ಶನಿವಾರ, ಅಕ್ಟೋಬರ್ 19, 2019
27 °C
ಟ್ವಿಟರ್‌ನಲ್ಲಿ ಪ್ರತಿಕ್ರಿಯೆ

ಕಾಶ್ಮೀರದ ಬಗ್ಗೆ ಮಲಾಲಾ ಮಾತು;ಪಾಕ್‌ ಅಲ್ಪಸಂಖ್ಯಾತ ಹೆಣ್ಣುಮಕ್ಕಳ ನೆನಪಿಸಿದ ಶೋಭಾ

Published:
Updated:

ಬೆಂಗಳೂರು: ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಹಾಗೂ ಮಕ್ಕಳು ಮತ್ತೆ ಶಾಲೆಗೆ ಮರಳುವಂತಾಗಲು ಕ್ರಮವಹಿಸುವಂತೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮತ್ತು ಶಿಕ್ಷಣ ಹಕ್ಕುಗಳ ಕಾರ್ಯಕರ್ತೆ ಪಾಕಿ­­ಸ್ತಾನದ ಮಲಾಲಾ ಯೂಸುಫ್‌ಝೈ(22) ವಿಶ್ವಸಂಸ್ಥೆಗೆ ಮನವಿ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. 

ಕಾಶ್ಮೀರದಲ್ಲಿನ ಸ್ಥಿತಿಯ ಬಗ್ಗೆ ಮಲಾಲಾ ಶನಿವಾರ ಟ್ವೀಟ್‌ ಮೂಲಕ ವಿಶ್ವಸಂಸ್ಥೆಯ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಭಾನುವಾರ ಶೋಭಾ ಕರಂದ್ಲಾಜೆ ಅವರು ಮಾಲಾಲಾ ಟ್ವೀಟ್‌ ಉದ್ದೇಶಿಸಿ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿಗೆ ನೀಡಿರುವ ಕಿರುಕುಳದ ವಿಚಾರ ಪ್ರಸ್ತಾಪಿಸಿದ್ದಾರೆ.

‘ಕಾಶ್ಮೀರ ವಾಸಿಗಳ ದನಿಯನ್ನು ಕೇಳಿ ಮತ್ತು ಮಕ್ಕಳು ಸುರಕ್ಷಿತವಾಗಿ ಶಾಲೆಗಳಿಗೆ ತೆರಳಲು ಅನುವಾಗಲು ಸಹಕರಿಸಿ, ಕಾಶ್ಮೀರದಲ್ಲಿ ಶಾಂತಿ ನೆಲೆಸುವತ್ತ ಕ್ರಮವಹಿಸಲು ವಿಶ್ವಸಂಸ್ಥೆಯ ನಾಯಕರಲ್ಲಿ ಕೋರುತ್ತಿದ್ದೇನೆ‘ ಎಂದು ನೊಬೆಲ್‌ ಪುರಸ್ಕೃತೆ ಮಲಾಲಾ ಟ್ವೀಟಿಸಿದ್ದಾರೆ. 

’ಕಾಶ್ಮೀರದಲ್ಲಿ ವಾಸಿಸುತ್ತಿರುವ ಹೆಣ್ಣು ಮಕ್ಕಳ ಮಾತುಗಳನ್ನು ಈ ಕೂಡಲೇ ನೇರವಾಗಿ ಕೇಳಲು ಬಯಸುತ್ತೇನೆ. ಸಂಪರ್ಕ ಕಡಿತದಿಂದಾಗಿ ಅವರ ಕಥೆಗಳನ್ನು ಕೇಳಲು ಸಾಕಷ್ಟು ಜನರು ಬಹಳಷ್ಟು ಶ್ರಮವಹಿಸಬೇಕಾದ ಸ್ಥಿತಿಯಿದೆ. ಜಗತ್ತಿನಿಂದ ಕಾಶ್ಮೀರಿಗಳು ಸಂಪರ್ಕ ಕಳೆದುಕೊಂಡಿದ್ದು, ಅವರ ದನಿಗಳು ಕೇಳುವಂತಾಗಲು ಅಸಾಧ್ಯವಾಗಿದೆ...‘ ಎಂದು ಟ್ವೀಟ್‌ ಮಾಡಿದ್ದಾರೆ. 

ಸಂಸದೆ ಶೋಭಾ ಕರಂದ್ಲಾಜೆ, ‘ಪಾಕಿಸ್ತಾನದ ಅಲ್ಪಸಂಖ್ಯಾತರೊಂದಿಗೆ ಕೆಲ ಸಮಯ ಮಾತುಕತೆ ನಡೆಸಲು ನೊಬೆಲ್‌ ಪುರಸ್ಕೃತೆಯಲ್ಲಿ ಮನವಿ ಮಾಡುತ್ತೇನೆ.

ಇದನ್ನೂ ಓದಿ: ನತದೃಷ್ಟ ನೊಬೆಲ್! ಮಹಾತ್ಮ ಗಾಂಧಿಗೆ ಸಿಗಲಿಲ್ಲ ನೊಬೆಲ್‌

ಅಲ್ಪಸಂಖ್ಯಾತ ಸಮುದಾಯದ ಹೆಣ್ಣು ಮಕ್ಕಳ ಮೇಲೆ ಆಕೆಯ ದೇಶದಲ್ಲೇ ನಡೆಯುತ್ತಿರುವ ಕಿರುಕುಳದ ವಿರುದ್ಧ ಮಾತನಾಡಲಿ. ಅಭಿವೃದ್ಧಿ ಕಾರ್ಯಸೂಚಿಗಳು ಕಾಶ್ಮೀರದವರೆಗೂ ವ್ಯಾಪಿಸಲಾಗಿದೆಯೇ ಹೊರತು ಯಾವುದನ್ನೂ ನಿಗ್ರಹಿಸಲಾಗಿಲ್ಲ‘ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಯ ಬಳಿಕ ಕಣಿವೆ ಪ್ರದೇಶದಲ್ಲಿ ಎಲ್ಲ ರೀತಿಯ ಸಂಪರ್ಕ ಕಡಿತಗೊಂಡಿತ್ತು ಹಾಗೂ ಸುರಕ್ಷತೆಯ ಕಾರಣಗಳಿಗಾಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿತ್ತು. ಇದೀಗ ಪರಿಸ್ಥಿತಿ ಸಡಿಲಗೊಂಡಿದ್ದು, ಹಲವು ಕಡೆ ಶಾಲೆಗಳ ಪುನರಾರಂಭವಾಗಿದೆ. ಆದರೆ, ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗಿರುವುದಾಗಿ ವರದಿಯಾಗಿದೆ. 

ತಾಲಿಬಾನ್‌ ಉಗ್ರರ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಮಲಾಲಾ ಬದುಕುಳಿದ ನಂತರದಲ್ಲಿ ಇಂಗ್ಲೆಂಡ್‌ನಲ್ಲಿ ವ್ಯಾಸಂಗ ಮುಂದುವರಿಸಿದ್ದಾರೆ. ಕಾಶ್ಮೀರದಲ್ಲಿ 40 ದಿನಗಳಿಂದ ಮಕ್ಕಳು ಶಾಲೆಗೆ ತೆರಳಲು ಸಾಧ್ಯವಾಗಿಲ್ಲ, ಹೆಣ್ಣು ಮಕ್ಕಳು ಮನೆಗಳಿಂದ ಹೊರ ಬರಲು ಹೆದುರುತ್ತಿದ್ದಾರೆ ಎಂಬ ವರದಿಗಳಿಂದ ಕಳವಳ ಪಟ್ಟಿರುವುದಾಗಿ ಅವರು ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ಸಂವಿಧಾನದ 370ನೇ ವಿಧಿ ಮತ್ತು ‘35–ಎ’ ಕಲಂ ಸಮಗ್ರ ಮಾಹಿತಿ
 

Post Comments (+)