ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ತೊರೆದ ಸಿಂಧಿಯಾ: ಪತನದ ಅಂಚಿಗೆ ಸರಿದ ಮಧ್ಯಪ್ರದೇಶ ಸರ್ಕಾರ

22 ಶಾಸಕರ ರಾಜೀನಾಮೆ
Last Updated 10 ಮಾರ್ಚ್ 2020, 20:10 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್‌ ಪಕ್ಷಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಕಾಂಗ್ರೆಸ್‌ನ ಪ್ರಮುಖ ಮುಖಂಡರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ಅವರು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಬಳಿಕ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು. ಅವರು ಒಂದೆರಡು ದಿನದಲ್ಲಿ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ಹೇಳಿವೆ.

ಸಿಂಧಿಯಾಗೆ ನಿಷ್ಠರಾಗಿರುವ ಕಾಂಗ್ರೆಸ್‌ನ 19 ಶಾಸಕರು ಸೇರಿದಂತೆ 22 ಜನರು ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ, ಕಮಲನಾಥ್‌ ನೇತೃತ್ವದ ಮಧ್ಯ ಪ್ರದೇಶ ಸರ್ಕಾರ ಪತನದ ಅಂಚಿಗೆ ಬಂದಿದೆ.

ಬಿಜೆಪಿ ಮುಖಂಡರ ನಿಯೋಗವು ಮಧ್ಯ ಪ್ರದೇಶ ಸ್ಪೀಕರ್‌ ಎನ್‌.ಪಿ. ಪ್ರಜಾಪತಿ ಅವರನ್ನು ಭೇಟಿಯಾಗಿ, ಕಾಂಗ್ರೆಸ್‌ನ ಶಾಸಕರ ರಾಜೀನಾಮೆ ಪತ್ರ ನೀಡಿದೆ. ಶಾಸಕರ ರಾಜೀನಾಮೆ ಕುರಿತು ನಿಯಮದ ಅನುಸಾರ ಕ್ರಮ ಕೈಗೊಳ್ಳುವುದಾಗಿ ಸ್ಪೀಕರ್‌ ಹೇಳಿದ್ದಾರೆ.

ಈ ಎಲ್ಲ ಶಾಸಕರು ಬೆಂಗಳೂರಿನ ರೆಸಾರ್ಟ್‌ನಲ್ಲಿ ತಂಗಿದ್ದಾರೆ. ಬಿಜೆಪಿಯ ಹಿರಿಯ ಮುಖಂಡ ಭೂಪೇಂದ್ರ ಸಿಂಗ್‌ ಅವರು ಮಂಗಳವಾರ ಮಧ್ಯಾಹ್ನ ನಂತರ ವಿಶೇಷ ವಿಮಾನದಲ್ಲಿ ರಾಜೀನಾಮೆ ಪತ್ರಗಳ ಜತೆಗೆ ಭೋಪಾಲ್‌ ತಲುಪಿದರು ಎಂದು ಬಿಜೆಪಿ ಶಾಸಕ ಸಾರಂಗ್‌ ತಿಳಿಸಿದ್ದಾರೆ.

ಸಿಂಧಿಯಾ ಕಾಂಗ್ರೆಸ್‌ ಬಿಟ್ಟ ಬಳಿಕ, 22 ಶಾಸಕರು ರಾಜೀನಾಮೆ ನೀಡಿದ್ದಾರೆ. ಅವರಲ್ಲಿ ಮೂವರು ಭೋಪಾಲ್‌ನಲ್ಲಿಯೇ ಇದ್ದಾರೆ. ರಾಜೀನಾಮೆ ನೀಡಿರುವ ಶಾಸಕರ ಹೆಸರನ್ನು ಭೂಪೇಂದ್ರ ಸಿಂಗ್‌ ಅವರು ಪ್ರಕಟಿಸಿದ್ದಾರೆ. ಕಾಂಗ್ರೆಸ್‌ನ ಇನ್ನೂ ಕೆಲ ಶಾಸಕರು ರಾಜೀನಾಮೆ ನೀಡಲಿದ್ದಾರೆ. ಈ ಸಂಖ್ಯೆ 30ರವರೆಗೆ ಹೋಗಬಹುದು ಎಂದು ತಿಳಿಸಿದ್ದಾರೆ.

ಸಚಿವ ಸ್ಥಾನ?
ಸಿಂಧಿಯಾ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಮಧ್ಯ ಪ್ರದೇಶದಿಂದ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗುವುದು ಎಂದೂ ಹೇಳಲಾಗುತ್ತಿದೆ.

ರಾಜ್ಯಸಭೆಯ ಮೂರು ಸ್ಥಾನಗಳಿಗೆ ಇದೇ 26ರಂದು ಚುನಾವಣೆ ನಡೆಯಲಿದೆ. ಸಂಖ್ಯಾಬಲದ ಪ್ರಕಾರ, ಕಾಂಗ್ರೆಸ್‌ ಮತ್ತು ಬಿಜೆಪಿ ಒಂದೊಂದು ಸ್ಥಾನಗಳನ್ನು ಸುಲಭವಾಗಿ ಗೆಲ್ಲಲಿವೆ. ಮೂರನೇ ಸ್ಥಾನಕ್ಕೆ ಸ್ಪರ್ಧೆ ಇದೆ. ತಮ್ಮನ್ನು ರಾಜ್ಯಸಭೆ ಚುನಾವಣೆಯ ಅಭ್ಯರ್ಥಿ ಮಾಡಬೇಕು ಎಂದು ಸಿಂಧಿಯಾ ಅವರು ಕಾಂಗ್ರೆಸ್‌ ಬಿಡುವ ಮೊದಲು ಒತ್ತಡ ಹೇರಿದ್ದರು. ಆದರೆ, ಪಕ್ಷವು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ.

* ಸಿಂಧಿಯಾ ಜತೆಗೆ ಗುರುತಿಸಿಕೊಂಡಿರುವ ಆರು ಸಚಿವರನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಕಮಲನಾಥ್‌ ಪತ್ರ ಬರೆದಿದ್ದಾರೆ.

* ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ 22 ಶಾಸಕರು ಗೈರುಹಾಜರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT