ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನೆ: 250 ಅಧಿವೇಶನದ ಮೆರುಗು

Last Updated 18 ನವೆಂಬರ್ 2019, 1:15 IST
ಅಕ್ಷರ ಗಾತ್ರ

ನವದೆಹಲಿ: ಸೋಮವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. ಈ ಅಧಿವೇಶನದ ಮೂಲಕ 67 ವರ್ಷಗಳ ರಾಜ್ಯಸಭೆಯು, ಇನ್ನೊಂದು ದಾಖಲೆ ಸೃಷ್ಟಿಸಲು ಸಿದ್ಧವಾಗಿದೆ.

1952ರ ಮೇ 13ರಂದು ಮೊದಲ ಅಧಿವೇಶನ ನಡೆಸಿದ್ದ ರಾಜ್ಯಸಭೆಗೆ, ಸೋಮವಾರದಿಂದ ಆರಂಭವಾಗುತ್ತಿರುವ ಅಧಿವೇಶನವು 250ನೇ ಅಧಿವೇಶನವಾಗಿದೆ.

ಈ ಸಾಧನೆಯ ಸ್ಮರಣಾರ್ಥ ರಾಜ್ಯಸಭೆಯಲ್ಲಿ ಸೋಮವಾರ, ‘ಭಾರತದ ರಾಜಕಾರಣದಲ್ಲಿ ರಾಜ್ಯಸಭೆಯ ಪಾತ್ರ ಮತ್ತು ಸುಧಾರಣೆಯ ಅಗತ್ಯ’ ವಿಶೇಷಯವನ್ನು ಕುರಿತು ಚರ್ಚೆ ಆಯೋಜಿಸಲಾಗಿದೆ. ಚರ್ಚೆಯಲ್ಲಿ ವಿರೋಧಪಕ್ಷಗಳು ಮೋದಿ ನೇತೃತ್ವದ ಸರ್ಕಾರವನ್ನು ಟೀಕೆಗೆ ಒಳಪಡಿಸಲು ಸಿದ್ಧತೆ ನಡೆಸಿವೆ. ಕೆಲವು ಮಸೂದೆಗಳನ್ನು ಹಣಕಾಸು ಮಸೂದೆಯ ರೂಪದಲ್ಲಿ ಮಂಡಿಸುವ ಮೂಲಕ ಮೋದಿ ಸರ್ಕಾರವು ಮೇಲ್ಮನೆಯ ಘನತೆಯನ್ನು ಕುಂದಿಸಿದೆ ಎಂಬುದು ವಿರೋಧಪಕ್ಷಗಳ ಆರೋಪವಾಗಿದೆ.

ಮೇಲ್ಮನೆಯ ಅಂಕಿ ಅಂಶಗಳು

3,924- ಮೇಲ್ಮನೆಯು ಈವರೆಗೆ ಅಂಗೀಕರಿಸಿದ ಮಸೂದೆಗಳು

3 -ತಿರಸ್ಕರಿಸಿದ ಸಂವಿಧಾನ ತಿದ್ದುಪಡಿ ಮಸೂದೆಗಳು

3 -ರಾಜ್ಯಸಭೆಯಿಂದ ಉಚ್ಚಾಟನೆಗೊಂಡಿರುವ ಸದಸ್ಯರ ಸಂಖ್ಯೆ

1-ನಡೆಸಿರುವ ವಾಗ್ದಂಡನಾ ಪ್ರಕ್ರಿಯೆ

5 -ಲೋಕಸಭೆಯಲ್ಲಿ ಅಂಗೀಕೃತವಾಗಿದ್ದರೂ, ರಾಜ್ಯಸಭೆಯು ತಿರಸ್ಕರಿಸಿದ ಮಸೂದೆಗಳ ಒಟ್ಟು ಸಂಖ್ಯೆ

ಸದಸ್ಯರು

2,282 -ರಾಜ್ಯಸಭೆಯಲ್ಲಿ ಈವರೆಗೆ ಕಾರ್ಯನಿರ್ವಹಿಸಿರುವ ಸದಸ್ಯರು

208- ರಾಜ್ಯಸಭೆಯಲ್ಲಿ ಕಾರ್ಯನಿರ್ವಹಿಸಿದ್ದ ಮಹಿಳೆಯರು

ರಾಜ್ಯಸಭೆಯ ಹಾಲಿ ಸದಸ್ಯ ಮಹೇಂದ್ರ ಪ್ರಸಾದ್‌ (ಬಿಜೆಪಿ) ಅವರು ರಾಜ್ಯಸಭೆಯಲ್ಲಿ ಅತಿದೀರ್ಘಕಾಲ ಸೇವೆ ಸಲ್ಲಿಸಿದ ಸದಸ್ಯರಾಗಿದ್ದಾರೆ. ಅವರು 7ನೇ ಅವಧಿಯ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಸಕ್ತ ಮಣಿಪುರದ ರಾಜ್ಯಪಾಲೆಯಾಗಿರುವ ನಜ್ಮಾ ಹೆಫ್ತುಲ್ಲಾ ಅವರು ರಾಜ್ಯಸಭೆಯಲ್ಲಿ 36 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಮಹಿಳೆ

ಅಪರೂಪದ ದಾಖಲೆಗಳು

* ರಾಜ್ಯಸಭೆಯು ಇತಿಹಾಸದಲ್ಲಿ ಎರಡು ಬಾರಿ ಏಕಾಂಗಿಯಾಗಿಯೇ ಬೇರೆಬೇರೆ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಅನುಮತಿ ನೀಡಿತ್ತು. ಸಂವಿಧಾನದ ವಿಧಿ 356(3)ರ ಅಡಿ ಲೋಕಸಭೆಯನ್ನು ವಿರ್ಜಿಸಿದ್ದ ಸಂದರ್ಭದಲ್ಲಿ ರಾಜ್ಯಸಭೆಯು ಈ ಕೆಲಸ ಮಾಡಿತ್ತು. 1977ರಲ್ಲಿ ಮೊದಲಬಾರಿಗೆ ತಮಿಳುನಾಡು ಮತ್ತು ನಾಗಾಲ್ಯಾಂಡ್‌ನಲ್ಲಿ ಹಾಗೂ 1991ರಲ್ಲಿ ಹರಿಯಾಣದಲ್ಲಿ ಈ ರೀತಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.

* 1991ರಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆ ತಿದ್ದುಪಡಿ ಸುಗ್ರೀವಾಜ್ಞೆಗೆ ಒಪ್ಪಿಗೆ ಪಡೆಯುವ ವಿಚಾರವನ್ನು ಮತಕ್ಕೆ ಹಾಕಿದಾಗ ಪರ- ವಿರುದ್ಧ ತಲಾ 39 ಮತಗಳು ಬಂದಿದ್ದವು. ಆಗ ಸಭಾಪತಿ ಪೀಠದಲ್ಲಿದ್ದ ಸಿಪಿಎಂ ಸದಸ್ಯ ಎಂ.ಎ. ಬೇಬಿ ಅವರು ನಿರ್ಣಯದ ಪರ ಮತ ಚಲಾಯಿಸಿದ್ದರು. ಇದು ಇಂಥ ಏಕೈಕ ಘಟನೆಯಾಗಿದೆ.

* ರಾಜ್ಯಸಭೆಯು ಒಂಬತ್ತು ಬಾರಿ ಮಧ್ಯರಾತ್ರಿಯವರೆಗೂ ಕಾರ್ಯ ನಿರ್ವಹಿಸಿದ ದಾಖಲೆ ಸೃಷ್ಟಿಸಿದೆ. ಆದರೆ, 1981ರ ಡಿ. 17ರಂದು ನಡೆದ ಚರ್ಚೆಯು ಮರುದಿನ ನಸುಕಿನ 4.43ರವರೆಗೆ ನಡೆದಿತ್ತು. ಇದು ಅತಿ ದೀರ್ಘವಾದ ಕಲಾಪವಾಗಿ ದಾಖಲಾಗಿದೆ. 1986ರ ಡಿ.29ರಂದು ಬೊಫೋರ್ಸ್‌ ಗನ್‌ ಖರೀದಿಗಾಗಿ ನಡೆದ ಚರ್ಚೆಯು ಮರುದಿನ ನಸುಕಿನ 3.22ರವರೆಗೆ ನಡೆದಿತ್ತು.

* ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆಗಳು ಸೇರಿದಂತೆ ಲೋಕಸಭೆಯು ಅಂಗೀಕರಿಸಿದ್ದ ಒಟ್ಟು 120 ಮಸೂದೆಗಳಿಗೆ ರಾಜ್ಯಸಭೆ ತಿದ್ದುಪಡಿ ಮಾಡಿದೆ. ಮೋಟಾರು ವಾಹನ (ತಿದ್ದುಪಡಿ) ಮಸೂದೆ– 2019 ಇವುಗಳಲ್ಲಿ ಇತ್ತೀಚಿನದ್ದು.

ಸುದೀರ್ಘ ಚರ್ಚೆಗಳು

12.04ಗಂಟೆ - ರಾಜೀವ್‌ ಗಾಂಧಿ ಅವರಿಗೆ ಭದ್ರತೆ ಒದಗಿಸುವಲ್ಲಿ ಆಗಿರುವ ವೈಫಲ್ಯದ ಬಗ್ಗೆ ನಡೆದ ಚರ್ಚೆಯ ಅವಧಿ (1991, ಜೂ. 4)

11.37 ಗಂಟೆ -ಬಾಬರಿ ಮಸೀದಿ ಕೆಡವಿದ ವಿಚಾರವಾಗಿ ನಡೆದ ಚರ್ಚೆಯ ಅವಧಿ (ಡಿ. 18 ಮತ್ತು 21, 1992)

10.06 ಗಂಟೆ -ಭಾರತ– ಅಮೆರಿಕ ಅಣುಒಪ್ಪಂದ ಕುರಿತ ಚರ್ಚೆಯ ಅವಧಿ (ಡಿ.4 ಮತ್ತು 12, 2007)

ರಾಜ್ಯಸಭೆಯಿಂದ ಉಚ್ಚಾಟನೆಗೊಂಡವರು

1. ಸುಬ್ರಮಣಿಯನ್‌ ಸ್ವಾಮಿ (ನ.15, 1976)

ಆರೋಪ: ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರ ನಡವಳಿಕೆಗಳು ಸದನಕ್ಕೆ ಅಗೌರವ ತರುವಂತಿದ್ದವು

2. ಛತ್ರಪಾಲ್‌ ಸಿಂಗ್‌ ಲೋಧ (2005 ಡಿಸೆಂಬರ್‌)

ಆರೋಪ: ರಾಜ್ಯಸಭೆಯಲ್ಲಿ ಪ್ರಶ್ನೆ ಕೇಳಲು ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದು

3. ಸಾಕ್ಷಿ ಮಹರಾಜ್‌ (ಮಾ. 21, 2006)

ಆರೋಪ: ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯ ಹಣವನ್ನು ದುರ್ಬಳಕೆ ಮಾಡಿದ್ದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT