ಶುಕ್ರವಾರ, ಮಾರ್ಚ್ 5, 2021
30 °C

ಮೀನಾಕುಮಾರಿ ಎಂದರೆ ಯಾರು?: ಮಾಜಿ ಪ್ರಧಾನಿ ಶಾಸ್ತ್ರಿ ಪ್ರಶ್ನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅದು ಮುಂಬೈನ ಸ್ಟುಡಿಯೊಯೊಂದರಲ್ಲಿ ನಡೆದ ಕಾರ್ಯಕ್ರಮ. ‘ಪಾಕಿಝಾ’ ಚಲನಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಈ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಆಗ ಗೃಹ ಸಚಿವರಾಗಿದ್ದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರನ್ನು ಆಹ್ವಾನಿಸಲಾಗಿತ್ತು.

ಚಿತ್ರದ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದ ಖ್ಯಾತ ತಾರೆ ಮೀನಾಕುಮಾರಿ ಅವರು ಶಾಸ್ತ್ರಿ ಅವರಿಗೆ ಮಾಲಾರ್ಪಣೆ ಮಾಡಿದರು. ನಟಿಯನ್ನು ಗುರುತಿಸದ ಗೃಹ ಸಚಿವ ಶಾಸ್ತ್ರಿ ಅವರು ತಮ್ಮ ಪಕ್ಕದಲ್ಲಿ ಕುಳಿತಿದ್ದ ಪತ್ರಕರ್ತ ಕುಲದೀಪ್‌ ನಯ್ಯರ್ ಅವರ ಕಿವಿಯಲ್ಲಿ ಪಿಸುಗುಟ್ಟಿ, ‘ಮಾಲಾರ್ಪಣೆ ಮಾಡಿದ ಮಹಿಳೆ ಯಾರು’ ಎಂದು ಪ್ರಶ್ನಿಸಿದರಂತೆ.

‘ಅವರ ಮುಗ್ಧತೆಗೆ ನಾನು ಅಚ್ಚರಿಗೊಂಡೆ. ಅದೇ ಅಚ್ಚರಿಯೊಂದಿಗೆ ನಾನು, ಆ ಮಹಿಳೆ ಖ್ಯಾತ ನಟಿ ಮೀನಾ ಕುಮಾರಿ ಎಂದು ಉತ್ತರಿಸಿದೆ. ನಂತರ ಮಾತನಾಡಿದ ಶಾಸ್ತ್ರಿ ಅವರು ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದರಲ್ಲದೇ, ನಟಿ ಕುರಿತು ತಮಗೆ ಮಾಹಿತಿ ಇಲ್ಲದಿರುವುದನ್ನು ಹೇಳಿ, ಕ್ಷಮೆ ಕೋರಿದರು’.

–ಈ ಪ್ರಸಂಗವನ್ನು ಖ್ಯಾತ ಪತ್ರಕರ್ತ ಕುಲದೀಪ್‌ ನಯ್ಯರ್ ಅವರು ತಾವು ಬರೆದಿರುವ ‘ಆನ್‌ ಲೀಡರ್ಸ್‌ ಆ್ಯಂಡ್‌ ಐಕಾನ್ಸ್‌: ಫ್ರಾಮ್‌ ಜಿನ್ನಾ ಟು ಮೋದಿ’ ಎಂಬ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

‘ತಮ್ಮ ಸರದಿ ಬಂದಾಗ ಶಾಸ್ತ್ರಿ ಅವರು, ಮೀನಾ ಕುಮಾರಿಜಿ, ಮುಝೆ ಮಾಫ್‌ ಕರ್ನಾ. ಮೈನೆ ಆಪ್‌ಕಾ ನಾಮ್ ಪಹ್ಲೆ ದಫಾ ಸುನಾ ಹೈ (ಮೀನಾಕುಮಾರಿ ಅವರೇ ನನ್ನನ್ನು ಕ್ಷಮಿಸಿ, ನಾನು ಮೊದಲ ಬಾರಿಗೆ ನಿಮ್ಮ ಹೆಸರನ್ನು ಕೇಳಿದ್ದೇನೆ) ಎಂದು ಮಾತು ಆರಂಭಿಸಿದರು. ಖ್ಯಾತಿಯ ಉತ್ತುಂಗದಲ್ಲಿದ್ದ ನಟಿ ಆ ಕ್ಷಣ ಮುಜುಗರಕ್ಕೆ ಒಳಗಾದರು. ಮೊದಲ ಸಾಲಿನಲ್ಲಿಯೇ ಕುಳಿತಿದ್ದ ಮೀರಾ ಕುಮಾರಿ ಆಗ ನಿರ್ಭಾವುಕರಂತೆ ಕಂಡು ಬಂದರು’ ಎಂದೂ ನಯ್ಯರ್ ವಿವರಿಸಿದ್ದಾರೆ.

ಈ ಕೃತಿ ಬಿಡುಗಡೆಗೂ ಮುನ್ನವೇ ಕಳೆದ ವರ್ಷ ಆಗಸ್ಟ್‌ನಲ್ಲಿ ನಯ್ಯರ್‌ ನಿಧನರಾದರು. ಸ್ಪೀಕಿಂಗ್‌ ಟ್ರೀ ಸಂಸ್ಥೆ ಮುದ್ರಿಸಿರುವ ಈ ಕೃತಿಯಲ್ಲಿ ಅವರು ತಾವು ಭೇಟಿಯಾದ ವ್ಯಕ್ತಿಗಳು, ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯ ನಂತರದ ಅವಧಿಯಲ್ಲಿ ದೇಶವನ್ನು ಕಟ್ಟುವಲ್ಲಿ ಈ ವ್ಯಕ್ತಿಗಳು ನೀಡಿರುವ ಕೊಡುಗೆಗಳ ಕುರಿತು ವಿವರಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.