ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು: ಸಿಬಿಐ,ಎನ್‌ಐಎ ತನಿಖೆ ಏಕಿಲ್ಲ?

7
ಸರ್ಕಾರಕ್ಕೆ ವಿರೋಧ ಪಕ್ಷಗಳ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು: ಸಿಬಿಐ,ಎನ್‌ಐಎ ತನಿಖೆ ಏಕಿಲ್ಲ?

Published:
Updated:
Deccan Herald

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ನಡೆಸಿದ ಆರೋಪ ಕುರಿತ ತನಿಖೆಯನ್ನು ಎನ್‌ಐಎ ಅಥವಾ ಸಿಬಿಐಗೆ ಏಕೆ ವಹಿಸಿಲ್ಲ ಎಂದು ವಿರೋಧ ಪಕ್ಷಗಳು ಶನಿವಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.

ಈ ಪ್ರಕರಣದ ತನಿಖೆಯಲ್ಲಿ ದೇಶದ ವಿಶ್ವಾಸಾರ್ಹ ಮತ್ತು ಅತಿ ದೊಡ್ಡ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಎನ್‌ಐಎ ಹೆಸರು ಕಾಣಿಸುತ್ತಿಲ್ಲ. ಕೇವಲ ಪುಣೆ ಪೊಲೀಸರ ಹೆಸರು ಮಾತ್ರ ಪದೇ ಪದೇ ಕೇಳಿ ಬರುತ್ತಿದೆ ಎಂದು ಕಾಂಗ್ರೆಸ್‌, ಎನ್‌ಸಿಪಿ ವ್ಯಂಗ್ಯವಾಡಿವೆ.

ಪ್ರಧಾನಿ ಹತ್ಯೆಗೆ ಸಂಚು ನಡೆದಿರುವುದು ನಿಜವಾದರೆ ಇದೊಂದು ಅತ್ಯಂತ ಗಂಭೀರವಾದ ಪ್ರಕರಣ. ಸರ್ಕಾರಕ್ಕೆ ಗಂಭೀರತೆಯ ಅರಿವು ಇಲ್ಲವೇ ಎಂದು ಪ್ರಶ್ನಿಸಿವೆ.

ಇದರೊಂದಿಗೆ, ಮೋದಿ ಹತ್ಯೆ ಸಂಚಿನ ಆರೋಪದ ಮೇಲೆ ಸಾಮಾಜಿಕ ಮತ್ತು ಮಾನವ ಹಕ್ಕುಗಳ ಹೋರಾಟಗಾರರನ್ನು ಬಂಧಿಸಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸರ್ಕಾರ ತನಿಖೆಯನ್ನು ಮಹಾರಾಷ್ಟ್ರ ಪೊಲೀಸರ ಬದಲು ಕೇಂದ್ರ ತನಿಖಾ ಸಂಸ್ಥೆಗಳಿಗೆ ವಹಿಸಲು ಇನ್ನೂ ಏಕೆ ಮೀನಮೇಷ ಎಣಿಸುತ್ತಿದೆ ಎಂದು ಕಾಂಗ್ರೆಸ್‌ನ ಅಭಿಷೇಕ್‌ ಮನು ಸಿಂಘ್ವಿ ಮತ್ತು ಎನ್‌ಸಿಪಿಯ ನವಾಬ್‌ ಮಲಿಕ್ ಅನುಮಾನ ವ್ಯಕ್ತಪಡಿಸಿದ್ದಾರೆ.  

ಪ್ರಕರಣದ ತನಿಖೆಯಲ್ಲಿ ಎನ್‌ಐಎ, ಸಿಬಿಐ, ಕೇಂದ್ರ ಗೃಹ ಸಚಿವಾಲಯ, ಗುಪ್ತಚರ ಇಲಾಖೆಯನ್ನು ಸೇರಿಸಿಕೊಳ್ಳುವಂತೆಯೂ ಅವರು ಸಲಹೆ ಮಾಡಿದ್ದಾರೆ.

ಪ್ರಧಾನಿ ಹತ್ಯೆಗೆ ಸಂಚು ರೂಪಿಸಿದ ಬಗ್ಗೆ ತಮ್ಮ ಬಳಿ ಬಲವಾದ ಸಾಕ್ಷ್ಯಾಧಾರಗಳಿವೆ ಎಂದು ಪುಣೆ ಪೊಲೀಸರು ಹೇಳಿದ್ದಾರೆ. ಪೊಲೀಸರು ಈ ಪತ್ರವನ್ನು ಇದುವರೆಗೂ ನ್ಯಾಯಾಲಯಕ್ಕೆ ಏಕೆ ಸಲ್ಲಿಸಿಲ್ಲ ಎಂದು ಸಿಂಘ್ವಿ ಪ್ರಶ್ನಿಸಿದ್ದಾರೆ.

‘ನಕ್ಸಲ್‌ ನಂಟು ಕಟ್ಟು ಕಥೆ’

ನವದೆಹಲಿ: ‘ನಕ್ಸಲ್‌ ನಂಟು, ಅವರೊಂದಿಗೆ ನಡೆಸಿರುವ ಪತ್ರ ವ್ಯವಹಾರ ಎಲ್ಲಾ ಸುಳ್ಳಿನ ಕಂತೆ. ಪೊಲೀಸರ ಕಟ್ಟು ಕಥೆ’ ಎಂದು ಬಂಧಿತ ಹೋರಾಟಗಾರರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

‘ಪುಣೆ ಪೊಲೀಸರ ಆರೋಪದಲ್ಲಿ ಹೊಸದೇನೂ ಇಲ್ಲ. ಜೂನ್‌ನಲ್ಲಿ ಮಾಡಿದ ಆರೋಪಗಳನ್ನೇ ಹೊಸದೆಂಬಂತೆ ಬಿಂಬಿಸುತ್ತಿದ್ದಾರೆ. ನಿಜಕ್ಕೂ ಇದು ಹಾಸ್ಯಾಸ್ಪದ’ ಎಂದು ಬಂಧಿತ ಹೋರಾಟಗಾರರಾದ ಸುಧಾ ಭಾರದ್ವಾಜ್‌, ವರವರ ರಾವ್‌, ವರ್ನಾನ್‌ ಗೋನ್ಸಾಲ್ವೆಸ್‌ ಹೇಳಿದ್ದಾರೆ.

* ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕುವ ಪ್ರಶ್ನೆ ಇಲ್ಲ. ಯಾರೂ ಅನಗತ್ಯ ಆತಂಕಕ್ಕೆ ಒಳಗಾಗಬೇಕಿಲ್ಲ

- ರಾಜನಾಥ್‌ ಸಿಂಗ್‌,ಕೇಂದ್ರ ಗೃಹ ಸಚಿವ

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 2

  Sad
 • 2

  Frustrated
 • 8

  Angry

Comments:

0 comments

Write the first review for this !