ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರ ರೈಲು ಟಿಕೆಟ್ ಕಾಯ್ದಿರಿಸುವಿಕೆ ಅವಾಂತರ: ಸಂಸತ್‌ಗೆ ಲಕ್ಷಾಂತರ ರೂಪಾಯಿ ನಷ್ಟ

Last Updated 13 ಜೂನ್ 2020, 6:01 IST
ಅಕ್ಷರ ಗಾತ್ರ

ನವದೆಹಲಿ: ಸಂಸದರು ಮತ್ತು ಮಾಜಿ ಸಂಸದರು ಅನೇಕ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಿ ಕೆಲವೇ ಪ್ರಯಾಣಗಳನ್ನು ಕೈಗೊಂಡು ಉಳಿದ ಟಿಕೆಟ್‌ಗಳನ್ನು ರದ್ದುಗೊಳಿಸದೇ ಇರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಸಂಸತ್‌ಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ.

ರಾಜ್ಯಸಭೆಯ ಮಾಜಿ ಸಂಸದರೊಬ್ಬರು 2019ರ ಜನವರಿಯಲ್ಲಿ 23 ದಿನಗಳಲ್ಲಿ 63 ರೈಲು ಟಿಕೆಟ್ ಕಾಯ್ದಿರಿಸಿದ್ದರು. ಆದರೆ 7 ಬಾರಿ ಮಾತ್ರ ಪ್ರಯಾಣಿಸಿದ್ದರು. ಉಳಿದ ಟಿಕೆಟ್‌ಗಳನ್ನು ರದ್ದುಗೊಳಿಸಿರಲಿಲ್ಲ. ಇದರಿಂದಾಗಿ ಸಂಸತ್ತು ಹೆಚ್ಚುವರಿಯಾಗಿ ₹1.46 ಲಕ್ಷ ಪಾವತಿಸುವಂತಾಗಿತ್ತು ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭೆಯ ಸಮೀಕ್ಷೆಯೊಂದರ ಮಾಹಿತಿ ಪ್ರಕಾರ, 2019ರ ಜನವರಿಯಲ್ಲಿ ಹಾಲಿ ಸಂಸದರು ರೈಲು ಟಿಕೆಟ್ ಕಾಯ್ದಿರಿಸಿದ್ದರ ಶೇ 15ರಷ್ಟು ಮಾತ್ರವೇ ಪ್ರಯಾಣಿಸಿದ್ದರು. ಉಳಿದ ಟಿಕೆಟ್‌ಗಳನ್ನು ರದ್ದುಗೊಳಿಸದ್ದರ ಪರಿಣಾಮವಾಗಿ ಸಂಸತ್ತು ಹೆಚ್ಚುವರಿ ಪಾವತಿ ಮಾಡುವಂತಾಗಿತ್ತು.

ಹೀಗಾಗಿ, ಪ್ರಯಾಣ ಮಾಡದೇ ಇದ್ದಲ್ಲಿ ಕಾಯ್ದಿರಿಸಿದ ಟಿಕೆಟ್‌ಗಳನ್ನು ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಆ ಮೊತ್ತವನ್ನು ಸಂಸದರಿಂದಲೇ ಸ್ವೀಕರಿಸಲಾಗುವುದು ಎಂದು ರಾಜ್ಯಸಭೆ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ.

ಸಂಸದರು ಮತ್ತು ಮಾಜಿ ಸಂಸದರು ಪ್ರಥಮ ದರ್ಜೆ ಎಸಿ ಕೋಚ್‌ನ ಒಂದು ಟಿಕೆಟ್ ಉಚಿತವಾಗಿ ಪಡೆಯಬಹುದಾಗಿದೆ. ಅವರ ಪತ್ನಿಗೂಅವರ ಜೊತೆ ಪ್ರಯಾಣಿಸಲು ಉಚಿತ ಟಿಕೆಟ್ ನೀಡಲಾಗುತ್ತದೆ. ಜೊತೆಗೆ ಇನ್ಯಾರಾದರೂ ಪ್ರಯಾಣಿಸುವುದಿದ್ದಲ್ಲಿ ಅವರಿಗೆ ಸೆಕೆಂಡ್ ಟೈರ್ ಎಸಿ ಕೋಚ್‌ನಲ್ಲಿ ಉಚಿತವಾಗಿ ಟಿಕೆಟ್ ನೀಡಲಾಗುತ್ತದೆ.

ರೈಲ್ವೆ ಇಲಾಖೆಗೆ ಸಂಸತ್ ಹೆಚ್ಚು ಮೊತ್ತ ಪಾವತಿಸಬೇಕಾಗಿ ಬರುತ್ತಿರುವುದರಿಂದ, ಸಂಸದರ ಟಿಕೆಟ್ ಕಾಯ್ದಿರಿಸುವಿಕೆ ಮತ್ತು ಪ್ರಯಾಣದ ವಿವರವನ್ನು ರಾಜ್ಯಸಭೆಯ ಅಧ್ಯಕ್ಷ, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ನಿರ್ದೇಶನದ ಮೇರೆಗೆ ವಿಶ್ಲೇಷಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಯ್ದಿರಿಸಿ ಬಳಿಕ ಪ್ರಯಾಣಿಸದೇ ಇರುವ ಟಿಕೆಟ್ ರದ್ದುಗೊಳಿಸದಿರುವುದರಿಂದ ರಾಜ್ಯಸಭೆಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿತಗೊಳಿಸುವ ಬಗ್ಗೆ ಮತ್ತು ಟಿಕೆಟ್ ರದ್ದುಗೊಳಿಸದ ಪರಿಣಾಮ ಇತರ ಪ್ರಯಾಣಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ನಾಯ್ಡು ಸೂಚಿಸಿದ್ದರು ಎನ್ನಲಾಗಿದೆ.

63 ಟಿಕೆಟ್‌ಗಳನ್ನು ಕಾಯ್ದಿರಿಸಿದ ಮಾಜಿ ಸಂಸದರ ಬಗ್ಗೆ ಉಲ್ಲೇಖಿಸಿರುವ ಮೂಲಗಳು, ಈ ಕಾಯ್ದಿರಿಸಿದ ಟಿಕೆಟ್‌ಗಳ ವೆಚ್ಚ ₹1.69 ಲಕ್ಷ ಆಗುತ್ತದೆ. ಆದರೆ ಮಾಜಿ ಸಂಸದರು ಕೇವಲ ಏಳು ಬಾರಿ ಪ್ರಯಾಣಿಸಿದ್ದರಿಂದ ಅದಕ್ಕೆ ತಗಲುವ ವೆಚ್ಚ ಕೇವಲ ₹ 22,085. ರಾಜ್ಯಸಭೆಯು ₹1.46 ಲಕ್ಷ ಹೆಚ್ಚುವರಿಯಾಗಿ, ಅಂದರೆ ಶೇಕಡ 87ರಷ್ಟು ಹೆಚ್ಚುವರಿ ಮೊತ್ತ ಪಾವತಿಸಬೇಕಾಗಿ ಬಂದಿದೆ ಎಂದು ಹೇಳಿವೆ.

2019ರಲ್ಲಿ ಹಾಲಿ, ಮಾಜಿ ಸಂಸದರು ಮತ್ತು ಅವರ ಸಂಗಾತಿ, ಸಹವರ್ತಿಗಳ ರೈಲು ಪ್ರಯಾಣದ ಮೂರನೇ ಒಂದರಷ್ಟು ವೆಚ್ಚವನ್ನು, ₹7.8 ಕೋಟಿಯನ್ನು ರಾಜ್ಯಸಭೆ ಪಾವತಿಸಿತ್ತು. ಉಳಿದ ಮೊತ್ತವನ್ನು ಲೋಕಸಭೆ ಪಾವತಿಸಿತ್ತು. ಈ ಮೊತ್ತದ ಲೆಕ್ಕಾಚಾರದ ವೇಳೆ ಅನೇಕ ಸಂಸದರು, ಮಾಜಿ ಸಂಸದರು ಹಲವು ಟಿಕೆಟ್ ಕಾಯ್ದಿರಿಸಿ ಕೆಲವೇ ಪ್ರಯಾಣಗಳನ್ನು ಕೈಗೊಂಡಿರುವುದು ಗಮನಕ್ಕೆ ಬಂದಿತ್ತು. ಜೊತೆಗೆ ಪ್ರಯಾಣಿಸದೇ ಇರುವ ಟಿಕೆಟ್‌ಗಳನ್ನು ರದ್ದುಗೊಳಿಸದೇ ಇರುವುದು ತಿಳಿದುಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT