ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ: ಅಧಿಸೂಚನೆ ಹೊರಡಿಸಿದ ಕೇಂದ್ರ

Last Updated 27 ಫೆಬ್ರುವರಿ 2020, 20:09 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರಗಳಿಗೆ ಮಹದಾಯಿ ನದಿ ನೀರನ್ನು ಹಂಚಿಕೆ ಮಾಡಿ ಜಲವಿವಾದ ನ್ಯಾಯಮಂಡಳಿಯು 2018ರ ಆಗಸ್ಟ್‌ 14ರಂದು ನೀಡಿದ್ದ ಐತೀರ್ಪನ್ನು ಆಧರಿಸಿ ಕೇಂದ್ರ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ.

ನ್ಯಾಯಮಂಡಳಿಯ ಐತೀರ್ಪನ್ನು ಪ್ರಶ್ನಿಸಿ ಕಣಿವೆ ವ್ಯಾಪ್ತಿಯ ಎಲ್ಲ ಮೂರೂ ರಾಜ್ಯಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಇದೇ 20ರಂದು ನಡೆಸಿದ್ದ ಸುಪ್ರೀಂ ಕೋರ್ಟ್‌, ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ನೀಡಿದ್ದ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಸುಪ್ರೀಂ ಕೋರ್ಟ್‌ ವಿಚಾರಣೆಯ ವೇಳೆ ಅಧಿಸೂಚನೆಯ ಕುರಿತು ಪ್ರಸ್ತಾಪಿಸಿದ್ದ ನ್ಯಾಯಪೀಠದೆದುರು ಗೋವಾ ಮತ್ತು ಮಹಾರಾಷ್ಟ್ರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕರ್ನಾಟಕದ ಬೇಡಿಕೆಗೆ ಮನ್ನಣೆ ದೊರೆತಂತಾಗಿತ್ತು.

'ಮೇಲ್ಮನವಿಗಳ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್‌ ನೀಡಲಿರುವ ಅಂತಿಮ ತೀರ್ಪಿನ ನಿಬಂಧನೆಗಳನ್ನು ಅಂತರರಾಜ್ಯ ಜಲವಿವಾದ ಕಾಯ್ದೆ–1956ರ ಸೆಕ್ಷನ್‌– 4ರ ಅಡಿ ಹೊರಡಿಸಲಾದ ಈ ಅಧಿಸೂಚನೆ ಒಳಗೊಳ್ಳಲಿದೆ' ಎಂದು ಕೇಂದ್ರದ ಜಲಶಜಕ್ತಿ ಸಚಿವಾಲಯ ಸ್ಪಷ್ಟಪಡಿಸಿದೆ.

ಶೀಘ್ರವೇ ಅಧಿಸೂಚನೆ ಹೊರಡಿಸುವಂತೆ ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ನೇತೃತ್ವದ ನಿಯೋಗವು ಬುಧವಾರವಷ್ಟೇ ಜಲಶಕ್ತಿ ಸಚಿವ ಗಜೇಂದ್ರಸಿಂಗ್‌ ಶೆಖಾವತ್‌ ಅವರಿಗೆ ಮನವಿ ಸಲ್ಲಿಸಿತ್ತು.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಮಹದಾಯಿ ನೀರಿಗಾಗಿ ಉತ್ತರ ಕರ್ನಾಟಕದ ಜನತೆ ದಶಕಗಳ ಕಾಲ ನಡೆಸಿರುವ ಹೋರಾಟಕ್ಕೆ ಜಯ ದೊರೆತಂತಾಗಿದೆ. ಹುಬ್ಬಳ್ಳಿ– ಧಾರವಾಡದ ಜನತೆಗೆ ಮಲಪ್ರಭಾ ನದಿ ಮೂಲಕ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಈ ಯೋಜನೆ ಸಾಕಷ್ಟು ಅನುಕೂಲ ಕಲ್ಪಿಸಲಿದೆ.

ಕುಡಿಯುವ ಉದ್ದೇಶದಿಂದ 5.40 ಟಿಎಂಸಿ ಅಡಿ ಹಾಗೂ ಜಲ ವಿದ್ಯುತ್‌ ಉತ್ಪಾದನೆಗೆ 8.02 ಟಿಎಂಸಿ ಅಡಿ ಸೇರಿ ನ್ಯಾಯಮಂಡಳಿಯು ರಾಜ್ಯಕ್ಕೆ 13.42 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿತ್ತು.

ಇದನ್ನೂ ಓದಿ:ಮಹದಾಯಿ ಅಧಿಸೂಚನೆ ಕೇಂದ್ರ ಸರ್ಕಾರಕ್ಕೆ ಮನವಿ

ರಾಜ್ಯಗಳಿಗೆ ದೊರೆತ ನೀರಿನ ಪಾಲು ಎಷ್ಟು?

ಮಹದಾಯಿಯ ಒಟ್ಟು 36.55 ಟಿಎಂಸಿ ಅಡಿ ನೀರಿಗೆ ರಾಜ್ಯ ಸರ್ಕಾರ ಬೇಡಿಕೆ ಸಲ್ಲಿಸಿತ್ತು. ಅದರಲ್ಲಿ ಬಳಕೆ ಉದ್ದೇಶದಿಂದ ತಿರುವು ಯೋಜನೆ ಮೂಲಕ ಮಲಪ್ರಭಾ ನದಿಗೆ 7.56 ಟಿಎಂಸಿ ಅಡಿ ಹಾಗೂ ಕಣಿವೆ ವ್ಯಾಪ್ತಿಯಲ್ಲಿ 1.50 ಟಿಎಂಸಿ ಅಡಿ ಸೇರಿದಂತೆ ಒಟ್ಟು 9.06 ಟಿಎಂಸಿ ಅಡಿ ನೀರಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ದೊರೆತಿದ್ದು 13.42 ಟಿಎಂಸಿ ಅಡಿ. ಅದೇ ರೀತಿ, ಗೋವಾಗೆ 24 ಟಿಎಂಸಿ ಅಡಿ. ಮಹಾರಾಷ್ಟ್ರಕ್ಕೆ 1.33 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT