ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

106 ದಿನಗಳ ಬಳಿಕ ಕೊನೆಗೂ ಬಿಡುಗಡೆ ಸಿಕ್ಕಿದೆ: ಕಾರ್ತಿ ಚಿದಂಬರಂ

Last Updated 4 ಡಿಸೆಂಬರ್ 2019, 7:00 IST
ಅಕ್ಷರ ಗಾತ್ರ

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಹಗರಣದಲ್ಲಿ ಜೈಲು ಪಾಲಾಗಿದ್ದ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರಿಗೆ ಜಾಮೀನು ಲಭ್ಯವಾಗಿದ್ದು, ತಂದೆ ಕುರಿತು ಪುತ್ರ ಕಾರ್ತಿ ಚಿದಂಬರಂ ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

106 ದಿನಗಳ ನಂತರ ಕೊನೆಗೂ ಜಾಮೀನು ಸಿಕ್ಕಿದೆ ಎಂದು ಕೊನೆಯಲ್ಲಿ ಖುಷಿಯ ಎಮೋಜಿ ಹಾಕಿ ಟ್ವೀಟ್ ಮಾಡಿದ್ದಾರೆ.

ಇದಲ್ಲದೆ ಕಾಂಗ್ರೆಸ್ ಕೂಡ ಟ್ವೀಟ್ ಮಾಡಿ, ಕೊನೆಗೂ ಸತ್ಯ ಮೇಲುಗೈ ಸಾಧಿಸಿದೆ ಎಂದು ಹೇಳಿದೆ.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಆರ್.ಬಾನುಮತಿ ನೇತೃತ್ವದ ಮೂವರು ಸದಸ್ಯರ ಪೀಠವು ಚಿದಂಬರಂಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.

ಅದರಂತೆ ₹ 2 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿಯೊಂದಿಗೆ ಜಾಮೀನು ಮಂಜೂರು ಮಾಡಲಾಗಿದೆ. ಅಲ್ಲದೆ ನ್ಯಾಯಾಲಯದ ಅನುಮತಿಯಿಲ್ಲದೆ ವಿದೇಶಕ್ಕೆ ಪ್ರಯಾಣಿಸುವಂತಿಲ್ಲ. ಅಗತ್ಯ ಬಿದ್ದಾಗ ವಿಚಾರಣೆಗೆ ಹಾಜರಾಗಬೇಕು. ಐಎನ್ಎಕ್ಸ್ ಪ್ರಕರಣದ ಕುರಿತು ಯಾವುದೇ ಸಾರ್ವಜನಿಕ ಹೇಳಿಕೆ ನೀಡುವುದಾಗಲೀ, ಸಂದರ್ಶನ ಅಥವಾ ಪ್ರಕರಣದ ಯಾವುದೇ ಸಾಕ್ಷಿದಾರರನ್ನು ಭೇಟಿ ಮಾಡುವಂತಿಲ್ಲ ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.

ನವೆಂಬರ್ 15ರಂದು ಜಾಮೀನು ನಿರಾಕರಿಸಿ ದೆಹಲಿ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ನವೆಂಬರ್ 28ರಂದು ಚಿದಂಬರಂ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.

ವಿಚಾರಣೆ ವೇಳೆ ಇ.ಡಿ. ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಚಿದಂಬರಂ ಅವರನ್ನು ಬಂಧಿಸಿದಾನಿನಿಂದಲೂ ಅವರು ನಿರ್ಣಾಯಕ ಸಾಕ್ಷಿಗಳ ಮೇಲೆ 'ಗಣನೀಯ ಪ್ರಭಾವ'ವನ್ನು ಮುಂದುವರಿಸಿದ್ದಾರೆ ಎಂದು ವಾದಿಸಿದರು.

ಚಿದಂಬರಂ ಪರ ವಾದ ಮಂಡಿಸಿದ್ದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಸಿಂಘ್ವಿ, ನಮ್ಮ ಕಕ್ಷಿದಾರರ ಮೇಲೆ ಕೇಳಿಬಂದಿರುವ ಆರೋಪಗಳಲ್ಲಿ ಪರೋಕ್ಷ ಅಥವಾ ಪ್ರತ್ಯಕ್ಷವಾಗಿ ಸಂಬಂಧ ಹೊಂದಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಸಾಕ್ಷಿದಾರರ ಮೇಲೆ ಪ್ರಭಾವ ಅಥವಾ ಸಾಕ್ಷ್ಯವನ್ನು ಹಾಳುಮಾಡಿರುವ ಯಾವುದೇ ಸಾಕ್ಷಿಗಳು ಇಲ್ಲ ಎಂದು ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT