ಗುರುವಾರ , ಜೂನ್ 4, 2020
27 °C

ಲಾಕ್‌‌ಡೌನ್: ಬೇಡಿಕೆಗೆ ತಕ್ಕಂತೆ ವಿಶೇಷ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ನಿರ್ಧಾರ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಲಾಕ್‌ಡೌನ್ ಅವಧಿ ಮುಗಿದ ನಂತರ ಅಗತ್ಯವಿರುವ ಕಡೆ ವಿಶೇಷ ರೈಲುಗಳ ಸಂಚಾರ ಆರಂಭಿಸಲು ರೈಲ್ವೆ ಮಂಡಳಿ ಸಿದ್ಧವಿದ್ದು, ಈ ಸಂಬಂಧ ಆಯಾ ರಾಜ್ಯಗಳ ಮುಖ್ಯಕಾರ್ಯದರ್ಶಿಗಳ ಜೊತೆ ಮಾತನಾಡುವಂತೆ ಪ್ರಾದೇಶಿಕ ವ್ಯವಸ್ಥಾಪಕರಿಗೆ ಮಂಡಳಿ ನಿರ್ದೇಶನ ನೀಡಿದೆ.

ಲಾಕ್ ಡೌನ್ ಅವಧಿ ಮುಗಿಯುತ್ತಿದ್ದಂತೆ ದೇಶದಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಏನೇನು ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಎಂಬುದರ ಕುರಿತು ಅಭಿಪ್ರಾಯ ತಿಳಿಯಲು ಬುಧವಾರ ಪ್ರಧಾನಿ ನರೇಂದ್ರಮೋದಿ ಸರ್ವಪಕ್ಷಗಳ ಜೊತೆ ಸಭೆ ನಡೆಸಿದರು. ಈ ಸಭೆಯಲ್ಲಿ ಯಾರೊಬ್ಬರೂ ಲಾಕ್ ಡೌನ್ ತೆರವು ಮಾಡುವಂತೆ ಸೂಚಿಸಿಲ್ಲ. ಆದರೂ ಸರ್ಕಾರ ಏಪ್ರಿಲ್ 14ರ ನಂತರ ಏನು ಮಾಡಬೇಕು ಎಂಬುದರ ಕುರಿತು ಸಲಹೆಗಳನ್ನು ಪಡೆದುಕೊಂಡಿದೆ.

ಲಾಕ್ಡೌನ್ ಜಾರಿಗೆ ಬಂದ ಸಮಯದಲ್ಲಿ ಹಲವು ರಾಜ್ಯಗಳು ವಲಸೆ ಹೋಗಿರುವ ತಮ್ಮ ತಮ್ಮ ರಾಜ್ಯದ ಕಾರ್ಮಿಕರನ್ನು ವಾಪಸ್ ಕರೆಸಿಕೊಳ್ಳಲು ರೈಲು ಸೇರಿದಂತೆ ಸಮೂಹ ಸಾರಿಗೆ ಅಗತ್ಯವಿದೆ ಎಂದು ಬೇಡಿಕೆ ಇಟ್ಟಿದ್ದವು. ಅಲ್ಲದೆ, ಕಾರ್ಖಾನೆಗಳು ಕೊವಿಡ್ 19 ಸಂಬಂಧಿಸಿದ ಕೇಂದ್ರದ ಆದೇಶ ಪಾಲನೆ ಮಾಡಿರುವುದರಿಂದ ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿವೆ. ವಲಸಿಗರು ತಮ್ಮ ತಮ್ಮ ಗ್ರಾಮಗಳಿಗೆ ಹೇಗೋ ಸಾರಿಗೆ ವ್ಯವಸ್ಥೆ ಮಾಡಿಕೊಂಡು ತಲುಪಿದ್ದಾರೆ. ಇನ್ನೂ ಕೆಲ ಕಾರ್ಮಿಕರು ಆಪತ್ತಿನಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ, ಗ್ರಾಮಗಳಿಗೆ ತೆರಳಿರುವ ಕಾರ್ಮಿಕರು ವಾಪಸ್ ಬರುವಂತೆ ಕಾಣುತ್ತಿಲ್ಲ. ಜಮೀನುಗಳಲ್ಲಿ ಈಗ ಕಾರ್ಮಿಕರ ಅಗತ್ಯವಿದ್ದು, ಅವರು ಜಮೀನುಗಳಲ್ಲಿ ಕೆಲಸಕ್ಕೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದಲ್ಲದೆ,  ಕೆಲವು ರೈಲು ಮಾರ್ಗಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸೀಮಿತ ಪ್ರಯಾಣಿಕರಿಗೆ ಅವಕಾಶ ಮಾಡಿಕೊಟ್ಟು ನಿಲುಗಡೆ ರಹಿತ ರೈಲುಗಳ ಸಂಚಾರಕ್ಕೆ ಅವಕಾಶ ನೀಡಲು ಮಂಡಳಿ ಯೋಚಿಸುತ್ತಿದೆ ಎಂದು  ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಲೋಕಸಭಾ ಸದಸ್ಯರ ಒಂದು ತಂಡ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಿದ್ದು, ಕೊರೊನಾ ಸೋಂಕು ಹರಡುವುದನ್ನು ತಡೆಯುವ ಪ್ರಥಮ ಹಂತವಾಗಿ ಕಾರ್ಮಿಕರು ಮನೆಗೆ ಬರುವುದನ್ನು ತಡೆಯಲು ರೈಲಿನಂತಹ ಸಮೂಹ ಸಾರಿಗೆಯನ್ನು ಸದ್ಯಕ್ಕೆ ತಡೆಹಿಡಿಯಬೇಕೆಂದು ಸರ್ಕಾರಕ್ಕೆ ತಿಳಿಸಿದೆ.

ಈ ಸಂಬಂಧ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದ ಸಂಸದರು ಕೇಂದ್ರದ ಹಿರಿಯ ಸಚಿವರನ್ನು ಭೇಟಿ ಮಾಡಿ, ಕಾರ್ಮಿಕರು ಒಮ್ಮೆ ಹಳ್ಳಿಗಳಿಗೆ ತೆರಳಿದರೆ, ಮತ್ತೆ ದೀಪಾವಳಿವರೆಗೆ ನಗರಗಳಿಗೆ ಹಿಂತಿರುಗುವುದಿಲ್ಲ. ಇದು ಆರ್ಥಿಕ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅಲ್ಲದೆ, ಇದು ಉತ್ಪಾದನಾ ಘಟನೆಗಳ ಮತ್ತು ಆರ್ಥಿಕ ವ್ಯವಸ್ಥೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹಳ್ಳಿಗಳಲ್ಲಿ ಯಾವುದೇ ಉದ್ಯೋಗಗಳಿಲ್ಲ. ಇದೂ ಕೂಡ ಅಪಾಯಕಾರಿ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ತಿಳಿಸಿದ್ದಾಗಿ ಮೂಲಗಳು ಹೇಳಿವೆ.

ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ಕೊರೊನಾ ಸೋಂಕು ಪ್ರಕರಣಗಳಿಂದಾಗಿ ರೈಲುಗಳ ಸಂಚಾರಕ್ಕೆ ಪೂರ್ಣ ಅವಕಾಶ ನೀಡುವಂತೆ ಕಾಣುತ್ತಿಲ್ಲ. ಏಪ್ರಿಲ್ 14ರ ನಂತರ ಲಾಕ್‌‌ಡೌನ್ ಅಂತ್ಯಗೊಂಡರೆ, ರೈಲುಗಳನ್ನು ಸಂಚರಿಸಲು ಅವಕಾಶ ನೀಡುವುದು ಸರ್ಕಾರದ ಕಾರ್ಯತಂತ್ರದಲ್ಲಿ ಇಲ್ಲ. ಹಿರಿಯ ರೈಲ್ವೆ ಅಧಿಕಾರಿಯೊಬ್ಬರ ಪ್ರಕಾರ, ಈ ಸಮಯದಲ್ಲಿ ಪ್ರಯಾಣಿಕರ ರೈಲುಗಳಿಗೆ ಅವಕಾಶ ನೀಡುವ ಯಾವುದೇ ಸಾಧ್ಯತೆ ಬಗ್ಗೆ ಚರ್ಚಿಸಲಾಗಿಲ್ಲ. ನಾವು ರಾಜ್ಯಗಳ ಜೊತೆ ಮಾತನಾಡಿ ಅಭಿಪ್ರಾಯ ಸಂಗ್ರಹಿಸುತ್ತೇವೆ
ನಂತರ ರೈಲು ಸಂಚಾರ ಬೇಡವೆಂದು ನಿರಾಕರಿಸುವ ರಾಜ್ಯಗಳಿಗೆ ಕಡಿಮೆ ರೈಲುಗಳನ್ನು ಸಂಚರಿಸಲು ಅವಕಾಶ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಲಾಕ್‌ಡೌನ್ ಮುಗಿದ ನಂತರ ಅಂತರರಾಜ್ಯ ರೈಲುಗಳ ಸಂಚಾರವನ್ನು ನಿರ್ಬಂಧಿಸುವಂತೆ ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್ ರಾಜ್ಯಗಳು ರೈಲ್ವೆ ಇಲಾಖೆಗೆ ಕೇಳಿಕೊಂಡಿವೆ ಎನ್ನಲಾಗಿದೆ. ಮಹಾರಾಷ್ಟ್ರ ಮುಂಬಯಿ ಸ್ಥಳೀಯ ರೈಲುಗಳ ಸಂಚಾರದ ಬಗ್ಗೆ ವಲಯ ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದೆ.

ಸಮೂಹ ಸಾರಿಗೆ ಸೌಲಭ್ಯಗಳನ್ನು ನಿಲ್ಲಿಸುವುದರ ಹೊರತಾಗಿ, ಎಂಎಸ್‌ಎಂಇ ಸಾಲಗಳನ್ನು ಮೂರು ತಿಂಗಳವರೆಗೆ ಮನ್ನಾ ಮಾಡಬೇಕು, ಪಂಚಾಯಿತಿಗಳಿಗೆ ಹೆಚ್ಚಿನ ಹಣವನ್ನು ನೀಡಬೇಕು, ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು ಕೃಷಿ ಕ್ಷೇತ್ರಕ್ಕೆ ಹೆಚ್ಚು ನೆರವು ನೀಡಬೇಕು, ಎಂಜಿಎನ್‌ಆರ್‌ಇಜಿಎಸ್ ಅಡಿಯಲ್ಲಿ ವಾರ್ಷಿಕವಾಗಿ ಕೆಲಸದ ದಿನಗಳು 100 ರಿಂದ 150 ದಿನಗಳಿಗೆ ಹೆಚ್ಚಿಸಬೇಕೆಂದು ಸಂಸದರ ಗುಂಪು ಸರ್ಕಾರವನ್ನು ಒತ್ತಾಯಿಸಿದೆ ಎಂದು ಮೂಲಗಳು ತಿಳಿಸಿವೆ.

COVID-19 ಬಿಕ್ಕಟ್ಟನ್ನು ಎದುರಿಸಲು ಈ ಹಿಂದೆ ನೀಡಿದ ವರದಿಯಲ್ಲಿ ಸಂಸದರ ತಂಡ ನೀಡಿದ ಹಲವು ಸಲಹೆಗಳನ್ನು ಸರ್ಕಾರವು ತನ್ನ ಹಣಕಾಸು ಪ್ಯಾಕೇಜ್‌ನಲ್ಲಿ ಸೇರಿಸಿಕೊಂಡಿತ್ತು.

ಈ ಗುಂಪಿನಲ್ಲಿ ಜಯಂತ್ ಸಿನ್ಹಾ, ಶಿವಕುಮಾರ್ ಉದಾಸಿ, ಸಂಜಯ್ ಜೈಸ್ವಾಲ್, ಮನೋಜ್ ಕೋಟಕ್ ಮತ್ತು ರಾಜ್ಯಸಭಾ ಸದಸ್ಯರಾದ ವಿನಯ್ ಸಹಸ್ರಬುದ್ದೆ, ರಾಜೀವ್ ಚಂದ್ರಶೇಖರ್ ಮತ್ತು ಸ್ವಪನ್ ದಾಸ್‌ಗುಪ್ತಾ ಇದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು