ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿನ ಉತ್ತುಂಗ– ಸೋಲಿನ ಪ್ರಪಾತ: ಅಜಿತ್ ಜೋಗಿ ಬದುಕಿನ ಹಾದಿ

Last Updated 29 ಮೇ 2020, 19:51 IST
ಅಕ್ಷರ ಗಾತ್ರ

ಯಶಸ್ಸಿನ ಉತ್ತುಂಗ, ಸೋಲಿನ ಪ್ರಪಾತ ಎರಡನ್ನೂ ಕಂಡಿದ್ದ ಛತ್ತೀಸಗಡದ ಪ್ರಥಮ ಮುಖ್ಯಮಂತ್ರಿ ಅಜಿತ್‌ ಜೋಗಿ ಅವರ ರಾಜಕೀಯ ಹಾದಿಯು ಬಾಲಿವುಡ್‌ ಸಿನಿಮಾದ ಕತೆಯಂತೆ ರೋಚಕವಾದುದು.

ಛತ್ತೀಸಗಡದ ಅಚಾನಕಮಾರ್‌ ಎಂಬ ಹಳ್ಳಿಯಲ್ಲಿ 1946ರಲ್ಲಿ ಜನಿಸಿದ ಜೋಗಿ, ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆಯುತ್ತಾರೆ. ನಂತರ ಐಪಿಎಸ್‌ ಅಧಿಕಾರಿಯಾಗಿ ಪೊಲೀಸ್‌ ಇಲಾಖೆಯಲ್ಲಿ ಸೇವೆ, ಬಳಿಕ ಭಾರತೀಯ ಆಡಳಿತ ಸೇವಾ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ 12 ವರ್ಷಗಳ ಕಾಲ ಬೇರೆಬೇರೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದರು.

1980ರ ದಶಕದಲ್ಲಿ ಸರ್ಕಾರಿ ಸೇವೆಯಿಂದ ಹೊರಬಂದ ಅಜಿತ್‌ ಅವರನ್ನು ಅರ್ಜುನ್‌ ಸಿಂಗ್‌ ಅವರು ರಾಜಕೀಯಕ್ಕೆ ಕರೆತಂದು, ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿದರು. ಮಧ್ಯಪ್ರದೇಶದ ರಾಜಕೀಯದಲ್ಲಿ ಮತ್ತು ಕಾಂಗ್ರೆಸ್‌ ಪಕ್ಷದಲ್ಲಿ ಅರ್ಜುನ್‌ ಸಿಂಗ್‌ ಅವರ ಹಿಡಿತ ಬಿಗಿಯಾಗಿದ್ದ ದಿನಗಳವು. ಅಲ್ಲಿಂದ ಒಂದೊಂದೇ ಮೆಟ್ಟಿಲುಗಳನ್ನೇರುತ್ತಾ ಹೋದ ಜೋಗಿ, ಪಕ್ಷದ ಬಹುತೇಕ ಎಲ್ಲಾ ಹುದ್ದೆಗಳನ್ನೂ ದಕ್ಕಿಸಿಕೊಂಡರು.

1990ರ ದಶಕದಲ್ಲಿ ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿ ಯುಗ ಆರಂಭವಾಯಿತು. ಅಲ್ಲಿಯವರೆಗೂ ಅರ್ಜುನ್‌ ಸಿಂಗ್‌ ಅವರ ಸಮೀಪವರ್ತಿ ಎನಿಸಿಕೊಂಡಿದ್ದ ಜೋಗಿ, ಒಮ್ಮೆಲೇ ಸೋನಿಯಾ ಮಗ್ಗುಲಿಗೆ ಸರಿದು, ಅರ್ಜುನ್‌ ವಿರುದ್ಧವೇ ರಾಜಕೀಯ ಆಟ ಆರಂಭಿಸಿದರು.

2000ನೇ ಸಾಲಿನ ನವೆಂಬರ್‌ ತಿಂಗಳಲ್ಲಿ ಛತ್ತೀಸಗಡ ರಾಜ್ಯ ರಚನೆಯಾಯಿತು. ಮಧ್ಯಪ್ರದೇಶದ ರಾಜಕೀಯದಲ್ಲಿ ಪಳಗಿದ್ದ ಜೋಗಿಯನ್ನು ಕರೆತಂದು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲಾಯಿತು. ಅತಿ ಹಿಂದುಳಿದ ಪ್ರದೇಶದಲ್ಲಿ ಹುಟ್ಟಿದ, ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಿದ್ದ ಮತ್ತು ಅಧಿಕಾರಿಯಾಗಿ ಅನುಭವ ಹೊಂದಿದ್ದ ವ್ಯಕ್ತಿಯನ್ನು ಮೊದಲ ಮುಖ್ಯಮಂತ್ರಿಯಾಗಿ ಪಡೆದ ರಾಜ್ಯ ಎಂಬ ಹೆಗ್ಗಳಿಕೆಗೆ ಛತ್ತೀಸಗಡ ಪಾತ್ರವಾಯಿತು.

ಜೋಗಿ ಅವರು ರಾಜ್ಯದ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಿದರು. ವಿದ್ಯುತ್‌ ಕ್ಷೇತ್ರದಲ್ಲಿ ರಾಜ್ಯವನ್ನು ಸ್ವಾವಲಂಬಿಯಾಗಿಸಿದರು. 25 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನೀರಾವರಿ ಕಾಮಗಾರಿಯ ಸಮಸ್ಯೆಯನ್ನು ಬಗೆಹರಿಸಿ, 2 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಿದರು. ಪರಿಣಾಮ, ರಾಜ್ಯದ ಕೃಷಿ ಭೂಮಿಯ ಪ್ರಮಾಣ ದ್ವಿಗುಣಗೊಂಡಿತು. ಅನೇಕ ಜನಪರ ಯೋಜನೆಗಳು ಜಾರಿಗೊಂಡವು. ಎರಡೂವರೆ ವರ್ಷಗಳಲ್ಲಿ ಜೋಗಿ ಅವರು ಛತ್ತೀಸಗಡದ ಮನೆಮಾತಾದರು. ರಾಜಕೀಯವಾಗಿ ಅವರ ಸ್ಪರ್ಧಿಗಳೆನಿಸಿದ್ದವರು ಅವರಿಂದ ಮೈಲುಗಟ್ಟಲೆ ಹಿಂದೆ ಉಳಿದರು.

ಈ ಹಂತದಲ್ಲಿ ಜೋಗಿಯ ಪುತ್ರ ಅಮಿತ್‌ ಜೋಗಿ ಅವರ ರಾಜಕೀಯ ಪ್ರವೇಶವಾಯಿತು. ಬಿಜೆಪಿ ಶಾಸಕರ ಖರೀದಿ, ‘ಜಾತಿ ರಾಜಕೀಯ’ದ ಪ್ರವೇಶ, ಜಾತಿ ಲೆಕ್ಕಾಚಾರ... ಎಲ್ಲವೂ ಜೋಗಿ ಅವರ ಮನೆಯಲ್ಲೇ ನಡೆದವು. ಅಧಿಕಾರಿಗಳು ಸಹ ಅಜಿತ್‌ ಬದಲು ಅಮಿತ್‌ ಜೋಗಿಗೆ ಮಹತ್ವ ನೀಡಲಾರಂಭಿಸಿದರು. ಜೋಗಿಯ ಹಿನ್ನಡೆಯು ಇಲ್ಲಿಂದ ಆರಂಭವಾಯಿತು.

2003ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿಪಿಯು ಕಾಂಗ್ರೆಸ್‌ನ ಶೇ 7.3ರಷ್ಟು ಮತಗಳನ್ನು ಸೆಳೆದುಕೊಂಡಿತು. ಪರಿಣಾಮ, 50 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಧಿಕಾರ ಹಿಡಿಯಿತು.

ಚುನಾವಣೆ ಮುಗಿಯುತ್ತಿದ್ದಂತೆ ಬಿಜೆಪಿಯ ಶಾಸಕರನ್ನು ಖರೀದಿಸಲು ಅಜಿತ್‌ ಪ್ರಯತ್ನಿಸಿದ್ದ ಆಡಿಯೊ ತುಣುಕುಗಳು ಬಹಿರಂಗಗೊಂಡವು. ಅದಾಗುತ್ತಿದ್ದಂತೆ ಅಜಿತ್‌ ಅವರನ್ನು ಕಾಂಗ್ರೆಸ್‌ನಿಂದ ಆರು ವರ್ಷಗಳ ಅವಧಿಗೆ ಅಮಾನತುಗೊಳಿಸಲಾಯಿತು.

ಸೋಲಿನ ಹಾದಿ: ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಮೇಲೆ ಜೋಗಿಯ ರಾಜಕೀಯ ಹೊಸ ಹಾದಿ ಹಿಡಿಯಿತು. 2004ರಲ್ಲಿ ಜೋಗಿ ಅವರು ಸಂಚರಿಸುತ್ತಿದ್ದ ವಾಹನವು ರಸ್ತೆ ಅಪಘಾತಕ್ಕೆ ಒಳಗಾಯಿತು. ಬದುಕಿ ಉಳಿದರೂ, ಮುಂದಿನ ಜೀವನವನ್ನು ಅವರು ಗಾಲಿ ಕುರ್ಚಿಯ ಮೇಲೆ ಕಳೆಯುವಂತಾಯಿತು. ಪುತ್ರನ ಮೇಲೆ ಕೊಲೆಯ ಆರೋಪಗಳು ಬಂದವು. 2008 ಮತ್ತು 13ರ ಚುನಾವಣೆಯಲ್ಲೂ ಬಿಜೆಪಿ ಅಧಿಕಾರ ಹಿಡಿಯಿತು. ಪರಿಣಾಮ ಅಜಿತ್‌ ವಿರುದ್ಧ ಕಾಂಗ್ರೆಸ್‌ನಲ್ಲಿ ಸಿಟ್ಟು ಮಡುಗಟ್ಟುತ್ತಾ ಹೋಯಿತು. ‘ಅಜಿತ್‌ ಕಾಂಗ್ರೆಸ್‌ನಲ್ಲಿ ಇರುವಷ್ಟು ದಿನ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗಲಾರದು’ ಎಂದು ಕಾಂಗ್ರೆಸ್‌ ನಾಯಕರೇ ಹೇಳಲಾರಂಭಿಸಿದರು.

2013ರ ಸೋಲಿನ ಬಳಿಕ ಕಾಂಗ್ರೆಸ್‌ ಪಕ್ಷವು ಅಜಿತ್‌ ಅವರನ್ನು ಮೂಲೆಗುಂಪು ಮಾಡಿತು. 2015ರಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾರಣಕ್ಕೆ ಪುನಃ ಆರು ವರ್ಷಗಳ ಅವಧಿಗೆ ಅಮಾನತುಗೊಳಿಸಲಾಯಿತು. ಇನ್ನು ಕಾಂಗ್ರೆಸ್‌ನಲ್ಲಿ ಭವಿಷ್ಯವಿಲ್ಲ ಎಂಬುದು ಅಜಿತ್‌ ಅವರಿಗೆ ಅರ್ಥವಾಗತೊಡಗಿತು. 2016ರಲ್ಲಿ ‘ಛತ್ತೀಸ್‌ಗಡ ಜನತಾ ಕಾಂಗ್ರೆಸ್‌’ ಪಕ್ಷವನ್ನು ಕಟ್ಟಿದರು.

2018ರ ಚುನಾವಣೆಯ ಸಂದರ್ಭದಲ್ಲಿ ಮತ್ತೆ ಕಾಂಗ್ರೆಸ್‌ ಸೇರುವ ಪ್ರಯತ್ನ ಮಾಡಿದರೂ ಫಲನೀಡಲಿಲ್ಲ. ಬಳಿಕ ಅವರು ಮಾಯಾವತಿ ಜತೆ ಮೈತ್ರಿ ಮಾಡಿಕೊಂಡರು. ಕನಿಷ್ಠ 10 ಕ್ಷೇತ್ರಗಳಲ್ಲಿ ಗೆದ್ದರೆ ಕಿಂಗ್‌ ಮೇಕರ್‌ ಆಗಬಹುದೆಂಬ ಕನಸನ್ನು ಜೋಗಿ ಕಂಡಿದ್ದರು. ಏಳು ಸ್ಥಾನಗಳನ್ನೇನೋ ಗೆದ್ದರು. ಆದರೆ ರಾಜ್ಯದ ಜನರು ಬಿಜೆಪಿಯನ್ನು ತಿರಸ್ಕರಿಸಿ, ಕಾಂಗ್ರೆಸ್‌ಗೆ 68 ಸ್ಥಾನಗಳನ್ನು ನೀಡಿದ್ದರು. ಅಧಿಕಾರ ಹಿಡಿಯಬೇಕು ಎಂಬ ಜೋಗಿ ಅವರ ಕೊನೆಯ ಆಸೆಗೂ ಕಲ್ಲು ಬಿದ್ದಿತ್ತು.

ಸೌಲಭ್ಯ ರದ್ದು

‘ಬುಡಕಟ್ಟು ಸಮುದಾಯದ ನಾಯಕ’ ಎಂದು ಅಜಿತ್‌ ಜೋಗಿ ಅವರನ್ನು ಹೊಗಳಿದ್ದ ಕಾಂಗ್ರೆಸ್‌ ಪಕ್ಷವೇ 2019ರಲ್ಲಿ ಅವರು ಬುಡಕಟ್ಟು ಸಮುದಾಯದವರಲ್ಲ ಎಂದು ಹೇಳಿ, ಅವರಿಗೆ ನೀಡಿದ್ದ ಸೌಲಭ್ಯಗಳನ್ನು ರದ್ದುಪಡಿಸಿದೆ.

ಅಜಿತ್‌ ಅವರ ಜಾತಿಯ ಬಗ್ಗೆ ತನಿಖೆ ನಡೆಸಲು, ಕೋರ್ಟ್‌ ಸೂಚನೆಯ ಮೇರೆಗೆ ಕಾಂಗ್ರೆಸ್‌ ಪಕ್ಷವು 2019ರಲ್ಲಿ ಆರು ಮಂದಿ ಸದಸ್ಯರ ಉನ್ನತ ಸಮಿತಿಯೊಂದನ್ನು ರಚಿಸಿತ್ತು. ವಿಶೇಷವೆಂದರೆ 2016ರಲ್ಲಿ ಕಾಂಗ್ರೆಸ್‌ ಪಕ್ಷವನ್ನು ತೊರೆದಾಗ ಅಜಿತ್‌ ಅವರು ಪಕ್ಷದ ಎಸ್‌ಟಿ ಘಟಕದ ಮುಖ್ಯಸ್ಥರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT