ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾಮತ’ಕ್ಕೆ ಮುಹೂರ್ತ: 7 ಹಂತಗಳಲ್ಲಿ ಚುನಾವಣೆ, ಮೇ 23ರಂದು ಫಲಿತಾಂಶ

ಲೋಕಸಭೆ ಚುನಾವಾಣೆ
Last Updated 10 ಮಾರ್ಚ್ 2019, 19:46 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯ ಒಟ್ಟು 543ಕ್ಷೇತ್ರಗಳ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಏಪ್ರಿಲ್‌ 11 ರಿಂದ ಮೇ 19ರವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

ತಕ್ಷಣದಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರಾ ಭಾನುವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

2019ರ ಜೂನ್‌ 3ರಂದು 16ನೇ ಲೋಕಸಭೆಯ ಅವಧಿ ಪೂರ್ಣಗೊಳ್ಳಲಿದ್ದು, ಅಷ್ಟರೊಳಗೆ 17ನೇ ಲೋಕಸಭೆ ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 28 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಏಪ್ರಿಲ್‌ 18ರಂದು, ಇನ್ನುಳಿದ 14 ಕ್ಷೇತ್ರಗಳಿಗೆ ದ್ವಿತೀಯ ಹಂತದಲ್ಲಿ ಏಪ್ರಿಲ್‌ 23ರಂದು ಮತದಾನ ನಿಗದಿಯಾಗಿದೆ.

ಏಳು ಕೇಂದ್ರಾಡಳಿತ ಪ್ರದೇಶಗಳು ಮತ್ತು 15 ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದ ಜೊತೆ ಮಣಿಪುರ, ರಾಜಸ್ಥಾನ ಮತ್ತು ತ್ರಿಪುರಾಗಳಲ್ಲೂ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಅಸ್ಸಾಂ, ಛತ್ತೀಸಗಡಗಳಲ್ಲಿ ಮೂರು ಹಂತ, ಜಾರ್ಖಂಡ್‌, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಒಡಿಶಾಗಳಲ್ಲಿ ನಾಲ್ಕು ಹಂತ, ಜಮ್ಮು ಮತ್ತು ಕಾಶ್ಮೀರದಲ್ಲಿ 5 ಹಂತ ಹಾಗೂ ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.

ಆಂಧ್ರ ಪ್ರದೇಶ, ಸಿಕ್ಕಿಂ, ಒಡಿಶಾ ಮತ್ತು ಅರುಣಾಚಲ ಪ್ರದೇಶಗಳ ವಿಧಾನಸಭೆ ಚುನಾವಣೆ ಹಾಗೂ ಕೆಲವು ರಾಜ್ಯಗಳಲ್ಲಿ ತೆರವಾಗಿರುವ 34 ವಿಧಾನಸಭೆ ಕ್ಷೇತ್ರಗಳಿಗೆ ಲೋಕಸಭೆ ಚುನಾವಣೆಯಂದೇ ಮತದಾನ ನಡೆಯಲಿದೆ.

ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಯನ್ನು ಆಯೋಜಿಸುವ ದೃಷ್ಟಿಯಿಂದ ವಿವಿಧ ರಾಜ್ಯಗಳಲ್ಲಿ ಒಂದಕ್ಕಿಂತ ಅಧಿಕ ಹಂತದ ಮತದಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರ ಹಿತರಕ್ಷಣೆ ಉದ್ದೇಶದಿಂದ ಭದ್ರತೆಯನ್ನು ಒದಗಿಸುವ ಸಿಬ್ಬಂದಿಯನ್ನು ಬಳಸಿಕೊಳ್ಳುವುದಕ್ಕಾಗಿ ಮತದಾನದ ಹಂತಗಳನ್ನು ವಿಸ್ತರಿಸಲಾಗಿದೆ ಎಂದು ಅರೋರಾ ತಿಳಿಸಿದರು.

ದೇಶದಾದ್ಯಂತ 10.35 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಅಂದಾಜು 90 ಕೋಟಿ ಮತದಾರರು ನೋಂದಣಿ ಮಾಡಿಸಿಕೊಂಡಿದ್ದಾರೆ. ಎಲ್ಲ ಮತಗಟ್ಟೆಗಳಲ್ಲೂ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಹಾಗೂ ವಿ.ವಿ. ಪ್ಯಾಟ್‌ ಬಳಕೆಗೆ ಆದ್ಯತೆ ನೀಡಲಾಗಿದೆ.

ಆಯಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಅವಕಾಶ ನೀಡಲಾಗುತ್ತದೆ. ಈ ಬಾರಿ ದೇಶದಲ್ಲಿ 8.40 ಕೋಟಿ ಯುವ ಮತದಾರರು ಹೊಸದಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರೇ ಖುದ್ದಾಗಿ ದೂರು ನೀಡಲು ಅವಕಾಶ ನೀಡಲಾಗಿದೆ. ಟೋಲ್‌ ಫ್ರೀ ದೂರವಾಣಿ ಸಂಖ್ಯೆ 1950ಗೆ ಕರೆ ಮಾಡುವ ಮೂಲಕ ಈ ಕುರಿತು ದೂರು ನೀಡಬಹುದಾಗಿದೆ.

ಇತ್ತೀಚೆಗೆ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಂ ಮತ್ತು ಛತ್ತೀಸಗಢ ವಿಧಾನಸಭೆಗಳಿಗೆ ಚುನಾವಣೆ ನಡೆದ ಸಂದರ್ಭ ಒಟ್ಟು 26,000 ಜನ ನೀತಿ ಸಂಹಿತೆ ಉಲ್ಲಂಘನೆ ಮತ್ತು ಮತದಾರರಿಗೆ ಆಮಿಷ ಒಡ್ಡುವ ಪ್ರಕರಣಗಳ ಕುರಿತು ಖುದ್ದಾಗಿ ದೂರು ನೀಡಿ, ಚುನಾವಣಾ ಅಕ್ರಮ ಬಯಲಿಗೆ ಎಳೆದಿದ್ದರು.

ಚುನಾವಣಾ ಆಯುಕ್ತರಾದ ಅಶೋಕ ಲವಾಸಾ, ಸುಶೀಲ್‌ ಚಂದ್ರ ಹಾಜರಿದ್ದರು.

ಸೇನಾ ಸಮವಸ್ತ್ರ ಬಳಸದಂತೆ ಸೂಚನೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಘಟನೆಗಳು, ಭಾರತೀಯ ಪಡೆಗಳ ಪ್ರತಿದಾಳಿಯಂತಹ ಬೆಳವಣಿಗೆಗಳು ದಾಖಲಾಗಿರುವ ಕಾರಣ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷ ಮತ್ತು ಅಭ್ಯರ್ಥಿಗಳು ಪ್ರಚಾರದ ಸಂದರ್ಭ ಸೇನಾ ಸಮವಸ್ತ್ರ ಮತ್ತು ಸೇನೆಗೆ ಬಳಸದಂತೆ ಚುನಾವಣಾ ಆಯೋಗ ಸೂಚಿಸಿದೆ.

ಪ್ರಚಾರದ ವೇಳೆ ಮಿಲಿಟರಿ ಸಮವಸ್ತ್ರ, ಲಾಂಛನಗಳು– ಪದಕಗಳ ಧರಿಸುವಿಕೆ, ಯೋಧರ ವೇಷ ತೊಡುವ ಮೂಲಕ ದುರ್ಬಳಕೆ ಮಾಡಿಕೊಳ್ಳದಂತೆ ತಡೆಯಲು ಈ ಸೂಚನೆ ನೀಡಲಾಗಿದೆ.

ಕಾಶ್ಮೀರದ ಪುಲ್ವಾಮಾದಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿಯಲ್ಲಿ ಸಿಆರ್‌ಪಿಎಫ್‌ ಯೋಧರು ಹುತಾತ್ಮರಾದ ಘಟನೆ, ನಂತರದ ಬಾಲಾಕೋಟ್‌ ಉಗ್ರರ ನೆಲೆಯ ಮೇಲೆ ನಡೆದ ಭಾರತೀಯ ವಾಯುಪಡೆಯ ದಾಳಿ ಹಾಗೂ ವಾಯುಪಡೆಯ ಪೈಲಟ್‌ ಅಭಿನಂದನ್‌ ಅವರ ಸುರಕ್ಷಿತ ಹಸ್ತಾಂತರ ಪ್ರಕರಣಗಳು ನಡೆದಿರುವುದರಿಂದ ಸೇನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳದಂತೆ ಆಯೋಗ ಶನಿವಾರವೇ ಸೂಚಿಸಿತ್ತು.

ಕಾಶ್ಮೀರ: ಲೋಕಸಭೆಗೆ ಮಾತ್ರ ಚುನಾವಣೆ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಒಟ್ಟು 6 ಲೋಕಸಭೆ ಕ್ಷೇತ್ರಗಳಿಗೆ 5 ಹಂತಗಳಲ್ಲಿ ಮತದಾನ ನಡೆಯಲಿದೆ. ಆ ಪೈಕಿ ಅತ್ಯಂತ ಸೂಕ್ಷ್ಮ ಅನಂತನಾಗ್‌ ಕ್ಷೇತ್ರವೊಂದಕ್ಕೆ ಮೂರು ಹಂತಗಳ ಮತದಾನ ಪ್ರಕ್ರಿಯೆ ನಡೆಯಲಿರುವುದು ವಿಶೇಷ.

ಆದರೆ, ಭದ್ರತೆಯ ದೃಷ್ಟಿಯಿಂದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಚುನಾವಣೆಯನ್ನು ಸದ್ಯಕ್ಕೆ ನಡೆಸುವುದು ಅಪಾಯಕಾರಿ ಎಂದು ಆಯೋಗ ಪರಿಗಣಿಸಿದೆ. ಪುಲ್ವಾಮಾದಲ್ಲಿ ನಡೆದಿರುವ ಉಗ್ರರ ದಾಳಿ ಮತ್ತು ಇತ್ತೀಚಿನ ಬೆಳವಣಿಗೆಗಳನ್ನು ಅವಲೋಕಿಸಿ, ಚುನಾವಣೆ ಆಯೋಜಿಸಲಾಗುತ್ತಿಲ್ಲ ಎಂದು ಸುನಿಲ್‌ ಅರೋರಾ ಹೇಳಿದರು.

ಕಾಶ್ಮೀರ ರಾಜ್ಯ ಸರ್ಕಾರ, ಪೊಲೀಸ್‌ ಮತ್ತು ಸೇನಾಪಡೆಯ ಸಿಬ್ಬಂದಿಯೊಂದಿಗೆ ಹಲವು ಹಂತಗಳ ಮಾತುಕತೆ ನಡೆಸಿದ ಬಳಿಕ ಅಭ್ಯರ್ಥಿಗಳ ಮತ್ತು ಮತದಾರರಿಗೆ ಅಪಾಯ ಎದುರಾಗುವ ಸಾದ್ಯತೆಗಳಿರುವುದು ಖಚಿತವಾಗಿದೆ. ಈ ಕಾರಣದಿಂದಲೇ ಚುನಾವಣೆಯನ್ನು ಸದ್ಯಕ್ಕೆ ನಡೆಸಲಾಗುತ್ತಿಲ್ಲ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಎರಡು ಹಂತ
ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ನಡೆಯಲಿರುವ 14 ಕ್ಷೇತ್ರಗಳ ಚುನಾವಣೆಗಾಗಿ ಮಾರ್ಚ್‌ 19ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಮಾರ್ಚ್‌ 26 ಕೊನೆಯ ದಿನವಾಗಿದೆ. 27ರಂದು ನಾಮಪತ್ರ ಪರಿಶೀಲನೆ, ಮಾರ್ಚ್‌ 30 ನಾಮಪತ್ರ ಹಿಂದೆ ಪಡೆಯಲು ಕೊನೆಯ ದಿನವಾಗಿದೆ. ಏಪ್ರಿಲ್‌ 18ರಂದು ಮತದಾನ ನಡೆಯಲಿದೆ.

ದ್ವಿತೀಯ ಹಂತದ ಚುನಾವಣೆಯ ಅಧಿಸೂಚನೆಯನ್ನು ಮಾರ್ಚ್‌ 28ರಂದು ಹೊರಡಿಸಲಾಗುತ್ತಿದ್ದು, ನಾಮಪತ್ರ ಸಲ್ಲಿಕೆಗೆ ಏಪ್ರಿಲ್‌ 4 ಕೊನೆಯ ದಿನವಾಗಿದೆ. ಏಪ್ರಿಲ್‌ 5ರಂದು ನಾಮಪತ್ರ ಪರಿಶೀಲನೆ, ಏಪ್ರಿಲ್‌ 8 ನಾಮಪತ್ರ ಹಿಂದೆ ಪಡೆಯಲು ಕೊನೆಯ ದಿನವಾಗಿದೆ. 23ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT