ಬುಧವಾರ, ಮಾರ್ಚ್ 3, 2021
31 °C

ಆರೋಗ್ಯ ಸೇತು ಆ್ಯಪ್‌ ಇಲ್ಲದಿದ್ದರೆ ₹1000 ದಂಡ ಇಲ್ಲವೇ 6 ತಿಂಗಳು ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೋಯ್ಡಾ (ಉತ್ತರ ಪ್ರದೇಶ): ಆರೋಗ್ಯ ಸೇತು ಆ್ಯಪ್‌ ಹೊಂದಿಲ್ಲದವರಿಗೆ ದಂಡ ಅಥವಾ ಶಿಕ್ಷೆ ವಿಧಿಸಲು ನೋಯ್ಡಾ ಪೊಲೀಸರು ಮುಂದಾಗಿದ್ದಾರೆ. 

ನೋಯ್ಡಾ ಮತ್ತು ಗ್ರೇಟರ್‌ ನೋಯ್ಡಾದಲ್ಲಿ ವಾಸಿಸುವವರಿಗೆ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಸಂಪರ್ಕ ಪತ್ತೆಹಚ್ಚುವ ಅಪ್ಲಿಕೇಶನ್ ಇಲ್ಲದಿದ್ದರೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ನಗರಕ್ಕೆ ಬರುವವರಿಗೂ ಈ ಆದೇಶ ಅನ್ವಯಿಸುತ್ತದೆ ಎಂದು ಹೇಳಲಾಗಿದೆ. 

‘ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದು, ಆ್ಯಪ್‌ ಹೊಂದಿಲ್ಲದೆ ಇದ್ದರೇ ಅಂತವರ ವಿರುದ್ಧ ಐಪಿಸಿ ಸೆಕ್ಷನ್‌ 188ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕೇ, ದಂಡ ವಿಧಿಸಬೇಕೇ ಎಂದು ನಿರ್ಧರಿಸಲಾಗುತ್ತದೆ’ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಖಿಲೇಶ್‌ ಕುಮಾರ್‌ ತಿಳಿಸಿದ್ದಾರೆ. 

ಐಪಿಸಿಯ ಸೆಕ್ಷನ್‌ 188ರ ಅನ್ವಯ ಸಾರ್ವಜನಿಕ ಅಧಿಕಾರಿಗಳಿಂದ ಘೋಷಿಸಲ್ಪಟ್ಟ ಆದೇಶಕ್ಕೆ ಅವಿಧೇಯತೆ ತೋರುವುದು ಶಿಕ್ಷಾರ್ಹ ಅಪರಾಧವಾಗಿದೆ. ಒಬ್ಬ ವ್ಯಕ್ತಿಯನ್ನು 6 ತಿಂಗಳವರೆಗೆ ಜೈಲಿನಲ್ಲಿಡಬಹುದು ಅಥವಾ ₹1000 ದಂಡ ವಿಧಿಸಬಹುದಾಗಿದೆ. 

‘ಜನರು ಆ್ಯಪ್‌ ಅನ್ನು ತಕ್ಷಣ ಡೌನ್‌ಲೋಡ್ ಮಾಡಿದರೆ, ನಾವು ಅವರನ್ನು ಹೋಗಲು ಬಿಡುತ್ತೇವೆ. ಆದರೆ, ಪದೇ ಪದೇ ಎಚ್ಚರಿಕೆ ನೀಡಿದ ನಂತರವೂ ಡೌನ್‌ಲೋಡ್ ಮಾಡದಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳತ್ತೇವೆ’ ಕುಮಾರ್‌ ತಿಳಿಸಿದ್ದಾರೆ. 

ಯಾರಾದರೂ ಮೊಬೈಲ್ ಡೇಟಾ ಹೊಂದಿಲ್ಲದಿದ್ದರೆ, ಅವರಿಗೆ ಹಾಟ್‌ಸ್ಪಾಟ್‌ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಫೋನ್‌ ಸಂಗ್ರಹಣೆಯ ಕೊರತೆಯಂತಹ ಇತರ ಸಮಸ್ಯೆಗಳಿದ್ದರೆ, ಅಂತವರ ಮೊಬೈಲ್‌ ಸಂಖ್ಯೆಯನ್ನು ತೆಗೆದುಕೊಂಡು ಆ್ಯಪ್‌ ಡೌನ್‌ಲೋಡ್ ಮಾಡಿದ್ದಾರೆಯೇ ಎಂದು ಪರೀಕ್ಷಿಸಲು ಕರೆ ಮಾಡಲಾಗುತ್ತದೆ. ಗಡಿ, ಮಾರುಕಟ್ಟೆ ಸೇರಿದಂತೆ ಯಾವುದೇ ಪ್ರದೇಶಗಳಲ್ಲಿ ತಪಾಸಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. 

ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಕೆಲಸ ಮಾಡುವವರು ಮತ್ತು ಕಚೇರಿಗಳಿಗೆ ಹಾಜರಾಗುವವರು ಮಾತ್ರ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು ಎಂದು ಕೇಂದ್ರದ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದಾಗ್ಯೂ, ಕೇಂದ್ರ ಸರ್ಕಾರವು ಹೊರಡಿಸಿರುವ ಲಾಕ್‌ಡೌನ್‌ ಮಾರ್ಗಸೂಚಿಗಳನ್ನು ಬಿಗಿಗೊಳಿಸಲು ರಾಜ್ಯಗಳಿಗೆ ಅನುಮತಿ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು