ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಅಣೆಕಟ್ಟು ಒಡೆದು 11 ಸಾವು

7 ಗ್ರಾಮಗಳಲ್ಲಿ ಪ್ರವಾಹ: ಕೊಚ್ಚಿ ಹೋದ 12 ಮನೆಗಳು, 12 ಮಂದಿ ನಾಪತ್ತೆ
Last Updated 3 ಜುಲೈ 2019, 18:22 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಪ್ಳೂನ್‌ ತಾಲ್ಲೂಕಿನಲ್ಲಿರುವ ತಿವರೆ ಅಣೆಕಟ್ಟು ಮಂಗಳವಾರ ಮಧ್ಯರಾತ್ರಿಯಲ್ಲಿ ಒಡೆದಿದೆ. ಅಣೆಕಟ್ಟಿನ ಕೆಳಭಾಗದ ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಕನಿಷ್ಠ 11 ಮಂದಿ ಪ್ರಾಣ ಕಳೆದುಕೊಂಡಿದ್ದು, 12 ಮಂದಿ ನಾಪತ್ತೆಯಾಗಿದ್ದಾರೆ.

‘ಸತತವಾಗಿ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಅಣೆಕಟ್ಟಿನ ಒಳಹರಿವು ಹೆಚ್ಚಾಗಿದ್ದರಿಂದ ಮಂಗಳವಾರ ರಾತ್ರಿ ಅಣೆಕಟ್ಟೆ ಒಡೆದಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಅಣೆಕಟ್ಟೆಯು 20 ಲಕ್ಷ ಘನ ಮೀಟರ್‌ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ.

‘ಅಣೆಕಟ್ಟೆ ಒಡೆದಿದ್ದರಿಂದ ಕೆಳ ಭಾಗದಲ್ಲಿರುವ ಏಳು ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. 12 ಮನೆಗಳು ಕೊಚ್ಚಿಹೋಗಿವೆ. ಒಟ್ಟು 11 ಶವಗಳು ಪತ್ತೆಯಾಗಿದ್ದು ಅವುಗಳಲ್ಲಿ ಮೂರು ಮಹಿಳೆಯರ ಶವಗಳಾಗಿವೆ. 12 ಮಂದಿ ನಾಪತ್ತೆಯಾಗಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ನಾಪತ್ತೆಯಾದವರಿಗಾಗಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ (ಎನ್‌ಡಿಆರ್‌ಎಫ್‌) ನೆರವಿನೊಂದಿಗೆ ಶೋಧ ನಡೆಸಲಾಗಿದೆ. ಗ್ರಾಮಸ್ಥರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ’ ಎಂದು ರತ್ನಗಿರಿ ಎಸ್‌ಪಿ ವಿಶಾಲ್‌ ಗಾಯಕವಾಡ್‌ ತಿಳಿಸಿದ್ದಾರೆ.

‘ಅಣೆಕಟ್ಟೆಯ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ನಾವು ಸ್ಥಳೀಯ ಆಡಳಿತದ ಗಮನ ಸೆಳೆದಿದ್ದೆವು. ನಿರ್ವಹಣೆಯ ವಿಚಾರದಲ್ಲಿ ನಾವು ಮಾಡಿದ್ದ ಮನವಿಯನ್ನು ಸರ್ಕಾರ ನಿರ್ಲಕ್ಷಿಸಿತ್ತು’ ಎಂದು ಸ್ಥಳಿಯ ಕೆಲವು ಜನಪ್ರತಿನಿಧಿಗಳು ಆರೋಪಿಸಿದ್ದಾರೆ. ಅಣೆಕಟ್ಟೆಯ ಗೋಡೆ ಬಿರುಕು ಬಿಟ್ಟಿರುವುದನ್ನು ಸ್ಥಳೀಯ ಕೆಲವು ನಿವಾಸಿಗಳು ತಿಳಿಸಿದ್ದರು ಎಂಬುದನ್ನು ಜಲ ಸಂಪನ್ಮೂಲ ಸಚಿವ ಗಿರೀಶ್‌ ಮಹಾಜನ್‌ ಒಪ್ಪಿಕೊಂಡಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಘಟನೆಯ ವಿವರಗಳನ್ನು ಪಡೆದು ತನಿಖೆಗೆ ಆದೇಶ ನೀಡಿದ್ದಾರೆ. ‘ಬಿರುಕಿಗೆ ಕಾರಣವೇನು ಎಂಬುದನ್ನು ಪತ್ತೆ ಮಾಡಲಾಗುವುದು ಮತ್ತು ತಪ್ಪಿತಸ್ಥರಿಗೆ ಅತಿ ಶೀಘ್ರದಲ್ಲಿ ಶಿಕ್ಷೆ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಸಹಜ ಸ್ಥಿತಿಗೆ ಮುಂಬೈ

ಎರಡು ದಿನಗಳ ಸತತ ಮಳೆಯಿಂದಾಗಿ ಅಸ್ತವ್ಯಸ್ತಗೊಂಡಿದ್ದ ಮುಂಬೈ ಮಹಾನಗರವು ಬುಧವಾರ ಸಹಜ ಸ್ಥಿತಿಗೆ ಮರಳಿದೆ. ಆದರೆ ಜಗತ್ತಿನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದು ಎನಿಸಿಕೊಂಡಿರುವ ಛತ್ರಪತಿ ಶಿವಾಜಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಸಹಜ ಸ್ಥಿತಿಗೆ ಬಂದಿಲ್ಲ.

ಸ್ಪೈಸ್‌ ಜೆಟ್‌ ವಿಮಾನವು ರನ್‌ವೇಯಿಂದ ಜಾರಿದ ಕಾರಣ ಉಂಟಾದ ಸಮಸ್ಯೆಯಿಂದಾಗಿ ಮಂಗಳವಾರ ಒಟ್ಟಾರೆ 203 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿತ್ತು. ರನ್‌ವೇಯಿಂದ ಜಾರಿರುವ ವಿಮಾನವನ್ನು ಮೇಲೆತ್ತಲು ವಿಳಂಬವಾಗಿದ್ದರಿಂದ ಬುಧವಾರವೂ ಸುಮಾರು 100 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಇನ್ನೊಂದು ರನ್‌ವೇಯಿಂದ ವಿಮಾನಗಳ ಹಾರಾಟ ಸಹಜವಾಗಿತ್ತು.

ವಿಪರೀತ ಮಳೆಯಿಂದಾಗಿ ಸತ್ತವರ ಸಂಖ್ಯೆ 26ಕ್ಕೆ ಏರಿದೆ. ಘಟನೆಯಲ್ಲಿ 110 ಮಂದಿ ಗಾಯಗೊಂಡಿದ್ದು, 70 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT