ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಗ ಸಮುದಾಯದ ಮೊದಲ ಎಂಫಿಲ್ ಪದವೀಧರೆ ಜೀವನ ಸಾಗಿಸಲು ಬೀಡಿಕಟ್ಟುತ್ತಿದ್ದಾರೆ! 

Last Updated 16 ಜುಲೈ 2019, 17:02 IST
ಅಕ್ಷರ ಗಾತ್ರ

ವರ್ಕಾಡಿ: ಶೈಕ್ಷಣಿಕ ವಿಷಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ರಾಷ್ಟ್ರಪತಿಯವರು ಏರ್ಪಡಿಸಿದ್ದ ಭೋಜನಕೂಟದಲ್ಲಿ ಭಾಗವಹಿಸಿದ್ದ ಕೊರಗ ಸಮುದಾಯದ ಪ್ರಥಮ ಎಂಫಿಲ್ ಪದವೀಧರೆ ಜೀವನೋಪಾಯಕ್ಕಾಗಿ ಬೀಡಿ ಕಟ್ಟುತ್ತಿದ್ದಾರೆ!.

ಕೇರಳದ ಕಾಸರಗೋಡು ಜಿಲ್ಲೆಯ ಗಡಿಭಾಗ ವರ್ಕಾಡಿ ಗ್ರಾಮದ ಕುಳೂರು ಪರಿಶಿಷ್ಟ ಜಾತಿ ಕಾಲನಿಯ ತುಕ್ರು - ಶೇಖರ ದಂಪತಿಯ ಪುತ್ರಿ ಮೀನಾಕ್ಷಿ , ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದು ಈ ಬಗ್ಗೆ ಮಾಧ್ಯಮಂ ಪತ್ರಿಕೆ ವರದಿ ಪ್ರಕಟಿಸಿದೆ.

ಹತ್ತನೇ ತರಗತಿಯ ನಂತರ ಬೀಡಿಕಟ್ಟಿಯೇ ಈಕೆ ಶಿಕ್ಷಣ ಪೂರೈಸಿದ್ದು. ಕಲಿಕೆಯಲ್ಲಿ ಜಾಣೆಯಾಗಿದ್ದರೂ ಈಗಲೂ ಜೀವನೋಪಾಯಕ್ಕಾಗಿಬೀಡಿಯನ್ನು ಆಶ್ರಯಿಸಬೇಕಾಗಿ ಬಂದಿರುವುದು ದುರದೃಷ್ಟಕರ.ಸರ್ಕಾರಿ ಕಚೇರಿಗಳಲ್ಲಿ ತಾತ್ಕಾಲಿಕ ಕೆಲಸಕ್ಕಾಗಿ ಪ್ರಯತ್ನಿಸಿದ್ದರೂ ಅದು ಸಿಗಲಿಲ್ಲ.

ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ , ಟ್ರೈಬಲ್ ಆಫೀಸರ್, ಇನ್‌ಫಾರ್ಮೇಶನ್ ಆಫೀಸರ್, ವಾರ್ಡ್ ಸದಸ್ಯರು, ರಾಜಕಾರಣಿಗಳನ್ನು ಹಲವಾರು ಬಾರಿ ಭೇಟಿ ಮಾಡಿ ಕಷ್ಟ ತೋಡಿಕೊಂಡರೂ ಉದ್ಯೋಗ ಮಾತ್ರ ಮರೀಚಿಕೆಯಾಗಿಯೇ ಉಳಿದು ಬಿಟ್ಟಿತು. ಗುತ್ತಿಗೆ ಕೆಲಸದಲ್ಲಿಯೂ ಮೀಸಲಾತಿ ನೀಡುವ ನಿಯಮವಿದ್ದರೂ ಮೀನಾಕ್ಷಿಗೆ ಮಾತ್ರ ಯಾವುದೇ ಉದ್ಯೋಗ ಸಿಗಲಿಲ್ಲ.

ಉದ್ಯೋಗಕ್ಕಾಗಿ ಅಲೆಯುತ್ತಿದ್ದರೆ ಬೀಡಿ ಕಟ್ಟಿ ಜೀವನ ಸಾಗಿಸುವುದೂ ಕಷ್ಟ ಎಂಬಂತಾಗಿದೆ ಈಕೆಯ ಪರಿಸ್ಥಿತಿ. ಕೊರಗ ಸಮುದಾಯದವರ ಸಂಖ್ಯೆ 1500ಕ್ಕಿಂತಲೂ ಕಡಿಮೆ. ಇವರ ಸಂಖ್ಯೆ ಕಡಿಮೆಯಾಗುತ್ತಲೇ ಬರುತ್ತಿದೆ. ಈ ಸಮುದಾಯದ ಜನರು 10ನೇ ತರಗತಿ ನಂತರ ಶಿಕ್ಷಣ ಮುಂದುವರಿಸುವುದಿಲ್ಲ.ಮರಣ ದರಸರಾಸರಿಯೂ ಇಲ್ಲಿ ಜಾಸ್ತಿಯೇ ಇದೆ. ಈ ಸಮುದಾಯದಲ್ಲಿ ಸರ್ಕಾರಿ ಉದ್ಯೋಗ ಹೊಂದಿದವರ ಸಂಖ್ಯೆ ಕೇವಲ 3 !. ಪರಿಶಿಷ್ಟವರ್ಗಕ್ಕೆ ಶಿಕ್ಷಣ ಪಡೆದ ಸಮುದಾಯಗಳುಸೇರಿಸಿರುವುದರಿಂದ ಕೊರಗ ಸಮುದಾಯಕ್ಕೆ ಸಿಗುತ್ತಿದ್ದ ಮೀಸಲಾತಿ ಅವಕಾಶಗಳೂ ಕಡಿಮೆಯಾಗಿವೆ.

ವರ್ಕಾಡಿ, ಪಾತೂರು, ಕೊಡ್ಲಮೊಗರು ಶಾಲೆಯಲ್ಲಿ ಹತ್ತನೇ ತರಗತಿವರೆಗೆ ಕಲಿತು ಕನ್ಯಾನದಲ್ಲಿ ಪಿಯುಸಿ, ಮಂಜೇಶ್ವರ ಗೋವಿಂದ ಪೈ ಕಾಲೇಜಿನಲ್ಲಿ ಬಿ.ಎ,ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಎಂ.ಎ, ಡಾ.ಯು.ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಕೊರಗರ ಜೀವನ ಮತ್ತು ಸಂಸ್ಕೃತಿ ಎಂಬ ವಿಷಯದಲ್ಲಿ ಎಂಫಿಲ್ ಪಡೆದ ವಿದ್ಯಾರ್ಥಿನಿಗೆ ಇನ್ನೂ ಸರ್ಕಾರಿ ಕೆಲಸ ಸಿಕ್ಕಿಲ್ಲ ಎಂಬುದು ಸಮಾಜದ ಅವ್ಯವಸ್ಥೆಯನ್ನು ಎತ್ತಿ ತೋರಿಸುತ್ತಿದೆ.

ನಾನು ಹಿಂದುಳಿದ ಸಮುದಾಯದ ಬಡಕುಟುಂಬದಿಂದ ಬಂದವಳು. ನನಗೆ ಉದ್ಯೋಗ ಸಿಕ್ಕಿದರೆ ಅಳಿವಿನಂಚಿನಲ್ಲಿರುವ ನನ್ನ ಸಮುದಾಯದ ಹೊಸ ತಲೆಮಾರಿಗೆ ಹೊಸ ಸಂದೇಶ ಸಿಕ್ಕಿದಂತಾಗುತ್ತದೆ ಎಂಬ ಆಸೆ ಮನದಲ್ಲಿದೆ ಅಂತಾರೆ ಮೀನಾಕ್ಷಿ.

ಹತ್ತನೇ ತರಗತಿಯಿಂದಲೇ ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದೇನೆ.ಅನಾರೋಗ್ಯ ಪೀಡಿತರಾದ ಅಪ್ಪನಿಗೆ ಮತ್ತು ವಾರದಲ್ಲಿ ಎರಡು ದಿನ ಮಾತ್ರ ಬಸ್ಸಿನಲ್ಲಿ ಕೆಲಸವಿರುವ ಗಂಡನಿಗೆ ನಾನು ಸಹಾಯ ಮಾಡಬೇಕು.ಮಗಳಿಗೆ ಉತ್ತಮ ಶಿಕ್ಷಣ ನೀಡಿ ಬೆಳೆಸಬೇಕು. ನನಗಿರುವ ಕನಸು ಇಷ್ಟೇ ಎಂದಿದ್ದಾರೆ ಮೀನಾಕ್ಷಿ.

ಈ ಸಮುದಾಯದವರಿಗೆ ವಿಶೇಷ ಪರಿಗಣನೆ ನೀಡಿ ಅವರನ್ನು ಸಂರಕ್ಷಿಸಬೇಕು ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಉಪನ್ಯಾಸಕರಾದರತ್ನಾಕರ ಮಲ್ಲಮೂಲೆ ಒತ್ತಾಯಿಸಿದ್ದಾರೆ.

ಎಂಎ ಪರೀಕ್ಷೆ ಪಾಸಾದಾಗ 2013ರಲ್ಲಿ ರಾಷ್ಟ್ರಪತಿ ಭವನದ ಭೋಜನ ಕೂಟಕ್ಕೆ ಆಗಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಆಹ್ವಾನಿಸಿದ್ದರು. ಆಗ ಸಿಕ್ಕಿದ ಮನ್ನಣೆ, ಪ್ರೋತ್ಸಾಹ ಉದ್ಯೋಗದ ನಿರೀಕ್ಷೆ ಹುಟ್ಟಿಸಿತ್ತು. ಆಮೇಲೆ ಎಂಫಿಲ್ ಮಾಡಿದೆ. ಈಗಲೂ ಉದ್ಯೋಗ ಸಿಗುತ್ತದೆ ಎಂಬ ನಿರೀಕ್ಷೆಯಿಂದಲೇ ಮೀನಾಕ್ಷಿ ಕಾದು ಕುಳಿತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT