ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಜತೆ ನಿಂತ ಪ್ರತಿಪಕ್ಷಗಳು

ಕೊರೊನಾ ವಿರುದ್ಧದ ಹೋರಾಟ l ಪ್ರಧಾನಿ ಜತೆಗೆ ಸಂವಾದ: ಸಂಕಷ್ಟ ಪರಿಹಾರಕ್ಕೆ ನಾಯಕರಿಂದ ವಿವಿಧ ಸಲಹೆ
Last Updated 9 ಏಪ್ರಿಲ್ 2020, 1:56 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜತೆ ಕೈಜೋಡಿಸುವುದಾಗಿ ದೇಶದ ವಿವಿಧ ರಾಜಕೀಯ ಪಕ್ಷಗಳ ನಾಯಕರು ಭರವಸೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಬುಧವಾರ ನಡೆದ ವಿಡಿಯೊ ಸಂವಾದದಲ್ಲಿ ಮುಖಂಡರು ಸರ್ಕಾರಕ್ಕೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.

ರೈತರಿಗೆ ನೆರವಾಗಿ: ಹಿಂಗಾರು ಬೆಳೆಯು ಕಟಾವಿಗೆ ಬಂದಿರುವುದರಿಂದ ಲಾಕ್‌ ಡೌನ್‌ನಿಂದ ರೈತರಿಗೆ ವಿನಾಯಿತಿ ನೀಡುವಂತೆ ಕಾಂಗ್ರೆಸ್‌ ಮನವಿ ಮಾಡಿತು.

ಸಂವಾದದ ನಂತರ ಸುದ್ದಿಸಂಸ್ಥೆಯ ಜತೆ ಮಾತನಾಡಿದ ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಅಧಿರ್‌ ರಂಜನ್‌ ಚೌಧರಿ, ‘ಲಾಕ್‌ಡೌನ್‌ ಅನ್ನು ಸರ್ಕಾರವು ಮುಂದುವರಿಸುವ ಸಾಧ್ಯತೆ ಇದೆ. ರೈತರಿಗೆ ಇದರಿಂದ ವಿನಾಯಿತಿ ನೀಡಬೇಕು ಮತ್ತು ರಸಗೊಬ್ಬರಗಳ ಮೇಲಿನ ತೆರಿಗೆಯನ್ನು ರದ್ದು ಮಾಡಬೇಕು ಎಂದು ಕಾಂಗ್ರೆಸ್‌ ಮನವಿ ಮಾಡಿದೆ’ ಎಂದರು.

‘ಜನರ ಆರೋಗ್ಯಕ್ಕೆ ಯಾವುದೇ ಅಪಾಯವಾಗುವುದಿಲ್ಲ ಎಂಬುದು ಖಚಿತವಾಗದ ಹೊರತು ನಿರ್ಬಂಧ ಸಡಿಲಿಸಬಾರದು. ದೇಶದ ಮತ್ತು ಜಾಗತಿಕ ಅರ್ಥ ವ್ಯವಸ್ಥೆಯ ಮೇಲೆ ಕೊರೊನಾದ ತೀವ್ರ ಪರಿಣಾಮ ಉಂಟಾಗಿದೆ. ಅರ್ಥವ್ಯವಸ್ಥೆಯನ್ನು ಮೇಲೆತ್ತುವ ಕ್ರಮಗಳನ್ನು ಈಗಿನಿಂದಲೇ ಆರಂಭಿಸಬೇಕು’ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಸಲಹೆ ನೀಡಿದರು.

ಪ್ರಧಾನಿಗೆ ನೀಡಿರುವ ಸಲಹೆಗಳ ಮಾಹಿತಿಯನ್ನು ಅವರು ತಮ್ಮ ಫೇಸ್‌ಬುಕ್‌ನಲ್ಲೂ ಹಂಚಿಕೊಂಡಿದ್ದಾರೆ. ‘ಯೋಜನೇತರ ವೆಚ್ಚಗಳನ್ನು ಕಡಿತಗೊಳಿಸಬೇಕು, ಹೊಸ ಸಂಸದ್‌ ಭವನ ನಿರ್ಮಾಣ ಯೋಜನೆಯನ್ನು ಮುಂದೂಡಬೇಕು, ಕೈಗಾರಿಕೆ ಮತ್ತು ಕೃಷಿ ಕ್ಷೇತ್ರದ ಚೇತರಿಕೆಗೆ ಯೋಜನೆ ರೂಪಿಸಬೇಕು’ ಎಂಬ ಸಲಹೆಗಳನ್ನು ನೀಡಿರುವುದಾಗಿ ಅವರು ಹೇಳಿದ್ದಾರೆ.

ಅನುದಾನಕ್ಕೆ ಮನವಿ: ‘ಕೇಂದ್ರ ಸರ್ಕಾರವು ಸದ್ಯಕ್ಕೆ ಯಾವುದೇ ಹೊಸ ಯೋಜನೆ ಕೈಗೆತ್ತಿಕೊಳ್ಳಬಾರದು. ಲಾಕ್‌ಡೌನ್‌ನಿಂದಾಗಿ ಸಂಕಷ್ಟ ಎದುರಿಸುತ್ತಿರುವ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ತಲಾ ₹ 10,000 ನೆರವನ್ನು (₹5000ದ ಎರಡು ಕಂತುಗಳಲ್ಲಿ) ಒದಗಿಸಬೇಕು’ ಎಂದು ಡಿಎಂಕೆ ನಾಯಕ ಟಿ.ಆರ್‌. ಬಾಲು ಸಲಹೆ ನೀಡಿದರು.ತಮಿಳುನಾಡಿನ 300 ಮೀನುಗಾರರು ಇರಾನ್‌ನಲ್ಲಿ ಸಿಲುಕಿದ್ದು, ಅವರನ್ನು ಮರಳಿ ಭಾರತಕ್ಕೆ ಕರೆತರಲು ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಿದರು.

‘ಸೋಂಕು ಕಾಣಿಸದ ಕಡೆಗಳಲ್ಲಿ ಲಾಕ್‌ಡೌನ್‌ ತೆರವುಗೊಳಿಸಬಹುದು. ಆದರೆ ಅದನ್ನು ಹಂತಹಂತವಾಗಿ ಜಾರಿಮಾಡಬೇಕು. ಜಿಲ್ಲಾ ಮತ್ತು ರಾಜ್ಯಗಡಿಗಳನ್ನು ಇನ್ನೂ ಸ್ವಲ್ಪ ಕಾಲದವರೆಗೆ ಮುಚ್ಚಬೇಕು. ಚಿತ್ರ ಮಂದಿರ,ಮಾಲ್‌ಗಳ ಲಾಕ್‌ಡೌನ್‌ ಮುಂದುವರಿಸಬೇಕು' ಎಂದು ಎಲ್‌ಜೆಪಿ ಸಂಸದ ಚಿರಾಗ್‌ ಪಾಸ್ವಾನ್‌ ಸಲಹೆ ನೀಡಿದರು.

ಒಂದು ಸಮುದಾಯದ ಮೇಲೆ ಆರೋಪ ಮಾಡುವುದನ್ನು, ಸುಳ್ಳು ಸುದ್ದಿ ಹರಡುವುದನ್ನು ನಿಯಂತ್ರಿಸಬೇಕು. ಪಡಿತರ ವಿತರಿಸಲು ಆಧಾರ್‌, ಅಥವಾ ರೇಶನ್‌ ಕಾರ್ಡ್‌ ಕಡ್ಡಾಯಗೊಳಿಸಬಾರದು ಎಂದು ಕೆಲವು ಮುಖಂಡರು ಒತ್ತಾಯಿಸಿದರು.

‘ಕ್ಷೇತ್ರಾಭಿವೃದ್ಧಿ ನಿಧಿ ರದ್ದತಿ ಬೇಡ’

‘ನಮ್ಮ ಪೂರ್ತಿ ವೇತನವನ್ನು ಬಿಟ್ಟುಕೊಡಲು ಸಿದ್ಧ. ಆದರೆ, ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ರದ್ದುಮಾಡಬೇಡಿ’ ಎಂದು ಟಿಎಂಸಿ ಸಂಸದ ಸುದೀಪ್‌ ಬಂಡೋಪಾಧ್ಯಾಯ ಮನವಿ ಮಾಡಿದರು.

‘ಬೇರು ಮಟ್ಟದವರೆಗೆ ಅಭಿವೃದ್ಧಿ ಕಾರ್ಯಗಳನ್ನು ಕೊಂಡೊಯ್ಯಲು ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯು ಜನಪ್ರತಿನಿಧಿಗಳಿಗೆ ನೆರವಾಗುತ್ತದೆ. ಇದನ್ನು ರದ್ದುಪಡಿಸಿದರೆ ಅಭಿವೃದ್ದಿ ಕಾರ್ಯಗಳು ಸ್ಥಗಿತಗೊಳ್ಳುತ್ತವೆ ಎಂದು ನಾನು ಪ್ರಧಾನಿಗೆ ಮನವಿ ಮಾಡಿದ್ದೇನೆ. ಜತೆಗೆ ಪಶ್ಚಿಮ ಬಂಗಾಳಕ್ಕೆ ₹ 25,000 ಕೋಟಿ ವಿಶೇಷ ಪ್ಯಾಕೇಜ್‌ ನೀಡುವಂತೆಯೂ ಮನವಿ ಮಾಡಿದ್ದೇನೆ’ ಎಂದು ಬಂಡೋಪಾಧ್ಯಾಯ ತಿಳಿಸಿದರು.

***

ಕೆಲವು ರಾಜ್ಯಗಳಲ್ಲಿ ಅಧಿಕಾರಿಗಳಿಗೆ ರಾಜ್ಯಪಾಲರೇ ಸೂಚನೆ ನೀಡುತ್ತಿದ್ದಾರೆ ಎಂದು ಕೇಳಿಬಂದಿದೆ. ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಯ ಜತೆ ರಾಜ್ಯಪಾಲರು ಚರ್ಚಿಸಬೇಕು.

- ಶರದ್‌ ಪವಾರ್‌, ಎನ್‌ಸಿಪಿ ನಾಯಕ

***

ಜನರಿಗೆ ನೆರವಾಗಲು ಮತ್ತು ಕೇಂದ್ರಕ್ಕೆ ಸಲಹೆಗಳನ್ನು ನೀಡಲು ಕೇಂದ್ರದ ಸಚಿವರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡ ಕಾರ್ಯಪಡೆಯನ್ನು ರಚಿಸಬೇಕು.

- ಗುಲಾಂನಬಿ ಆಜಾದ್‌, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ

***

ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಭಾರತದ ರಾಜಕೀಯ ನಾಯಕತ್ವದ ಒಗ್ಗಟ್ಟಿನ ಪ್ರದರ್ಶನವಾಗಿದೆ. ಸರ್ಕಾರದ ಕ್ರಮವನ್ನು ಹೆಚ್ಚಿನವರು ಬೆಂಬಲಿಸಿದ್ದಾರೆ.

- ಪ್ರಲ್ಹಾದ ಜೋಶಿ, ಸಂಸದೀಯ ವ್ಯವಹಾರಗಳ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT