ರೈತರ ದುಃಸ್ಥಿತಿಗೆ ಮೋದಿ ಸರ್ಕಾರವೇ ಹೊಣೆ: ಮಮತಾ ಬ್ಯಾನರ್ಜಿ

ಕೋಲ್ಕತ್ತ: ದಶಲಕ್ಷ ರೈತರ ದುಃಸ್ಥಿತಿಗೆ ನರೇಂದ್ರ ಮೋದಿ ಸರ್ಕಾರವೇ ಹೊಣೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರವು ರೈತರಿಗೆ ನಿದ್ದೆಯಿಲ್ಲದ ರಾತ್ರಿಯನ್ನು ನೀಡಿದೆ ಎಂದು ರೈತರ ಜತೆ ದೂರವಾಣಿ ಸಂವಹನ ನಡೆಸಿದ ಮಮತಾ ಹೇಳಿದ್ದಾರೆ.
ಕೃಷಿ ವಲಯದಲ್ಲಿ ಸಂದಿಗ್ಧ ಪರಿಸ್ಥಿತಿ ಇದೆ. ರೈತರು ಆತ್ಮಹತ್ಯೆ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸುವುದಿಲ್ಲ ಎಂದಿದ್ದಾರೆ ಮಮತಾ.
ತಮ್ಮ ಸರ್ಕಾರ ರೈತರ ಅಭಿವೃದ್ಧಿಗಾಗಿ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ ಮಮತಾ, ಪ್ರತಿ ಎಕರೆ ಜಮೀನಿಗೂ ₹5000 ಧನ ಸಹಾಯ ನೀಡಲಾಗಿದೆ. ಭೂ ತೆರಿಗೆಯನ್ನೂ ನಮ್ಮ ಸರ್ಕಾರ ಮನ್ನಾ ಮಾಡಿದೆ.
ಬಂಗಾಳದ ರೈತರಿಗೆ ಕೃಷಿ ವಿಮೆಯ ಪ್ರೀಮಿಯಮ್‍ನ್ನು ಸರ್ಕಾರ ಪಾವತಿಸುತ್ತಿದೆ. ಕಳೆದ ವರ್ಷ ಸರ್ಕಾರ ₹6.25 ಶತಕೋಟಿ ಹಣವನ್ನು ಪಾವತಿಸಿದೆ. ಒಂದು ಲಕ್ಷದಷ್ಟು ರೈತರು ವೃದ್ದಾಪ್ಯ ಪಿಂಚಣಿ ಪಡೆಯುತ್ತಿದ್ದಾರೆ. ಫಲಾನುಭವಿಗಳ ಸಂಖ್ಯೆ ಕಳೆದ ವರ್ಷ 65,000ದಿಂದ ಒಂದು ಲಕ್ಷಕ್ಕೇರಿದೆ.
ಭತ್ತದ ಮೇಲಿರುವ ಕನಿಷ್ಠ ಬೆಂಬಲ ಬೆಲೆ 2011ರಲ್ಲಿ ₹1,100 ಆಗಿತ್ತು. ಅದನ್ನು ₹1,700ಕ್ಕೆ ಏರಿಕೆ ಮಾಡಲಾಗಿದೆ.
ರೈತರನ್ನು ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಸೇರಿಸಿದ್ದು, ಈ ಮೂಲಕ ರೈತರು ₹25 ಪಾವತಿಸಿದರೆ ಸರ್ಕಾರ ₹30 ಪಾವತಿಸುತ್ತದೆ. ಹೀಗೆ ರೈತನಿಗೆ 60 ವರ್ಷ ತಲುಪಿದಾಗ ಆತನಿಗೆ ₹2 ಲಕ್ಷ ಮತ್ತು ಪಿಂಚಣಿ ಸಿಗುತ್ತದೆ.
ನೋಟು ರದ್ದು ರೈತರಿಗೆ ತೀವ್ರ ಹೊಡೆತ ನೀಡಿತ್ತು. ಮೋದಿ ಬಾಬು (ಪ್ರಧಾನಿ ಮೋದಿ) ಅವರು 2022ರ ಹೊತ್ತಿಗೆ ರೈತರ ಆದಾಯ ಮೂರು ಪಟ್ಟು ಹೆಚ್ಚಾಗುತ್ತದೆ ಎಂದು ಭರವಸೆ ನೀಡುತ್ತಿದ್ದಾರೆ. ಆದರೆ ಬಂಗಾಳದಲ್ಲಿ ಈಗಾಗಲೇ ರೈತರ ಆದಾಯ ಮೂರು ಪಟ್ಟು ಹೆಚ್ಚಾಗಿದೆ. ಲೋಕಸಭಾ ಚುನಾವಣೆ ನಂತರ ಸರ್ಕಾರ ಬದಲಾದರೆ ನಾವು ರೈತರ ಅಭಿವೃದ್ಧಿಗಾಗಿ ದುಡಿಯುತ್ತೇವೆ ಎಂದು ಧರಣಿ ಸತ್ಯಾಗ್ರಹ ಕುಳಿತಿರುವ ಮಮತಾ ಹೇಳಿದ್ದಾರೆ.
ಇದನ್ನೂ ಓದಿ
ಮುಂದುವರಿದ ಮಮತಾ ಧರಣಿ; ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಬಿಜೆಪಿ ಹಟಾವೋ ಘೋಷಣೆ
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಿಬಿಐ : ಮಂಗಳವಾರ ವಿಚಾರಣೆ
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಧೈರ್ಯವಿದೆಯೇ?: ಮೋದಿಗೆ ಮಮತಾ ಸವಾಲು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.