ಮಂಗಳವಾರ, ನವೆಂಬರ್ 19, 2019
29 °C

ರಾಜಕೀಯ ಚಿತ್ರಣ ಬದಲಿಸಿದ ಅಡ್ವಾಣಿ ಬಂಧನ

Published:
Updated:
Prajavani

ಪಟ್ನಾ: 1990ರ ಮಾರ್ಚ್‌ನಲ್ಲಿ ಮೊದಲ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಲಾಲು ಪ್ರಸಾದ್‌ ಅವರು ಅಧಿಕಾರ ವಹಿಸಿಕೊಂಡಿದ್ದರು. ಅದಾಗಿ ಏಳೇ ತಿಂಗಳಲ್ಲಿ, ಪಕ್ಷುಬ್ಧ ಸಂದರ್ಭಗಳಲ್ಲಿ ಅನುಭವಿ ರಾಜಕಾರಣಿಗಳು ಕೂಡ ತೆಗೆದುಕೊಳ್ಳಲು ಹಿಂಜರಿಯುವ ನಿರ್ಧಾರವೊಂದನ್ನು ತೆಗೆದುಕೊಂಡರು. ಆದರೆ, ಈ ನಿರ್ಧಾರ ಭಾರತದ ರಾಜಕಾರಣದ ಚಿತ್ರಣ ಬದಲಿಸುವಲ್ಲಿ ವಹಿಸಿದ ಪಾತ್ರ ಬಹಳ ದೊಡ್ಡದು. 

1990ರ ಅಕ್ಟೋಬರ್‌ 23ರಂದು ಲಾಲು ಅವರು ಆಗಿನ ಪ್ರಧಾನಿ ವಿ.ಪಿ.ಸಿಂಗ್‌ ಅವರಿಗೆ ಕರೆಮಾಡಿ, ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರನ್ನು ಬಂಧಿಸುವ ವಿಚಾರದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡರು. ಅಡ್ವಾಣಿ ಅವರು ಆಗ, ರಥಯಾತ್ರೆಯ ಮೂಲಕ ರಾಮಮಂದಿರ ಚಳವಳಿಯ ಮುಂಚೂಣಿಯಲ್ಲಿದ್ದರು. ಅವರ ಹವಾನಿಯಂತ್ರಿತ ರಥ ಬಿಹಾರ ಪ್ರವೇಶಿಸಿತ್ತು. ಅವರ ನೆಚ್ಚಿನ ಪ್ರಮೋದ್‌ ಮಹಾಜನ್‌ ಜತೆಗಿದ್ದರು. 

ಅಡ್ವಾಣಿ ಅವರನ್ನು ವಶಕ್ಕೆ ಪಡೆದು ಮಸನ್‌ಜೋರ್‌ ಎಂಬ ರಮಣೀಯ ಸ್ಥಳದಲ್ಲಿರುವ ಅತಿಥಿಗೃಹದಲ್ಲಿ ಇರಿಸುವಂತೆ ಲಾಲು ಅವರು ಸಮಷ್ಟಿಪುರದ ಜಿಲ್ಲಾಧಿಕಾರಿಯಾಗಿದ್ದ ಆರ್‌.ಕೆ.ಸಿಂಗ್‌ಗೆ ಸೂಚಿಸಿದರು. ಅಡ್ವಾಣಿ ಮತ್ತು ಮಹಾಜನ್‌ ಅವರನ್ನು ಮಸನ್‌ಜೋರ್‌ಗೆ ಕರೆತರಲು ಹೆಲಿಕಾಪ್ಟರ್‌ ಸಿದ್ಧವಾಗಿ ಇರಿಸಲಾಗಿತ್ತು. 

ಅಡ್ವಾಣಿ ಅವರನ್ನು ವಶಕ್ಕೆ ಪಡೆಯಲಾಗುತ್ತದೆ ಎಂಬ ಸುದ್ದಿಯು ಕಾಳ್ಗಿಚ್ಚಿನಂತೆ ದೇಶದಾದ್ಯಂತ ವ್ಯಾಪಿಸಿತು. ಕರಸೇವಕರು ಆಕ್ರೋಶಗೊಂಡರು. ದೇಶದ ಕೋಮು ಸಾಮರಸ್ಯ ಹದಗೆಡುವ ಭೀತಿ ಎದುರಾಯಿತು. 

ಬಿಜೆಪಿ, ವಿಶ್ವ ಹಿಂದೂ ಪರಿಷತ್‌ ಮತ್ತು ಇತರ ಹಿಂದುತ್ವವಾದಿ ಸಂಘಟನೆಗಳ ಬೆದರಿಕೆಗೆ ಲಾಲು ಜಗ್ಗಲಿಲ್ಲ. ತಮಗೆ ಒಪ್ಪಿಸಿದ್ದ ಕೆಲಸವನ್ನು ಆರ್‌.ಕೆ.ಸಿಂಗ್‌ ಅವರು ಅಚ್ಚುಕಟ್ಟಾಗಿ ಮುಗಿಸಿದರು. ಅಡ್ವಾಣಿ ಮತ್ತು ಮಹಾಜನ್‌ ಅವರನ್ನು ವಶಕ್ಕೆ ಪಡೆದರು (ಆರ್‌.ಕೆ.ಸಿಂಗ್‌ ಅವರು ನರೇಂದ್ರ ಮೋದಿ ನೇತೃತ್ವದ ಸಂಪುಟದಲ್ಲಿ ಸಚಿವರಾಗುವ ಮೊದಲು, ಕೇಂದ್ರ ಗೃಹ ಕಾರ್ಯದರ್ಶಿಯೂ ಆಗಿದ್ದರು). 

ಆಗ ಜಲಸಂಪನ್ಮೂಲ ಇಲಾಖೆಯ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಆಗಿದ್ದ ಪಿ.ಸಿ. ಚೌಧರಿ ಅವರು ಆ ದಿನಗಳನ್ನು ನೆನಪಿಸಿಕೊಂಡದ್ದು ಹೀಗೆ: ‘ಆಗ ಜಲಸಂಪನ್ಮೂಲ ಇಲಾಖೆಯಲ್ಲಿ ನನ್ನ ಸಹೋದ್ಯೋಗಿಗಳಾಗಿದ್ದ ಜೂನಿಯರ್‌ ಎಂಜಿನಿಯರ್‌ಗಳಿಂದ ಹಿಡಿದು ಹಿರಿಯ ಅಧಿಕಾರಿಗಳ ವರೆಗೆ ಎಲ್ಲರೂ ರಾತ್ರಿಯಿಡೀ ಕೆಲಸ ಮಾಡಿದ್ದೆವು. ಅಡ್ವಾಣಿ ಅವರನ್ನು ಗೃಹಬಂಧನದಲ್ಲಿ ಇರಿಸಲು ಗುರುತಿಸಲಾಗಿದ್ದ ಮಸನ್‌ಜೋರ್‌ ಐಬಿಯನ್ನು ನವೀಕರಿಸಲಾಯಿತು. ದುಮ್ಕಾದ ಜಿಲ್ಲಾಧಿಕಾರಿ ಮತ್ತು ಆರ್‌.ಕೆ.ಸಿಂಗ್‌ ಅವರು ಪ್ರತಿಯೊಂದು ವಿಚಾರದ ಮೇಲೆಯೂ ವೈಯಕ್ತಿಕ ಗಮನ ಇರಿಸಿದ್ದರು. ಯಾರಿಂದಾದರೂ ಯಾವುದೇ ಲೋಪ ಉಂಟಾದರೂ ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಅಡ್ವಾಣಿ ಮತ್ತು ಮಹಾಜನ್‌ ಅವರು ಕೆಲ ದಿನ ಮಸನ್‌ಜೋರ್‌ ಅತಿಥಿಗೃಹದಲ್ಲಿ ಇದ್ದರು’. 

ಅಡ್ವಾಣಿ ಬಂಧನದ ಘಟನೆಯನ್ನು ಕಾಂಗ್ರೆಸ್‌ ಮುಖಂಡ ಪ್ರೇಮ ಚಂದ್ರ ಮಿಶ್ರಾ ಅವರು ಹೀಗೆ ವಿಶ್ಲೇಷಿಸಿದ್ದಾರೆ: ‘ಅಡ್ವಾಣಿ ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅಟಲ್‌ ಬಿಹಾರಿ ವಾಜಪೇಯಿ ಅವರು ರಾಷ್ಟ್ರಪತಿ ಭವನಕ್ಕೆ ಧಾವಿಸಿ, ವಿ.ಪಿ.ಸಿಂಗ್‌ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದರು. ವರ್ಷ ತುಂಬುವ ಮೊದಲೇ ಸರ್ಕಾರ ಬಿತ್ತು. ಇದು ಮೂರು ಪರಿಣಾಮಗಳಿಗೆ ಕಾರಣವಾಯಿತು. ಮೊದಲನೆಯದಾಗಿ, ಇಡೀ ದೇಶದ ರಾಜಕೀಯ ಸಂವಾದದ ಚಿತ್ರಣವೇ ಬದಲಾಯಿತು. ಎರಡನೆಯದಾಗಿ, ಬಿಜೆಪಿ ಬಹಳ ಎತ್ತರಕ್ಕೆ ಬೆಳೆಯಿತು. ಮೂರನೆಯದಾಗಿ, ಲಾಲು ಅವರು ಮುಸ್ಲಿಂ ಸಮುದಾಯದ ರಕ್ಷಕ ಎಂಬ ಹೆಸರು ಪಡೆದುಕೊಂಡು, 15 ವರ್ಷ ಬಿಹಾರವನ್ನು ಆಳಿದರು’. 

ಈಗ, ಅಯೋಧ್ಯೆ ವಿವಾದದ ತೀರ್ಪು ಹೊರಬಿದ್ದಿದೆ. ರಾಮ ಮಂದಿರ ವಿವಾದದ ನಿಜವಾದ ನಾಯಕ ಅಡ್ವಾಣಿ ಅವರು ಬಲವಂತದ ನಿವೃತ್ತಿ ಜೀವನ ಅನುಭವಿಸುತ್ತಿದ್ದಾರೆ. ಅವರ ಬಂಧನಕ್ಕೆ ಅಂದು ಆದೇಶ ನೀಡಿದ್ದ ಲಾಲು ಅವರು ರಾಂಚಿ ಜೈಲಿನಲ್ಲಿದ್ದಾರೆ. 

ನ್ಯಾಯಮೂರ್ತಿಗಳಿಗೆ ಭಾರಿ ಭದ್ರತೆ
ನವದೆಹಲಿ (ಪಿಟಿಐ): ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದದ ತೀರ್ಪು ನೀಡಿದ ಸಂವಿಧಾನ ಪೀಠದಲ್ಲಿದ್ದ ಐವರು ನ್ಯಾಯಮೂರ್ತಿಗಳ ಭದ್ರತೆ ಹೆಚ್ಚಿಸಲಾಗಿದೆ.  

ನ್ಯಾಯಮೂರ್ತಿಗಳ ಮನೆಗಳ ಮುಂದೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ. ಅವರ ಮನೆಗಳಿಗೆ ಸಾಗುವ ಮಾರ್ಗಗಳಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ. ಪೀಠದಲ್ಲಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂರ್ತಿಗಳಾದ ಎಸ್‌.ಎ.ಬೊಬಡೆ, ಡಿ.ವೈ. ಚಂದ್ರಚೂಡ್‌, ಅಶೋಕ್‌ ಭೂಷಣ್‌ ಮತ್ತು ಎಸ್‌. ಅಬ್ದುಲ್‌ ನಜೀರ್‌ ಅವರಿಗೆ ಬೆಂಗಾವಲು ಪಡೆಗಳನ್ನೂ ಒದಗಿಸಲಾಗಿದೆ. 

ನ್ಯಾಯಮೂರ್ತಿಗಳಿಗೆ ಬೆಂಗಾವಲು ಪಡೆ ಒದಗಿಸುವ ಕ್ರಮ ಈವರೆಗೆ ಇರಲಿಲ್ಲ.

ಇದು ಮುನ್ನೆಚ್ಚರಿಕೆ ಕ್ರಮ ಮಾತ್ರ. ನ್ಯಾಯಮೂರ್ತಿಗಳಿಗೆ ಯಾವುದೇ ಬೆದರಿಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)