ಭಾನುವಾರ, ಜೂನ್ 20, 2021
28 °C
ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ರಫೇಲ್‌ ದರ ವಿವರ ಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಫ್ರಾನ್ಸ್‌ನಿಂದ ಭಾರತ ಖರೀದಿಸಲಿರುವ 36 ರಫೇಲ್‌ ಯುದ್ಧ ವಿಮಾನಗಳ ದರ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಹತ್ತು ದಿನಗಳೊಳಗೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಹಾಗೆಯೇ, ಈ ಒಪ್ಪಂದಕ್ಕೆ ಸಂಬಂಧಿಸಿ ಬಹಿರಂಗಪಡಿಸಬಹುದಾದ ಎಲ್ಲ ವಿವರಗಳೂ ಸಾರ್ವಜನಿಕರಿಗೆ ದೊರೆಯುವಂತೆ ಮಾಡಬೇಕು ಎಂದೂ ಹೇಳಿದೆ.   

ರಕ್ಷಣೆಗೆ ಸಂಬಂಧಿಸಿ ಸೂಕ್ಷ್ಮ ಎನಿಸಿಕೊಳ್ಳುವ ಮತ್ತು ಗೋಪ್ಯ ಎಂದು ಪರಿಗಣಿಸಲಾಗುವ ಮಾಹಿತಿಯನ್ನು ಈ ಹಂತದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅದನ್ನು ವಕೀಲರಿಗೆ ನೀಡದೇ ಇದ್ದರೂ ಪರವಾಗಿಲ್ಲ ಎಂದು ಪೀಠ ಹೇಳಿತು. ರಫೇಲ್‌ ಖರೀದಿಯ ನಿರ್ಧಾರ ಕೈಗೊಳ್ಳುವಿಕೆ ಪ್ರಕ್ರಿಯೆಯ ಬಗ್ಗೆ ಮುಚ್ಚಿದ ಲಕೋಟೆಯಲ್ಲಿ ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿದ ಮಾಹಿತಿಯನ್ನು ಪರಿಶೀಲಿಸಿದ ಬಳಿಕ ಪೀಠವು ಹೀಗೆ ಹೇಳಿದೆ. 

ದರದ ಬಗ್ಗೆ ಮಾತ್ರವಲ್ಲದೆ, ಈ ಯುದ್ಧ ವಿಮಾನ ಖರೀದಿಯಿಂದ ಆಗಿರುವ ನಿರ್ದಿಷ್ಟ ಪ್ರಯೋಜನಗಳು ಏನು ಎಂಬುದನ್ನೂ ತಿಳಿಸಬೇಕು ಎಂದು ಪೀಠ ಸೂಚಿಸಿದೆ. 

ಈ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಹೇಳಿದರು. ಇವುಗಳಲ್ಲಿ ಕೆಲವು ಮಾಹಿತಿ ಸರ್ಕಾರಿ ಗೋಪ್ಯತೆ ಕಾಯ್ದೆಯ ಅಡಿಯಲ್ಲಿ ಬರುತ್ತವೆ. ಯುದ್ಧ ವಿಮಾನದ ದರದ ಬಗೆಗಿನ ಮಾಹಿತಿ ಎಷ್ಟು ಗೋಪ್ಯ ಎಂದರೆ ಅದನ್ನು ಸಂಸತ್ತಿನ ಮುಂದೆಯೂ ಇಡಲಾಗದು ಎಂದು ಹೇಳಿದರು. 

‘ಯುದ್ಧ ವಿಮಾನದ ಬೆಲೆ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿಯೂ ಕೋರ್ಟ್‌ಗೆ ಸಲ್ಲಿಸಲು ಸಾಧ್ಯವಿಲ್ಲ ಎಂಬುದನ್ನು ಪ್ರಮಾಣಪತ್ರ ಮೂಲಕ ತಿಳಿಸಿ’ ಎಂದು ವೇಣುಗೋಪಾಲ್‌ಗೆ ಪೀಠ ಸೂಚಿಸಿತು. 

ವಕೀಲ ಪ್ರಶಾಂತ್‌ ಭೂಷಣ್‌, ಕೇಂದ್ರದ ಮಾಜಿ ಸಚಿವರಾದ ಅರುಣ್‌ ಶೌರಿ ಮತ್ತು ಯಶವಂತ ಸಿನ್ಹಾ ಸಲ್ಲಿಸಿರುವ ದೂರುಗಳ ವಿಚಾರಣೆಯನ್ನು ಪೀಠ ನಡೆಸಿತು. ರಫೇಲ್‌ ಯುದ್ಧ ವಿಮಾನ ಖರೀದಿಯ ಬಗ್ಗೆ ನ್ಯಾಯಾಲಯದ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಯಬೇಕು ಎಂದು ಈ ಅರ್ಜಿಗಳಲ್ಲಿ ಕೋರಲಾಗಿದೆ.

‘ಸಿಬಿಐ ತನಿಖೆಗೆ ನೀವು ಇನ್ನೂ ಒಂದಷ್ಟು ಸಮಯ ಕಾಯಬೇಕು. ಯಾಕೆಂದರೆ, ಅದಕ್ಕೂ ಮೊದಲು ಸಿಬಿಐ ತನ್ನ ಮನೆಯನ್ನು ತಾನು ಸರಿಯಾಗಿ ಇರಿಸಿಕೊಳ್ಳಬೇಕಿದೆ’ ಎಂದು ಅರ್ಜಿದಾರರಿಗೆ ಪೀಠ ಹೇಳಿತು. 

ಅನಿಲ್‌ ಅಂಬಾನಿ ಮಾಲೀಕತ್ವದ ರಿಲಯನ್ಸ್‌ ಡಿಫೆನ್ಸ್‌ ಸಂಸ್ಥೆಯನ್ನು ಯೋಜನೆಯ ದೇಶೀ ಪಾಲುದಾರ ಸಂಸ್ಥೆಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಅನಿಲ್‌ ಅಂಬಾನಿ ಅವರಿಗೆ ನೆರವಾಗುವುದಕ್ಕಾಗಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕಾಪ್ರಹಾರ ನಡೆಸುತ್ತಿವೆ. 

ಈಗಾಗಲೇ ಸಲ್ಲಿಸಿರುವ ದಾಖಲೆಗಳ ಬಗ್ಗೆ ಯಾವುದೇ ಅಭಿಪ್ರಾಯ ದಾಖಲಿಸುವುದಿಲ್ಲ ಎಂದು ಪೀಠ ಹೇಳಿತು

ದೇಶೀ ಪಾಲುದಾರರ ಆಯ್ಕೆಗೆ ಸಂಬಂಧಿಸಿದ ಮಾಹಿತಿಯನ್ನು ನ್ಯಾಯಾಲಯ ಮತ್ತು ದೂರುದಾರರಿಗೆ ನೀಡಬೇಕು

ಜೆಪಿಸಿ ತನಿಖೆಗೆ ಕಾಂಗ್ರೆಸ್ ಮತ್ತೆ ಆಗ್ರಹ

ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸುತ್ತಿದ್ದಂತೆಯೇ, ಒಪ್ಪಂದದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸಬೇಕು ಎಂಬ ಒತ್ತಾಯವನ್ನು ಕಾಂಗ್ರೆಸ್‌ ಪಕ್ಷ ಪುನರುಚ್ಚರಿಸಿದೆ.

ರಫೇಲ್‌ ಒಪ್ಪಂದದ ಬಗ್ಗೆ ತನಿಖೆ ನಡೆಸಲು ಇದು ಸಕಾಲ. ಈಗ ಯಾವುದೇ ನೆಪವೂ ನಡೆಯುವುದಿಲ್ಲ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ. 

ಪ್ರತಿಭಟನಾ ಸಭೆಗಳು, ರಾಷ್ಟ್ರಪತಿ, ರಾಜ್ಯಪಾಲರಿಗೆ ಮನವಿಗಳನ್ನು ನೀಡುವ ಮೂಲಕ ರಫೇಲ್‌ ವಿಚಾರವನ್ನು ರಾಜಕೀಯ ಸಂವಾದದ ಕೇಂದ್ರದಲ್ಲಿಯೇ ಇರಿಸಿಕೊಳ್ಳಲು ಕಾಂಗ್ರೆಸ್ ಪಕ್ಷವು ಜುಲೈನಿಂದಲೂ ಪ್ರಯತ್ನಿಸುತ್ತಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು