರಿ ಹಾಕಿಸಿಕೊಂಡಿತು. ಭಾರತದ ನೆಲದಿಂದ ತಕ್ಷಣವೇ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ತಾಕೀತು ಮಾಡಿದ ಅಮೆರಿಕ, ಉಗ್ರಗಾಮಿಗಳ ನಿಯಂತ್ರಣಕ್ಕೆ ನೆರವು ನೀಡುವ ಭರವಸೆ ನೀಡಿತು. ಅಲ್ಲದೆ, ಸ್ನೇಹ ಹಸ್ತ ಚಾಚಿದ್ದ ಭಾರತದ ಮೇಲೆ ಯುದ್ಧಕ್ಕೆ ಮುಂದಾಗಿದ್ದಕ್ಕೆ ಪಾಕಿಸ್ತಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

ಸಂಯಮ ಮೆರೆದ ಭಾರತಕ್ಕೆ ಮೆಚ್ಚುಗೆ: ಯುದ್ಧದ ಮೂಲಕ ತನ್ನ ಭೂಭಾಗ ಮರುವಶಪಡಿಸಿಕೊಂಡ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟದೆ ಸಂಯಮ ಮೆರೆಯಿತು. ಇದಕ್ಕೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಯಿತು. ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿದ್ದನ್ನು ಖಂಡಿಸಿದ ‘ಜಿ8’ ರಾಷ್ಟ್ರಗಳು ಭಾರತಕ್ಕೆ ಪೂರ್ಣ ಬೆಂಬಲ ಘೋಷಿಸಿದ್ದವು. ಸೇನೆ ವಾಪಸ್ ಕರೆಸಿಕೊಂಡು ಗಡಿ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವಂತೆ ಚೀನಾವೂ ಪಾಕಿಸ್ತಾನಕ್ಕೆ ಕಿವಿ ಮಾತು ಹೇಳಿತು. ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘಟನೆ (ಆಸಿಯಾನ್) ಸಹ ಭಾರತಕ್ಕೆ ಬೆಂಬಲ ಸೂಚಿಸಿತು.

ಫಲಕೊಟ್ಟ ಕಾರ್ಯತಂತ್ರ: ಕಾರ್ಗಿಲ್ ಸಂಘರ್ಷಕ್ಕೆ ಸಂಬಂಧಿಸಿ ಪಾಕಿಸ್ತಾನದ ತಪ್ಪುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ತೋರಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಭಾರತ ಕೈಗೊಂಡಿತು. ಉಗ್ರಗಾಮಿಗಳಿಗೆ ಪಾಕಿಸ್ತಾನ ನೆರವು ನೀಡುತ್ತಿರುವ ಕುರಿತು ‘ದಿ ಟೈಮ್ಸ್‌’, ‘ದಿ ವಾಷಿಂಗ್ಟನ್ ಪೋಸ್ಟ್’ ಸೇರಿದಂತೆ ವಿದೇಶಗಳ ಅನೇಕ ಮಾಧ್ಯಮಗಳಿಗೆ ವಿವರವಾದ ಜಾಹೀರಾತುಗಳನ್ನು ನೀಡಿತು. ಈ ಕಾರ್ಯತಂತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪರ ಒಲವು ರೂಪಿಸಲು ನೆರವಾಯಿತು.

ಕೈಹಿಡಿದ ಮಾಧ್ಯಮಗಳು: ವಿದ್ಯುನ್ಮಾನ ಮಾಧ್ಯಮಗಳು ಕಾರ್ಗಿಲ್ ಯುದ್ಧದ ದೃಶ್ಯಗಳನ್ನು ನೇರ ಪ್ರಸಾರ ಮಾಡಿದರೆ ಜಾಲತಾಣಗಳಲ್ಲಿ ಯುದ್ಧದ ಕುರಿತ ವಿಶ್ಲೇಷಣೆಗಳು ಪ್ರಕಟಗೊಂಡವು. ಪತ್ರಿಕೆಗಳಲ್ಲಿ ವಿಶ್ಲೇಷಣಾತ್ಮಕ ಲೇಖನಗಳೂ ಪ್ರಕಟವಾದವು. ಇದು ವಿದೇಶಿ ಮಾಧ್ಯಮಗಳ ಮೇಲೂ ಪ್ರಭಾವ ಬೀರಿತು. ಇವೆಲ್ಲದರ ಪರಿಣಾಮವಾಗಿ ಜನರಲ್ಲಿ ಜಾಗೃತಿಯುಂಟಾಗಿದ್ದಲ್ಲದೆ ದೇಶಭಕ್ತಿಯ ಭಾವವೂ ಉದ್ದೀಪನಗೊಂಡಿತು. ಪಾಕಿಸ್ತಾನದ ಸುದ್ದಿ ವಾಹಿನಿಗಳ ಪ್ರಸಾರ ಮತ್ತು ಜಾಲತಾಣಗಳ ಸುದ್ದಿ ಪ್ರಕಟಣೆಗೆ ಭಾರತದಲ್ಲಿ ನಿಷೇಧ ಹೇರಲಾಯಿತು. ಭಾರತದಲ್ಲಿ ಮಾಧ್ಯಮದ ಪ್ರಭಾವ ಹೆಚ್ಚಿರುವುದು ಹಾಗೂ ಸರ್ಕಾರವು ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದು ಭಾರತಕ್ಕೆ ನೆರವಾಯಿತು ಎಂಬುದು ತಜ್ಞರ ಅಭಿಪ್ರಾಯ. ಆದರೆ, ಪಾಕಿಸ್ತಾನ ಅಲ್ಲಿನ ಮಾಧ್ಯಮಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ ಎಂದು ಯುದ್ಧಾನಂತರ ಅಲ್ಲಿನ ಪತ್ರಕರ್ತರೇ ಆರೋಪಿಸಿದ್ದಾರೆ.

ದೇಶದ ಮತ್ತು ವಿದೇಶಿ ಮಾಧ್ಯಮಗಳು ಭಾರತದ ಪರ ಹೆಚ್ಚು ಸಹಾನುಭೂತಿಯುಳ್ಳ ಲೇಖನ, ವಿಶ್ಲೇಷಣೆಗಳನ್ನು ಪ್ರಕಟಿಸಿದ್ದು ರಾಜತಾಂತ್ರಿಕವಾಗಿಯೂ ನೆರವಾಯಿತು. ‘ಸಂಖ್ಯೆಯಲ್ಲಿ ಹೆಚ್ಚಿರುವ ಮತ್ತು ವಿಶ್ವಾಸಾರ್ಹವಾದ ಭಾರತದ ಮಾಧ್ಯಮಗಳು ಕಾರ್ಗಿಲ್ ವಿಚಾರದಲ್ಲಿ ಸೇನೆಯ ನೈತಿಕ ಸ್ಥೈರ್ಯ ವೃದ್ಧಿಸಲು ನೆರವಾದವು. ಜತೆಗೆ ಭಾರತಕ್ಕೆ ರಾಜತಾಂತ್ರಿಕ ಮನ್ನಣೆ ಪಡೆಯಲು ಸಹಾಯಕವಾದವು’ ಎಂದು ಅನೇಕ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೆಚ್ಚಿದ ರಕ್ಷಣಾ ವೆಚ್ಚ

ಕಾರ್ಗಿಲ್ ಯುದ್ಧದ ಬಳಿಕ ದೇಶದ ರಕ್ಷಣಾ ಬಜೆಟ್‌ನಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಯಿತು. ಇದಕ್ಕೆ, ಹೆಚ್ಚಿದ ರಕ್ಷಣಾ ವೆಚ್ಚ ಹಾಗೂ ಸೇನಾ ಸಲಕರಣೆಗಳಿಗೆ ಹೆಚ್ಚಿದ ಬೇಡಿಕೆ ಕಾರಣ. ಯುದ್ಧ ನಡೆದ ವರ್ಷ ದೇಶದ ರಕ್ಷಣಾ ವೆಚ್ಚ ಮತ್ತು ಯುದ್ಧಕ್ಕೆ ತಗಲಿದ ಖರ್ಚಿನ ಮಾಹಿತಿ ಇಲ್ಲಿದೆ:

* ₹47,071 ಕೋಟಿ: 1999–2000ನೇ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ವೆಚ್ಚ

* ₹54,461 ಕೋಟಿ: 2000–2001ನೇ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ವೆಚ್ಚ

* ₹20 ಕೋಟಿ: ‘ಆಪರೇಷನ್ ವಿಜಯ್’ ಕಾರ್ಯಾಚರಣೆಗೆ ದಿನವೊಂದಕ್ಕೆ ಮಾಡಲಾಗಿದ್ದ ಅಂದಾಜು ವೆಚ್ಚ

* ₹1,800 ಕೋಟಿ: ‘ಆಪರೇಷನ್ ವಿಜಯ್’ ಕಾರ್ಯಾಚರಣೆಯ ಒಟ್ಟು ಅಂದಾಜು ವೆಚ್ಚ

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT