ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ರಾಹುಲ್ ಸಾವರ್ಕರ್ ಅಲ್ಲ; ರೇಪ್ ಇನ್ ಇಂಡಿಯಾ ಹೇಳಿಕೆಗೆ ಕ್ಷಮೆ ಕೇಳಲ್ಲ’

ಭಾರತದ ಆರ್ಥಿಕತೆಯನ್ನು ಕೆಡವಿರುವುದಕ್ಕೆ ನರೇಂದ್ರ ಮೋದಿ ಮತ್ತು ಸಹಾಯಕ ಅಮಿತ್ ಶಾ ಕ್ಷಮೆ ಕೇಳಲಿ
Last Updated 14 ಡಿಸೆಂಬರ್ 2019, 17:23 IST
ಅಕ್ಷರ ಗಾತ್ರ

ನವದೆಹಲಿ: ‘ರೇಪ್ ಇನ್ ಇಂಡಿಯಾ’ ಹೇಳಿಕೆಗೆ ಕ್ಷಮೆ ಕೇಳಲು ನಾನು ಸಾವರ್ಕರ್’ ಅಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಇಲ್ಲಿನ ರಾಮಲೀಲಾ ಮೈದಾನದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ‘ಭಾರತ ರಕ್ಷಿಸಿ ರ‍್ಯಾಲಿ’ಯಲ್ಲಿ ಅವರು ಮಾತನಾಡಿದರು.

‘ಸತ್ಯ ಮಾತನಾಡಿದ್ದಕ್ಕೆ ಕ್ಷಮೆ ಕೇಳುವಂತೆ ಬಿಜೆಪಿ ಒತ್ತಾಯಿಸುತ್ತಿದೆ. ನಾನು ರಾಹುಲ್ ಗಾಂಧಿಯೇ ವಿನಾ‘ರಾಹುಲ್ ಸಾವರ್ಕರ್’ ಅಲ್ಲ. ಕ್ಷಮೆ ಕೇಳುವ ಮಾತೇ ಇಲ್ಲ. ಈ ವಿಚಾರವಾಗಿ ಕಾಂಗ್ರೆಸ್‌ನ ಯಾರೊಬ್ಬರೂ ಕ್ಷಮೆ ಕೇಳುವುದಿಲ್ಲ’ ಎಂದು ರಾಹುಲ್‌ ಸ್ಪಷ್ಟ ಮಾತುಗಳಲ್ಲಿ ಹೇಳಿದರು.

‘ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡುತ್ತಿರುವ ಪ್ರಧಾನಿ ಮೋದಿ ಅವರು ಕ್ಷಮೆ ಕೇಳಬೇಕು. ದೇಶದ ಆರ್ಥಿಕತೆಯನ್ನು ಹಾಳುಗೆಡವಲು ಭಾರತ ವಿರೋಧಿಗಳು ಯತ್ನಿಸಿ ವಿಫಲರಾಗಿದ್ದರು. ಮೋದಿ ಅವರು ಈ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ರಾಹುಲ್ ಮೂದಲಿಸಿದರು.

‘ಪ್ರಾಯೋಗಿಕವಾಗಿ ಜಾರಿಗೊಳಿಸದ ಹೊರತು ಜಿಎಸ್‌ಟಿ ಅನುಷ್ಠಾನ ಮಾಡದಂತೆ ಮನಮೋಹನ್ ಸಿಂಗ್ ಹಾಗೂ ಚಿದಂಬರಂ ಅವರು ಎಚ್ಚರಿಕೆ ನೀಡಿದ್ದರು. ಆದರೆ ಅವರ ಮಾತನ್ನು ಮೋದಿ ಕೇಳಿಸಿಕೊಳ್ಳಲಿಲ್ಲ. ಆರ್ಥಿಕ ವೃದ್ಧಿ ದರ ಶೇ 9ರಷ್ಟಿದ್ದಾಗ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಆದರೆ ಈಗೇನಾಗಿದೆ? ಬೆಲೆ ಏರಿಕೆ ಖಂಡಿಸಿ ಜನರು ಈರುಳ್ಳಿ ಹಿಡಿದು ರಸ್ತೆಯಲ್ಲಿ ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದೊದಗಿದೆ’ ಎಂದರು.

‘ನನ್ನ ಹೆಸರು ರಾಹುಲ್ ಸಾವರ್ಕರ್‌ ಅಲ್ಲ’ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಶಿವಸೇನಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

*
ರಾಹುಲ್‌ಗೆ ‘ರಾಹುಲ್ ಜಿನ್ನಾ’ ಹೆಸರು ಹೊಂದುತ್ತದೆ. ಮುಸ್ಲಿಮರ ಓಲೈಕೆ ರಾಜಕಾರಣ ಮಾಡುವ ಅವರಿಗೆ ಸಾವರ್ಕರ್‌ಗಿಂತ ಜಿನ್ನಾ ಹೆಸರು ಸೂಕ್ತ .
-ಜಿವಿಎಲ್‌ ನರಸಿಂಹ ರಾವ್, ಬಿಜೆಪಿ ವಕ್ತಾರ

*
ಹಿಂದುತ್ವದ ಪ್ರತಿಪಾದಕ ಸಾವರ್ಕರ್‌ ಅವರನ್ನು ಗೌರವಿಸುವ ವಿಚಾರದಲ್ಲಿ ರಾಜಿಯಿಲ್ಲ. ನೆಹರೂ, ಗಾಂಧೀಜಿ ಅವರಂತೆ ಸಾವರ್ಕರ್ ಸಹ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ.
-ಸಂಜಯ್ ರಾವುತ್, ಶಿವಸೇನಾ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT