ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡೆಯಾಜ್ಞೆ ಕೋರಲು ಮುಂದಾದ ಗೋವಾ

ಮುಂದಿನ ವಾರ ‘ಸುಪ್ರೀಂ’ಗೆ ಅರ್ಜಿ: ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೆ
Last Updated 21 ಫೆಬ್ರುವರಿ 2020, 21:20 IST
ಅಕ್ಷರ ಗಾತ್ರ

ಪಣಜಿ: ಕಳಸಾ–ಬಂಡೂರಿ ನಾಲೆ ಮೂಲಕ ಮಹದಾಯಿ ನದಿ ನೀರು ಪಡೆಯುವ ಕರ್ನಾಟಕದ ಯತ್ನಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಗೋವಾ, ಕರ್ನಾಟಕಕ್ಕೆ ಯಾವುದೇ ರೀತಿಯ ಅನುಮತಿ ನೀಡುವುದಕ್ಕೆ ತಡೆಯಾಜ್ಞೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದೆ.

‘ನಾಲ್ಕು ದಿನಗಳ ಒಳಗೆ ಸರ್ಕಾರ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಲಿದೆ’ ಎಂದು ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ತಿಳಿಸಿದ್ದಾರೆ.

ನ್ಯಾಯ ಮಂಡಳಿಯು ಅಧಿಸೂಚನೆ ಹೊರಡಿಸುವುದರಿಂದ ನದಿ ನೀರಿನ ವಿವಾದ ಕೊನೆಗೊಂಡಂತಾಗುವುದಿಲ್ಲ ಎಂದು ಗೋವಾ ಬಿಜೆಪಿ ಪ್ರತಿಪಾದಿಸಿದೆ.

‘ಅಧಿಸೂಚನೆಯ ನಂತರ ಇತರ ಕಾರ್ಯ ವಿಧಾನಗಳಿವೆ. ಪರಿಸರದ ಮೇಲಾಗುವ ಪರಿಣಾಮಗಳ ಅಧ್ಯಯನವೂ ಆಗಬೇಕಿದೆ’ ಎಂದು ಬಿಜೆಪಿ ಗೋವಾ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಸಾವೈಕರ್‌ ತಿಳಿಸಿದ್ದಾರೆ.

3 ಸಾವಿರ ಟನ್‌ ಚಿನ್ನದ ನಿಕ್ಷೇಪ ಪತ್ತೆ
ನವದೆಹಲಿ:
ಉತ್ತರ ಪ್ರದೇಶದಲ್ಲಿ 3,000 ಟನ್‌ ಚಿನ್ನದ ನಿಕ್ಷೇಪವನ್ನು ಭೂವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಇದು ದೇಶದಲ್ಲೇ ಇರುವ ಒಟ್ಟಾರೆ ಚಿನ್ನದ ನಿಕ್ಷೇಪಕ್ಕಿಂತ ಐದು ಪಟ್ಟು ಎಂದು ಭೂವಿಜ್ಞಾನಿಗಳು ತಿಳಿಸಿದ್ದಾರೆ.

ಸೋನ್‌ಭದ್ರಾ ಜಿಲ್ಲೆಯಲ್ಲಿ ಈ ನಿಕ್ಷೇಪ ಪತ್ತೆಯಾಗಿದೆ ಎಂದು ಗಣಿ ಇಲಾಖೆ ಅಧಿಕಾರಿ ಕೆ.ಕೆ. ರಾಜ್‌ ತಿಳಿಸಿದ್ದಾರೆ.

ಜಮ್ಮುವಿನಲ್ಲಿ ಹೆಚ್ಚಿದ ಕಣ್ಗಾವಲು
ಶ್ರೀನಗರ: ಭಯೋತ್ಪಾದನಾ ಚಟುವಟಿಕೆಗಳ ಮೇಲೆ ನಿಗಾ ಇಡಲು ಭದ್ರತಾ ಪಡೆಯು ಶ್ರೀನಗರ– ಜಮ್ಮು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಕಣ್ಗಾವಲು ಹೆಚ್ಚಿಸಿದೆ.

ಅಯೋಧ್ಯೆ: ನಿವೇಶನ ಸ್ವೀಕರಿಸಿದವಕ್ಫ್‌ ಮಂಡಳಿ
ಲಖನೌ (ಪಿಟಿಐ):
ಅಯೋಧ್ಯೆಯ ವಿವಾದಾತ್ಮಕ ನಿವೇಶನಕ್ಕೆ ಪರ್ಯಾಯವಾಗಿ ನೀಡುವ ಜಮೀನನ್ನು ತಿರಸ್ಕರಿಸುವ ಆಯ್ಕೆಯೇ ತನಗೆ ಇಲ್ಲ. ಆದರೆ, ಈ ನಿವೇಶನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಸೋಮವಾರ ನಡೆಯುವ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಉತ್ತರ ಪ್ರದೇಶದ ಸುನ್ನಿ ವಕ್ಫ್‌ ಮಂಡಳಿ ಶುಕ್ರವಾರ ಹೇಳಿದೆ.

ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದ ತೀರ್ಪನ್ನು ಸುಪ್ರೀಂ ಕೋರ್ಟ್‌ ಕಳೆದ ನವೆಂಬರ್‌ನಲ್ಲಿ ನೀಡಿತ್ತು. ಮಂದಿರ ನಿರ್ಮಾಣಕ್ಕಾಗಿ ನಿವೇಶನವನ್ನು ನೀಡಿತ್ತು. ಜತೆಗೆ, ಮಸೀದಿ ನಿರ್ಮಾಣಕ್ಕಾಗಿ ಐದು ಎಕರೆ ಪರ್ಯಾಯ ನಿವೇಶನ ನೀಡುವಂತೆಯೂ ಆದೇಶಿಸಿತ್ತು.

ಉತ್ತರ ಪ್ರದೇಶ ಸರ್ಕಾರವು ಐದು ಎಕರೆ ನಿವೇಶನವನ್ನು ಮಂಡಳಿಗೆ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಈ ಜಮೀನನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ಮಂಡಳಿಗೆ ಇದೆ. ಆದರೆ, ನಿವೇಶನವನ್ನು ತಿರಸ್ಕರಿಸುವ ಸ್ವಾತಂತ್ರ್ಯ ಮಂಡಳಿಗೆ ಇದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಹೇಳಿಲ್ಲ ಎಂದು ಫರೂಕಿ ಹೇಳಿದ್ದಾರೆ.ನಿವೇಶನ ನೀಡುವ ಆದೇಶ ಪತ್ರವನ್ನುಉತ್ತರ ಪ್ರದೇಶ ಸರ್ಕಾರವು ಈ ತಿಂಗಳ ಆರಂಭದಲ್ಲಿ ಮಂಡಳಿಗೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT