ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲು ಮರದ‌ ತಿಮ್ಮಕ್ಕ, ನಟ ಪ್ರಭುದೇವ, ರಾಜೀವ ತಾರಾನಾಥಗೆ ಪದ್ಮ ಪ್ರಶಸ್ತಿ

Last Updated 26 ಜನವರಿ 2019, 10:22 IST
ಅಕ್ಷರ ಗಾತ್ರ

ನವದೆಹಲಿ: ಸರೋದ್‌ ಮಾಂತ್ರಿಕ ರಾಜೀವ್‌ ತಾರಾನಾಥ್‌, ಪರಿಸರ ಕಾರ್ಯಕರ್ತೆ ಸಾಲುಮರದ ತಿಮ್ಮಕ್ಕ, ಭೌತ ವಿಜ್ಞಾನಿ ರೋಹಿಣಿ ಗೋಡಬೋಲೆ, ಪುರಾತತ್ವ ಶಾಸ್ತ್ರಜ್ಞೆ ಶಾರದಾ ಶ್ರೀನಿವಾಸನ್‌ ಮತ್ತು ಕನ್ನಡ–ತೆಲುಗು ನಟ ಪ್ರಭುದೇವ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.

ಗಣರಾಜ್ಯ ಮುನ್ನಾದಿನವಾದ ಶುಕ್ರವಾರ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಒಟ್ಟು 112 ಮಂದಿಗೆ ಪದ್ಮ ಗೌರವ ಸಮರ್ಪಿಸಲು ತೀರ್ಮಾನಿಸಲಾಗಿದೆ. ಛತ್ತೀಸಗಡದ ಸಂಗೀತಗಾರ್ತಿ ತೀಜನ್‌ ಬಾಯಿ, ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದ ಸಾಧನೆಗಾಗಿ ಅನಿಲ್‌ ಕುಮಾರ್‌ಮಣಿಬಾಯಿ ನಾಯ್ಕ್‌ ಮತ್ತು ರಂಗಕರ್ಮಿ ಬಲ್ವಂತ್‌ ಮೋರೇಶ್ವರ್‌ ಪುರಂದರೆ, ಇತ್ತೀಚೆಗೆ ನಿಧನರಾದ ಹಿಂದಿ ನಟ ಖಾದರ್‌ ಖಾನ್‌ ಅವರಿಗೆ ದೇಶದ ಎರಡನೇ ಅತ್ಯುನ್ನತ ಗೌರವವಾದ ಪದ್ಮವಿಭೂಷಣ ಘೋಷಿಸಲಾಗಿದೆ.

ಜಿಬೂಟಿಯ ಅಧ್ಯಕ್ಷ ಇಸ್ಮಾಯಿಲ್‌ ಒಮರ್‌ ಗುಲೇಹ್‌ ಅವರಿಗೂ ಪದ್ಮವಿಭೂಷಣ ನೀಡಲು ನಿರ್ಧರಿಸಲಾಗಿದೆ.

ಶಾರದಾ ಶ್ರೀನಿವಾಸನ್‌

ಬೆಂಗಳೂರಿನ ಭಾರತೀಯ ಉನ್ನತ ಅಧ್ಯಯನ ಸಂಸ್ಥೆಯಲ್ಲಿ (ನಿಯಾಸ್‌) ಪ್ರಾಧ್ಯಾಪಕಿಯಾಗಿರುವ ಡಾ. ಶಾರದಾ ಶ್ರೀನಿವಾಸನ್‌ ಅವರು ಭಾರತೀಯ ಪುರಾತತ್ವ ಶಾಸ್ತ್ರ ಮತ್ತು ಕಲಾ ಪ್ರಕಾರಗಳ ಹಿನ್ನೆಲೆಯನ್ನು ವೈಜ್ಞಾನಿಕ ದೃಷ್ಟಿ ಕೋನದಿಂದ ಅಧ್ಯಯನ ನಡೆಸಿದ್ದಾರೆ. ಅನೇಕ ಕೃತಿಗಳನ್ನು ರಚಿಸಿದ್ದಾರೆ.

ಭರತನಾಟ್ಯ ಹಾಗೂ ಇನ್ನಿತರ ದಕ್ಷಿಣ ಭಾರತದ ಕಲಾ ಪ್ರಕಾರಗಳ ಬಗ್ಗೆ ವೈಜ್ಞಾನಿಕವಾಗಿ ತಳಸ್ಪರ್ಶಿ ಅಧ್ಯಯನ ನಡೆಸಿದ್ದು ಡಾ. ಶಾರದಾ ಅವರ ಹೆಗ್ಗಳಿಕೆ. ಭರತನಾಟ್ಯ ಕಲಾವಿದೆಯೂ ಆಗಿರುವ ಶಾರದಾ ಅವರು ಮುಂಬೈ ಐಐಟಿಯಿಂದ 1987ರಲ್ಲಿ ಬಿ.ಟೆಕ್‌ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಕಂಚಿನ ಪ್ರತಿಮೆಗಳ ಕುರಿತು ಲಂಡನ್‌ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್‌ ಮಾಡಿದ್ದಾರೆ.

ಐಐಟಿ ಸಹಪಾಠಿಗಳ ಜತೆ ಸೇರಿ ಅಣ್ವಸ್ತ್ರ ದುಷ್ಪರಿಣಾಮಗಳ ಬಗ್ಗೆ ನಿರ್ಮಿಸಿದ ‘ನ್ಯೂಕ್ಲಿಯರ್‌ ವಿಂಟರ್‌’ ಕಿರುಚಿತ್ರ ಕಾನ್‌ ವಿಶೇಷ ಪುರಸ್ಕಾರ ಪಡೆದಿತ್ತು.

ಸರೋದ್ ಮಾಂತ್ರಿಕ ರಾಜೀವ ತಾರಾನಾಥ

ಬೆಂಗಳೂರು: ಪಂಡಿತ್ ರಾಜೀವ ತಾರಾನಾಥ ಅವರು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಸರೋದ್ ವಾದಕರು. ಭಾರತ, ಜರ್ಮನಿ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಆಭಿಮಾನಿಗಳ ದೊಡ್ಡ ಬಳಗವೇ ಅವರಿಗೆ ಇದೆ. ಅವರನ್ನು ‘ಸರೋದ್ ಮಾಂತ್ರಿಕ’ ಎಂದು ಗೌರವದಿಂದಕರೆಯಲಾಗುತ್ತದೆ.

ಮೈಸೂರಿನಲ್ಲಿ ನೆಲೆಸಿರುವ ಅವರಿಗೆ ಈಗ 86 ವರ್ಷ. ಉತ್ತಮ ವಾಗ್ಮಿಗಳಾಗಿರುವ ಅವರದ್ದು ನೇರ ನಡೆ ನುಡಿ. ಉಸ್ತಾದ್ ಅಲಿ ಅಕ್ಬರ್ ಖಾನ್ ಅವರಿಂದ ಸರೋದ್ ಕಲಿತರು.

ಅವರ ಶಿಷ್ಯವೃಂದವೂ ದೊಡ್ಡದು. ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಯ ದಿಗ್ಗಜರಲ್ಲಿ ರಾಜೀವ್ ಅವರೂ ಪ್ರಮುಖರು.

ಭಾರತದ ಮೈಕಲ್‌ ಜಾಕ್ಸನ್‌

ಭಾರತದ ‘ಮೈಕಲ್‌ ಜಾಕ್ಸನ್‌’ ಎಂದು ಹೆಸರಾಗಿರುವ ಪ್ರಭುದೇವ ಅವರು ಭಾರತೀಯ ಚಿತ್ರರಂಗ ಕಂಡ ಅಪೂರ್ವ ನೃತ್ಯಪಟು, ನೃತ್ಯ ನಿರ್ದೇಶಕ ಮತ್ತು ಚಿತ್ರನಟ.

ನೃತ್ಯ ನಿರ್ದೇಶಕರಾಗಿ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಪ್ರಭುದೇವ ನೃತ್ಯಕ್ಕೆ ಪರ್ಯಾಯ ಹೆಸರು ಎನ್ನುವ
ಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ.

ಬಹುಭಾಷಾ ನಟ, ನೃತ್ಯ ನಿರ್ದೇಶಕ, ನಿರ್ದೇಶಕರಾಗಿ ಬೆಳೆದು ನಿಂತಿರುವ ಪ್ರಭುದೇವ ಮೂಲತಃ ಕನ್ನಡಿಗರು. ಮಂಡ್ಯ ಜಿಲ್ಲೆಯ ಮೂಗುರು ಗ್ರಾಮದವರು.

ಪ್ರಭುದೇವ ಅವರ ತಂದೆ ಮೂಗೂರು ಸುಂದರಂ ಕೂಡ ದಕ್ಷಿಣ ಭಾರತದ ಚಿತ್ರರಂಗದ ನೃತ್ಯ ನಿರ್ದೇಶಕರು. ಅವರ ತಾಯಿ ಮಹಾದೇವಮ್ಮ ಅವರು ಮೈಸೂರು ಬಳಿ ದೂರ ಗ್ರಾಮದವರು.

ಭೌತವಿಜ್ಞಾನಿ ರೋಹಿಣಿ ಗೋಡಬೋಲೆ

ಪ್ರೊ.ರೋಹಿಣಿ ಗೋಡಬೋಲೆ ಹೆಸರಾಂತ ಭೌತವಿಜ್ಞಾನಿ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸೆಂಟರ್‌ ಫಾರ್‌ ಹೈ ಎನರ್ಜಿ ಫಿಸಿಕ್ಸ್‌ ವಿಭಾಗದಲ್ಲಿ ಪ್ರಾಧ್ಯಾಪಕಿ. ಕಳೆದ ಮೂರು ದಶಕಗಳಿಂದ ಅವರು, ಕಣ ವಿದ್ಯಮಾನಶಾಸ್ತ್ರದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸುತ್ತಿದ್ದಾರೆ. ಕಣ ಭೌತವಿಜ್ಞಾನದಲ್ಲಿ ಪ್ರಮಾಣಿತ ಮಾದರಿಯ ಸಂಶೋಧನೆ ಇವರ ನೆಚ್ಚಿನ ಕ್ಷೇತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT