ಶನಿವಾರ, ಜುಲೈ 24, 2021
25 °C

ಗಡಿ ಬಿಕ್ಕಟ್ಟು: ಸರ್ವಪಕ್ಷ ಸಭೆಯಿಂದ ಎಎಪಿ, ಆರ್‌ಜೆಡಿ ಹೊರಗಿಟ್ಟಿದ್ದಕ್ಕೆ ಆಕ್ಷೇಪ

ಶೆಮಿನ್ ಜಾಯ್ Updated:

ಅಕ್ಷರ ಗಾತ್ರ : | |

 ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿದ್ದ ಸರ್ವಪಕ್ಷ ಸಭೆ

ನವದೆಹಲಿ: ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ಸಂಘರ್ಷ ಹಾಗೂ ಗಡಿ ಬಿಕ್ಕಟ್ಟಿನ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿದ್ದ ಸರ್ವಪಕ್ಷ ಸಭೆಯಿಂದ ಎಎಪಿ ಮತ್ತು ಬಿಹಾರದ ಆರ್‌ಜೆಡಿಯನ್ನು ದೂರ ಇಡಲಾಗಿದೆ. ಐವರು ಸಂಸದರನ್ನು ಹೊಂದಿರುವ ಪಕ್ಷಗಳನ್ನು ಮಾತ್ರ ಸಭೆಗೆ ಕರೆಯಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ ಐದಕ್ಕಿಂತ ಕಡಿಮೆ ಸಂಸದರನ್ನು ಹೊಂದಿರುವ ಪಕ್ಷಗಳನ್ನು ಸಭೆಗೆ ಆಹ್ವಾನಿಸಿ, ಆರ್‌ಜೆಡಿ ಮತ್ತು ಎಎಪಿಯನ್ನು ದೂರ ಇಟ್ಟಿರುವುದಕ್ಕೆ ಹಲವು ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ನಾಲ್ವರು ಸಂಸದರನ್ನು ಮಾತ್ರ ಹೊಂದಿರುವ ಟಿಡಿಪಿ, ಮೂವರು ಸಂಸದರನ್ನು ಹೊಂದಿರುವ ಸಿಪಿಐ ಅನ್ನು ಸಭೆಗೆ ಆಹ್ವಾನಿಸಲಾಗಿದೆ. ಕ್ರಮವಾಗಿ ಮೂರು ಮತ್ತು ಇಬ್ಬರು ಸಂಸದರನ್ನು ಹೊಂದಿರುವ ಮುಸ್ಲಿಂ ಲೀಗ್‌ ಹಾಗೂ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂಗೆ ಆಹ್ವಾನ ನೀಡಿಲ್ಲ. ಸಭೆ ನಡೆಯಲಿರುವ ವಿಚಾರವನ್ನು ಸಂಸದೀಯ ವ್ಯವಹಾರಗಳ ಸಚಿವಾಲಯದ ಕಚೇರಿ ಮೂಲಕ ಕರೆ ಮಾಡಿ, ಮುಸ್ಲಿಂ ಲೀಗ್‌ಗೆ ತಿಳಿಸಲಾಗಿದೆ. ಆದರೆ, ಸಭೆಗೆ ಆಹ್ವಾನ ನೀಡಿಲ್ಲ.

ಕೇಂದ್ರ ಸರ್ಕಾರದ ಈ ನಡೆಯನ್ನು ಆರ್‌ಜೆಡಿ ಮತ್ತು ಎಎಪಿ ನಾಯಕರು ಖಂಡಿಸಿದ್ದಾರೆ. ಯಾವ ಆಧಾರದ ಮೇಲೆ ಸರ್ಕಾರ ನಮ್ಮ ಪಕ್ಷವನ್ನು ಸಭೆಯಿಂದ ದೂರ ಇರಿಸಿದೆ ಎಂದು ಎರಡೂ ಪಕ್ಷಗಳ ನಾಯಕರು ಪ್ರಶ್ನಿಸಿದ್ದಾರೆ. ಎನ್‌ಸಿಪಿ ಸಹ ಎಎಪಿ ಮತ್ತು ಆರ್‌ಜೆಡಿ ಪರವಾಗಿ ಈ ಪ್ರಶ್ನೆಯನ್ನು ಎತ್ತಿದೆ. 

ಆರ್‌ಜೆಡಿ ಸಂಸದ ಮನೋಜ್ ಕುಮಾರ್ ಝಾ ಅವರು ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. 

‘ಸರ್ಕಾರ ನಮ್ಮ ಪಕ್ಷವನ್ನು ಕರೆದಿಲ್ಲ. ಸರ್ಕಾರದ ಸುಳ್ಳು ಮಾತುಗಳು ಬಯಲಾಗಿವೆ. ಬಿಹಾರದ ರಾಜಕಾರಣದಲ್ಲಿ ಆರ್‌ಜೆಡಿ ಪ್ರಮುಖ. ಬಿಹಾರವು ನೆರೆಯ ರಾಷ್ಟ್ರ ನೇಪಾಳದೊಂದಿಗೆ ಗಡಿ ಹಂಚಿಕೊಂಡಿದೆ. ಇಂತಹ ಮಹತ್ವದ ವಿಚಾರದಲ್ಲಿ, ನಮ್ಮ ಪ್ರಾತಿನಿಧ್ಯಕ್ಕೆ ಅವಕಾಶ ನೀಡದೇ ಇರುವುದು ಸರಿಯಲ್ಲ’ ಎಂದು ಅವರು ಟೀಕಿಸಿದ್ದಾರೆ.

ಎಎಪಿ ಸಂಸದ ಸಂಜಯ್ ಸಿಂಗ್, ‘ಅಹಂಕಾರವೇ ತುಂಬಿರುವ ಸರ್ಕಾರ ಕೇಂದ್ರದಲ್ಲಿದೆ. ದೆಹಲಿಯಲ್ಲಿ ಎಎಪಿ ಸರ್ಕಾರವಿದೆ. ಪಂಜಾಬ್‌ನಲ್ಲಿ ನಾವು ಪ್ರಮುಖ ವಿರೋಧ ಪಕ್ಷವಾಗಿದ್ದೇವೆ. ಸಂಸತ್ತಿನಲ್ಲಿ ನಮ್ಮ ನಾಲ್ವರು ಸಂಸದರಿದ್ದಾರೆ. ಆದರೆ ಇಂತಹ ಮಹತ್ವದ ವಿಚಾರದಲ್ಲಿ ನಮ್ಮ ಅಭಿಪ್ರಾಯ ಬೇಕಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ. 

‘ಇಂತಹ ಮಹತ್ವದ ಸಂದರ್ಭದಲ್ಲಿ ದೇಶದ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕಲ್ಲವೆ? ಸರ್ಕಾರವು ಎಲ್ಲಾ ಪಕ್ಷಗಳನ್ನು ಸಭೆಗೆ ಕರೆಯಬೇಕಿತ್ತು. ಎಎಪಿಯನ್ನು ಹೊರಗಿಟ್ಟಿದ್ದು ಖಂಡನಾರ್ಹ’ ಎಂದು ಅವರು ಟೀಕಿಸಿದ್ದಾರೆ.

* ರಾಜ್ಯಸಭೆಯಲ್ಲಿ ಆರ್‌ಜೆಡಿಯ ಐವರು ಸಂಸದರಿದ್ದಾರೆ. ಸಭೆಯಲ್ಲಿ ಪಾಲ್ಗೊಳ್ಳಲು ನಾವು ಅರ್ಹರಾಗಿದ್ದೇವೆ. ಆದರೂ ನಮ್ಮನ್ನು ಕೈಬಿಡಲಾಗಿದೆ. ಸಂಸದೀಯ ಕಾರ್ಯದರ್ಶಿಗೂ ಲೆಕ್ಕಹಾಕಲು ಬರವುದಿಲ್ಲವೇ?

– ಮನೋಜ್ ಕುಮಾರ್ ಝಾ/ಜಾ, ಆರ್‌ಜೆಡಿ ನಾಯಕ

* ನೀವು ‘ಎಲ್ಲರ ಜತೆ ಎಲ್ಲರ ವಿಕಾಸ’ ಎಂದು ಘೋಷಣೆ ಕೂಗುತ್ತೀರಿ. ಆದರೆ ನೀವು, ಯಾರನ್ನೂ ನಿಮ್ಮೊಂದಿಗೆ ಕರೆದೊಯ್ಯುವುದಿಲ್ಲ. ಗಡಿಯಲ್ಲಿ ಏನಾಗುತ್ತಿದೆ ಎಂಬುದನ್ನು ನೀವು ಮುಚ್ಚಿಡುತ್ತಿದ್ದೀರಿ

– ಸಂಜಯ್ ಸಿಂಗ್, ಎಎಪಿ ನಾಯಕ

* ಸರ್ವಪಕ್ಷ ಸಭೆಯಿಂದ ಎಎಪಿ ಮತ್ತು ಆರ್‌ಜೆಡಿಯನ್ನು ಹೊರಗೆ ಇಟ್ಟಿದ್ದು ಒಳ್ಳೆಯ ಬೆಳವಣಿಗೆ ಅಲ್ಲ. ಎಎಪಿ ದೆಹಲಿಯಲ್ಲಿ ಸರ್ಕಾರ ಹೊಂದಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆ ವಿಚಾರದಲ್ಲಿ ಅಲ್ಲಿನ ಜನರನ್ನು ಹೊರಗೇಕೆ ಇಡಬೇಕು?

– ಮಜೀದ್ ಮೆಮನ್, ಎನ್‌ಸಿಪಿ ನಾಯಕ

* ಸರ್ವಪಕ್ಷ ಸಭೆಗೆ ಪಕ್ಷಗಳನ್ನು ಆಹ್ವಾನಿಸುವುದರ ಹಿಂದಿನ ಮಾನದಂಡವೇನು, ಅಂದರೆ ಯಾವ ಆಧಾರದಲ್ಲಿ ಪಕ್ಷಗಳನ್ನು ಕರೆಯಲಾಗಿದೆ ಮತ್ತು ಕೈಬಿಡಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತೇನೆ

– ತೇಜಸ್ವಿ ಯಾದವ್, ಆರ್‌ಜೆಡಿ ನಾಯಕ‌

27 ಐದಕ್ಕಿಂತ ಕಡಿಮೆ ಸಂಸದರನ್ನು ಹೊಂದಿರುವ ಪಕ್ಷಗಳು

17 ಐದಕ್ಕಿಂತ ಹೆಚ್ಚು ಸಂಸದರನ್ನು ಹೊಂದಿರುವ ಪಕ್ಷಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು