ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಚೀನಾ ಗಡಿ ಸಮಸ್ಯೆ: ಪ್ರಕ್ಷುಬ್ಧ ಸ್ಥಿತಿ ಶಮನಕ್ಕೆ ಮಾತುಕತೆಗೆ ನಿರ್ಧಾರ

Last Updated 7 ಜೂನ್ 2020, 19:24 IST
ಅಕ್ಷರ ಗಾತ್ರ

ನವದೆಹಲಿ: ಪೂರ್ವ ಲಡಾಖ್‌ನ ಗಡಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ಶಮನಕ್ಕೆ ಮಾತುಕತೆ ಮುಂದುವರಿಸಲು ಭಾರತ ಮತ್ತು ಚೀನಾ ನಿರ್ಧರಿಸಿವೆ. ಎರಡೂ ದೇಶಗಳ ಸೇನಾ ಕಮಾಂಡರ್‌ಗಳ ನಡುವೆ ಶನಿವಾರ ನಡೆದ ಮಾತುಕತೆಯಲ್ಲಿ ಯಾವುದೇ ಪರಿಹಾರ ಸಾಧ್ಯವಾಗಿಲ್ಲ. ಹಾಗಾಗಿ, ಮಾತುಕತೆ ಮುಂದುವರಿಯಲಿದೆ.

‘ಗಡಿಯಲ್ಲಿ ಶಾಂತಿ ಸ್ಥಾಪನೆಗಾಗಿ ಸೇನೆ ಮತ್ತು ರಾಜತಾಂತ್ರಿಕ ಮಾತುಕತೆ ಮುಂದುವರಿಯಲಿದೆ’ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಸೌಹಾರ್ದ ಮತ್ತು ಸಕಾರಾತ್ಮಕ ವಾತಾವರಣದಲ್ಲಿ ಶನಿವಾರದ ಮಾತುಕತೆ ನಡೆದಿದೆ. ಆದರೆ, ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಬೀಡು ಬಿಟ್ಟಿರುವ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಚೀನಾ ಒಪ್ಪಿಲ್ಲ. ಚೀನಾದ ಸೈನಿಕರು ಕೆಲವು ವಾರಗಳ ಹಿಂದೆ ಭಾರತದ ಭೂ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಪ್ಯಾಂಗಾಂಗ್‌ ಸರೋವರದ ಉತ್ತರ ದಂಡೆ ಮತ್ತು ಇತರ ಕಡೆಗಳಲ್ಲಿಯೂ ಅವರು ಅತಿಕ್ರಮಣ ನಡೆಸಿದ್ದಾರೆ.

ಚೀನಾದ ಈ ಕ್ರಮಕ್ಕೆ ಪ್ರತಿಯಾಗಿ ಭಾರತ ಕೂಡ ಗಡಿಗೆ ಯೋಧರನ್ನು ಕಳುಹಿಸಿದೆ. ಹೀಗೆ ನಿಯೋಜನೆಯಾಗಿರುವ ಸೈನಿಕರನ್ನು ಭಾರತವೂ ಹಿಂದಕ್ಕೆ ಕರೆಸಿಕೊಂಡಿಲ್ಲ. ಯೋಧರು ಇಲ್ಲಿ ದೀರ್ಘಾವಧಿ ಇರುವುದಕ್ಕೆ ಬೇಕಾದ ವ್ಯವಸ್ಥೆಗಳನ್ನೂ ಮಾಡಿಕೊಳ್ಳಲಾಗಿದೆ. ಚೀನಾದ ಸೈನಿಕರು ಹಿಂದಕ್ಕೆ ಸರಿಯುವವರೆಗೆ ಭಾರತದ ಯೋಧರು ಕೂಡ ಇಲ್ಲಿಯೇ ಇರುತ್ತಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ಸೇನಾ ಕಮಾಂಡರ್‌ಗಳ ಮಾತುಕತೆಗೂ ಮುನ್ನ ಎರಡೂ ದೇಶಗಳ ಹಿರಿಯ ರಾಜತಾಂತ್ರಿಕ ಅಧಿಕಾರಿಗಳು ಬಿಕ್ಕಟ್ಟಿನ ಕುರಿತು ಚರ್ಚಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ನಡುವೆ 2018ರ ಏಪ್ರಿಲ್‌ ಮತ್ತು 2019ರ ಅಕ್ಟೋಬರ್‌ನಲ್ಲಿ ಹಲವು ವಿಚಾರಗಳಲ್ಲಿ ಸಹಮತಕ್ಕೆ ಬರಲಾಗಿತ್ತು. ಇದಕ್ಕೆ ಬದ್ಧತೆ ತೋರಲು ಅಧಿಕಾರಿಗಳ ನಡುವಣ ವಿಡಿಯೊ ಸಂವಾದದಲ್ಲಿ ಒಪ್ಪಿಗೆ ಸೂಚಿಸಲಾಗಿತ್ತು. ಈಗಿನ ಭಿನ್ನಾಭಿಪ್ರಾಯವು ವಿವಾದದ ಸ್ವರೂಪ ಪಡೆಯದಂತೆ ನೋಡಿಕೊಳ್ಳಲು ಅದಿಕಾರಿಗಳು ಸಮ್ಮತಿಸಿದ್ದರು.

ಮೇ 5ಕ್ಕೂ ಹಿಂದೆ ಎಲ್‌ಎಸಿಯಲ್ಲಿ ಇದ್ದ ಸ್ಥಿತಿಯನ್ನು ಮರುಸ್ಥಾಪಿಸಬೇಕು ಎಂದು ಭಾರತದ ಕಮಾಂಡರ್‌ಗಳು ಶನಿವಾರದ ಸಭೆಯಲ್ಲಿ ಹೇಳಿದ್ದಾರೆ. ಮೇ 5ರಂದು ಪ್ಯಾಂಗಾಂಗ್‌ ಸರೋವರದ ದಂಡೆಯಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಅದಾದ ಬಳಿಕ, ಗಡಿಯ ಎರಡೂ ಭಾಗಗಳಲ್ಲಿ ಸೈನಿಕರನ್ನು ಜಮಾಯಿಸಲಾಗಿತ್ತು.

ಒಪ್ಪಂದ ಆಧಾರದಲ್ಲಿ ಪರಿಹಾ
ಭಾರತ–ಚೀನಾ ನಡುವೆ ಆಗಿರುವ ಒಪ್ಪಂದಗಳ ಆಧಾರದಲ್ಲಿ ಗಡಿ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಲು ಸೇನೆಯ ಕಮಾಂಡರ್‌ಗಳು ಒಪ್ಪಿದ್ದಾರೆ. ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಆರಂಭವಾಗಿ ಈ ವರ್ಷಕ್ಕೆ 70 ವರ್ಷ ತುಂಬುತ್ತದೆ. ಅಂತಹ ಸಂದರ್ಭದಲ್ಲಿ ಸಂಬಂಧವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಬೇಕು ಎಂದು ಕಮಾಂಡರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

1993ರಿಂದ 2013ರ ಅವಧಿಯಲ್ಲಿ ಎರಡೂ ದೇಶಗಳ ನಡುವೆ ಐದು ದ್ವಿಪಕ್ಷೀಯ ಒಪ್ಪಂದಗಳು ಆಗಿವೆ. ಆಗಾಗ ಉಂಟಾಗಿರುವ ಸಂಘರ್ಷಗಳು ಮತ್ತು ಮುಖಾಮುಖಿಯ ಸಂದರ್ಭಗಳಲ್ಲಿ ವಿಶ್ವಾಸವೃದ್ಧಿ ಉಪಕ್ರಮಗಳು ನಡೆದಿವೆ.

ಒತ್ತಡ ಹೇರಲು ಚೀನಾ ಕವಾಯತು
ಚೀನಾದ ಮಧ್ಯ ಪ್ರಾಂತ್ಯ ಹುಬೆಯಿಂದ ಭಾರತದ ಜತೆ ಗಡಿ ಸಂಘರ್ಷವಿರುವ ದೂರದ ವಾಯವ್ಯ ಗಡಿಗೆ ತ್ವರಿತವಾಗಿ ಸೈನಿಕರನ್ನು ಹೇಗೆ ಕಳುಹಿಸಬಹುದು ಎಂಬ ಕವಾಯತನ್ನು ಚೀನಾ ಸೇನೆಯು ನಡೆಸಿದೆ ಎನ್ನಲಾಗಿದೆ.

ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯ (ಪಿಎಲ್‌ಎ) ಸಾವಿರಾರು ಸೈನಿಕರನ್ನು ಹುಬೆಯಿಂದ ವಾಯವ್ಯ ‍ಪ್ರದೇಶದ ಸ್ಥಳವೊಂದಕ್ಕೆ ಕಳುಹಿಸಲಾಗಿದೆ. ಶಸ್ತ್ರಾಸ್ತ್ರ ವಾಹನಗಳು, ಸೇನೆಯ ಭಾರಿ ಸಲಕರಣೆಗಳು ಮತ್ತು ಇತರ ವಸ್ತುಗಳನ್ನು ಕೂಡ ಸಾಗಿಸಲಾಗಿದೆ. ಮೇ 14ರಂದು ಈ ಭಾರಿ ಕಾರ್ಯಾಚರಣೆ ನಡೆದಿದೆ. ಈ ಬಗ್ಗೆ, ಚೀನಾದ ಕಮ್ಯುನಿಸ್ಟ್‌ ಪಕ್ಷದ ಸ್ವಾಮ್ಯದ ‘ಗ್ಲೋಬಲ್‌ ಟೈಮ್ಸ್‌’ ಪತ್ರಿಕೆಯು ಭಾನುವಾರ ವರದಿ ಪ್ರಕಟಿಸಿದೆ. ಲಡಾಖ್‌ನಲ್ಲಿ ಗಡಿ ಬಿಕ್ಕಟ್ಟು ತಲೆದೋರಿರುವ ಈ ಸಂದರ್ಭದಲ್ಲಿ ವರದಿ ಪ್ರಕಟವಾಗಿದೆ.

ಕೆಲವೇ ತಾಸುಗಳಲ್ಲಿಈ ಕಾರ್ಯಾಚರಣೆ ಪೂರ್ಣಗೊಂಡಿತು. ಗಡಿ ಸಮಸ್ಯೆ ಉಂಟಾದರೆ ಸೇನೆಯು ಅಲ್ಲಿಗೆ ಎಷ್ಟು ವೇಗವಾಗಿ ತಲುಪಬಲ್ಲುದು ಎಂಬುದನ್ನು ಇದು ತೋರಿಸಿಕೊಟ್ಟಿದೆ. ನಾಗರಿಕ ವಿಮಾನಗಳು, ರೈಲು ಮತ್ತು ಇತರ ಸಾರಿಗೆ ವ್ಯವಸ್ಥೆಯನ್ನೂ ಬಳಸಿಕೊಂಡು ಸೈನಿಕರು ಗಡಿಯ ರಹಸ್ಯ ಸ್ಥಳಕ್ಕೆ ತಲುಪಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅತ್ಯಂತ ದೂರದ, ದುರ್ಗಮವಾದ ಮತ್ತು ಪ್ರತಿಕೂಲ ಹವಾಮಾನದ ಸ್ಥಳಗಳಿಗೂ ಸೇನೆಯನ್ನು ಕಳುಹಿಸುವ ಶಕ್ತಿಯನ್ನು ಚೀನಾ ಹೊಂದಿದೆ ಎಂಬುದನ್ನು ಈ ಕಾರ್ಯಾಚರಣೆ ತೋರಿಸಿಕೊಟ್ಟಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಎಲ್‌ಎಸಿಯಲ್ಲಿ ಸಂಘರ್ಷ ಆರಂಭವಾದ ಬಳಿಕ ಅಲ್ಲಿಗೆ ಭಾರತೀಯ ಸೇನೆಯು ಹೆಚ್ಚುವರಿ ಯೋಧರನ್ನು ಕಳುಹಿಸಿತ್ತು. ಅಗತ್ಯ ಬಿದ್ದರೆ ಗಡಿಗೆ ದೊಡ್ಡ ಸಂಖ್ಯೆಯಲ್ಲಿ ಸೈನಿಕರು ಮತ್ತು ಸಲಕರಣೆಗಳನ್ನು ಅಲ್ಪ ಕಾಲದಲ್ಲಿ ಕಳುಹಿಸುವ ಸಾಮರ್ಥ್ಯ ತನಗೆ ಇದೆ ಎಂದು ತೋರಿಸಿ, ಭಾರತದ ಮೇಲೆ ಒತ್ತಡ ಹೇರುವುದು ಚೀನಾದ ಕಾರ್ಯತಂತ್ರ ಆಗಿರಬಹುದು ಎಂದು ಈ ಕಾರ್ಯಾಚರಣೆಯನ್ನು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT