ಗುರುವಾರ , ಸೆಪ್ಟೆಂಬರ್ 23, 2021
27 °C

ರಾಜ್ಯಸಭೆ: ಶೇ 75ರಷ್ಟು ಮಂದಿ ಹೊಸಬರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಈ ಬಾರಿ ರಾಜ್ಯಸಭೆಗೆ ಪ್ರವೇಶ ಪಡೆದ 61 ಮಂದಿಯಲ್ಲಿ ಮುಕ್ಕಾಲು ಭಾಗದಷ್ಟು ಮಂದಿ ಮೊದಲ ಬಾರಿಗೆ ಮೇಲ್ಮನೆ ಸದಸ್ಯರಾಗಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್‌ (ಕಾಂಗ್ರೆಸ್‌), ಜ್ಯೋತಿರಾದಿತ್ಯ ಸಿಂಧಿಯಾ (ಬಿಜೆಪಿ), ತಂಬಿದುರೈ (ಎಐಎಡಿಎಂಕೆ), ಆಂಧ್ರಪ್ರದೇಶದ ಮಾಜಿ ಸ್ಪೀಕರ್‌ ಕೆ.ಆರ್‌. ಸುರೇಶ್‌ (ವೈಎಸ್‌ಆರ್‌ ಕಾಂಗ್ರೆಸ್‌) ಮುಂತಾದ ಹಿರಿಯ ಮುಖಂಡರು ಮೊದಲ ಬಾರಿಗೆ ರಾಜ್ಯಸಭೆಯನ್ನು ಪ್ರವೇಶಿಸಿದ್ದಾರೆ.

ಎಚ್‌.ಡಿ. ದೇವೇಗೌಡ (ಜೆಡಿಎಸ್‌), ಶಿಬು ಸೊರೇನ್‌ (ಜೆಎಂಎಂ), ದಿನೇಶ್‌ ತ್ರಿವೇದಿ (ಟಿಎಂಸಿ)  ಸೇರಿದಂತೆ ಆರು ಮಂದಿ, ಕೆಲವು ವರ್ಷಗಳ ಅಂತರದ ಬಳಿಕ ರಾಜ್ಯಸಭೆಯನ್ನು ಪ್ರವೇಶಿಸಿದ್ದಾರೆ. ಈ ಮೂವರು ನಾಯಕರೂ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರು.

ಇತ್ತೀಚೆಗಷ್ಟೇ ರಾಜ್ಯಸಭೆಯಿಂದ ನಿವೃತ್ತಿ ಹೊಂದಿದವರಲ್ಲಿ 12 ಮಂದಿ ಮಾತ್ರ ಮರು ಆಯ್ಕೆಯಾಗಿದ್ದಾರೆ. ಹಿಂದೆ ರಾಜ್ಯಸಭೆಯ ಸದಸ್ಯರಾಗಿ ಅನುಭವ ಹೊಂದಿದ್ದ ಆರು ಮಂದಿ ಪುನಃ ಪ್ರವೇಶ ಪಡೆದಿದ್ದಾರೆ. ‘ಈ ಬಾರಿ ಆಯ್ಕೆಯಾದವರಲ್ಲಿ ಶೇ 75ರಷ್ಟು ಮಂದಿ ಮೊದಲ ಬಾರಿ ಮೇಲ್ಮನೆಗೆ ಬರುತ್ತಿದ್ದಾರೆ’ ಎಂದು ರಾಜ್ಯಸಭಾ ಸಚಿವಾಲಯ ಸಂಶೋಧನಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಸಭಾಪತಿ ಎಂ. ವೆಂಕಯ್ಯ ನಾಯ್ಡು, ‘ಪಕ್ಷೇತರರಲ್ಲದೆ, 20 ರಾಜಕೀಯ ಪಕ್ಷಗಳಿಗೆ ಸೇರಿದ 61 ಮಂದಿ ಮೇಲ್ಮನೆ ಪ್ರವೇಶಿಸಿರುವುದು ನಮ್ಮ ರಾಜಕೀಯದ ವೈವಿಧ್ಯವನ್ನು ಹಾಗೂ ಉದ್ದೇಶ ಮತ್ತು ಕೃತಿಯಲ್ಲಿನ ಬದ್ಧತೆಯನ್ನು ಪ್ರದರ್ಶಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

20 ರಾಜ್ಯಗಳಿಂದ 61 ಮಂದಿಯನ್ನು ಈ ಬಾರಿ ರಾಜ್ಯಸಭೆಗೆ ಆಯ್ಕೆ ಮಾಡಬೇಕಾಗಿತ್ತು. ಅವರಲ್ಲಿ 42 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಉಳಿದ 19 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಗೆದ್ದವರಲ್ಲಿ 15 ಮಂದಿ ಮೊದಲಬಾರಿ ರಾಜ್ಯಸಭೆಗೆ ಪ್ರವೇಶ ಪಡೆದಿದ್ದಾರೆ.

 ***

ಸಂಖ್ಯಾಬಲದ ಭಯವಿಲ್ಲ

245 ಮಂದಿ ಸದಸ್ಯಬಲದ ರಾಜ್ಯಸಭೆಯಲ್ಲಿ ಈಗ ಎನ್‌ಡಿಎ ಸಂಖ್ಯಾಬಲವು ನೂರರಷ್ಟಾಗಿದೆ. ಮೈತ್ರಿಯಿಂದ ಹೊರಗಿರುವ, ಎಐಎಡಿಎಂಕೆ (9), ಬಿಜೆಡಿ (9), ವೈಎಸ್‌ಆರ್‌ ಕಾಂಗ್ರೆಸ್‌ (9) ಹಾಗೂ ಇತರ ಹಲವು ಮಿತ್ರಪಕ್ಷಗಳನ್ನು ಸೇರಿಸಿದರೆ ಬಿಜೆಪಿ, ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಇನ್ನುಮುಂದೆ ಸಂಖ್ಯಾಬಲದ ಸಮಸ್ಯೆ ಕಾಡದು ಎನ್ನಲಾಗಿದೆ.

ಮೋದಿ ನೇತೃತ್ವದ ಸರ್ಕಾರಕ್ಕೆ ಮೊದಲ ಅವಧಿಯಲ್ಲಿ ಮೇಲ್ಮನೆಯಲ್ಲಿ ಆಗಾಗ ಸಂಖ್ಯಾಬಲದ ಸಮಸ್ಯೆ ಎದುರಾಗಿತ್ತು. ಕೆಲವು ಪ್ರಮುಖ ಮಸೂದೆಗಳಿಗೆ ಅಂಗೀಕಾರ ಪಡೆಯಲು ಸರ್ಕಾರವು ಪಕ್ಷಾಂತರಿಗಳ ಸಹಾಯವನ್ನು ಪಡೆಯಬೇಕಾಗಿ ಬಂದಿತ್ತು. ಈ ಬಾರಿ ಚುನಾವಣೆಗೂ ಕೆಲವೇ ದಿನಗಳ ಮುನ್ನ ಗುಜರಾತ್‌, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ಕಾಂಗ್ರೆಸ್‌ನಲ್ಲಿ ಪಕ್ಷಾಂತರಗಳು ನಡೆದ ಪರಿಣಾಮ, ಬಿಜೆಪಿಯು ತನ್ನ ಸಂಖ್ಯಾಬಲದಿಂದ ಗೆಲ್ಲಬಹುದಾದ್ದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು