ಭಾನುವಾರ, ಜುಲೈ 25, 2021
25 °C

ಕಂತು ಮುಂದೂಡಿಕೆ ಅವಧಿಗೇಕೆ ಬಡ್ಡಿ? ಆರ್‌ಬಿಐ ನಿರ್ಧಾರ ಪ್ರಶ್ನಿಸಿದ ‘ಸುಪ್ರೀಂ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸಾಲದ ಕಂತು ಮರುಪಾವತಿಯನ್ನು ಮುಂದೂಡಿರುವ ಅವಧಿಗೂ ಗ್ರಾಹಕರು ಬಡ್ಡಿ ಪಾವತಿಸಬೇಕು ಎಂಬ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿರ್ಧಾರವನ್ನು ಸುಪ್ರೀಂ ಕೋರ್ಟ್ ಗುರುವಾರ‌ ಪ್ರಶ್ನಿಸಿದೆ. ಇಂತಹ ನಡೆ ಜನರಿಗೆ ಮಾರಕ. ಜನರ ಆರೋಗ್ಯಕ್ಕಿಂತ ಆರ್ಥಿಕ ವಿಚಾರಗಳು ಹೆಚ್ಚು ಮಹತ್ವದ್ದಲ್ಲ ಎಂದೂ ಹೇಳಿದೆ.

ಕೋವಿಡ್‌ ಪಿಡುಗಿನ ಅವಧಿಯ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಬಯಸುತ್ತಿರುವ ಗ್ರಾಹಕರನ್ನು ಆರ್‌ಬಿಐ ನೋಡುತ್ತಿರುವ ರೀತಿಯ ಬಗ್ಗೆ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಸಂಜಯ್‌ ಕಿಶನ್‌ ಕೌಲ್‌ ಮತ್ತು ಎಂ.ಆರ್‌. ಶಾ ಅವರ ಪೀಠವು ಅಸಮಾಧಾನ ವ್ಯಕ್ತಪಡಿಸಿದೆ. 

ಈಗಿನದ್ದು ಸಂಕಷ್ಟದ ಕಾಲ. ಸಾಲ ಮರು‍ಪಾವತಿಯ ಅವಧಿಯನ್ನು ಒಂದೆಡೆ ವಿಸ್ತರಿಸಿ, ಇನ್ನೊಂದೆಡೆ ಸಾಲದ ಮೇಲೆ ಬಡ್ಡಿ ಹೇರುವುದು ಗಂಭೀರವಾದ ವಿಚಾರ ಎಂದೂ ಪೀಠ ಹೇಳಿದೆ.

ಇಲ್ಲಿ ಎರಡು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಒಂದು, ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದು ಮತ್ತು ಇನ್ನೊಂದು, ಬಡ್ಡಿಯ ಮೇಲಿನ ಬಡ್ಡಿ ಮನ್ನಾ ಮಾಡುವುದು ಎಂದು ಕೋರ್ಟ್‌ ಹೇಳಿದೆ.

ಮರುಪಾವತಿ ವಿಸ್ತರಣೆಗೊಂಡ ಅವಧಿಗೂ ಬಡ್ಡಿ ಹಾಕುವುದನ್ನು ಪ್ರಶ್ನಿಸಿ ಗಜೇಂದ್ರ ಶರ್ಮಾ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪೀಠವು ಬುಧವಾರ ವಿಚಾರಣೆಗೆ ಎತ್ತಿಕೊಂಡಿತ್ತು. ಅರ್ಜಿಗೆ ಪ್ರತಿಕ್ರಿಯೆ ನೀಡಿದ್ದ ಆರ್‌ಬಿಐ, ‘ಕಂತು ಪಾವತಿಯ ಅವಧಿಯನ್ನು ವಿಸ್ತರಿಸಲಾಗಿದೆ, ಆದರೆ ಬಡ್ಡಿಯನ್ನು ಮನ್ನಾ ಮಾಡಲಾಗಿದೆ ಎಂಬುದು ಅದರ ಅರ್ಥ ಅಲ್ಲ’ ಎಂದು ಹೇಳಿತ್ತು. 

ಸಾಲ ಮರುಪಾವತಿ ಮುಂದೂಡಿಕೆ ಅವಧಿಗೆ ‘ಬಲವಂತದಿಂದ’ ಬಡ್ಡಿ ಮನ್ನಾ ಮಾಡುವುದು ಸಾಧ್ಯವಿಲ್ಲ. ಬಡ್ಡಿ ಮನ್ನಾ ಮಾಡಿದರೆ ಅದು ಬ್ಯಾಂಕುಗಳ ಆರ್ಥಿಕ ಸ್ಥಿರತೆಯನ್ನು ಅಪಾಯಕ್ಕೆ ಒಡ್ಡುವುದರ ಜತೆಗೆ ಠೇವಣಿದಾರರ ಹಿತಾಸಕ್ತಿಯನ್ನೂ ಹಾಳುಗೆಡವುತ್ತದೆ. ಬಡ್ಡಿ ಮನ್ನಾದಿಂದ ಬ್ಯಾಂಕುಗಳಿಗೆ ₹2 ಲಕ್ಷ ಕೋಟಿವರೆಗೆ ನಷ್ಟವಾಗಬಹುದು ಎಂದು ಆರ್‌ಬಿಐ ವಾದಿಸಿದೆ. 

ಇದೇ 12ಕ್ಕೆ ಮೊದಲು ಜಂಟಿ ಪ್ರಮಾಣಪತ್ರ ಸಲ್ಲಿಸುವಂತೆ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರಿಗೆ ಪೀಠವು ಸೂಚಿಸಿದೆ. ಇದಕ್ಕೂ ಮೊದಲು, ಕೇಂದ್ರ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ಅಧಿಕಾರಿಗಳ ನಡುವೆ ಈ ವಿಚಾರದಲ್ಲಿ ಸಭೆ ನಡೆಯಲಿದೆ ಎಂದು ಮೆಹ್ತಾ ಅವರು ಪೀಠಕ್ಕೆ ತಿಳಿಸಿದ್ದರು.

ಕಂತು ಪಾವತಿಯ ಅವಧಿಯನ್ನು ಮುಂದೂಡಿ ಆರ್‌ಬಿಐ ಮಾರ್ಚ್‌ 27ರಂದು ಸುತ್ತೋಲೆ ಹೊರಡಿಸಿತ್ತು. ಆರಂಭದಲ್ಲಿ ಮೂರು ತಿಂಗಳು ಮುಂದೂಡಲಾಗಿತ್ತು. ಈಗ, ಆಗಸ್ಟ್‌ 31ರವರೆಗೆ ಕಂತು ಪಾವತಿಯನ್ನು ಮುಂದೂಡಲಾಗಿದೆ.

ಕಾರ್ಮಿಕರಿಗೆ ಸಂಬಳ: ಮಧ್ಯಮ ಹಾದಿಗೆ ಕೋರ್ಟ್‌ ಸೂಚನೆ
ಕೋಟ್ಯಂತರ ಗುತ್ತಿಗೆ ಕಾರ್ಮಿಕರು, ಅವರ ಉದ್ಯೋಗದಾತರು ಮತ್ತು ಕಂಪನಿಗಳ ಹಿತಾಸಕ್ತಿ ಕಾಯುವುದು ಸಾಧ್ಯವಾಗುವಂತಹ ಮಧ್ಯಮ ಹಾದಿಯನ್ನು ಹುಡುಕಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಸಲಹೆ ಕೊಟ್ಟಿದೆ. ಕೊರೊನಾ ವೈರಾಣು ಹರಡುವಿಕೆ ತಡೆಗಾಗಿ ಹೇರಿದ ಲಾಕ್‌ಡೌನ್‌ನ 54 ದಿನಗಳ ಪೂರ್ಣ ಸಂಬಳವನ್ನು ಕಾರ್ಮಿಕರಿಗೆ ಪಾವತಿಸಬೇಕು ಎಂಬ ಕೇಂದ್ರ ಸರ್ಕಾರದ  ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕೋರ್ಟ್‌ ಹೀಗೆ ಹೇಳಿದೆ.

ಪೂರ್ಣ ಸಂಬಳ ನೀಡಬೇಕು ಎಂಬ ಕೇಂದ್ರದ ಆದೇಶವನ್ನು ಕಂಪನಿಗಳು ವಿರೋಧಿಸುತ್ತಿವೆ.

‘ಕಾರ್ಮಿಕರಿಲ್ಲದೆ ನೀವು ಉದ್ಯಮ ನಡೆಸುವುದು ಸಾಧ್ಯವೇ? ಹಾಗಾಗಿ, ಸಮತೋಲನದ ನಿರ್ಧಾರ ಕೈಗೊಳ್ಳಬೇಕು. ಕಾರ್ಮಿಕರು ಅಥವಾ ಉದ್ಯೋಗದಾತರ ಪೈಕಿ ಯಾವುದೇ ಒಂದು ವರ್ಗದ ಪರವಾಗಿ ಈ ಪ್ರಕರಣವು ವಾಲಬಾರದು’ ಎಂದು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ಪೀಠ ಹೇಳಿದೆ. 

ಇದೇ 12ರಂದು ಪ್ರಕರಣದ ತೀರ್ಪು ಪ್ರಕಟಿಸಲಾಗುವುದು. ಅಲ್ಲಿಯವರೆಗೆ ಸಂಬಳ ಪಾವತಿ ವಿಚಾರದಲ್ಲಿ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಪೀಠವು ಸೂಚಿಸಿದೆ. 

ಉದ್ಯಮವಾರು ಸಂಧಾನ ನಡೆಸುವ ಬಗ್ಗೆ ಯೋಚಿಸಬಹುದು. ಶೇಕಡ ನೂರರಷ್ಟು ಸಂಬಳ ನೀಡುವುದು ಸಾಧ್ಯವಾಗದೇ ಇರಬಹುದು. ಹಾಗಾಗಿ, ಈ ವಿಚಾರದಲ್ಲಿ ಸರ್ಕಾರವು ಸಂಧಾನಕಾರನ ಪಾತ್ರ ವಹಿಸಬಹುದು ಎಂದು ಕೋರ್ಟ್‌ ಹೇಳಿದೆ. 

ಎರಡೂ ವರ್ಗಗಳ ನಡುವೆ ಸಮತೋಲನ ಸಾಧ್ಯವಾಗುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್‌‌ ಅವರಿಗೆ ಪೀಠವು ಸೂಚಿಸಿತು. ಏನೇ ಆದರೂ ಶೇ 50ರಷ್ಟು ಸಂಬಳವನ್ನು ಪಾವತಿಸಬೇಕಾಗುತ್ತದೆ ಎಂದು ಅಟಾರ್ನಿ ಜನರಲ್‌  ಹೇಳಿದರು.

‘ಈ ವಿಚಾರದಲ್ಲಿ ಮಧ್ಯಮ ಹಾದಿ ಹುಡುಕಲೇಬೇಕು. ವಾಸ್ತವಿಕವಾದ ಪರಿಹಾರವನ್ನು ಸೂಚಿಸಿ’ ಎಂದು ಪೀಠವು ಹೇಳಿತು. 

ಆರ್‌ಬಿಐಗೆ ತರಾಟೆ
ಅರ್ಜಿಗೆ ಸಂಬಂಧಿಸಿದ ಆರ್‌ಬಿಐ ಪ್ರಮಾಣಪತ್ರವು ಕೋರ್ಟ್‌ಗೆ ಸಲ್ಲಿಸುವುದಕ್ಕೆ ಒಂದು ದಿನ ಮೊದಲು ಮಾಧ್ಯಮಕ್ಕೆ ಸಿಕ್ಕಿತ್ತು. ಇದಕ್ಕಾಗಿ ಆರ್‌ಬಿಐಯನ್ನು ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. 

ಬ್ಯಾಂಕುಗಳಿಗೆ ಲಾಭ
ಇಡೀ ಜಗತ್ತು ಸಂಕಷ್ಟದಲ್ಲಿದ್ದರೂ ಬ್ಯಾಂಕುಗಳು ಮಾತ್ರ ಲಾಭ ಮಾಡಿಕೊಳ್ಳಲಿವೆ ಎಂಬುದನ್ನು ಆರ್‌ಬಿಐನ ಪ್ರಮಾಣಪತ್ರವು ಸ್ಪಷ್ಟಪ‍ಡಿಸುತ್ತದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು. 

ವಲಸಿಗರ ಪ್ರಯಾಣಕ್ಕೆ ₹25 ಲಕ್ಷ ಠೇವಣಿ
ನವದೆಹಲಿ (ಪಿಟಿಐ):
ಮುಂಬೈನಲ್ಲಿ ಸಿಲುಕಿರುವ ಉತ್ತರ ಪ್ರದೇಶದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ನೆರವು ನೀಡಲು ಮುಂದಾಗಿರುವ ವಕೀಲ ಸಗೀರ್ ಅಹ್ಮದ್ ಅವರಿಗೆ ₹25 ಲಕ್ಷ ಠೇವಣಿ ಇಡುವಂತೆ ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನ ನೀಡಿದೆ. ಒಂದು ವಾರದೊಳಗೆ ಕೋರ್ಟ್‌ನ ರಿಜಿಸ್ಟ್ರಿಯಲ್ಲಿ ಠೇವಣಿ ಇಡುವಂತೆ ಕೋರ್ಟ್ ಸೂಚಿಸಿದೆ. ಈ ಹಣವನ್ನು ಕಾರ್ಮಿಕರ ಪ್ರಯಾಣ ವೆಚ್ಚವಾಗಿ ಬಳಸಿಕೊಳ್ಳಲಾಗುತ್ತದೆ. ವಿಡಿಯೊ ಕಾನ್ಫರೆನ್ಸ್ ಮೂಲಕ ಕೋರ್ಟ್ ಕಲಾಪದಲ್ಲಿ ಭಾಗಿಯಾದ ಅಹ್ಮದ್, ಕಾರ್ಮಿಕರ ಮೇಲಿನ ಕಳಕಳಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದರು. ಹಣ ಠೇವಣಿ ಇಡಲು ಸಿದ್ಧವಿದ್ದು, ಅದನ್ನು ರೈಲು ಟಿಕೆಟ್ ವೆಚ್ಚಕ್ಕೆ ಬಳಸಿಕೊಳ್ಳಬಹುದು ಎಂದು ಹೇಳಿದರು.

**
ಕಾರ್ಮಿಕರಿಗೆ ದುಡ್ಡೇ ಸಿಗದಂತೆ ಆಗಬಾರದು ಎಂಬುದು ನಮ್ಮ ಕಳಕಳಿ. ಅದೇ ಹೊತ್ತಿಗೆ, ಕಂಪನಿಗಳಲ್ಲಿ ಸಂಬಳ ಪಾವತಿಸಲು ಹಣ ಇಲ್ಲದಿರಬಹುದು ಎಂಬುದೂ ಗಮನದಲ್ಲಿದೆ.
–ಸುಪ್ರೀಂ ಕೋರ್ಟ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು