ಮಂಗಳವಾರ, ನವೆಂಬರ್ 19, 2019
22 °C
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ 'ಒನ್ ಮೈಕ್ ಸ್ಟ್ಯಾಂಡ್' ಹಾಸ್ಯ ಕಾರ್ಯಕ್ರಮ

ಸಂಸದ ಶಶಿತರೂರ್ ಹಗಲು ರಾಜಕಾರಣಿ, ರಾತ್ರಿ ಹಾಸ್ಯನಟ

Published:
Updated:

ಮುಂಬೈ: ಸಂಸದ ಶಶಿತರೂರ್ ಯಾರಿಗೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇಂಗ್ಲೀಷ್ ಪಾಂಡಿತ್ಯ ಹೊಂದಿರುವ ಮುಖಂಡರಲ್ಲಿ ಶಶಿತರೂರ್ ಕೂಡ ಒಬ್ಬರು. ಅನೇಕ ಪುಸ್ತಕಗಳನ್ನು ಬರೆದಿರುವ ತರೂರ್ ಮಾತಿನ ಮಲ್ಲ, 

ತನ್ನ ಎದುರಾಳಿಗಳ ಮಾತಿನ ತಿವಿತಗಳನ್ನು ಹಾಸ್ಯದ ಧಾಟಿಯಲ್ಲಿಯೇ ವಾಪಾಸ್ ನೀಡುವ ರಸಿಕ ಮಹಾಶಯ. ಇಂತಹ ಶಶಿತರೂರ್ ಈಗ ಬೆಳಿಗ್ಗೆ ಹೊತ್ತಲ್ಲಿ ಸಂಸದ, ರಾತ್ರಿ ವೇಳೆ ಹಾಸ್ಯನಟರಾಗಿ ನಿಮ್ಮ ಮುಂದೆ ಬರಲಿದ್ದಾರೆ. ಗಾಬರಿಯಾಗಬೇಡಿ.

ಸಂಸದ ತರೂರ್ ತಮ್ಮ ರಾಜಕೀಯ ಕ್ಷೇತ್ರದಿಂದ ಈಗ ನಟನೆಯ ವೃತ್ತಿಗೆ ಇಳಿದಿದ್ದಾರೆ. ಇದಕ್ಕೆ ವೇದಿಕೆ ಕಲ್ಪಿಸಿರುವುದು ಅಮೆಜಾನ್ ಪ್ರೈಮ್ ವಿಡಿಯೋ, ರಾತ್ರಿ ವೇಳೆ ಪ್ರಸಾರವಾಗುವ 'ಒನ್ ಮೈಕ್ ಸ್ಟ್ಯಾಂಡ್' ಎಂಬ ಕಾರ್ಯಕ್ರಮದಲ್ಲಿ ಹಾಸ್ಯಗಾರನಾಗಿ ನಿಮ್ಮನ್ನು ನಕ್ಕು ನಗಿಸಲಿದ್ದಾರೆ. ಈಗಾಗಲೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕಾರ್ಯಕ್ರಮ ಟ್ರೇಲರ್ ಕೂಡ ಬಿಡುಗಡೆಯಾಗಿದೆ.

 

ಶಶಿತರೂರ್ ಜೊತೆಗೆ ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ, ನಟಿಯರಾದ ರಿಚಾ ಛಡಾ, ತಾಪ್ಸಿ ಪನ್ನು, ಯೂಟ್ಯೂಬ್ ಸ್ಟಾರ್ ಭುವನ್ ಬಾಮ್ ಭಾಗವಹಿಸಲಿದ್ದಾರೆ. ಇವರಿಗೆ ಹಾಸ್ಯನಟರೊಬ್ಬರು ಮಾರ್ಗದರ್ಶನ ನೀಡಲಿದ್ದಾರೆ. ಇವರಲ್ಲಿ ಪ್ರಮುಖರಾದವರೆಂದರೆ, ಹಾಸ್ಯನಟರಾದ ಸಪನ್ ವರ್ಮಾ, ಆಶಿಶ್ ಶಾಕ್ಯ, ಕುನಾಲ್ ಕಮ್ರಾ ರೋಹನ್ ಜೋಷಿ ಮತ್ತು ಅಂಗದ್ ಸಿಂಗ್ ರಾನ್ಯಾಲ್.

ಕಾರ್ಯಕ್ರಮದಲ್ಲಿ ಒಂದು ವಾರದವರೆಗೆ ಪ್ರಮುಖ ವ್ಯಕ್ತಿಗಳಿಗೆ ತರಬೇತಿ ನೀಡಲಾಗುವುದು, ತರಬೇತಿ ನಂತರ ಇವರು ನೆರೆದ ಸಭಿಕರ ಮುಂದೆ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಈಗಾಗಲೇ ಸಪನ್ ವರ್ಮಾ 5 ಕಂತುಗಳನ್ನು ನಡೆಸಿಕೊಟ್ಟಿದ್ದು, ಕಾರ್ಯಕ್ರಮ ನವೆಂಬರ್ 15ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ: ಹಿಂದು ಧರ್ಮವನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ-ಶಶಿತರೂರ್

ಸುದ್ದಿಗಾರರೊಂದಿಗೆ ಮಾತನಾಡಿದ ಸಪನ್ ವರ್ಮಾ, ಇಂತಹದ್ದೊಂದು ಕಾರ್ಯಕ್ರಮದ ಎಳೆ ಬಹಳ ಹಿಂದೆಯೇ ನನಗೆ ಹೊಳೆದಿತ್ತು. ಈಗ ಅಮೆಜಾನ್ ಪ್ರೈಮ್ ವಿಡಿಯೋ ಅದಕ್ಕೆ ಸಹಕಾರ ಹಾಗೂ ಹಣಕಾಸಿನ ನೆರವು ನೀಡಿತು. ಅದಕ್ಕಾಗಿ ಈ ಕಾರ್ಯಕ್ರಮ ಕಾರ್ಯರೂಪಕ್ಕೆ ಬಂದಿದೆ.

ಇಂತಹ ಕಾರ್ಯಕ್ರಮ ಹೊಸತು. ಇಲ್ಲಿ ಸಮಾಜದಲ್ಲಿರುವ ನಿಮ್ಮ ಮೆಚ್ಚಿನ ವ್ಯಕ್ತಿಗಳನ್ನು ಹಾಸ್ಯಗಾರನ ಸ್ಥಾನದಲ್ಲಿ ನೋಡುವುದೇ ಒಂದು ಖುಷಿಯ ವಿಚಾರ. ಪ್ರಮುಖವಾಗಿ ಸಮಾಜದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಗಳ ಪಟ್ಟಿಯೇ ನನ್ನ ಬಳಿ ಇದೆ. ಹೀಗಾಗಿ ಕಾರ್ಯಕ್ರಮ ಅತ್ಯಂತ ಹೆಚ್ಚಿನ ವೀಕ್ಷಕರನ್ನು ಪಡೆದುಕೊಳ್ಳಲಿದೆ ಎಂಬ ಅಭಿಪ್ರಾಯ ಈಗಾಗಲೇ ಖ್ಯಾತ ಹಾಸ್ಯನಟರಿಂದ ಬಂದಿದೆ ಎಂದರು. 

ನಿಜ ಜೀವನದಲ್ಲಿ ರಾಜಕಾರಣಿಯಾಗಿರುವ ಶಶಿತರೂರ್ ಹಾಸ್ಯನಟನಾಗಿ ಹೇಗೆ ಮೋಡಿ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರತಿಕ್ರಿಯಿಸಿ (+)