ಬುಧವಾರ, ಫೆಬ್ರವರಿ 19, 2020
29 °C

ಉಗ್ರ ಹಫೀಜ್ ಸೈಯದ್‌‌ಗೆ 5 ವರ್ಷ ಶಿಕ್ಷೆ ವಿಧಿಸಿದ ಪಾಕಿಸ್ತಾನ ಕೋರ್ಟ್

ಏಜನ್ಸೀಸ್‌ Updated:

ಅಕ್ಷರ ಗಾತ್ರ : | |

ಇಸ್ಲಮಾಬಾದ್: ಇದೇ ಮೊದಲ ಬಾರಿಗೆ ಉಗ್ರನೊಬ್ಬನಿಗೆ ಪಾಕಿಸ್ತಾನ ನ್ಯಾಯಾಲಯ ಐದು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

2008ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಉಗ್ರ ಸಂಘಟನೆ ಎಲ್‌‌ಇಟಿಗೆ ಬೆನ್ನುಲುಬಾಗಿ ನಿಂತಿದ್ದನೆನ್ನಲಾದ ಉಗ್ರ ಹಫೀಜ್ ಸೈಯದ್ ಶಿಕ್ಷೆಗೆ ಒಳಗಾದವನು. ಈತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮೂರು ವರ್ಷಗಳ ಹಿಂದೆಯೇ ಆದೇಶ ಹೊರಡಿಸಿದ್ದರು.

ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡ ಬಗ್ಗೆ ವರದಿಯಾಗಿರಲಿಲ್ಲ. ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುವುದೂ ಸೇರಿದಂತೆ ಎರಡು ಪ್ರಕರಣಗಳಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಬುಧವಾರ ಶಿಕ್ಷೆ ವಿಧಿಸಿದೆ.

ಪಾಕಿಸ್ತಾನದಲ್ಲಿ ಉಗ್ರರು ಅಕ್ರಮ ವ್ಯವಹಾರ ನಡೆಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣಕಾಸು ಸ್ಥಿತಿ ಹದೆಗೆಡುವಂತೆ ಮಾಡುತ್ತಾರೆ ಎಂದು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್ ) ವರದಿ ನೀಡಿತ್ತು. ಅಲ್ಲದೆ, 'ಗ್ರೇ' ಪಟ್ಟಿಯಲ್ಲಿ ಪಾಕಿಸ್ತಾನ ಹೆಸರು ಸೇರಿಸಲು ತೀರ್ಮಾನಿಸಿತು. ಈ ಬೆಳವಣಿಗೆಗಳ ಬೆನ್ನಲ್ಲೇ ಪಾಕಿಸ್ತಾನ ನ್ಯಾಯಾಲಯದಿಂದ ಈ ತೀರ್ಪು ಹೊರಬಿದ್ದಿದೆ.

ಯಾವ ರಾಷ್ಟ್ರ ಉಗ್ರರಿಗೆ ಆಶ್ರಯ ನೀಡಿ, ಉಗ್ರರಿಗೆ ಹಣಕಾಸಿನ ನೆರವು ನೀಡುತ್ತದೆಯೋ ಅಂತಹ ರಾಷ್ಟ್ರಗಳ ಹೆಸರನ್ನು ಎಫ್‌‌ಎಟಿಎಫ್ ಸಂಸ್ಥೆ 'ಗ್ರೇ' (ಬೂದು) ಬಣ್ಣದ ಪಟ್ಟಿಯಲ್ಲಿ ಸೇರಿಸುತ್ತದೆ. ಸಂಸ್ಥೆ ಈ ಕ್ರಮಕ್ಕೆ ಮುಂದಾದ ಕಾರಣ ಪಾಕಿಸ್ತಾನ ಎರಡು ಪ್ರಕರಣಗಳಲ್ಲಿ ಉಗ್ರನಿಗೆ ನ್ಯಾಯಾಲಯದಿಂದ ಶಿಕ್ಷೆ ನೀಡುವಂತೆ ಮಾಡಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು