ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಕಾರ್ಮಿಕರಿಗೆ 1000 ಬಸ್: ಪ್ರಿಯಾಂಕಾ ವಾದ್ರಾ ಪಟ್ಟಿಯಲ್ಲಿ ಸ್ಕೂಟರ್, ಆಟೋ

ಉತ್ತರ ಪ್ರದೇಶ ಸರ್ಕಾರ ಆರೋಪ
Last Updated 20 ಮೇ 2020, 2:36 IST
ಅಕ್ಷರ ಗಾತ್ರ

ಲಖನೌ: ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಮರಳಿಸಲು 1000 ಬಸ್‌ಗಳನ್ನು ಕಳುಹಿಸಿಕೊಡುವುದಾಗಿ ಹೇಳಿರುವ ಕಾಂಗ್ರೆಸ್ ಅದಕ್ಕೆ ಸಂಬಂಧಿಸಿ ನೀಡಿರುವ ಪಟ್ಟಿಯಲ್ಲಿ ಆಟೊ, ಕಾರು, ದ್ವಿಚಕ್ರ ವಾಹನಗಳ ನೋಂದಣಿ ಸಂಖ್ಯೆ ಇವೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.

ಆದರೆ, ಇದನ್ನು ಅಲ್ಲಗಳೆದಿರುವ ಕಾಂಗ್ರೆಸ್, ಬಸ್‌ಗಳನ್ನು ಪರಿಶೀಲಿಸಿ ದೃಢೀಕರಿಸುವಂತೆ ಸರ್ಕಾರಕ್ಕೆ ಸವಾಲೆಸೆದಿದೆ. ಸರ್ಕಾರದ ಆರೋಪದ ವಿರುದ್ಧ ರಾಜ್ಯದ ಗಡಿ ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗಳನ್ನೂ ನಡೆಸಿದ್ದಾರೆ.

ಪಟ್ಟಿಯಲ್ಲಿರುವ 297 ಬಸ್‌ಗಳು ಫಿಟ್‌ನೆಸ್ ಪ್ರಮಾಣಪತ್ರ ಅಥವಾ ವಿಮೆ ಪತ್ರಗಳನ್ನು ಹೊಂದಿಲ್ಲ ಎಂದೂ ಸರ್ಕಾರ ಹೇಳಿದೆ.

ಇದರೊಂದಿಗೆ, ಬಸ್ ವಿಚಾರವಾಗಿ ಕಾಂಗ್ರೆಸ್ ನಾಯಕರ ಮತ್ತು ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ಮಧ್ಯೆ ವಾಕ್ಸಮರ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ನ ಉತ್ತರ ಪ್ರದೇಶ ಘಟಕದ ಮುಖ್ಯಸ್ಥ ಅಜಯ್ ಕುಮಾರ್ ಲಾಲ್ಲು ಮತ್ತು ಪಕ್ಷದ ಕಾರ್ಯಕರ್ತರು ಆಗ್ರಾ ಗಡಿ ಪ್ರದೇಶಕ್ಕೆ ತೆರಳಿ ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿದ್ದಾರೆ. ಸರ್ಕಾರದ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಅಜಯ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು ಆಗ್ರಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ.

ಕಾಂಗ್ರೆಸ್ ಮೂಲಗಳ ಪ್ರಕಾರ, ಹೆಚ್ಚಿನ ಬಸ್‌ಗಳು ರಾಜಸ್ಥಾನ–ಉತ್ತರ ಪ್ರದೇಶ ಗಡಿಯಲ್ಲಿ ರಾಜ್ಯ ಪ್ರವೇಶಿಸಲು ಸರ್ಕಾರದ ಅನುಮತಿಗಾಗಿ ಕಾಯುತ್ತಿವೆ.

ಈ ಮಧ್ಯೆ, ‘ಅರ್ಹತೆ ಪಡೆದಿದೆ ಎಂದು ಪರಿಗಣಿಸಲಾಗಿರುವ ಬಸ್‌ಗಳು ರಾಜ್ಯ ಪ್ರವೇಶಿಸಲು ಅನುಮತಿ ನೀಡಬೇಕು’ ಎಂದು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ಎಲ್ಲೆಗಳನ್ನು ಮೀರಿ ವರ್ತಿಸುತ್ತಿದೆ. ಕೊರೊನಾ ವೈರಸ್ ಲಾಕ್‌ಡೌನ್‌ ವೇಳೆ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರನ್ನು ಕರೆತರುವ ಪ್ರಯತ್ನಕ್ಕೆ ಅಡ್ಡಿಯುಂಟುಮಾಡುತ್ತಿದೆ ಎಂದೂ ಪ್ರಿಯಾಂಕಾ ದೂರಿದ್ದಾರೆ.

ಬಸ್‌ಗಳಲ್ಲಿ ಬಿಜೆಪಿ ಬ್ಯಾನರ್‌ಗಳನ್ನು ಹಾಕಬೇಕು ಎಂದು ಯೋಗಿ ಆದಿತ್ಯನಾಥ್ ಸರ್ಕಾರ ಬಯಸುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.

ಏನಿದು ಪ್ರಕರಣ?: ಕೋವಿಡ್‌–19 ಲಾಕ್‌ಡೌನ್‌ನಿಂದ ವಿವಿಧ ಕಡೆ ಸಿಲುಕಿರುವ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು 1,000 ಬಸ್‌ ವ್ಯವಸ್ಥೆ ಮಾಡುವುದಾಗಿ ಪ್ರಿಯಾಂಕಾ ಗಾಂಧಿ ಹೇಳಿದ್ದರು. ಪ್ರಿಯಾಂಕಾ ಅವರು ಸಲ್ಲಿಸಿರುವ ಪ್ರಸ್ತಾಪವನ್ನು ಸರ್ಕಾರ ಒಪ್ಪಿರುವುದಾಗಿ ಉತ್ತರ ಪ್ರದೇಶ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್‌ ಅವಸ್ಥಿ ಪ್ರಿಯಾಂಕಾ ಅವರ ಆಪ್ತ ಕಾರ್ಯದರ್ಶಿಗೆ ತಿಳಿಸಿದ್ದರು. ಜತೆಗೆ 1,000 ಬಸ್‌ಗಳನ್ನು ಚಾಲನೆ ಮಾಡುವ ಚಾಲಕರ ಹೆಸರು ಹಾಗೂ ಇತರೆ ವಿವರಗಳನ್ನು ನೀಡುವಂತೆ ಕೋರಿದ್ದರು.

ಇದಾದ ಬಳಿಕ, ಗಡಿ ಭಾಗದಲ್ಲಿ ರಾಜ್ಯ ಪ್ರವೇಶಿಸಲು ಸಿದ್ಧವಿರುವ ಬಸ್‌ಗಳಿಗೆ ಸರ್ಕಾರದ ಕಡೆಯಿಂದ ಅನುಮತಿ ದೊರೆಯುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇದರ ಬೆನ್ನಲ್ಲೇ ಸರ್ಕಾರವೂ ನೋಂದಣಿ ವಿಚಾರವಾಗಿ ಪ್ರತ್ಯಾರೋಪ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT