ಕೋಲ್ಕತ್ತ: ಅಕ್ರಮವಾಗಿ ಸಾಗಿಸುತ್ತಿದ್ದ ಸಿಂಹದ ಮರಿ ಹಾಗೂ ಮೂರು ಅಪರೂಪದ ಮುಜುಗಳನ್ನು(ಲಂಗೂರ್)ವನ್ಯಜೀವಿ ಅಪರಾಧ ತಡೆ ಸಂಸ್ಥೆ(ಡಬ್ಲ್ಯೂಸಿಸಿಬಿ) ಅಧಿಕಾರಿಗಳು ಹಾಗೂ ಪಶ್ಚಿಮ ಬಂಗಾಳ ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಕೋಲ್ಕತ್ತದಲ್ಲಿ ವಶಕ್ಕೆ ಪಡೆದಿದ್ದಾರೆ.
ಬೋಂಗಾಂ ಪ್ರದೇಶದಲ್ಲಿ ಬಾಂಗ್ಲಾದೇಶದ ಗಡಿ ಮುಖಾಂತರ ಪಾಶ್ಚಿಮಾತ್ಯ ರಾಷ್ಟ್ರಕ್ಕೆ ಇವುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿಡಬ್ಲ್ಯೂಸಿಸಿಬಿ ಅಧಿಕಾರಿಗಳು ಗಡಿ ಪ್ರದೇಶದಲ್ಲಿ ಹಾಗೂ ಬೆಲ್ಗಾರಿಯಾ ಎಕ್ಸ್‌ಪ್ರೆಸ್ ವೇನಲ್ಲಿ ತಪಾಸಣೆ ನಡೆಸಿದ್ದರು. ಶನಿವಾರ ಮುಂಜಾನೆ ಎಕ್ಸ್‌ಪ್ರೆಸ್ ವೇನಲ್ಲಿ ಸಂಶಯಾಸ್ಪದ ವಾಹನವನ್ನು ಬೆನ್ನಟ್ಟಿ ಹಿಡಿದ ಜಂಟಿ ತಂಡದ ಅಧಿಕಾರಿಗಳು ವನ್ಯಜೀವಿಗಳನ್ನು ರಕ್ಷಿಸಿದ್ದಾರೆ. ವಾಹನದಲ್ಲಿದ್ದ ವಾಸಿಮ್ ರೆಹ್‌ಮಾನ್(29), ವಾಜಿದ್ ಅಲಿ(36) ಮತ್ತು ಗುಲಾಲ್ ಗೌಸ್‌ನನ್ನು(27)ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಸಿಂಹದ ಮರಿಯನ್ನು ಚೀಲದಲ್ಲಿ ತುಂಬಿ ಬೋನಿನಲ್ಲಿ ಇರಿಸಲಾಗಿತ್ತು. ಇವುಗಳನ್ನು ಸಾಗಿಸುತ್ತಿದ್ದವರಿಗೆ ಎಲ್ಲಿಗೆ ಒಯ್ಯುತ್ತಿದ್ದಾರೆ ಎಂಬ ಮಾಹಿತಿ ಇಲ್ಲ. ಫೋನ್ ಮುಖಾಂತರ ಇಂತಹವರಿಗೆ ಒಪ್ಪಿಸಬೇಕು ಎಂದಷ್ಟೇ ಸೂಚಿಸಲಾಗಿದೆ.
ಇದರ ಹಿಂದೆ ಅಂತರ್‌ರಾಷ್ಟ್ರೀಯ ಮಟ್ಟದ ಕಳ್ಳಸಾಗಣೆದಾರರಿದ್ದಾರೆ ಎನ್ನುವ ಸಂಶಯವಿದೆ. ತಂಡದ ಇತರರನ್ನು ಬಂಧಿಸಲು ತನಿಖೆ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.