ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಬಿಕ್ಕಟ್ಟು: ಶಿವಸೇನಾಕ್ಕೆ ನಿರಾಸೆ, ಎನ್‌ಸಿಪಿಗೆ ಆಸೆ

ಬೆಂಬಲಪತ್ರ ಪಡೆಯಲು ವಿಫಲವಾದ ಠಾಕ್ರೆ ಪಕ್ಷ: ಪವಾರ್ ನೇತೃತ್ವದ ಪಕ್ಷಕ್ಕೆ ಆಹ್ವಾನ
Last Updated 11 ನವೆಂಬರ್ 2019, 19:17 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಬೇಕು ಎಂಬ ಶಿವಸೇನಾದ ಮಹತ್ವಾಕಾಂಕ್ಷೆಗೆ ಹಿನ್ನಡೆಯಾಗಿದೆ. ಮಿತ್ರ ಪಕ್ಷವಾದ ಎನ್‌ಸಿಪಿ ಜತೆಗೆ ಇನ್ನಷ್ಟು ಮಾತುಕತೆ ನಡೆಸಿದ ಬಳಿಕವಷ್ಟೇ ಸೇನಾಕ್ಕೆ ಬೆಂಬಲ ನೀಡುವ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಕಾಂಗ್ರೆಸ್‌ ಪಕ್ಷವು ಸೋಮವಾರ ಸಂಜೆ ಪ್ರಕಟಿಸಿತು. ಹಾಗಾಗಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಶಿವಸೇನಾಕ್ಕೆ ಸಾಧ್ಯವಾಗಿಲ್ಲ. ಇದರಿಂದಾಗಿ, ಮೂರನೇ ಅತಿದೊಡ್ಡ ಪಕ್ಷವಾಗಿ ಮೂಡಿಬಂದಿರುವ ಎನ್‌ಸಿಪಿಗೆ ರಾಜ್ಯಪಾಲಭಗತ್‌ ಸಿಂಗ್‌ ಕೋಶಿಯಾರಿ ಸೋಮವಾರ ರಾತ್ರಿ ಆಹ್ವಾನ ನೀಡಿದ್ದಾರೆ.

ಸರ್ಕಾರ ರಚನೆಗೆ ಬೆಂಬಲ ನೀಡಲು ಎರಡು ಪಕ್ಷಗಳು (ಕಾಂಗ್ರೆಸ್‌ ಮತ್ತು ಎನ್‌ಸಿಪಿ) ತಾತ್ವಿಕವಾಗಿ ಒಪ್ಪಿವೆ. ಆದರೆ, ಅಗತ್ಯ ಶಾಸಕರ ಸಂಖ್ಯಾಬಲ ಹೊಂದಿಸಲು ಹೆಚ್ಚುವರಿ ಸಮಯ ನೀಡಲು ರಾಜ್ಯಪಾಲರು ಒಪ್ಪಿಲ್ಲ ಎಂದು ಸೇನಾ ಮುಖಂಡ ಆದಿತ್ಯ ಠಾಕ್ರೆ ಹೇಳಿದ್ದಾರೆ. ರಾಜ್ಯಪಾಲರನ್ನು ಭೇಟಿಯಾದ ಬಳಿಕ ಅವರು ಮಾತನಾಡಿದರು.

ಸರ್ಕಾರ ರಚನೆಯ ಸೇನಾದ ಹಕ್ಕು ಈಗಲೂ ಊರ್ಜಿತದಲ್ಲಿದೆ. ಎರಡು ಪಕ್ಷಗಳ ಜತೆಗೆ ಮಾತುಕತೆ ನಡೆದಿದೆ. ಸರ್ಕಾರ ರಚನೆಯ ಹಕ್ಕು ಮಂಡಿಸಲು ನಮಗೆ ಇಚ್ಛೆ ಇದೆ ಎಂಬ ವಿಚಾರವನ್ನು ರಾಜ್ಯಪಾಲರಿಗೆ ತಿಳಿಸಿದ್ದೇವೆ ಎಂದು ಆದಿತ್ಯ ಹೇಳಿದ್ದಾರೆ.

ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಎರಡೂ ಪಕ್ಷಗಳಿಗೆ ಕೆಲ ದಿನಗಳು ಬೇಕು. ಹಾಗಾಗಿ, ಸರ್ಕಾರ ರಚನೆಯ ಹಕ್ಕು ಮಂಡನೆಗೆ ಇನ್ನಷ್ಟು ಕಾಲಾವಕಾಶ ಕೊಡಿ ಎಂದು ರಾಜ್ಯಪಾಲರನ್ನು ಕೇಳಿದ್ದೆವು. ಅವರು ನಿರಾಕರಿಸಿದ್ದಾರೆ. ಹಾಗಿದ್ದರೂ ಸರ್ಕಾರ ರಚನೆಯ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆಯವರ ಮಗ ಆದಿತ್ಯ ಹೇಳಿದ್ದಾರೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ 56 ಸದಸ್ಯರನ್ನು ಹೊಂದಿರುವ ಶಿವಸೇನಾವನ್ನು ರಾಜ್ಯಪಾಲರು ಭಾನುವಾರ ಸಂಜೆ ಆಹ್ವಾನಿಸಿದ್ದರು. ಸೋಮವಾರ ಸಂಜೆ 7.30ರವರೆಗೆ ಈ ಪಕ್ಷಕ್ಕೆ ಗಡುವು ನೀಡಲಾಗಿತ್ತು.

ಸರ್ಕಾರ ರಚನೆಯ ಹಕ್ಕು ಮಂಡಿಸಲು 105 ಸದಸ್ಯರನ್ನು ಹೊಂದಿರುವ ಬಿಜೆಪಿ ನಿರಾಕರಿಸಿದ ಬಳಿಕ ಸೇನಾವನ್ನು ಆಹ್ವಾನಿಸಲಾಗಿತ್ತು.

98 ಸದಸ್ಯರನ್ನು ಹೊಂದಿರುವ ಎನ್‌ಸಿಪಿ–ಕಾಂಗ್ರೆಸ್‌ ಮೈತ್ರಿಕೂಟದ ಬೆಂಬಲ ಪಡೆಯುವ ಪ್ರಯತ್ನವನ್ನು ಉದ್ಧವ್‌ ಮಾಡಿದ್ದಾರೆ. ಬೆಂಬಲ ನೀಡಬೇಕಿದ್ದರೆ ಬಿಜೆಪಿ ನೇತೃತ್ವದ ಎನ್‌ಡಿಎಯಿಂದಸೇನಾ ಹೊರಕ್ಕೆ ಬರಬೇಕು ಎಂಬ ಷರತ್ತನ್ನು ಎನ್‌ಸಿಪಿ ಒಡ್ಡಿತ್ತು. ಅದರಂತೆ, ಕೇಂದ್ರದಲ್ಲಿ ಸಚಿವರಾಗಿರುವ ಸೇನಾದ ಅರವಿಂದ್‌ ಸಾವಂತ್ ಅವರು ಸೋಮವಾರ ರಾಜೀನಾಮೆ ನೀಡಿದರು.

ಎನ್‌ಸಿಪಿ–ಕಾಂಗ್ರೆಸ್‌ ಬೆಂಬಲದಲ್ಲಿ ಶಿವಸೇನಾ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದೇ ಬಿಡುತ್ತದೆ ಎಂಬ ಸನ್ನಿವೇಶ ಸೋಮವಾರ ಸಂಜೆ ಸೃಷ್ಟಿಯಾಗಿತ್ತು. ಆದರೆ, ಬೆಂಬಲ ನೀಡುವುದಕ್ಕೆ ಸಂಬಂಧಿಸಿ ಎನ್‌ಸಿಪಿ ಜತೆಗೆ ಇನ್ನಷ್ಟು ಮಾತುಕತೆ ನಡೆಸಬೇಕಿದೆ ಎಂದು ಕಾಂಗ್ರೆಸ್‌ ನಿರ್ಧರಿಸಿದೆ. ಹೀಗಾಗಿ, ಸರ್ಕಾರ ರಚಿಸುವ ಸೇನಾದ ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿದೆ.

ಉದ್ಧವ್‌ ಸತತ ಯತ್ನ
ಕಾಂಗ್ರೆಸ್‌–ಎನ್‌ಸಿಪಿ ಬೆಂಬಲ ಪಡೆದುಕೊಳ್ಳಲು ಉದ್ಧವ್‌ ಅವರು ಸತತ ಪ್ರಯತ್ನ ನಡೆಸಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಅದಲ್ಲದೆ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜತೆಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ‘ನಿರ್ಧಾರ ಕೈಗೊಂಡ ಬಳಿಕ ನಿಮಗೆ ತಿಳಿಸುತ್ತೇವೆ’ ಎಂದು ಅವರಿಗೆ ಸೋನಿಯಾ ಹೇಳಿದ್ದಾರೆ.

ಭಿನ್ನ ಸಿದ್ಧಾಂತಗಳನ್ನು ಹೊಂದಿರುವ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳುವುದಕ್ಕಾಗಿ ಉದ್ಧವ್‌ ಅವರು ಸೋಮವಾವ ವಿವಿಧ ಮುಖಂಡರಿಗೆ ನೂರಾರು ಕರೆಗಳನ್ನು ಮಾಡಿದ್ದಾರೆ ಎನ್ನಲಾಗಿದೆ.

ಸೋನಿಯಾ ವಿಳಂಬ ನೀತಿ
ಶಿವಸೇನಾ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂಬ ನಿಲುವನ್ನು ಹೊಸದಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ ಶಾಸಕರಲ್ಲಿ ಹಲವು ಮಂದಿ ಹೊಂದಿದ್ದಾರೆ. ಮಹಾರಾಷ್ಟ್ರದ ಹಲವು ಹಿರಿಯ ಮುಖಂಡರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೇನಾಕ್ಕೆ ಬೆಂಬಲ ನೀಡುವ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯುಸಿ) ಸೋನಿಯಾ ಅವರಿಗೆ ಒಪ್ಪಿಸಿತ್ತು. ಆದರೆ, ಸೈದ್ಧಾಂತಿಕವಾಗಿ ಭಿನ್ನ ದಿಕ್ಕಿನಲ್ಲಿರುವ ಸೇನಾ ಜತೆ ಕೈಜೋಡಿಸಲು ಸೋನಿಯಾ ಅವರಿಗೆ ಇಷ್ಟ ಇಲ್ಲ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ನ ಮಿತ್ರ ಪಕ್ಷ ಎನ್‌ಸಿಪಿ, ಶಿವಸೇನಾಕ್ಕೆ ಬೆಂಬಲ ನೀಡುವ ಸಂಪೂರ್ಣ ಹೊಣೆಯನ್ನು ಕಾಂಗ್ರೆಸ್‌ ಮೇಲೆ ಹೊರಿಸಿದೆ. ‘ಕಾಂಗ್ರೆಸ್‌ ಜತೆಗೆ ಚರ್ಚಿಸಿದ ಬಳಿಕವೇ ಮುಂದಿನ ನಿರ್ಧಾರ’ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ ಸೋಮವಾರ ಬೆಳಿಗ್ಗೆಯೇ ಹೇಳಿದ್ದರು. ಹೀಗಾಗಿ, ಎಲ್ಲವೂ ಸೋನಿಯಾ ಕೈಯಲ್ಲಿಯೇ ಇತ್ತು. ಎನ್‌ಸಿ‍ಪಿ ಜತೆಗೆ ಇನ್ನಷ್ಟು ಚರ್ಚೆ ನಡೆಯಬೇಕಿದೆ ಎಂಬ ಕಾರಣ ಕೊಟ್ಟು ಬೆಂಬಲದ ನಿರ್ಧಾರವನ್ನು ಕಾಂಗ್ರೆಸ್‌ ಮುಂದೂಡಿದೆ.

ಪವಾರ್‌ ಆಟ
ಕಾಂಗ್ರೆಸ್ ಪಕ್ಷದಲ್ಲಿ ಭಿನ್ನ ನಿಲುವುಗಳು ವ್ಯಕ್ತವಾಗುತ್ತಿದ್ದಂತೆಯೇ, ಸೋನಿಯಾ ಅವರು ಪಕ್ಷದ ಹಿರಿಯ ಮುಖಂಡರಾದ ಎ.ಕೆ. ಆ್ಯಂಟನಿ, ಅಹ್ಮದ್‌ ಪಟೇಲ್‌, ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ. ವೇಣುಗೋಪಾಲ್‌ ಜತೆ ಚರ್ಚಿಸಿದರು. ಪವಾರ್ ಜತೆಗೆ ದೂರವಾಣಿ ಮೂಲಕ ಮಾತನಾಡಿದರು.

‘ಉದ್ಧವ್‌ ಜತೆಗೆ ಈವರೆಗೆ ಯಾವ ಚರ್ಚೆಯನ್ನೂ ನಡೆಸಿಲ್ಲ’ ಎಂದು ಪವಾರ್‌ ಹೇಳಿದಾಗ ಚಿತ್ರಣವೇ ಬದಲಾಯಿತು. ಪವಾರ್‌ ಅವರು ಗೊಂದಲಮಯವಾಗಿ ಮಾತನಾಡಿದ್ದರಿಂದ, ಅವರ ಜತೆಗೆ ಮಾತುಕತೆಗೆ ಅಹ್ಮದ್‌ ಪಟೇಲ್‌, ಖರ್ಗೆ ಮತ್ತು ವೇಣುಗೋಪಾಲ್‌ ಅವರನ್ನು ಮುಂಬೈಗೆ ಸೋನಿಯಾ ಕಳುಹಿಸಿದರು. ಹೀಗಾಗಿ, ಎನ್‌ಸಿಪಿ ಜತೆಗೆ ಇನ್ನಷ್ಟು ಚರ್ಚಿಸುವ ಅಗತ್ಯ ಎದುರಾಯಿತು ಎನ್ನಲಾಗಿದೆ.

ಗೊಂದಲ ಮೂಡಿಸಿದ ಪವಾರ್‌
ಕಾಂಗ್ರೆಸ್ ಪಕ್ಷದಲ್ಲಿ ಭಿನ್ನ ನಿಲುವುಗಳು ವ್ಯಕ್ತವಾಗುತ್ತಿದ್ದಂತೆಯೇ, ಸೋನಿಯಾ ಅವರು ಪಕ್ಷದ ಹಿರಿಯ ಮುಖಂಡರಾದ ಎ.ಕೆ. ಆ್ಯಂಟನಿ, ಅಹ್ಮದ್‌ ಪಟೇಲ್‌, ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ. ವೇಣುಗೋಪಾಲ್‌ ಜತೆ ಚರ್ಚಿಸಿದರು. ಪವಾರ್ ಜತೆಗೆ ದೂರವಾಣಿ ಮೂಲಕ ಮಾತನಾಡಿದರು.

‘ಉದ್ಧವ್‌ ಜತೆಗೆ ಈವರೆಗೆ ಯಾವ ಚರ್ಚೆಯನ್ನೂ ನಡೆಸಿಲ್ಲ’ ಎಂದು ಪವಾರ್‌ ಹೇಳಿದಾಗ ಚಿತ್ರಣವೇ ಬದಲಾಯಿತು. ಪವಾರ್‌ ಅವರು ಗೊಂದಲಮಯವಾಗಿ ಮಾತನಾಡಿದ್ದರಿಂದ, ಅವರ ಜತೆಗೆ ಮಾತುಕತೆಗೆ ಅಹ್ಮದ್‌ ಪಟೇಲ್‌, ಖರ್ಗೆ ಮತ್ತು ವೇಣುಗೋಪಾಲ್‌ ಅವರನ್ನು ಮುಂಬೈಗೆ ಸೋನಿಯಾ ಕಳುಹಿಸಿದರು. ಹೀಗಾಗಿ, ಎನ್‌ಸಿಪಿ ಜತೆಗೆ ಇನ್ನಷ್ಟು ಚರ್ಚಿಸುವ ಅಗತ್ಯ ಎದುರಾಯಿತು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT