ಗುರುವಾರ , ಜೂಲೈ 9, 2020
28 °C

ವಿಮಾನ ಸೇವೆ ಪುನರಾರಂಭ: ಕೆಲವು ವಿಮಾನಗಳ ಹಾರಾಟ ರದ್ದು, ಪ್ರಯಾಣಿಕರಲ್ಲಿ ಗೊಂದಲ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸುತ್ತಿರುವ ಪ್ರಯಾಣಿಕ

ಬೆಂಗಳೂರು: ಎರಡು ತಿಂಗಳಿಗೂ ಹೆಚ್ಚು ಸಮಯದ ನಂತರ ದೇಶೀಯ ವಿಮಾನಗಳ ಹಾರಾಟ ಸೋಮವಾರದಿಂದ ಪುನರಾರಂಭಗೊಂಡಿದೆ. ತಮ್ಮ ಊರಿನಿಂದ, ಮನೆಯವರಿಂದ ದೂರ ಉಳಿದಿದ್ದ ಬಹುತೇಕ ಪ್ರಯಾಣಿಕರಲ್ಲಿ ವರ್ಣಿಸಲಾಗದ ಸಂಭ್ರಮ ಕಾಣುತ್ತಿತ್ತು. ದೆಹಲಿಯಿಂದ ಬೆಂಗಳೂರಿಗೆ ಒಬ್ಬನೆ ಪ್ರಯಾಣಿಸಿ ಬಂದ 5 ವರ್ಷದ ಪುಟಾಣಿ, ಕಾಯ್ದಿರಿಸಲಾಗಿದ್ದ ವಿಮಾನಗಳ ಟಿಕೆಟ್‌ ದಿಢೀರ್‌ ರದ್ದು, ಹಲವು ರಾಜ್ಯಗಳಿಂದ ವಿಮಾನಯಾನಕ್ಕೆ ತಡೆ, ಇಂದಿನ ಇನ್ನಷ್ಟು ಬೆಳವಣಿಗೆಗಳ ಕುರಿತ ವಿವರ ಇಲ್ಲಿದೆ. 

ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಹಾಗೂ ತಲುಪಬೇಕಿದ್ದ ಒಟ್ಟು ಸುಮಾರು 80 ವಿಮಾನಗಳ ಹಾರಾಟ ರದ್ದುಗೊಂಡಿದೆ. ಹಿಂದೆ ದೇಶದ ಎಲ್ಲ ಪ್ರಮುಖ ವಿಮಾನ ನಿಲ್ದಾಣಗಳಿಗೆ ವಿಮಾನ ಹಾರಾಟ ನಿಗದಿಪಡಿಸಲಾಗಿತ್ತು. ದೆಹಲಿಯಿಂದ ಪುಣೆಗೆ ಮೊದಲ ವಿಮಾನ ಬೆಳಿಗ್ಗೆ 4:45ಕ್ಕೆ ಹೊರಟಿತು, ಎರಡನೇ ವಿಮಾನ ಮುಂಬೈನಿಂದ ಪಟ್ನಾಗೆ ಬೆಳಿಗ್ಗೆ 6:45ಕ್ಕೆ ಪ್ರಯಾಣ ಬೆಳೆಸಿತು. ಈ ಎರಡೂ ವಿಮಾನಗಳ ಸೇವೆ ಇಂಡಿಗೊ ನೀಡಿದೆ.

ದೆಹಲಿ ಮತ್ತು ಮುಂಬೈನಿಂದ ಹೊರಡಬೇಕಿದ್ದ ಬಹಳಷ್ಟು ವಿಮಾನಗಳ ಹಾರಾಟ ರದ್ದುಗೊಂಡಿರುವುದರಿಂದ ವಿಮಾನ ನಿಲ್ದಾಣಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಆಗಲೇ ವಿಮಾನ ನಿಲ್ದಾಣ ತಲುಪಿರುವ ಪ್ರಯಾಣಿಕರಿಗೆ ವಿಮಾನ ರದ್ದುಗೊಂಡಿರುವ ಸರಿಯಾದ ಮಾಹಿತಿ ಲಭ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಬೈನಿಂದ 25 ವಿಮಾನಗಳು ಹೊರಡಲು ಹಾಗೂ ಇತರೆ ನಗರಗಳಿಂದ ಬರುವ ವಿಮಾನಗಳ ಸಂಖ್ಯೆಯನ್ನೂ 25ಕ್ಕೆ ಸೀಮಿತಗೊಳಿಸಿಕೊಳ್ಳಲಾಗಿದೆ. ವಿಮಾನ ನಿಲ್ದಾಣದ ಇಬ್ಬರು ಕಸ್ಟಮ್ಸ್‌ ಅಧಿಕಾರಿಗಳಿಗೆ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದೆ. 

ಲಾಕ್‌ಡೌನ್‌ನಿಂದಾಗಿ ಪಾಲಕರಿಂದ ದೂರ ದೆಹಲಿಯಲ್ಲಿ ಉಳಿದುಕೊಂಡಿದ್ದ 5 ವರ್ಷದ ಬಾಲಕ ವಿಹಾನ್‌ ಶರ್ಮಾ ಇಂದು ಒಬ್ಬನೇ ದೆಹಲಿಯಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ಮಾಡಿ ಬಂದಿದ್ದಾನೆ. ಬಾಲಕನ ತಾಯಿ ವಿಮಾನ ನಿಲ್ದಾಣಕ್ಕೆ ಬಂದು ಮಗನನ್ನು ಕರೆದೊಕೊಂಡು ಹೊರಟರು. ಬೆಳಿಗ್ಗೆ 9ರವರೆಗೂ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 5 ವಿಮಾನಗಳು ತಲುಪಿವೆ ಹಾಗೂ ಇಲ್ಲಿಂದ 17 ವಿಮಾನಗಳು ಹಾರಾಟ ನಡೆಸಿದ್ದು, 9 ವಿಮಾನಗಳು ರದ್ದುಗೊಂಡಿವೆ. 

ಬೆಂಗಳೂರಿಂದ ಸುಮಾರು 107 ವಿಮಾನಗಳು ಹಾರಾಟ ನಡೆಸಲಿವೆ ಹಾಗೂ ನೂರು ವಿಮಾನಗಳು ಬಂದಿಳಿಯಲಿವೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಮೊದಲ ಹಾರಾಟ ಏರ್‌ ಏಷ್ಯಾ ವಿಮಾನ 176 ಪ್ರಯಾಣಿಕರೊಂಗೆ ರಾಂಚಿಗೆ ಹೊರಟಿತು. ಚೆನ್ನೈನಿಂದ 113 ಪ್ರಯಾಣಿಕರೊಂದಿಗೆ ಮೊದಲ ವಿಮಾನ ಬಂದಿಳಿಯಿತು. 

ವಿಮಾನ ಪ್ರಯಾಣಿಕರಿಗೆ ರಾಜ್ಯ ಸರ್ಕಾರಗಳು ಕನಿಷ್ಠ 14 ದಿನಗಳು ಕ್ವಾರಂಟೈನ್‌ ನಿಗದಿ ಪಡಿಸಿವೆ. ಕೆಲವು ರಾಜ್ಯಗಳಲ್ಲಿ ಕ್ವಾರಂಟೈನ್‌ ಕೇಂದ್ರಗಳು, ಇನ್ನೂ ಕೆಲವೆಡೆ ಮನೆಯಲ್ಲಿಯೇ ಪ್ರತ್ಯೇಕ ಉಳಿಯುವಂತೆ ಸೂಚಿಸಲಾಗಿದೆ. 

ಆಂಧ್ರ ಪ್ರದೇಶ ಮತ್ತು ಪಶ್ಚಿಮ ಬಂಗಳಾ ವಿಮಾನಯಾನ ಸೇವೆ ಆರಂಭಿಸಲು ಇನ್ನಷ್ಟು ಸಮಯ ಕೋರಿವೆ. ಪಶ್ಚಿಮ ಬಂಗಾಳದಲ್ಲಿ ಅಂಪಾನ್‌ ಚಂಡಮಾರುತದಿಂದ ವಿಮಾನ ನಿಲ್ದಾಣದ ರನ್‌ವೇಯಲ್ಲಿ ನೀರು ತುಂಬಿತ್ತು ಹಾಗೂ ಸಾಕಷ್ಟು ಹಾನಿ ಉಂಟಾಗಿದೆ. ತಮಿಳುನಾಡು ಸಹ 25 ವಿಮಾನಗಳು ಚೈನ್ನೈಗೆ ಬಂದಿಳಿಯುವ ನಿಬಂಧನೆ ವಿಧಿಸಿಕೊಂಡಿದೆ. 

ದೇಶದಲ್ಲಿ ಸೋಮವಾರ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಒಂದು ದಿನದ ಅತಿ ಹೆಚ್ಚು 6,977 ಪ್ರಕರಣಗಳು ದಾಖಲಾಗಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು