ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ಪ್ರದೇಶ: ಮದ್ಯದ ದರ ಶೇ 75ರಷ್ಟು ಏರಿಕೆ, ಮದ್ಯ ಪ್ರಿಯರಿಗೆ ಬಿಸಿ ತುಪ್ಪ!

Last Updated 5 ಮೇ 2020, 11:57 IST
ಅಕ್ಷರ ಗಾತ್ರ

ಅಮರಾವತಿ: ಆಂಧ್ರ ಪ್ರದೇಶ ಸರ್ಕಾರ ಮಂಗಳವಾರ ಮದ್ಯಗಳ ದರವನ್ನು ಶೇ 50ರಷ್ಟು ಏರಿಕೆ ಮಾಡಿದ್ದು, ಈ ಮೂಲಕ ಮದ್ಯದ ಬೆಲೆ ಶೇ 75ರಷ್ಟು ಹೆಚ್ಚಳವಾದಂತಾಗಿದೆ.

ದೇಶದಾದ್ಯಂತ ಮೂರನೇ ಹಂತದ ಲಾಕ್‌ಡೌನ್‌ ಜಾರಿಯಾಗುವ ಜತೆಗೆ ಸಡಿಲಿಕೆಯ ಭಾಗವಾಗಿ ಸೋಮವಾರದಿಂದ ಮದ್ಯ ಮಾರಾಟ ಮಳಿಗೆಗಳು ತೆರೆದಿವೆ. ಮದ್ಯದ ದರ ಶೇ 25ರಷ್ಟು ಏರಿಕೆ ಮಾಡಿದ್ದ ಆಂಧ್ರ ಪ್ರದೇಶ ಸರ್ಕಾರ, ಮಂಗಳವಾರ ಮತ್ತೆ ಶೇ 50ರಷ್ಟು ದರ ಹೆಚ್ಚಳ ಪ್ರಕಟಿಸಿದೆ.

ಮದ್ಯ ಸೇವನೆ ತಗ್ಗಿಸುವುದು ಹಾಗೂ ಆರೋಗ್ಯ ಸುರಕ್ಷತೆಯ ನಿಟ್ಟಿನಲ್ಲಿ ಸರ್ಕಾರ ದರ ಏರಿಕೆ ನಿರ್ಧಾರ ಕೈಗೊಂಡಿದೆ ಎಂದು ವಿಶೇಷ ಮುಖ್ಯ ಕಾರ್ಯದರ್ಶಿ (ಕಂದಾಯ) ರಜತ್‌ ಭಾರ್ಗವಾ ಹೇಳಿದ್ದಾರೆ. ಸರ್ಕಾರ ನಿರ್ವಹಿಸುತ್ತಿರುವ ಮದ್ಯ ಮಳಿಗೆಗಳು ಬೆಳಿಗ್ಗೆ 11ರ ಬದಲು ಮಧ್ಯಾಹ್ನ 12ರಿಂದ ತೆರೆಯಲು ಕ್ರಮಕೈಗೊಳ್ಳಲಾಗಿದೆ. ರಾತ್ರಿ 7ರ ವರೆಗೂ ಮದ್ಯ ಮಾರಾಟ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ.

ಸರ್ಕಾರಿ ಸ್ವಾಮ್ಯದ ಒಟ್ಟು 3,468 ರಿಟೇಲ್‌ ಮದ್ಯ ಮಾರಾಟ ಮಳಿಗೆಗಳ ಪೈಕಿ 2,345 ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಕೊರೊನಾ ಹಾಟ್‌ಸ್ಪಾಟ್‌ ಆಗಿರುವ ಕರ್ನೂಲ್‌, ಗುಂಟೂರ್ ಹಾಗೂ ಕೃಷ್ಣದಲ್ಲೂ ಕೆಲವು ಮಳಿಗೆಗಳು ತೆರೆದಿವೆ. ಮಳಿಗೆಗಳು ತೆರೆಯುತ್ತಿದ್ದಂತೆ ಅಂತರ ಕಾಯ್ದುಕೊಳ್ಳುವುದನ್ನೂ ಮರೆತ ಜನರು ನೂಕು–ನುಗ್ಗಲು ನಡೆಸಿದರು.

ಮದ್ಯದ ಮಳಿಗೆಗಳು ತೆರೆದಿರುವ ದೇಶದ ಎಲ್ಲ ಭಾಗಗಳಲ್ಲಿಯೂ ಜನರು ಸಾಲುಗಟ್ಟಿರುವ ದೃಶ್ಯ ಸಾಮಾನ್ಯವಾಗಿದೆ. ಅಂಥ ಘಟನೆಗಳಿಂದಾಗಿ ಸೋಮವಾರ ಎಚ್ಚೆತ್ತುಕೊಂಡ ದೆಹಲಿ ಸರ್ಕಾರ, ಜನಸಂದಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶೇಷ ಕೊರೊನಾ ಶುಲ್ಕದ ಹೆಸರಿನಲ್ಲಿ ಶೇ 70ರಷ್ಟು ತೆರಿಗೆ ವಿಧಿಸಿರುವ ನಿರ್ಧಾರ ಪ್ರಕಟಿಸಿತು.

ಮದ್ಯಗಳ ಗರಿಷ್ಠ ಮಾರಾಟ ಬೆಲೆಯ ಮೇಲೆ ಶೇ 70ರಷ್ಟು ತೆರಿಗೆ ವಿಧಿಸಿರುವುದರಿಂದ ರಿಟೇಲ್‌ ಮದ್ಯದ ದರ ಭಾರೀ ಏರಿಕೆಯಾದಂತಾಗಿದೆ. ಇದರಿಂದಾಗಿ ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಸರ್ಕಾರಕ್ಕೆ ಸ್ಪಲ್ಪ ಮಟ್ಟಿನ ಆದಾಯ ಸಂದಾಯವಾದಂತಾಗುತ್ತದೆ.

ವಿಧಿಸಲಾಗಿರುವ ತೆರಿಗೆ ಅನ್ವಯ ಉದಾಹರಿಸುವುದಾದರೆ; ₹1,000 ಗರಿಷ್ಠ ಮಾರಾಟ ಬೆಲೆಯ ಮದ್ಯಕ್ಕೆ ದೆಹಲಿಯಲ್ಲಿ ₹1,700 ಕೊಟ್ಟು ಖರೀದಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT