ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಾದ್ಯಂತ ಲಾಕ್‌ಡೌನ್‌ ವಿಸ್ತರಣೆ ಸಾಧ್ಯ: ಏ.11ರಂದು ಪ್ರಧಾನಿ ಅಂತಿಮ ನಿರ್ಧಾರ

Last Updated 8 ಏಪ್ರಿಲ್ 2020, 15:08 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ವಿಧಿಸಲಾಗಿರುವ 21 ದಿನಗಳ ದಿಗ್ಬಂಧನವನ್ನು ಏಪ್ರಿಲ್‌ 14ರ ನಂತರವೂ ಮುಂದುವರಿಸುವ ಸಾಧ್ಯತೆ ಇರುವುದಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸೂಚನೆ ನೀಡಿದ್ದಾರೆ. ಏಪ್ರಿಲ್‌ 11ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿದ ಬಳಿಕ ಲಾಕ್‌ಡೌನ್‌ ಅವಧಿ ವಿಸ್ತರಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ರಾಜಕೀಯ ಮುಖಂಡರಿಗೆ ಪ್ರಧಾನಿ ಹೇಳಿದ್ದಾರೆ.

16 ರಾಜಕೀಯ ಪಕ್ಷಗಳ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವರ್ಚುವಲ್‌ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದರು. 'ಏಪ್ರಿಲ್‌ 14ರಂದು ಒಂದೇ ಬಾರಿಗೆ ಲಾಕ್‌ಡೌನ್‌ ನಿರ್ಬಂಧಗಳನ್ನು ತೆರವುಗೊಳಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿರುವುದಾಗಿ' ಬಿಜು ಜನತಾ ದಳದ ಮುಖಂಡ ಪಿನಾಕಿ ಮಿಶ್ರಾ ಹೇಳಿದ್ದಾರೆ.

'ವಿರೋಧ ಪಕ್ಷಗಳ ಮುಖಂಡರ ಪೈಕಿ ಶೇ 80ರಷ್ಟು ಲಾಕ್‌ಡೌನ್‌ ಅವಧಿ ವಿಸ್ತರಣೆ ಪರವಾಗಿ ಮಾತನಾಡಿದ್ದು, ಅಂತಿಮ ನಿರ್ಧಾರವನ್ನು ಪ್ರಧಾನಿ ಅವರಿಗೆ ಬಿಡಲಾಗಿದೆ' ಎಂದು ರಾಜ್ಯ ಸಭೆ ವಿರೋಧ ಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ.

ಕೊರೊನಾ ವಿರುದ್ಧದ ಹೋರಾಟವು ಇನ್ನಷ್ಟು ಸುದೀರ್ಘವಾಗಲಿದೆ ಮತ್ತು ಅದರ ಪರಿಣಾಮ ದೇಶದ ಅರ್ಥವ್ಯವಸ್ಥೆಯ ಮೇಲಾಗಲಿದೆ ಎಂಬುದನ್ನು ಮನಗಂಡಿರುವ ವಿವಿಧ ರಾಜಕೀಯ ಪಕ್ಷಗಳ ನಾಯಕರು ಈ ಹೋರಾಟದಲ್ಲಿ ಸರ್ಕಾರದ ಜತೆ ಕೈಜೋಡಿಸುವ ಭರವಸೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಬುಧವಾರ ನಡೆದ ವಿವಿಧ ಪಕ್ಷಗಳ ನಾಯಕರ ವಿಡಿಯೊ ಸಂವಾದದಲ್ಲಿ ಎಲ್ಲಾ ನಾಯಕರು ಹೋರಾಟಕ್ಕೆ ಬೆಂಬಲ ಸೂಚಿಸುವುದರ ಜತೆಗೆ ಕೆಲವು ಸಲಹೆ ಸೂಚನೆಗಳನ್ನೂ ನೀಡಿದ್ದಾರೆ.

ಸಂವಾದದ ನಂತರ ಸುದ್ದಿಸಂಸ್ಥೆಯ ಜತೆ ಮಾತನಾಡುತ್ತಾ ಈ ವಿಚಾರ ತಿಳಿಸಿದ ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರಾದ ಅಧಿರ್‌ರಂಜನ್‌ ಚೌಧರಿ, 'ಲಾಕ್‌ಡೌನ್‌ ಅನ್ನು ಸರ್ಕಾರವು ಮುಂದುವರಿಸುವ ಸಾಧ್ಯತೆ ಇದೆ. ರೈತರಿಗೆ ಇದರಿಂದ ವಿನಾಯಿತಿ ನೀಡಬೇಕು ಮತ್ತು ರಸಗೊಬ್ಬರಗಳ ಮೇಲಿನ ತೆರಿಗೆಯನ್ನು ರದ್ದು ಮಾಡಬೇಕು ಎಂದು ಕಾಂಗ್ರೆಸ್‌ ಮನವಿ ಮಾಡಿದೆ' ಎಂದರು.

'ಜನರ ಆರೋಗ್ಯಕ್ಕೆ ಯಾವುದೇ ಅಪಾಯವಾಗುವುದಿಲ್ಲ ಎಂಬುದು ಖಚಿತವಾಗದ ಹೊರತು ಕೆಲವು ಪ್ರದೇಶಗಳ ನಿರ್ಬಂಧಗಳನ್ನು ಸಡಿಲಿಸಬಾರದು. ದೇಶದ ಮತ್ತು ಜಾಗತಿಕ ಅರ್ಥ ವ್ಯವಸ್ಥೆಯ ಮೇಲೂ ಕೊರೊನಾದ ತೀವ್ರ ಪರಿಣಾಮ ಉಂಟಾಗಿದೆ. ಅರ್ಥವಯವಸ್ಥೆಯನ್ನು ಮೇಲೆತ್ತುವ ಕ್ರಮಗಳನ್ನು ಈಗಿನಿಂದಲೇ ಆರಂಭಿಸಬೇಕು' ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಸಲಹೆ ನೀಡಿದ್ದಾರೆ.

ಎನ್‌ಸಿಪಿ ಮುಖಂಡ ಶರಾದ್‌ ಪವಾರ್‌, ರಾಮ್‌ ಗೋಪಾಲ್‌ ಯಾದವ್‌ (ಸಮಾಜವಾದಿ ಪಾರ್ಟಿ), ಸತೀಶ್‌ ಮಿಶ್ರಾ (ಬಿಎಸ್‌ಪಿ), ಚಿರಾಗ್‌ ಪಾಸ್ವಾನ್‌ (ಲೋಕ ಜನಶಕ್ತಿ ಪಾರ್ಟಿ), ಟಿ.ಆರ್‌.ಬಾಲು (ದ್ರಾವಿಡ ಮುನ್ನೇತ್ರ ಕಝಗಂ), ಸುಖಬಿರ್‌ ಸಿಂಗ್‌ ಬಾದಲ್‌ (ಶಿರೋಮಣಿ ಅಕಾಲಿ ದಳ), ರಾಜೀವ್‌ ರಂಜನ್‌ ಸಿಂಗ್‌ (ಜನತಾ ದಳ–ಯು), ಸಂಜಯ್‌ ರಾವತ್‌ (ಶಿವ ಸೇನಾ) ಹಾಗೂ ಸುದಿಪ್‌ ವಂದ್ಯೋಪಧ್ಯಾಯ (ತೃಣಮೂಲ) ಸಭೆಯಲ್ಲಿ ಭಾಗಿಯಾಗಿದ್ದರು.

ರೈತರಿಗೆ ನೆರವಾಗಿ: ಹಿಂಗಾರು ಬೆಳೆಯು ಕಟಾವಿಗೆ ಬಂದಿರುವುದರಿಂದ ಲಾಕ್‌ಡೌನ್‌ನಿಂದ ರೈತರಿಕೆ ರಿಯಾಯಿತಿ ನೀಡುವಂತೆ ಕಾಂಗ್ರೆಸ್‌ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT