ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಪರಿಣಾಮ: ಚಿಕಿತ್ಸೆಗಾಗಿ 140 ಕಿ.ಮೀ ಸೈಕಲ್‌ ಸವಾರಿ

ಕ್ಯಾನ್ಸರ್‌ಪೀಡಿತ ಪತ್ನಿಗಾಗಿ ಕುಂಭಕೋಣಂನಿಂದ ಪುದುಚೇರಿಗೆ ಪ್ರಯಾಣ
Last Updated 11 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಚೆನ್ನೈ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪತ್ನಿಗೆ ಮಾತ್ರೆ ತರುವ ಸಲುವಾಗಿ58 ವರ್ಷದ ಪತಿ, ಪತ್ನಿಯೊಂದಿಗೆ 140 ಕಿ.ಮೀ ದೂರದ ಆಸ್ಪತ್ರೆಗೆ ಸೈಕಲ್‌ನಲ್ಲಿ ಸವಾರಿ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ರಾಷ್ಟ್ರದಾದ್ಯಂತ ಲಾಕ್‌ಡೌನ್‌ ಸ್ಥಿತಿ ಇರುವುದರಿಂದ ಆಸ್ಪತ್ರೆಗೆ ತೆರಳಲು ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ. ಟ್ಯಾಕ್ಸಿಯಲ್ಲಿ ಹೋಗಲು ಕೈಯಲ್ಲಿ ದುಡ್ಡಿಲ್ಲ. ಇಂಥ ಸಂದರ್ಭದಲ್ಲಿ ಕೂಲಿ ಕಾರ್ಮಿಕ ಅರಿವಳಗನ್‌ ಅವರಿಗೆ ನೆರವಿಗೆ ಬಂದಿದ್ದು ಎರಡು ಚಕ್ರದ ಸೈಕಲ್‌.

ಕಾವೇರಿ ನದಿ ತೀರ ಪ್ರದೇಶದಲ್ಲಿರುವ ಕುಂಭಕೋಣಂನಿಂದ 140 ಕಿ.ಮೀ ದೂರದಲ್ಲಿರುವ ಪುದುಚೇರಿಗೆ ತೆರಳಿ, ಜವಾಹರಲಾಲ್‌ ನೆಹರೂ ಸ್ನಾತಕೋತ್ತರ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ (ಜೆಐಪಿಎಂಇಆರ್‌) ಆಸ್ಪತ್ರೆ ತಲುಪಿದರು.

ಮಂಜುಳಾ ಅವರು ಕಳೆದ ಐದು ತಿಂಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮಾರ್ಚ್‌ 31ಕ್ಕೆ ಆರೋಗ್ಯ ತಪಾಸಣೆಗೆಂದು ನಿಗದಿ ಮಾಡಿದ್ದರು. ಆದರೆ, ಚಿಕಿತ್ಸೆಗೆ ಬರಲು ಸಾರಿಗೆ ವ್ಯವಸ್ಥೆ ಇರಲಿಲ್ಲ. ಇದಾವೂದಕ್ಕೂ ತಲೆ ಕೆಡಿಸಿಕೊಳ್ಳದ ಪತಿ ಅರಿವಳಗನ್‌, ಪತ್ನಿಗಾಗಿ ಸುಮಾರು 17 ತಾಸುಗಳ ಕಾಲ ಸವಾರಿ ಮಾಡಿ, ನೋಡುಗರ ಹೃದಯವನ್ನು ಆರ್ದ್ರಗೊಳಿಸಿದರು.

ಈ ಸವಾರಿಯ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅರಿವಳಗನ್‌, ‘ಸೈಕಲ್‌ನಲ್ಲಿ ಹೊರಟರೆ ಒಂದು ದಿನ ಬೇಕಾಗುತ್ತದೆ ಎಂಬುದರ ಬಗ್ಗೆಯೂ ನನಗೆ ಅರಿವಿರಲಿಲ್ಲ. ನನ್ನ ಹೆಂಡತಿ ಮಾತ್ರೆಯಿಲ್ಲದೇ ನೋವಿನಿಂದ ನರಳಾಡುವುದನ್ನು ನೋಡಲು ಆಗುತ್ತಿರಲಿಲ್ಲ. ಹಾಗಾಗಿ ಬೆಳಗಿನ ಜಾವ ಐದು ಗಂಟೆಗೆ ಸವಾರಿ ಆರಂಭಿಸಿದೆವು’ ಎಂದು ಮುಗ್ಧತೆಯಿಂದ ನುಡಿದರು.‘ಸವಾರಿಯ ಮಧ್ಯೆ ಎರಡು ಗಂಟೆಗಳ ಕಾಲ ವಿಶ್ರಾಂತಿ ಪಡೆದುಕೊಂಡೆವು. ರಾತ್ರಿ 10.30ರ ಸುಮಾರಿಗೆ ಆಸ್ಪತ್ರೆ ತಲುಪಿದೆವು. ಸೈಕಲ್‌ನಲ್ಲಿಯೇ ಕುಂಭಕೋಣಂನಿಂದ ಸವಾರಿ ಮಾಡಿರುವುದನ್ನು ಕೇಳಿ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಹೌಹಾರಿದರು’ ಎಂದು ಹೇಳಿದರು.

ಮಂಜುಳಾ ಅವರನ್ನು ತಪಾಸಣೆ ಮಾಡಿದ ವೈದ್ಯರು, ಒಂದು ತಿಂಗಳಿಗಾಗುವಷ್ಟು ಮಾತ್ರೆ ಹಾಗೂ ಔಷಧಿಯನ್ನು ನೀಡಿದರು. ವೈದ್ಯರು, ಇಬ್ಬರಿಗೆ ಊಟ ನೀಡಿದ್ದಲ್ಲದೇ, ₹ 8,000 ನೀಡಿ, ಆಂಬುಲೆನ್ಸ್‌ನಲ್ಲಿಯೇ ಕುಂಭಕೋಣಂನಲ್ಲಿರುವ ಮನೆಗೆ ಕಳಿಸುವ ಮೂಲಕ ಮಾನವೀಯತೆ ಮೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT