ನೌಕಾಪಡೆಯ ನೌಕೆಯಲ್ಲಿ ಯಾರಾದರೂ ರಜೆ ಕಳೆಯಲು ಹೋಗುತ್ತಾರಾ?: ರಾಹುಲ್ ಗಾಂಧಿ

ನವದೆಹಲಿ: ರಾಜೀವ್ ತಮ್ಮ ಕುಟುಂಬದ ಜತೆ 10 ದಿನ ರಜೆ (1987ರಲ್ಲಿ) ಕಳೆಯಲು ಐಎನ್‌ಎಸ್ ವಿರಾಟ್ ನೌಕೆಯನ್ನು ಬಳಸಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನಾನು ಅಪ್ಪನೊಂದಿಗೆ ಎರಡು ಬಾರಿ ಐಎನ್ಎಸ್ ವಿರಾಟ್ ನೌಕೆ ಏರಿದ್ದೆ. ಅದು ಔಪಚಾರಿಕ ಪ್ರವಾಸವಾಗಿತ್ತೇ ವಿನಾ ರಜಾ ಕಳೆಯಲು ಆಗಿರಲಿಲ್ಲ. ಯಾರಾದರೂ ರಜೆ ಕಳೆಯುವುದಕ್ಕಾಗಿ ನೌಕಾಪಡೆಯ ನೌಕೆಯನ್ನು ಬಳಸುತ್ತಾರೆಯೇ? ಅದು ಆಡಂಬರದ ಹಡಗು ಅಲ್ಲ.
ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಹುಲ್, ನನ್ನ ಅಪ್ಪ ರಾಜೀವ್ ಗಾಂಧಿ ಬಗ್ಗೆ ಮೋದಿಯವರ ವಾಗ್ದಾಳಿ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನರೇಂದ್ರ ಮೋದಿ ನನ್ನ ಕುಟುಂಬದ ಬಗ್ಗೆ ಗೀಳು ಹೊಂದಿದ್ದಾರೆ. ನಾನು ಆ ರೀತಿಯ ಗೀಳು ಇಟ್ಟುಕೊಂಡಿಲ್ಲ. ಪ್ರಧಾನಿ ಮೋದಿ ಯೋಚಿಸುವಷ್ಟು ನಾನು ನನ್ನ ಅಪ್ಪ, ನನ್ನ ಅಜ್ಜಿ ಅಥವಾ ಅಜ್ಜನ ಬಗ್ಗೆ ಯೋಚಿಸುವುದಿಲ್ಲ. ಓಡಿ ತಪ್ಪಿಸಿಕೊಳ್ಳುವುದಕ್ಕೆ ಅದೊಂದೇ ದಾರಿ ಎಂದು ಅವರು ಅಂದುಕೊಂಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದಿದ್ದಾರೆ.
ದೆಹಲಿಗೆ ರಾಜ್ಯ ಸ್ಥಾನಮಾನ ನೀಡುವುದಾದರೆ ಮಾತ್ರ ನಾವು ಪ್ರಧಾನಿ ಸ್ಥಾನಕ್ಕೆ ರಾಹುಲ್‌ಗೆ ಬೆಂಬಲ ನೀಡುತ್ತೇವೆ ಎಂದಿದ್ದರು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್. ಈ ಬಗ್ಗೆ ನೀವೇನಂತೀರಿ ಎಂದು ರಾಹುಲ್‌ಗೆ ಕೇಳಿದಾಗ ನನಗೆ ಎಲ್ಲ ನಾಯಕರಲ್ಲಿ ಪ್ರೀತಿ ಮತ್ತ ಗೌರವ ಇದೆ. ಭಾರತದ ಪ್ರಧಾನಿ ಯಾರು ಆಗುತ್ತಾರೆ ಎಂದು ತೀರ್ಮಾನಿಸುವ ಹಕ್ಕು ಇರುವುದು ಜನರಿಗೆ ಮಾತ್ರ ಎಂದಿದ್ದಾರೆ.
ಆದಾಗ್ಯೂ, ಕೇಜ್ರಿವಾಲ್ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಕೇಳಿದಾಗ, ತಮಿಳುನಾಡಿನಲ್ಲಿ ಸ್ಟಾಲಿನ್ ಅಥವಾ ಜಯಲಲಿತಾ ( ತಮಿಳುನಾಡಿನ ಮಾಜಿ ಮುಖ್ಯಮಂತ್ರಿ)ಯಂತೆ ಕೇಜ್ರಿವಾಲ್ ಕೂಡಾ ಒಂದು ದನಿಯನ್ನು ಪ್ರತಿನಿಧೀಕರಿಸುತ್ತಾರೆ. ಭಾರತವು ಈ ಎಲ್ಲ ದನಿಗಳ ಸಂಗಮವಾಗಿದ್ದು.ಇದೆಲ್ಲವನ್ನೂ ನಾನು ಗೌರವಿಸುತ್ತೇನೆ ಎಂದಿದ್ದಾರೆ.
ಭಾನುವಾರ ದೆಹಲಿಯಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.