ಶುಕ್ರವಾರ, ಫೆಬ್ರವರಿ 21, 2020
25 °C

‘ಆಮ್ ಆದ್ಮಿ’ಯ ಹೋರಾಟದ ಬದುಕು: ಹೀಗಿತ್ತು ಅರವಿಂದ ಕೇಜ್ರಿವಾಲ್ ಸಾಗಿಬಂದ ಹಾದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದು ಮೂರನೇ ಬಾರಿ ಅಧಿಕಾರ ಹಿಡಿಯುತ್ತಿರುವ ಆಮ್ ಆದ್ಮಿ ಪಕ್ಷ ಹುಟ್ಟಿದ್ದು ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ. ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಆರಂಭದಲ್ಲಿ ಸರ್ಕಾರಿ ಅಧಿಕಾರಿ. ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಿದ ಅವರು ಇದಕ್ಕಾಗಿ ಸರ್ಕಾರಿ ಹುದ್ದೆ ತ್ಯಜಿಸಿ ಹೋರಾಟಕ್ಕಿಳಿದಿದ್ದರು. ಹೊಸ ಪಕ್ಷವನ್ನು ಹುಟ್ಟುಹಾಕಿ ಚುನಾವಣೆಯಲ್ಲಿ ಸ್ಪರ್ಧಿಸಿ ಯಶಸ್ವಿಯೂ ಆದರು. ರಾಷ್ಟ್ರ ರಾಜಧಾನಿಯಲ್ಲಿ ಸತತ ಮೂರು ಬಾರಿ ಅಧಿಕಾರ ಗಿಟ್ಟಿಸಿದ ಪಕ್ಷವು ಹೋರಾಟದ ಹಲವು ಹಂತಗಳನ್ನು ದಾಟಿ ಬಂದಿದೆ... ಕೇಜ್ರಿವಾಲ್ ಅವರ ಜೀವನದೊಂದಿಗೆ ಆಮ್ ಆದ್ಮಿ ಪಕ್ಷದ ಏಳುಬೀಳುಗಳೂ ತಳಕು ಹಾಕಿಕೊಂಡಿವೆ. 

ಐಐಟಿಯಿಂದ ಐಆರ್‌ಎಸ್‌ವರೆಗೆ...

ಹರಿಯಾಣ ಮೂಲದ ಅರವಿಂದ ಕೇಜ್ರಿವಾಲ್ 1985ರಲ್ಲಿ ಐಐಟಿ–ಜೆಎಇ ಪರೀಕ್ಷೆಯಲ್ಲಿ 563ನೇ ರ‍್ಯಾಂಕ್ ಪಡೆದ ಪ್ರತಿಭಾವಂತ. ಐಐಟಿ ಖರಗ್‌ಪುರದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದು ಹೊರಬಂದು ಟಾಟಾ ಸ್ಟೀಲ್‌ನಲ್ಲಿ ಉದ್ಯೋಗ ಶುರು ಮಾಡಿದರು. ಆದರೆ ಕೇಂದ್ರ ನಾಗರಿಕ ಸೇವಾ ಪರೀಕ್ಷೆ ಬರೆಯುವ ಹಂಬಲದಿಂದ ಕೆಲಸಕ್ಕೆ ರಾಜೀನಾಮೆ ನೀಡಿದರು. 1995ರಲ್ಲಿ ಭಾರತೀಯ ಕಂದಾಯ ಸೇವೆಗೆ (ಐಆರ್‌ಎಸ್) ಸೇರಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ನೇಮಕಗೊಂಡರು. 

ಭ್ರಷ್ಟಾಚಾರದ ವಿರುದ್ಧ ‘ಪರಿವರ್ತನ್’ 

ಸರ್ಕಾರಿ ಸೇವೆಯ ಅವಧಿಯಲ್ಲೇ ಕೇಜ್ರಿವಾಲ್ ಅವರು ಮನೀಸ್ ಸಿಸೋಡಿಯಾ ಜತೆಗೂಡಿ 1999ರಲ್ಲಿ ‘ಪರಿವರ್ತನ್’ ಎಂಬ ಚಳವಳಿ ಶುರು ಮಾಡಿದರು. ಈ ಸಂಘಟನೆ ಮೂಲಕ ಪಡಿತರ ವಿತರಣೆ ವ್ಯವಸ್ಥೆ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು, ಆದಾಯ ತೆರಿಗೆ, ಸಾವರ್ಜನಿಕ ಕೆಲಸಗಳಲ್ಲಿ ಜನರಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಲು ಮುಂದಾದರು. ಕಬೀರ್ ಎಂಬ ಮತ್ತೊಂದು ಸಂಘಟನೆಯನ್ನೂ ಶುರು ಮಾಡಿದರು. ಆದಾಯ ತೆರಿಗೆ ಇಲಾಖೆಯಲ್ಲಿ ಪಾದರ್ಶಕತೆಗೆ ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಯಿತು. ಮುಖ್ಯಮಂತ್ರಿ ಮನೆ ಎದುರು ಸತ್ಯಾಗ್ರಹ ನಡೆಸಲಾಯಿತು. ಸರ್ಕಾರಿ ಕೆಲಸಕ್ಕೆ ಲಂಚ ಕೊಡಬೇಡಿ ಎಂದು ಜನರಿಗೆ ಜಾಗೃತಿ ಮೂಡಿಸಲು ಸಂಘಟನೆ ಯತ್ನಿಸಿತು.

2001ರಲ್ಲಿ ದೆಹಲಿ ಸರ್ಕಾರವು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಜಾರಿಗೊಳಿಸಿತು. ಆರ್‌ಟಿಐ ಮೂಲಕ ಜನರ ಕೆಲಸವನ್ನು ಲಂಚ ನೀಡದಂತೆ ಮಾಡಿಸಿಕೊಡುವ ಯತ್ನಕ್ಕೆ ಪರಿವರ್ತನ್ ಮುಂದಾಯಿತು. 2002ರಲ್ಲಿ 68 ಸರ್ಕಾರಿ ಕಾರ್ಯಕ್ರಮಗಳ ವರದಿ ಪಡೆದುಕೊಂಡ ಸಂಘಟನೆ ಅದನ್ನು ಲೆಕ್ಕಪರಿಶೋಧನೆಗೆ ಒಳಪಡಿಸಿತು. ₹70 ಲಕ್ಷದ ಅವ್ಯವಹಾರ ನಡೆದಿರುವುದನ್ನು ಬಹಿರಂಗಪಡಿಸಿತು. 2003ರಲ್ಲಿ ದೆಹಲಿಯ ಪಡಿತರ ವಿತರಣೆ ಹಗರಣ ಬಯಲಿಗೆಳೆಯಲಾಯಿತು. ನೀರನ್ನು ಖಾಸಗೀಕರಣಗೊಳಿಸುವ ಸರ್ಕಾರದ ಯತ್ನದ ವಿರುದ್ಧ ದೊಡ್ಡ ಜನಾಂದೋಲನ ಶುರು ಮಾಡಲಾಯಿತು. ಹೋರಾಟಕ್ಕೆ ಮಣಿದು ಸರ್ಕಾರ ಯೋಜನೆ ಕೈಬಿಟ್ಟಿತು.

ರಾಷ್ಟ್ರಮಟ್ಟದಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗುವಲ್ಲಿ ಕೇಜ್ರಿವಾಲ್ ಅವರ ಹೋರಾಟ ಗಮನಾರ್ಹ. 2006ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಭ್ರಷ್ಟಾಚಾರ ವಿರುದ್ಧದ ನಾಯಕತ್ವ, ದೆಹಲಿಯ ಬಡಜನರ ಸಬಲೀಕರಣಕ್ಕಾಗಿ ಹೋರಾಟ, ಆರ್‌ಟಿಐ ಚಳವಳಿಯನ್ನು ತಳಮಟ್ಟದಲ್ಲಿ ಸಂಘಟಿಸಿದ್ದನ್ನು ಗುರುತಿಸಿ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯೂ ಅರಸಿ ಬಂದಿತು. ಸಿಸೋಡಿಯಾ, ಅಭಿನಂದನ್ ಸೆಕ್ರಿ ಜತೆಗೂಡಿ ಸಾರ್ವಜನಿಕ ಉದ್ದೇಶದ ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸಿದರು. ಪ್ರಶಸ್ತಿಯಲ್ಲಿ ಬಂದ ಹಣವನ್ನು ಇದಕ್ಕೆ ನೀಡಿದರು.

ಲೋಕಪಾಲ ಚಳವಳಿ

ಕಾಮನ್‌ವೆಲ್ತ್‌ ಗೇಮ್ಸ್ ಹಗರಣ ಬೆಳಕಿಗೆ ಬಂದಿತು. ‘ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೇಂದ್ರೀಯ ವಿಚಕ್ಷಣಾ ಆಯೋಗಕ್ಕೆ (ಸಿವಿಸಿ) ಸಾಕಷ್ಟು ಅಧಿಕಾರಗಳಿಲ್ಲ. ಸಚಿವರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಲು ಸಿಬಿಐ ಅಸಮರ್ಥವಾಗಿದೆ. ಹೀಗಾಗಿ ಕೇಂದ್ರದಲ್ಲಿ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತರನ್ನು ನೇಮಿಸಬೇಕು’ ಎಂದು ಅವರು ಆಗ್ರಹಿಸಿದರು. 

ಜತೆಗೂಡಿದ ಅಣ್ಣಾ ಹಜಾರೆ

ಸಾಮಾಜಿಕ ಕಾರ್ಯಕರ್ತರಾದ ಅಣ್ಣಾ ಹಜಾರೆ, ಕಿರಣ್ ಬೇಡಿ ಜೊತೆಗೂಡಿ ಇಂಡಿಯಾ ಅಗೈನ್ಸ್ಟ್ ಕರಪ್ಷನ್ (ಐಎಸಿ) ಸಂಘಟನೆಯನ್ನು ಕೇಜ್ರಿವಾಲ್ ಸೇರಿ, ಲೋಕಪಾಲ ನೇಮಕಕ್ಕೆ ಆಗ್ರಹಿಸಿ ಹೋರಾಟಕ್ಕಿಳಿದರು. ಇದು 2011ರಲ್ಲಿ ಭಾರತದ ಭ್ರಷ್ಟಾಚಾರ ವಿರೋಧಿ ಚಳಿವಳಿಯ ರೂಪ ತಾಳಿತು. ಕೇಂದ್ರ ಸರ್ಕಾರದ ರಾಷ್ಟ್ರೀಯ ಸಲಹಾ ಮಂಡಳಿಯು ಲೋಕಪಾಲ ಕರಡು ಮಸೂದೆ ರೂಪಿಸಿತು. ನ್ಯಾಯಾಂಗ ವ್ಯವಸ್ಥೆ, ಪ್ರಧಾನಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಸೂದೆಯಲ್ಲಿ ಅಧಿಕಾರ ನೀಡಿಲ್ಲ ಎಂದು ಪ್ರತಿಭಟಿಸಲಾಯಿತು. ಲೋಕಪಾಲರ ನೇಮಕ ವಿಧಾನವನ್ನೂ ಟೀಕಿಸಲಾಯಿತು. ಜನಲೋಕಪಾಲ್‌ ಕರಡು ಸಿದ್ಧಪಡಿಸಲು ಸರ್ಕಾರ ರಚಿಸಿದ ಸಮಿತಿಯಲ್ಲಿ ಕೇಜ್ರಿವಾಲ್ ಅವರು ಸಮಾಜದ ಪ್ರತಿನಿಧಿಯಾಗಿ ಪಾಲ್ಗೊಂಡರು. ಸಮಿತಿಯ ಕಾರ್ಯವೈಖರಿ ಅವರಿಗೆ ಸರಿಬರಲಿಲ್ಲ. ಐಎಸಿ ಕಾರ್ಯಕರ್ತರು ದೊಡ್ಡ ಪ್ರತಿಭಟನೆ ಶುರು ಮಾಡಿದರು. ಹಜಾರೆ ಅವರು ಉಪವಾಸ ಸತ್ಯಾಗ್ರಹ ಹೂಡಿದರು. 

ಪ್ರಬಲ ಲೋಕಾಯುಕ್ತರನ್ನು ನೇಮಿಸುವ ತನ್ನ ಭರವಸೆಯಿಂದ ಸರ್ಕಾರ ಹಿಂದೆ ಸರಿಯಿತು. ಕೇಜ್ರಿವಾಲ್ ನೇತೃತ್ವದಲ್ಲಿ ಮತ್ತೆ ಹೋರಾಟ ಶುರುವಾಯಿತು. ಆದರೆ ಈ ಬಾರಿ ಅಣ್ಣಾ ಹಜಾರೆ ಬದಲು ಕೇಜ್ರಿವಾಲ್ ನೇತೃತ್ವ ವಹಿಸಿದ್ದರು. 

ಆಮ್ ಆದ್ಮಿ ಪಕ್ಷದ ಉದಯ

ಜನಪ್ರತಿನಿಧಿಗಳಿಗೆ ಆದೇಶ ನೀಡುವ ಪರಿಪಾಟ ಸರಿಯಲ್ಲ ಎಂಬ ಅಭಿಪ್ರಾಯವು ಜನಲೋಕಪಾಲ ಕಾರ್ಯಕರ್ತರಿಂದ ಬಂದಿತು. ಹೀಗಾಗಿ ಕೇಜ್ರಿವಾಲ್ ಮತ್ತು ಹೋರಾಟಗಾರರು ರಾಜಕೀಯ ಪ್ರವೇಶಿಸಿ, ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದರು. 2012ರ ನವೆಂಬರ್‌ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಚಾಲನೆ ಸಿಕ್ಕಿತು. ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿ ಅವರು ನೇಮಕಗೊಂಡರು. ಈ ಬೆಳವಣಿಗೆಯು ಹಜಾರೆ ಮತ್ತು ಕೇಜ್ರಿವಾಲ್ ಮಧ್ಯೆ ಬಿರುಕು ಮೂಡಿಸಿತು.

ಹೋರಾಟದಿಂದ ಮುಖ್ಯಮಂತ್ರಿ ಗಾದಿವರೆಗೆ

2013ರ ದೆಹಲಿ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಿತು. ಹಾಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿರುದ್ಧ ಕೇಜ್ರಿವಾಲ್ ಕಣಕ್ಕಿಳಿದರು. ಅಚ್ಚರಿಯೆಂಬಂತೆ ಪಕ್ಷ 28 ಸ್ಥಾನಗಳಲ್ಲಿ ಜಯ ಗಳಿಸಿ ಎರಡನೇ ಸ್ಥಾನ ಪಡೆಯಿತು. ಬಿಜೆಪಿಗೆ 31, ಕಾಂಗ್ರೆಸ್‌ಗೆ 8 ಸ್ಥಾನ ಸಿಕ್ಕಿವು. ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಕೇಜ್ರಿವಾಲ್ ಅವರು ಅಲ್ಪಮತದ ಸರ್ಕಾರ ರಚಿಸಿ, ಮುಖ್ಯಮಂತ್ರಿ ಹುದ್ದೆಗೆ ಏರಿದರು. ದೆಹಲಿ ವಿಧಾನಸಭೆಯಲ್ಲಿ ಜನಲೋಕಪಾಲ ಮಸೂದೆ ತರಲು ಸಾಧ್ಯವಾಗದಿದ್ದಕ್ಕೆ 2014ರ ಫೆಬ್ರುವರಿ 14ರಂದು ಕೇಜ್ರಿವಾಲ್ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿ, ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ವಾರಾಣಸಿಯಲ್ಲಿ ಸ್ಪರ್ಧಿಸಿ ಸೋತರು. 

ಬಹುಮತದ ಸರ್ಕಾರ

ಕೇಜ್ರಿವಾಲ್ ರಾಜೀನಾಮೆ ಬಳಿಕ 2015ರಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಭಾರಿ ಸಾಧನೆ ಮಾಡಿತು. 70ರ ಪೈಕಿ 67 ಸ್ಥಾನಗಳನ್ನು ಗೆದ್ದು ಬೀಗಿತು. ಬಿಜೆಪಿ ಸಿಕ್ಕಿದ್ದು ಮೂರು ಸ್ಥಾನ ಮಾತ್ರ. ಕಾಂಗ್ರೆಸ್ ಶೂನ್ಯ ಸಂಪಾದಿಸಿತು. ಕೇಜ್ರಿವಾಲ್‌ ಅವರ ಪೂರ್ಣ ಬಹುಮತದ ಸರ್ಕಾರದೊಂದಿಗೆ ಎರಡನೇ ಬಾರಿ ಮುಖ್ಯಮಂತ್ರಿ ಗದ್ದುಗೆಗೆ ಏರಿದರು. ಜನಲೋಕಪಾಲ ಕಾಯ್ದೆಯನ್ನು ವಿಧಾನಸಭೆ ಅಂಗೀಕರಿಸಿತು. ಅಧಿಕಾರ ಚಲಾವಣೆ, ನೇಮಕಾತಿ ವಿಚಾರದಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಹಾಗೂ ಮುಖ್ಯಮಂತ್ರಿ ಕಚೇರಿ ನಡುವೆ ತೀವ್ರ ಸ್ವರೂಪದ ಬಿಕ್ಕಟ್ಟು ಶುರುವಾಯಿತು. ಸುದೀರ್ಘ ಅವಧಿಯವರೆಗೆ ಅದು ಮುಂದುವರಿಯಿತು. 

ಅಭಿವೃದ್ಧಿಯ ಏಣಿ

ಲೆಫ್ಟಿನೆಂಟ್ ಗವರ್ನರ್ ಕಚೇರಿ ಜತೆ ಹೋರಾಟದ ನಡುವೆಯೇ ಆಮ್ ಆದ್ಮಿ ಪಕ್ಷವು ದೆಹಲಿ ಅಭಿವೃದ್ಧಿಯ ನೀಲನಕ್ಷೆ ಸಿದ್ಧಪಡಿಸಿತ್ತು. 2015ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ‘ಮೊಹಲ್ಲಾ ಕ್ಲಿನಿಕ್’ ಚಾಲನೆ ಪಡೆದವು. ರೋಗಪತ್ತೆ, ವೈದ್ಯರ ಭೇಟಿ, ಔಷಧವನ್ನು ಉಚಿತವಾಗಿ ನೀಡುವುದು ಮೊಹಲ್ಲಾ ಕ್ಲಿನಿಕ್ ಉದ್ದೇಶ.  20 ಲಕ್ಷ ನಾಗರಿಕರು ಇದರ ಲಾಭ ಪಡೆಯುವಂತಾಯಿತು. ದೆಹಲಿಯ ಆರೋಗ್ಯ ವಲಯದ ಚಿತ್ರಣವೇ ಬದಲಾಯಿತು.

ಮೂರನೇ ಬಾರಿ ಗದ್ದುಗೆ

2019ರಲ್ಲಿ ದೆಹಲಿಯ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವನ್ನು ಎಎಪಿ ಸರ್ಕಾರ ಜಾರಿಮಾಡಿತು. ಎಎಪಿ ಸರ್ಕಾರದ ಅವಧಿಯಲ್ಲಿ ಖಾಸಗಿ ಶಾಲೆಗಳನ್ನೂ ಮೀರಿಸುವಂತೆ ದೆಹಲಿಯ ಸರ್ಕಾರಿ ಶಾಲೆಗಳ ಗುಣಮಟ್ಟ ವೃದ್ಧಿಸಿತು. ದೆಹಲಿಗರಿಗೆ ಉಚಿತ ನೀರು ಹಾಗೂ ವಿದ್ಯುತ್ ಪೂರೈಕೆ ಯೋಜನೆ ಜಾರಿ ಮಾಡುವ ಮೂಲಕ ಎಎಪಿ ಮೂರನೇ ಬಾರಿಗೆ ದೆಹಲಿಯ ಅಧಿಕಾರವನ್ನು ಪಡೆದುಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು