ಬುಧವಾರ, ಸೆಪ್ಟೆಂಬರ್ 22, 2021
25 °C

ಬಾಳ ಠಾಕ್ರೆ ಸ್ಮಾರಕ ನಿರ್ಮಾಣಕ್ಕಾಗಿ 1,000 ಮರಗಳ ನಾಶಕ್ಕೆ ಶಿವಸೇನಾ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Uddhav Thackeray

ಮುಂಬೈ : ಮುಂಬೈ ಮೆಟ್ರೊ-3ನೇ ಹಂತದ ಕಾರ್ ಶೆಡ್ ನಿರ್ಮಾಣ ಕಾಮಗಾರಿಗಾಗಿ ಆರೆ ಕಾಲೊನಿಯಲ್ಲಿರುವ ಮರಗಳನ್ನು ಕತ್ತರಿಸುವುದನ್ನು ವಿರೋಧಿಸಿದ್ದ ಶಿವಸೇನಾ ಈಗ ಬಾಳ ಠಾಕ್ರೆ ಸ್ಮಾರಕ ನಿರ್ಮಾಣಕ್ಕಾಗಿ ಔರಂಗಬಾದ್‌ನಲ್ಲಿ ಅರಣ್ಯನಾಶ ಮಾಡಲು ಮುಂದಾಗಿದೆ.

ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಆರೆ ಅರಣ್ಯ ಪ್ರದೇಶದಲ್ಲಿ ಮೆಟ್ರೊ ಕಾರ್ ಶೆಡ್ ನಿರ್ಮಾಣಕ್ಕೆ  ತಡೆಯೊಡ್ಡಿ ಆದೇಶ  ಹೊರಡಿಸಿದ್ದರು.  ಮೆಟ್ರೊ ಕಾರ್ ಶೆಡ್ ನಿರ್ಮಾಣಕ್ಕಾಗಿ ಇಲ್ಲಿ 2,000 ಕ್ಕಿಂತಲೂ ಹೆಚ್ಚು ಮರಗಳಿಗೆ ಕತ್ತರಿ ಹಾಕಲಾಗಿತ್ತು.

ಆರೆ ಬಗ್ಗೆ ಉದ್ಧವ್ ಠಾಕ್ರೆ ಕೈಗೊಂಡ ನಿರ್ಧಾರಕ್ಕೆ ಜನರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಂತೆ ಇತ್ತ ಔರಂಗಬಾದ್‌ನಲ್ಲಿ ಸುಮಾರು 1,000 ಮರಗಳಿಗೆ ಕತ್ತರಿ ಹಾಕಲು ಶಿವಸೇನಾ ನಿರ್ಧರಿಸಿದೆ. ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಸ್ಮಾರಕ ನಿರ್ಮಾಣಕ್ಕಾಗಿ ಇಲ್ಲಿ ಮರ ಕಡಿಯಲಾಗುತ್ತಿದೆ.

ಇದನ್ನೂ ಓದಿಆರೆ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣ ಹಿಂಪಡೆಯಲು ಉದ್ಧವ್ ಆದೇಶ

 ಶಿವಸೇನಾ ಆಡಳಿತದಲ್ಲಿರುವ ಔರಂಗಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ), ಬಾಳ್ ಠಾಕ್ರೆ ಸ್ಮಾರಕಕ್ಕಾಗಿ  ಪ್ರಿಯದರ್ಶಿನಿ ಪಾರ್ಕ್‌ನಲ್ಲಿ 17 ಎಕರೆ ಜಾಗವನ್ನು ಗುರುತು ಮಾಡಿದೆ. 
ವನ ಸಂಪತ್ತಿನಿಂದ ಕೂಡಿದ ಪ್ರಿಯದರ್ಶಿನಿ ಪಾರ್ಕ್  ಔರಂಗಬಾದ್‌ನ ಮಧ್ಯಭಾಗದಲ್ಲಿದೆ.  ಇಲ್ಲಿ 70 ವಿಧದ ಹಕ್ಕಿಗಳು ಮತ್ತು 40 ವಿಧದ ಚಿಟ್ಟೆ ಮತ್ತು ಸರೀಸೃಪಗಳಿವೆ. 

ಮೂಲಗಳ ಪ್ರಕಾರ ನಿರ್ಮಾಣಕ್ಕೆ ಸಿದ್ಧವಾಗಿರುವ ಸ್ಮಾರಕದಲ್ಲಿ ಆಂಫಿ ಥಿಯೇಟರ್, ಫುಡ್ ಕೋರ್ಟ್  ಮತ್ತು ಬಾಳ್ ಠಾಕ್ರೆ ಜೀವನಕ್ಕೆ ಸಂಬಂಧಿಸಿದ ವಸ್ತುಗಳನ್ನು ಹೊಂದಿರುವ ಮ್ಯೂಸಿಯಂ ಇರಲಿದೆ.  3 ಎಕರೆಯಲ್ಲಿ ನಿರ್ಮಾಣವಾಗುವ ಈ ಮ್ಯೂಸಿಯಂಗೆ ₹61 ಕೋಟಿ ಖರ್ಚಾಗಲಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ. 

ಇದನ್ನೂ ಓದಿ: ಆರೆ ಕಾಲೊನಿ: ಮರಗಳ ಹನನ, 29 ಮಂದಿ ಬಂಧನ

ವಿವಿಧ ಹಂತಗಳಲ್ಲಿ ಮರಗಳನ್ನು ಕತ್ತರಿಸಲು ಎಎಂಸಿ ಚಿಂತಿಸಿದ್ದು, ಮೊದಲ ಹಂತದಲ್ಲಿ 330 ಮರಗಳನ್ನು ಕತ್ತರಿಸುವ ಬಗ್ಗೆ ಪತ್ರಿಕೆಗಳಲ್ಲಿ ಈಗಾಗಲೇ ಜಾಹೀರಾತು ನೀಡಿದೆ.

 ಆರೆ ಕಾಲೊನಿಯಲ್ಲಿ ಮರಗಳ ಹನನ ವಿರೋಧಿಸಿ ದನಿಯೆತ್ತಿದ ಹಲವಾರು ಶಿವಸೇನಾ ನಾಯಕರಲ್ಲಿ  ಔರಂಗಬಾದ್ ಮರಗಳ ಹನನ ಬಗ್ಗೆ ದಿ ಪ್ರಿಂಟ್ ಅಭಿಪ್ರಾಯ ಕೇಳಿದಾಗ ಯಾರೊಬ್ಬರೂ ಉತ್ತರಿಸಲು ಸಿದ್ಧರಾಗಿಲ್ಲ.

ಔರಂಗಬಾದ್‌ನಲ್ಲಿ ಮರಗಳನ್ನು ಕತ್ತರಿಸುವುದನ್ನು ವಿರೋಧಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ   ಸಲ್ಲಿಸಿದ್ದು  ಬಾಂಬೆ ಹೈಕೋರ್ಟ್‌ನ ಔರಂಗಬಾದ್ ನ್ಯಾಯಪೀಠದ ಮುಂದಿದೆ.

ಇದನ್ನೂ ಓದಿ:  ಆರೆ ಕಾಲೊನಿ: ಮರಗಳ ಹನನಕ್ಕೆ ತಡೆ ನೀಡಿದ ಸುಪ್ರೀಂ

ಸನ್ನಿ ಖಿನ್ವಸರಾ ಎಂಬ ವಕೀಲರು ಈ ಅರ್ಜಿ ಸಲ್ಲಿಸಿದ್ದು,  ಮಹಾರಾಷ್ಟ್ರ ಸರ್ಕಾರದ ಯೋಜನಾ ಸಂಸ್ಥೆಯಾದ ಸಿಟಿ ಆ್ಯಂಡ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಸಿಐಡಿಸಿಒ),  ಸ್ಥಳೀಯ ಸಂಸ್ಥೆಗೆ ಭೋಗ್ಯಕ್ಕಾಗಿ ಕೊಟ್ಟ ಜಮೀನು ಇದಾಗಿದೆ. ಭೋಗ್ಯಕ್ಕಾಗಿ ಕೊಟ್ಟ ಈ ಜಮೀನಿನಲ್ಲಿರುವ ಪ್ರಿಯದರ್ಶಿನಿ ಪಾರ್ಕ್‌ನ್ನು ಉದ್ಯಾನವನ್ನಾಗಿಯೇ ಕಾಪಾಡಬೇಕು ಎಂದು ಭೋಗ್ಯದ ಷರತ್ತಿನಲ್ಲಿ   ಹೇಳಲಾಗಿದೆ.

1980ರಲ್ಲಿ ಬರಡು ಭೂಮಿಯಾಗಿದ್ದ ಇದನ್ನು ಸಿಐಡಿಸಿಒ ಮಹಾತ್ಮ ಗಾಂಧಿ ಮಿಷನ್ ಎಂಬ ಎನ್‌ಜಿಒಗೆ ನೀಡಿತ್ತು. ನಂತರದ ವರ್ಷಗಳಲ್ಲಿ ಈ ಎನ್‌ಜಿಒ 10,000 ಗಿಡಗಳನ್ನು ಇಲ್ಲಿ ನೆಟ್ಟು ಬೆಳೆಸಿ ಕಾಡು ನಿರ್ಮಿಸಿತ್ತು.

ಈ ಬಗ್ಗೆ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಔರಂಗಬಾದ್ ಮೇಯರ್ ನಂದಕುಮಾರ್ ಘೋಡೆಲೆ, ಸ್ಥಳೀಯ ಸಂಸ್ಥೆ ಈ ಉದ್ಯಾನವನ್ನು ಕಾಪಾಡಿಕೊಳ್ಳಬೇಕೇ ವಿನಾ  ಒಂದೇ ಒಂದು ಮರವನ್ನು ಕಡಿಯುವಂತಿಲ್ಲ ಎಂದು ಹೇಳಿದೆ.

ಅದೇ ವೇಳೆ  ಸ್ಮಾರಕಕ್ಕಾಗಿ ಒಂದೇ ಒಂದು ಮರ ಕೂಡಾ ಕತ್ತರಿಸುವುದಿಲ್ಲ ಎಂದು ಶಿವ ಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಟ್ವೀಟಿಸಿದ್ದಾರೆ.  

ಆದಾಗ್ಯೂ, ಮರಗಳನ್ನು ಕತ್ತರಿಸದೆ ಇಲ್ಲಿ ಸ್ಮಾರಕ ನಿರ್ಮಾಣ ಸಾಧ್ಯವಿಲ್ಲ ಎಂದು ಮೂಲಗಳು ಹೇಳಿವೆ.

ಇದು ಶಿನಸೇನಾದ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ಮುಂಬೈ ಮೂಲದ ಪರಿಸರವಾದಿ  ಕೇದಾರ್ ಗೋರ್ ಹೇಳಿದ್ದಾರೆ.

 ಈ ಬಗ್ಗೆ ಟ್ವೀಟಿಸಿದ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡಣವೀಸ್ ಪತ್ನಿ ಅಮೃತಾ ಫಡಣವೀಸ್ ಬೂಟಾಟಿಕೆ ಒಂದು ರೋಗ.  ಶಿವಸೇನಾ ಬೇಗ ಗುಣಮುಖರಾಗಿ. ನಿಮಗೆ ಅನುಕೂಲವಾಗುವಂತೆ ಮರ ಕತ್ತರಿಸುವುದು ಅಥವಾ ಕಮಿಷನ್ ಸಿಗುವುದಾದರೆ ಮರ ಕತ್ತರಿಸಲು ಅನುಮತಿಸುವುದು ಮಹಾ ಪಾಪ ಎಂದು ಟ್ವೀಟಿಸಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು